ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಆಸ್ಟ್ರೇಲಿಯಾಕ್ಕೆ ಮಣಿದ ಭಾರತ ತಂಡ

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಇಫೊ, ಮಲೇಷ್ಯಾ: ಬಲಿಷ್ಠ ಎದುರಾಳಿಯ ಸವಾಲು ಮೀರಿ ನಿಲ್ಲಲು ವಿಫಲವಾದ ಭಾರತ ತಂಡ ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿದೆ. ಹೀಗಾಗಿ ತಂಡದ ಫೈನಲ್‌ ಪ್ರವೇಶದ ಕನಸು ಬಹುತೇಕ ಕಮರಿದೆ.

ಮಂಗಳವಾರ ನಡೆದ ಹೋರಾಟದಲ್ಲಿ ಸರ್ದಾರ್‌ ಸಿಂಗ್‌ ಬಳಗ 2–4 ಗೋಲುಗಳಿಂದ ಆಸ್ಟ್ರೇಲಿಯಾಕ್ಕೆ ಮಣಿಯಿತು. ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ಎದುರು ನಿರಾಸೆ ಕಂಡಿದ್ದ ಭಾರತ ತಂಡ ನಂತರದ ಹೋರಾಟದಲ್ಲಿ ಇಂಗ್ಲೆಂಡ್‌ ವಿರುದ್ದ ಡ್ರಾ ಮಾಡಿಕೊಂಡಿತ್ತು.

ಆರಂಭದಿಂದಲೇ ವೇಗದ ಆಟ ಆಡಿದ ಸರ್ದಾರ್‌ ಪಡೆ ಮೊದಲ ಕ್ವಾರ್ಟರ್‌ನಲ್ಲಿ ಕಾಂಗರೂಗಳ ನಾಡಿನ ತಂಡಕ್ಕೆ ಪ್ರಬಲ ಪೈಪೋಟಿ ಒಡ್ಡಿತು. ಚುರುಕಿನ ಪಾಸ್‌ಗಳ ಮೂಲಕ ಎದುರಾಳಿ ಆವರಣ ಪ್ರವೇಶಿಸುವ ಪ್ರಯತ್ನ ನಡೆಸಿದ ತಂಡ ಗೋಲು ಗಳಿಸುವ ಅವಕಾಶಗಳನ್ನೂ ಸೃಷ್ಟಿಸಿಕೊಂಡಿತ್ತು. ಆದರೆ ಚೆಂಡನ್ನು ಗುರಿ ಸೇರಿಸಲು ಭಾರತದ ಆಟಗಾರರಿಗೆ ಆಗಲಿಲ್ಲ. ಹೀಗಾಗಿ ಮೊದಲ ಕ್ವಾರ್ಟರ್‌ ಗೋಲು ರಹಿತವಾಗಿತ್ತು.

ಎರಡನೇ ಕ್ವಾರ್ಟರ್‌ನಲ್ಲೂ ಭಾರತದ ರಕ್ಷಣಾ ವಿಭಾಗದವರು ಎದುರಾಳಿ ಆಟಗಾರರನ್ನು ಹಿಮ್ಮೆಟ್ಟಿಸಿದರು. ಹೀಗಾಗಿ 27ನೇ ನಿಮಿಷದವರೆಗೂ ಸಮಬಲದ ಪೈಪೋಟಿ ಕಂಡುಬಂದಿತ್ತು. ಆದರೆ 28ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ತಂಡ ಭಾರತದ ರಕ್ಷಣಾ ಕೋಟೆ ಭೇದಿಸುವಲ್ಲಿ ಯಶಸ್ವಿಯಾಯಿತು.

ಸರ್ದಾರ್‌ ಬಳಗದ ರಕ್ಷಣಾ ವಿಭಾಗದ ಆಟಗಾರರನ್ನು ವಂಚಿಸಿ ಆವರಣ ಪ್ರವೇಶಿಸಿದ ಮಾರ್ಕ್‌ ನಾವ್ಲೆಸ್‌ ಚುರುಕಾಗಿ ಚೆಂಡನ್ನು ಗುರಿ ಸೇರಿಸಿದರು.

ಆಸ್ಟ್ರೇ ಲಿಯಾ ಮೂರನೇ ಕ್ವಾರ್ಟರ್‌ನಲ್ಲಿ ಮೂರು ಗೋಲು ದಾಖಲಿಸಿತು. 35ನೇ ನಿಮಿಷದಲ್ಲಿ ಅರಾನ್‌ ಜಲೆವ್‌ಸ್ಕಿ ಗೋಲು ಬಾರಿಸಿ 2–0ರ ಮುನ್ನಡೆಗೆ ಕಾರಣರಾದರು.

ಮೂರು ನಿಮಿಷದ ನಂತರ (38) ಡೇನಿಯಲ್‌ ಬೀಲ್‌ ಮೋಡಿ ಮಾಡಿದರು. ಚೆಂಡನ್ನು ಡ್ರಿಬಲ್‌ ಮಾಡುತ್ತಾ ಭಾರತದ ಆವ ರಣ ಪ್ರವೇಶಿಸಿದ ಅವರು ಅದನ್ನು ಲೀಲಾಜಾಲವಾಗಿ ಗುರಿ ಮುಟ್ಟಿಸಿದರು.

40ನೇ ನಿಮಿಷದಲ್ಲಿ ಬ್ಲೇಕ್‌ ಗೋವರ್ಸ್‌ ಗೋಲಿನ ಮೂಲಕ ಕಾಂಗ ರೂಗಳ ನಾಡಿನ ತಂಡ ಮುನ್ನಡೆಯನ್ನು 4–0ಗೆ ಹೆಚ್ಚಿಸಿ ಕೊಂಡಿತು.

ಕೊನೆಯ ಕ್ವಾರ್ಟರ್‌ನಲ್ಲಿ ಭಾರತ ಪರಿಣಾಮಕಾರಿ ಆಟ ಆಡಿತು. ರಮಣದೀಪ್‌ ಸಿಂಗ್‌ 52 ಮತ್ತು 53ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ಹಿನ್ನಡೆಯನ್ನು 2–4ಕ್ಕೆ ತಗ್ಗಿಸಿದರು. ಹೀಗಾಗಿ ಕೊನೆಯ ಏಳು ನಿಮಿಷಗಳ ಆಟ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡ ರಕ್ಷಣಾ ವಿಭಾಗದಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT