ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ಕಂಡು ಲಿಂಗವೆಂದು ನಂಬು

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಧರ್ಮಗುರು ಬಸವಣ್ಣನವರಿಗೆ ಶಿವಶರಣರೆಂದರೆ ಪಂಚಪ್ರಾಣ. ಅವರ ದೃಷ್ಟಿಯಲ್ಲಿ ಶಿವಶರಣರು ಮಹಾವೀರರು, ಧೀರರು, ಶೂರರು. ಕೂಡಲ ಸಂಗನ ಶರಣರಿಗೆ ನಿಯತನಾಗಿ, ಭಯಭರಿತನಾಗಿ ಶರಣೆನ್ನಬೇಕು, ಅಹಂಕಾರಿಯಾಗದೆ ಶರಣರಲ್ಲಿ ಕಿಂಕಿಲನಾಗಿ ಬದುಕು ಮನವೆ ಎಂದು ಅವರು ಮನಸ್ಸಿಗೆ ಆದೇಶಿಸುತ್ತಾರೆ.

ಶರಣರಿಗೆ ತೊತ್ತಾಗಿ, ಮತ್ತೆ ಪಾದದಾ ಕೆರವಾಗಿ ಬದುಕ ಬೇಕೆನ್ನುವ ಅವರಿಗೆ ಶರಣರನ್ನು ಎಷ್ಟು ಕೊಂಡಾಡಿದರೂ ತೃಪ್ತಿಯಿಲ್ಲ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಶರಣರ ಸನ್ನಿಧಾನದಿಂದ ಕರ್ಮ ನಿರ್ಮಲವಾಗುವುದು, ಪ್ರಸಾದಕಾಯವು ನಿಶ್ಚಿಂತ ನಿವಾಸವಾಗುವುದು, ಶರಣರ ಸಂಗದಿಂದ ಗುರುವನರಿಯಬಹುದು, ಲಿಂಗವನರಿಯಬಹುದು, ಜಂಗಮವನರಿಯಬಹುದು, ಪ್ರಸಾದವನರಿಯಬಹುದು, ಅಷ್ಟೇ ಏಕೆ ತನ್ನತಾನರಿಯಬಹುದು ಎನ್ನುತ್ತಾರೆ.

ಬಸವಣ್ಣನವರಂತೆ ಎಲ್ಲ ಜಾಗತಿಕ ಮಹಾನುಭಾವರೂ ಕೂಡ ಶರಣರ, ಸಂತರ ಮಹಾತ್ಮರ ಸಂಗಸುಖಕ್ಕೆ ವಿಶೇಷ ಮಹತ್ವ ನೀಡಿದ್ದಾರೆ. ಅವರೆಲ್ಲರೂ ತಮ್ಮ ಮನಸ್ಸಿಗೆ ಸದಾ ಶರಣಸಂಗದಲ್ಲಿರಲು ನಿರ್ದೇಶಿಸುತ್ತಾರೆ. ಮನಸ್ಸಿನ ಭ್ರಮೆಯನ್ನು ಮರೆಸಿ, ಅವಗುಣಗಳನ್ನು ನಿವಾರಿಸಿ ಶರಣರಿಗೆ ಶರಣೆಂಬುದನ್ನು ಕರುಣಿಸು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾರೆ.

ಈ ಮಾತನ್ನೇ ಬೆಂಬಲಿಸುವಂತೆ ಬಸವಣ್ಣನವರು- ಬೆಲ್ಲವ ತಿಂದ ಕೋಡಗನಂತೆ ಸಿಹಿಯ ನೆನೆಯದಿರಾ ಮನವೆ ಕಬ್ಬು ತಿಂದ ನರಿಯಂತೆ ಹಿಂದಕ್ಕೆಳಸದಿರಾ ಮನವೆ ಗಗನವಡರಿದ ಕಾಗೆಯಂತೆ ದೆಸೆದೆಸೆಗೆ ಹಂಬಲಿಸದಿರಾ ಮನವೆ ಕೂಡಲಸಂಗನ ಶರಣರ ಕಂಡು ಲಿಂಗವೆಂದೆ ನಂಬು ಮನವೆ ಎಂದು ಮನಸ್ಸಿಗೆ ನಿರ್ದೇಶನ ನೀಡಿರುವುದು ಅರ್ಥಪೂರ್ಣವಾಗಿದೆ.

ಮನಸ್ಸು ಮಣ್ಣಿನ ಗೋಡೆ ಇದ್ದಂತೆ. ತೊಳೆದಷ್ಟೂ ಹೊಲಸು ಬರುವುದು. ಇಂತಹ ಮನಸ್ಸನ್ನು ಪರಿಶುದ್ಧಗೊಳಿಸದೆ ಮಾಡುವ ಸಾಧನೆಯೆಲ್ಲವೂ ನಿರರ್ಥಕ. ಬೆಲ್ಲವನ್ನು ತಿಂದ ಮಂಗ, ಕಬ್ಬು ತಿಂದ ನರಿ ಮತ್ತೆ ಮತ್ತೆ ತಮ್ಮ ಮನಸ್ಸಿನಲ್ಲಿ ಬೆಲ್ಲ ಕಬ್ಬು ನೆನೆಯುವಂತೆ ಕ್ಷಣಿಕವಾದ ವಿಷಯ ಸುಖಕ್ಕೆ ಮನಸ್ಸು ಸದಾ ಹಂಬಲಿಸುತ್ತದೆ.

ಗಗನವಡರಿದ ಕಾಗೆಯಂತೆ ದಿಕ್ಕು ದೆಸೆ ಇಲ್ಲದೆ ಹಂಬಲಿಸುವ ಮನಸ್ಸಿನ ಎಳೆತ-ಸೆಳೆತಗಳು ಶರಣರ ಸಂಗ ಸುಖದಿಂದ ಮಾತ್ರ ದೂರಾಗಲು ಸಾಧ್ಯ. ಏಕೆಂದರೆ ಶರಣರು ಸಾಮಾನ್ಯರಲ್ಲ, ಅವರು ಲಿಂಗಸ್ವರೂಪಿಗಳು. ಅವರನ್ನು ಲಿಂಗವೆಂದೆ ನಂಬಬೇಕು ಎಂಬ ಬಸವಣ್ಣನವರ ಮಾತು ಪ್ರತಿಯೊಬ್ಬ ಸಾಧಕನಿಗೆ ಮಾರ್ಗದರ್ಶಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT