ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರಿಂದ ಜೀವ ಬೆದರಿಕೆ: ₹7 ಕೋಟಿ ಮೌಲ್ಯದ ಬಸ್‌ ಖರೀದಿ

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಗುಂಡು ಮತ್ತು ನೆಲಬಾಂಬ್‌ ನಿರೋಧಕ ವ್ಯವಸ್ಥೆ ಹೊಂದಿರುವ ಸುಮಾರು ₹7 ಕೋಟಿ ಮೌಲ್ಯದ ಬಸ್‌ ಖರೀದಿಸಲು ತೆಲಂಗಾಣ ಸರ್ಕಾರ ಮುಂದಾಗಿದೆ.

ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರಿಗಾಗಿಯೇ ಈ ಬಸ್‌ ಖರೀದಿಸಲಾಗುತ್ತಿದೆ. 2015ರಲ್ಲಿಯೂ ₹5 ಕೋಟಿ ಮೌಲ್ಯದ ಬಸ್‌ವೊಂದನ್ನು ಖರೀದಿಸಲಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ಹೊಸ ಬಸ್‌ ಖರೀದಿಸಲಾಗುತ್ತಿದೆ.

ತೆಲಂಗಾಣ ಮತ್ತು ಛತ್ತೀಸಗಡ ಗಡಿಯಲ್ಲಿ ಇತ್ತೀಚೆಗೆ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆ ಬಳಿಕ ಮುಖ್ಯಮಂತ್ರಿಗೆ ಜೀವ ಬೆದರಿಕೆಯಿದೆ ಇರುವ ಸಾಧ್ಯತೆಗಳಿರುವುದರಿಂದ ಹೊಸ ಬಸ್‌ ಖರೀದಿಸಲು ಗೃಹ ಮತ್ತು ಸಾರಿಗೆ ಇಲಾಖೆಯ ಉನ್ನತ ಸಮಿತಿ ನಿರ್ಧರಿಸಿದೆ.

ಸಮಿತಿಯ ಸಂಚಾಲಕರಾಗಿರುವ ರಸ್ತೆ ಮತ್ತು ಕಟ್ಟಡ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುನೀಲ್‌ ಶರ್ಮಾ ಬಸ್‌ ಕುರಿತು ನೀಲ ನಕಾಶೆ ಸಿದ್ಧಪಡಿಸಿ ಶೀಘ್ರದಲ್ಲೇ ಅನುಮೋದನೆಗಾಗಿ ಸಲ್ಲಿಸಲಿದ್ದಾರೆ. ಇದೊಂದು ಕೇವಲ ಔಪಚಾರಿಕ ಪ್ರಕ್ರಿಯೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯವಾಗಿ ನಕ್ಸಲರು ಹೆಚ್ಚಾಗಿ ಕಂಡು ಬರುವ ಕರಿಂನಗರ, ವಾರಂಗಲ್‌ ಮತ್ತು ಕಮ್ಮಂ ಜಿಲ್ಲೆಗಳಲ್ಲಿ ಪ್ರವಾಸ ಮಾಡುವಾಗ ಹೊಸ ಬಸ್‌ ಅನ್ನು ಮುಖ್ಯಮಂತ್ರಿ ಉಪಯೋಗಿಸಲಿದ್ದಾರೆ. ಮುಂಬರುವ ಚುನಾವಣೆಗಳ ಸಂದರ್ಭದಲ್ಲಿ ಕೈಗೊಳ್ಳಲಾಗುವ ಪ್ರವಾಸಸಹ ಗಮನದಲ್ಲಿಟ್ಟುಕೊಂಡು ಬಸ್‌ ಖರೀದಿಗೆ ನಿರ್ಧರಿಸಲಾಗಿದೆ.

ಮರ್ಸಿಡೀಸ್ ಬೆಂಜ್‌ ಕಂಪನಿಯ ಈಗಿನ ಬಸ್‌ ಗುಂಡು ನಿರೋಧಕ ವ್ಯವಸ್ಥೆ ಮಾತ್ರ ಹೊಂದಿದೆ. ಒಂದು ವೇಳೆ ನಕ್ಸಲರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿದಾಗ ರಕ್ಷಣೆ ಮಾಡುವ ಸಾಮರ್ಥ್ಯ ಹೊಂದಿಲ್ಲ ಎಂದು ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜತೆಗೆ 2015ರಲ್ಲಿ ಅವರು ತವರು ಜಿಲ್ಲೆ ಮೇಡಕ್‌ನಲ್ಲಿ ಪ್ರವಾಸದಲ್ಲಿದ್ದಾಗ ಬಸ್‌ನಲ್ಲಿ ತಾಂತ್ರಿಕ ತೊಂದರೆಯಾಗಿತ್ತು. ಆಗ ಪರಿಶೀಲಿಸಿದಾಗ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ವೈರಿಂಗ್‌ ಸಮಸ್ಯೆ ಇರುವುದು ಕಂಡು ಬಂದಿತ್ತು. ಅದೇ ಸಂದರ್ಭದಲ್ಲಿ ಬಸ್‌ನಲ್ಲಿನ ಆಸನದ ವ್ಯವಸ್ಥೆಗಳ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿದ್ದರು.

ಇದಾದ ಬಳಿಕ ದುರಸ್ತಿಗಾಗಿ ಮರ್ಸಿಡೀಸ್ ಕಂಪನಿಗೆ ವಾಪಸ್‌ ಕಳುಹಿಸಲಾಗಿತ್ತು‌ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT