ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ಜಯದ ಕನಸು

ಐಎಸ್‌ಎಲ್‌: ಇಂದು ಪುಣೆ ಸಿಟಿ ಎದುರು ಮೊದಲ ಲೆಗ್‌ನ ಸೆಮಿ ಹೋರಾಟ
Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಪುಣೆ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯ ಕನಸು ಹೊತ್ತಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಈ ಹಾದಿಯಲ್ಲಿ ಮಹತ್ವದ ಹೋರಾಟಕ್ಕೆ ಸಜ್ಜಾಗಿದೆ.

ಬುಧವಾರ ನಡೆಯುವ ಮೊದಲ ಹಂತದ ಸೆಮಿಫೈನಲ್‌ನಲ್ಲಿ ಬಿಎಫ್‌ಸಿ ತಂಡ ಎಫ್‌ಸಿ ಪುಣೆ ಸಿಟಿ ವಿರುದ್ಧ ಸೆಣಸಲಿದೆ. ಉಭಯ ತಂಡಗಳ ನಡುವಣ ಹೋರಾಟಕ್ಕೆ ಬಾಳೇವಾಡಿಯ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ವೇದಿಕೆ ಸಿದ್ಧಗೊಂಡಿದೆ.

ಸುನಿಲ್‌ ಚೆಟ್ರಿ ಸಾರಥ್ಯದ ಬಿಎಫ್‌ಸಿ ತಂಡ ಲೀಗ್‌ನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದೆ. 18 ಪಂದ್ಯಗಳಿಂದ 30 ಪಾಯಿಂಟ್ಸ್‌ ಹೆಕ್ಕಿದ್ದ ‍ಪುಣೆ, ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ತನ್ನದಾಗಿಸಿಕೊಂಡಿದೆ.

ನಾಯಕ ಚೆಟ್ರಿ ಮತ್ತು ವೆನಿಜುವೆಲಾದ ಮಿಕು, ಮುಂಚೂಣಿ ವಿಭಾಗದಲ್ಲಿ ಬಿಎಫ್‌ಸಿಯ ಶಕ್ತಿಯಾಗಿದ್ದಾರೆ. ಈ ಬಾರಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಇವರು ಕ್ರಮವಾಗಿ ಎರಡು ಮತ್ತು ಐದನೇ ಸ್ಥಾನಗಳಲ್ಲಿದ್ದಾರೆ. ಮಿಕು 14 ಗೋಲು ದಾಖಲಿಸಿದ್ದರೆ, ಚೆಟ್ರಿ ಖಾತೆಯಲ್ಲಿ 10 ಗೋಲುಗಳಿವೆ.

ಲೀಗ್‌ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಬಿಎಫ್‌ಸಿ 3–1 ಗೋಲುಗಳಿಂದ ಗೆದ್ದಿತ್ತು. ಆಗ ಮಿಕು ಎರಡು ಗೋಲು ಗಳಿಸಿದ್ದರೆ, ಚೆಟ್ರಿ ಒಮ್ಮೆ ಚೆಂಡನ್ನು ಗುರಿ ಮುಟ್ಟಿಸಿದ್ದರು. ಉತ್ತಮ ಲಯದಲ್ಲಿರುವ ಇವರು ಮತ್ತೊಮ್ಮೆ ಮಿಂಚಿನ ಆಟ ಆಡಿ ತಂಡಕ್ಕೆ ಜಯ ತಂದುಕೊಡುವ ಹುಮ್ಮಸ್ಸಿನಲ್ಲಿದ್ದಾರೆ.

ನಿಶು ಕುಮಾರ್‌, ರಾಹುಲ್‌ ಬೆಕೆ, ಜಾಯನರ್‌ ಲೌರೆನ್ಸೊ, ಜುನಾನ್‌, ಸುಭಾಶಿಶ್‌ ಬೋಸ್‌, ಜಾನ್ ಜಾನ್ಸನ್‌ ಮತ್ತು ಹರ್ಮನ್‌ಜ್ಯೋತ್‌ ಸಿಂಗ್‌ ಖಾಬ್ರಾ ಅವರು ರಕ್ಷಣಾ ವಿಭಾಗದಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ.

ಮಿಡ್‌ಫೀಲ್ಡರ್‌ಗಳಾದ ಆ್ಯಂಟೋ ನಿಯೊ ಡೊವ್ಯಾಲ್‌, ಎರಿಕ್‌ ಪಾರ್ಟಲು, ಡಿಮಾಸ್‌ ಡೆಲ್‌ಗಾಡೊ, ಲೆನ್ನಿ ರಾಡ್ರಿಗಸ್‌ ಮತ್ತು ಅಲ್ವಿನ್‌ ಜಾರ್ಜ್‌ ಅವರೂ ಪುಣೆ ತಂಡದ ರಕ್ಷಣಾ ವಿಭಾಗಕ್ಕೆ ಸವಾಲಾಗುವ ವಿಶ್ವಾಸ ಹೊಂದಿದ್ದಾರೆ.

ತವರಿನ ಅಭಿಮಾನಿಗಳ ಬೆಂಬಲ ದೊಂದಿಗೆ ಕಣಕ್ಕಿಳಿಯುತ್ತಿರುವ ಪುಣೆ ತಂಡ ಕೂಡ ಗೆಲುವಿನ ಕನವರಿಕೆಯಲ್ಲಿದೆ. ಮಾರ್ಷೆಲಿನ್ಹೊ, ಎಮಿಲಿಯಾನೊ ಅಲಫಾರೊ ಮತ್ತು ಡಿಯಾಗೊ ಕಾರ್ಲೊಸ್‌ ಅವರು ಈ ತಂಡದ ಶಕ್ತಿಯಾಗಿದ್ದಾರೆ.

ಆರಂಭ: ರಾತ್ರಿ 8ಕ್ಕೆ.
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.
ಸ್ಥಳ: ಪುಣೆ.

*


ಬಿಎಫ್‌ಸಿ ಯಶಸ್ಸಿನ ಹಿಂದೆ ರೋಕಾ ತಂತ್ರ
ಮೊದಲ ಬಾರಿಗೆ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಆಡುತ್ತಿರುವ ಬೆಂಗಳೂರು ಎಫ್‌ಸಿ ತಂಡ ಚೊಚ್ಚಲ ಪ್ರಯತ್ನದಲ್ಲೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ತಂಡದ ಈ ಸಾಧನೆಯ ಹಿಂದೆ ಮುಖ್ಯ ಕೋಚ್‌ ಅಲ್ಬರ್ಟ್‌ ರೋಕಾ ಅವರ ಪಾತ್ರ ಮಹತ್ವದ್ದೆನಿಸಿದೆ.

2016ರ ಜುಲೈನಲ್ಲಿ ರೋಕಾ ಬಿಎಫ್‌ಸಿ ಕೋಚ್‌ ಆಗಿ ನೇಮಕವಾದ ನಂತರ ತಂಡ ಹಲವು ಏಳು ಬೀಳುಗಳನ್ನು ಕಂಡಿದೆ. ಎಎಫ್‌ಸಿ ಕಪ್‌ನಲ್ಲಿ ಅಮೋಘ ಆಟ ಆಡಿದ್ದ ಸುನಿಲ್‌ ಚೆಟ್ರಿ ಪಡೆ ಐ ಲೀಗ್‌ನಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು. ಆದರೆ ಫೆಡರೇಷನ್ ಕಪ್‌ನಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿ ಎಎಫ್‌ಸಿ ಕಪ್‌ ಪ್ಲೇ ಆಫ್‌ಗೆ ಅರ್ಹತೆ ಗಳಿಸಿತ್ತು.

ಐಎಸ್‌ಎಲ್‌ನಲ್ಲಿ ತಂಡ ಶ್ರೇಷ್ಠ ಆಟದ ಮೂಲಕ ಗಮನ ಸೆಳೆದಿದೆ. 18 ಪಂದ್ಯಗಳಿಂದ 40 ಪಾಯಿಂಟ್ಸ್‌ ಕಲೆಹಾಕಿ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸಾಧನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT