ತ್ರಿಪುರಾ: ಹಿಂಸಾಚಾರ ಭುಗಿಲು

ಮಂಗಳವಾರ, ಮಾರ್ಚ್ 19, 2019
26 °C

ತ್ರಿಪುರಾ: ಹಿಂಸಾಚಾರ ಭುಗಿಲು

Published:
Updated:
ತ್ರಿಪುರಾ: ಹಿಂಸಾಚಾರ ಭುಗಿಲು

ಅಗರ್ತಲಾ: ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ತ್ರಿಪುರಾದಲ್ಲಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿದೆ. ರಷ್ಯಾದ ಕಮ್ಯುನಿಸ್ಟ್‌ ನಾಯಕ ಲೆನಿನ್‌ ಅವರ ಎರಡು ಪ್ರತಿಮೆಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.

ದಕ್ಷಿಣ ತ್ರಿಪುರಾದ ಸಬ್ರೂಮ್‌ ಪಟ್ಟಣದ ವಾಹನ ನಿಲ್ದಾಣದಲ್ಲಿದ್ದ ಲೆನಿನ್‌ನ ಸಿಮೆಂಟ್‌ ಪ್ರತಿಮೆಯನ್ನು ಬಿಜೆಪಿ ಬೆಂಬಲಿಗರು ಮಂಗಳವಾರ ಉರುಳಿಸಿದ್ದಾರೆ.

ಬೆಲೋನಿಯಾ ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿ ಇದ್ದ ಲೆನಿನ್‌ ಪ್ರತಿಮೆಯನ್ನು ಸೋಮವಾರ ಉರುಳಿಸಲಾಗಿತ್ತು. ಬೆಲೋನಿಯಾದ ಪ್ರತಿಮೆ ಧ್ವಂಸದ ನಂತರ ತ್ರಿಪುರಾದ ವಿವಿಧ ಭಾಗಗಳಲ್ಲಿ ಹಿಂಸಾಚಾರ ತೀವ್ರವಾಗಿದೆ.

ರಾಜಕೀಯಪ್ರೇರಿತ ಹಿಂಸಾಚಾರ ಕುರಿತು ಬಿಜೆಪಿ ಮತ್ತು ಸಿಪಿಎಂ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.

ವರದಿ ಕೇಳಿದ ಕೇಂದ್ರ: ರಾಜ್ಯದ ಪರಿಸ್ಥಿತಿ ಕುರಿತು ಕೇಂದ್ರ ಗೃಹ ಸಚಿವಾಲಯ ಅವಲೋಕನ ನಡೆಸಿದ್ದು, ಪೊಲೀಸ್‌ ಮಹಾನಿರ್ದೇಶಕರಿಂದ ವರದಿ ಕೇಳಿದೆ.

ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಮಂಗಳವಾರ ರಾಜ್ಯಪಾಲ ತಥಾಗತ ರಾಯ್‌ ಮತ್ತು ಡಿಜಿಪಿ ಎ.ಕೆ. ಶುಕ್ಲಾರಿಂದ ಮಾಹಿತಿ ಪಡೆದಿದ್ದಾರೆ.

ಬಿಜೆಪಿ ಪುಂಡಾಟ: ಸಿಪಿಎಂ ‘ಚುನಾವಣೆ ಫಲಿತಾಂಶ ಪ್ರಕಟವಾದ ಒಂದು ತಾಸಿನೊಳಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಐಪಿಎಫ್‌ಟಿ ಕಾರ್ಯಕರ್ತರ ಪುಂಡಾಟ ಆರಂಭವಾಗಿದೆ. ಅವರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ’ ಎಂದು ಸಿಪಿಎಂ ಆರೋಪಿಸಿದೆ.

514 ಸಿಪಿಎಂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಪಕ್ಷದ ಕಾರ್ಯಕರ್ತರ 1,539 ಮನೆಗಳ ಮೇಲೆ ದಾಳಿ ನಡೆಸಲಾಗಿದೆ. 200 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಸಿಪಿಎಂ ಆರೋಪಿಸಿದೆ.

134 ಸಿಪಿಎಂ ಕಚೇರಿಗಳ ಮೇಲೆ ದಾಳಿ ನಡೆಸಿ, ಲೂಟಿ ಮಾಡಲಾಗಿದೆ. 64 ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. 90 ಕಚೇರಿಗಳನ್ನು ಬಿಜೆಪಿ–ಐಪಿ

ಎಫ್‌ಟಿ ಬೆಂಬಲಿಗರು ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಬಿಜನ್‌ ಧರ್‌ ಆರೋಪಿಸಿದ್ದಾರೆ. ಈ ಎಲ್ಲ ಕೃತ್ಯಗಳಿಗೆ ಬಿಜೆಪಿ ಕುಮ್ಮಕ್ಕು ಇದೆ ಎಂದಿದ್ದಾರೆ.

ವಲಸಿಗ ಕಮ್ಯುನಿಸ್ಟರು ಕಾರಣ: ಸಿಪಿಎಂನಿಂದ ಇತ್ತೀಚೆಗೆ ಬಿಜೆಪಿ ಸೇರಿದ ಕೆಲವು ಕಾರ್ಯಕರ್ತರು ಪುಂಡಾಟಿಕೆ ನಡೆಸುತ್ತಿದ್ದಾರೆ. ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.

ಹಲ್ಲೆ, ಕೊಲೆ, ಹಿಂಸಾಚಾರ ಕಮ್ಯುನಿಸ್ಟರ ಹುಟ್ಟುಗುಣ. ಅವರಿಗೆ ಇದೇನು ಹೊಸದಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಸುಬಲ್‌ ಭೌಮಿಕ್‌ ತಿರುಗೇಟು ನೀಡಿದ್ದಾರೆ. ಕಮ್ಯುನಿಸ್ಟರು 49 ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಆ ಪೈಕಿ 17 ಕಾರ್ಯಕರ್ತರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪೆರಿಯಾರ್ ಪ್ರತಿಮೆ ಧ್ವಂಸ: ಇಬ್ಬರ ಬಂಧನ

ವೆಲ್ಲೂರು (ತಮಿಳುನಾಡು) (ಪಿಟಿಐ): ಸಮಾಜ ಸುಧಾರಕ ಹಾಗೂ ದ್ರಾವಿಡ ಚಳವಳಿ ಆರಂಭಿಸಿ ರಾಮಸ್ವಾಮಿ ಪೆರಿಯಾರ್ ಅವರ ಪ್ರತಿಮೆಯನ್ನು ಮಂಗಳವಾರ ರಾತ್ರಿ ನೆಲಸಮ ಮಾಡಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಲೆನಿನ್ ಪ್ರತಿಮೆಯಂತೆಯೇ ತಮಿಳುನಾಡಿನಲ್ಲಿ ಸ್ಥಾ‍ಪಿಸಲಾಗಿರುವ ರಾಮಸ್ವಾಮಿ ಪ್ರತಿಮೆಗಳೆಲ್ಲವೂ ನೆಲಕ್ಕುರುಳಲಿವೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜಾ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು. ವಿವಿಧ ರಾಜಕಿಯ ಪಕ್ಷಗಳ ಮುಖಂಡರಿಂದ ಆಕ್ರೋಶ ವ್ಯಕ್ತವಾದ ನಂತರ ಆ ಬರಹವನ್ನು ಅಳಿಸಿದ್ದರು.

ಎಡಪಕ್ಷ ಆಕ್ರೋಶ, ಕಾಂಗ್ರೆಸ್‌ ಮೌನ

ಪ್ರತಿಮೆ ಧ್ವಂಸದ ಬಗ್ಗೆ ಎಡ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಬಿಜೆಪಿ ನಾಯಕರು ಬಹಿರಂಗವಾಗಿ ಈ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಮೌನಕ್ಕೆ ಶರಣಾಗಿದೆ.

ಘಟನೆಯನ್ನು ಖಂಡಿಸಿರುವ ಜೆಡಿಯು, ವಿಭಿನ್ನ ಸೈದ್ಧಾಂತಿಕ ನಿಲುವುಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದೆ.

ಪ್ರತಿಮೆ ಧ್ವಂಸಕ್ಕೆ ಬಳಸಲಾದ ಬುಲ್ಡೋಜರ್‌ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬಿಜೆಪಿ ಕುಮ್ಮಕ್ಕು: ಇದು ಬಿಜೆಪಿ ಕಾರ್ಯಕರ್ತರ ಕೃತ್ಯ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಪ್ರತಿಮೆ ಕೆಡವಿದ ನಂತರ ಅಲ್ಲಿದ್ದವರು ‘ಭಾರತ್‌ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಾರೆ ಎಂದು ಸಿಪಿಎಂ ಹೇಳಿದೆ.

ತ್ರಿಪುರಾದಲ್ಲಿ ಕಮ್ಯುನಿಸ್ಟರ ಮೇಲೆ ನಡೆಯುತ್ತಿರುವ ರಾಜಕೀಯ ಪ್ರೇರಿತ ಹಿಂಸಾಚಾರ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಷಡ್ಯಂತ್ರದ ಭಾಗ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿರುವನಂತಪುರದಲ್ಲಿ ಕಿಡಿಕಾರಿದ್ದಾರೆ.

ಫಲಿತಾಂಶ ಪ್ರಕಟವಾಗಿ ಒಂದು ಗಂಟೆಯೊಳಗೆ ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಿಲುವು ಬಯಲಾಗಿದೆ. ಇದಕ್ಕೆ ಪ್ರಜಾತಂತ್ರದ ಮಾದರಿಯಲ್ಲಿಯೇ ತಕ್ಕ ಉತ್ತರ ನೀಡಲಾಗುವುದು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರತಿಕ್ರಿಯಿಸಿದ್ದಾರೆ.

ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ನಂಬಿಕೆ ಇರುವ ಶಕ್ತಿಗಳು ಒಟ್ಟಾಗಿ ಬಿಜೆಪಿ–ಆರ್‌ಎಸ್‌ಎಸ್‌ನಂತಹ ಕೋಮುವಾದಿಗಳ ವಿರುದ್ಧ ಹೋರಾಡಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.

ಬಿಜೆಪಿ ನಾಯಕರ ಸಮರ್ಥನೆ

ಲೆನಿನ್‌ ಪ್ರತಿಮೆ ಧ್ವಂಸವನ್ನು ಬಿಜೆಪಿಯ ಹಲವು ನಾಯಕರು ಸ್ವಾಗತಿಸಿದ್ದಾರೆ. ವಿದೇಶಿ ನಾಯಕರ ಪ್ರತಿಮೆಗಳಿಗೆ ಭಾರತದಲ್ಲಿ ಜಾಗವಿಲ್ಲ ಎಂದು ಕೇಂದ್ರ ಸಚಿವ ಹಂಸರಾಜ್‌ ಅಹಿರ್‌ ಪ್ರತಿಕ್ರಿಯಿಸಿದ್ದಾರೆ. 25 ವರ್ಷ ಕಮ್ಯುನಿಸ್ಟ್‌ ಆಡಳಿತದಲ್ಲಿ ತುಳಿತಕ್ಕೊಳಗಾದ ಜನರು ಈ ರೀತಿ ತಮ್ಮ ಆಕ್ರೋಶ ವ್ಯಕ್ತಪಡಿಸಿರಬಹುದು ಎಂದು ಅವರು ಲೇವಡಿ ಮಾಡಿದ್ದಾರೆ.

ಕಾಶಿ, ಮಥುರಾ ಮತ್ತು ಅಯೋಧ್ಯೆಯಲ್ಲಿ ಸಾವಿರಾರು ದೇವಾಲಯ ಧ್ವಂಸಗೊಂಡಾಗ ಯಾರು ಕೂಡ ಯಾಕೆ ಇಷ್ಟು ಆತಂಕ ವ್ಯಕ್ತಪಡಿಸಿರಲಿಲ್ಲ ಎಂದು ಸಚಿವರು ಪ್ರಶ್ನಿಸಿದ್ದಾರೆ.

ಲೆನಿನ್‌ ಒಬ್ಬ ಭಯೋತ್ಪಾದಕ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಟೀಕಿಸಿದ್ದಾರೆ.

ಬೇಕಾದರೆ ಕಮ್ಯುನಿಸ್ಟರು ತಮ್ಮ ಪಕ್ಷದ ಕಚೇರಿಯಲ್ಲಿ ಲೆನಿನ್‌ ಪ್ರತಿಮೆಯನ್ನು ಪ್ರತಿಷ್ಠಾಪಿಸಿಕೊಂಡು, ಪೂಜಿಸಲಿ. ಅದನ್ನು ಯಾರೂ ಪ್ರಶ್ನಿಸಲಾರರು. ಸಾರ್ವಜನಿಕ ಸ್ಥಳದಲ್ಲಿ ವಿದೇಶಿ ಸರ್ವಾಧಿಕಾರಿಯ ಪ್ರತಿಮೆಯ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಲೆನಿನ್‌ ಪ್ರತಿಮೆಯನ್ನು ಧ್ವಂಸಗೊಳಿಸಿಲ್ಲ. ಅದನ್ನು ಯಥಾವತ್ತಾಗಿ ಸಿಪಿಎಂ ಕಚೇರಿಗೆ ರವಾನಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸೈದ್ಧಾಂತಿಕ ಜಯ: ಮೋದಿ

ನವದೆಹಲಿ:
ತ್ರಿಪುರಾದಲ್ಲಿ ಕಮ್ಯುನಿಸ್ಟ್‌ ಪಕ್ಷದ ವಿರುದ್ಧ ಬಿಜೆಪಿ ಸಾಧಿಸಿದ ಗೆಲುವನ್ನು ‘ಸೈದ್ಧಾಂತಿಕ ಜಯ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬಣ್ಣಿಸಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಮೋದಿ, ‘25 ವರ್ಷಗಳಿಂದ ತ್ರಿಪುರಾವನ್ನು ಮಾರ್ಕ್ಸ್‌ವಾದದ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು. ತ್ರಿಪುರಾ ಚಿಕ್ಕ ರಾಜ್ಯವಾದರೂ ಇಲ್ಲಿ ಬಿಜೆಪಿಯ ಗೆಲುವು ನಿರ್ಣಾಯಕ’ ಎಂದು ಅಭಿಪ್ರಾಯಪಟ್ಟರು.

‘ಜೀತ್‌ ಹಮಾರಿ ಜಾರಿ ಹೈ, ಅಬ್‌ ಕರ್ನಾಟಕ ಕಿ ಬಾರಿ ಹೈ’ (ನಮ್ಮ ಗೆಲುವಿನ ನಾಗಾಲೋಟ ಮುಂದುವರಿಯಲಿದೆ, ಈಗ ಕರ್ನಾಟಕದ ಸರದಿ) ಎಂದು ಬಿಜೆಪಿ ಸಂಸದರು ಘೋಷಣೆ ಕೂಗಿದರು.

ಬದಲಾದ ಅಭಿಪ್ರಾಯ:

ಶಿಲ್ಲಾಂಗ್‌:
ಈಶಾನ್ಯ ರಾಜ್ಯಗಳಲ್ಲಿ ಈ ಬಾರಿ ಬಿಜೆಪಿ ಜಯಭೇರಿ ಬಾರಿಸುವ ಮೂಲಕ ಇಲ್ಲಿ ಕಾಂಗ್ರೆಸ್ ಮಾತ್ರ ಗೆಲ್ಲಬಲ್ಲದು ಎಂಬ ಅಭಿಪ್ರಾಯವನ್ನು ಸುಳ್ಳು ಎಂದು ಸಾಬೀತುಪಡಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಹೇಳಿದ್ದಾರೆ.

ಸೋಮವಾರ ಮೇಘಾಲಯ ನೂತನ ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry