ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

7

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Published:
Updated:
ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಕೊಲಂಬೊ: ಕೋಮು ಗಲಭೆ ನಿಯಂತ್ರಿಸುವ ಸಲುವಾಗಿ ಶ್ರೀಲಂಕಾದಲ್ಲಿ 10 ದಿನಗಳ ಕಾಲ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಅಲ್ಪಸಂಖ್ಯಾತ ಮುಸ್ಲಿಮರು ಹಾಗೂ ಬಹುಸಂಖ್ಯಾತ ಸಿಂಹಳೀಯರ ನಡುವೆ ಕ್ಯಾಂಡಿ ಜಿಲ್ಲೆಯಲ್ಲಿ ಸೋಮವಾರ ನಡೆದ ಘರ್ಷಣೆಯಿಂದ ಇಬ್ಬರು ಮೃತಪಟ್ಟ ಕಾರಣ ಹಿಂಸಾಚಾರ ಉಂಟಾಗಿತ್ತು.

ಘರ್ಷಣೆ ನಡೆದ ಕ್ಯಾಂಡಿ ಜಿಲ್ಲೆಯ ಥೆಲ್ದೇನಿಯಾ ಹಾಗೂ ಪಲ್ಲೇಕೆಲೆ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಹಿಂಸೆಯ ವಾತಾವರಣ ಮುಂದುವರಿದಿರುವ ಕಾರಣ ತುರ್ತುಪರಿಸ್ಥಿತಿ ಹೇರಲು ಸಂಪುಟ ಸಭೆಯು ತೀರ್ಮಾನಿಸಿತು ಎಂದು ಸಚಿವ ಎಸ್.ಬಿ. ದಿಸ್ಸನಾಯಕೆ ಹೇಳಿದ್ದಾರೆ.

ಮುಸ್ಲಿಂ ಸಮುದಾಯದವರು ನಡೆಸಿದ ದಾಳಿಯಿಂದ ಗಾಯಗೊಂಡಿದ್ದ ಸಿಂಹಳೀಯ ವ್ಯಕ್ತಿಯು ಮೃತಪಟ್ಟಿದ್ದರಿಂದ  ಗಲಭೆ ಭುಗಿಲೆದ್ದಿತ್ತು. ದಾಳಿಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಂಹಳೀಯ ಬೌದ್ಧರು 10 ಮಸೀದಿಗಳು, 75 ಅಂಗಡಿಗಳು ಹಾಗೂ 32 ಮನೆಗಳನ್ನು ಹಾನಿಗೊಳಿಸಿದ್ದಾರೆ ಎಂದು ಮುಸ್ಲಿಂ ಸಮುದಾಯ ಆರೋಪಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಪ್ರಯೋಗಿಸಿದ ಪೊಲೀಸರು ಮಧ್ಯರಾತ್ರಿಯೇ ಕರ್ಫ್ಯೂ ವಿಧಿಸಿದ್ದರು.

ಸುಟ್ಟು ಕರಕಲಾದ ಕಟ್ಟಡದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಮೃತದೇಹ ಮಂಗಳವಾರ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಗಲಭೆಪೀಡಿತ ಪ್ರದೇಶಗಳಲ್ಲಿ ಪೊಲೀಸರನ್ನು ಹಾಗೂ ಸೇನಾಪಡೆಯನ್ನು ನಿಯೋಜಿಸಲಾಗಿದೆ. ಮಂಗಳವಾರವೂ ಕರ್ಫ್ಯೂ ಮುಂದುವರಿಸಲಾಗಿದ್ದು, ಶಸ್ತ್ರಸಜ್ಜಿತ ವಿಶೇಷ ಪಡೆಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ.

2011ರ ಬಳಿಕ ದ್ವೀಪರಾಷ್ಟ್ರದಲ್ಲಿ ಮೊದಲ ಬಾರಿಗೆ ಕರ್ಫ್ಯೂ ವಿಧಿಸಲಾಗಿದೆ. ಕ್ಯಾಂಡಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಚಹಾ ತೋಟಗಳು ಹಾಗೂ ಬೌದ್ಧ ಸ್ಮಾರಕಗಳಿಗೆ ಹೆಸರಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry