ಶಾಲಾ ಬಾಲಕಿ ಮೇಲೆ ಅತ್ಯಾಚಾರ ಭುಗಿಲೆದ್ದ ಆಕ್ರೋಶ: ಪ್ರತಿಭಟನೆ

7
ಆರೋಪಿಯನ್ನು ಥಳಿಸಿ, ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

ಶಾಲಾ ಬಾಲಕಿ ಮೇಲೆ ಅತ್ಯಾಚಾರ ಭುಗಿಲೆದ್ದ ಆಕ್ರೋಶ: ಪ್ರತಿಭಟನೆ

Published:
Updated:
ಶಾಲಾ ಬಾಲಕಿ ಮೇಲೆ ಅತ್ಯಾಚಾರ ಭುಗಿಲೆದ್ದ ಆಕ್ರೋಶ: ಪ್ರತಿಭಟನೆ

ಮುದ್ದೇಬಿಹಾಳ (ವಿಜಯಪುರ): ತಾಲ್ಲೂಕಿನ ನಾಗಬೇನಾಳ ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಮೇಲೆ ಮಂಗಳವಾರ ಸಾಮೂಹಿಕ ಅತ್ಯಾಚಾರ ನಡೆದಿದೆ.

ಆರೋಪಿಗಳ ಪೈಕಿ ಒಬ್ಬನನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದು,  ಇನ್ನು ಮೂವರು ಪರಾರಿಯಾಗಿದ್ದಾರೆ. ಘಟನೆಯಿಂದ ಆಘಾತಗೊಂಡು ಪ್ರಜ್ಞೆ ತಪ್ಪಿದ್ದ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕಿ ಎಂದಿನಂತೆ ಬಾಳೆ ತೋಟದ ರಸ್ತೆ ಮೂಲಕ ನಾರಾಯಣಪುರದಲ್ಲಿನ ಸರ್ಕಾರಿ ಪ್ರೌಢಶಾಲೆಗೆ ತೆರಳುತ್ತಿದ್ದಳು. ಈ ವೇಳೆ ಆಕೆಯನ್ನು ತೋಟಕ್ಕೆ ಹೊತ್ತೊಯ್ದ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ತೋಟದ ಮನೆಯಲ್ಲಿಯೇ ಇದ್ದ ಆಕೆಯ ತಂದೆ, ಮಗಳ ಕೂಗು ಕೇಳಿ ಘಟನಾ ಸ್ಥಳಕ್ಕೆ ಬರುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದಾರೆ. ಈ ಪೈಕಿ, ಮದ್ಯ ವ್ಯಸನಿಯಾಗಿದ್ದ ವೀರೇಶ ಕಂದಗಲ್ ಎಂಬಾತ ಸ್ಥಳೀಯರ ಕೈಗೆ ಸಿಕ್ಕಿದ್ದಾನೆ. ಆಕ್ರೋಶಭರಿತರಾದ ಗ್ರಾಮಸ್ಥರು, ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಟೈರ್‌ ಸುಟ್ಟು ಆಕ್ರೋಶ: ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ನಾಗಬೇನಾಳ, ವೀರೇಶನಗರ, ಮುದ್ದೇಬಿಹಾಳದಲ್ಲಿ ಸರಣಿ ಪ್ರತಿಭಟನೆ ನಡೆಯಿತು. ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.

ವೀರೇಶನಗರದಲ್ಲಿ ಪ್ರತಿಭಟನಾನಿರತರ ಮನವೊಲಿಸಲು ಪೊಲೀಸರು ಮುಂದಾದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ‘ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುತ್ತೇವೆ’ ಎಂದು ಲಿಖಿತ ಭರವಸೆ ನೀಡಿ ಎಂದೂ ಪ್ರತಿಭಟನಾಕಾರರು ಪಟ್ಟು ಹಿಡಿದರು.

ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜೆಡಿಎಸ್‌, ಬಿಜೆಪಿ, ಎಬಿವಿಪಿ ಮುಖಂಡರು, ವಕೀಲರ ಸಂಘ, ಅಂಗವಿಕಲರ ಒಕ್ಕೂಟದ ಪದಾಧಿಕಾರಿಗಳು ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು. ಬುಧವಾರ ಮುದ್ದೇಬಿಹಾಳ ಬಂದ್‌ಗೆ ಇದೇ ಸಂದರ್ಭ ಕರೆ ನೀಡಿದರು.

ಬಾಲಕಿ ಚೇತರಿಕೆ: ‘ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಘಟನೆಯಿಂದ ಪ್ರಜ್ಞೆ ತಪ್ಪಿದ್ದಳು. ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ. ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ’ ಎಂದು ಚಿಕಿತ್ಸೆ ನೀಡಿದ ಮಹಿಳಾ ವೈದ್ಯಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಬ್ಬ ಆರೋಪಿಯನ್ನು ಸಾರ್ವಜನಿಕರೇ ವಶಕ್ಕೆ ನೀಡಿದ್ದಾರೆ. ಉಳಿದ ಮೂವರು ಆರೋಪಿಗಳ ಮಾಹಿತಿ ದೊರೆತಿದೆ. ಪರಾರಿಯಾದವರ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ಮುದ್ದೇಬಿಹಾಳ ಸಿಪಿಐ ರವಿಕುಮಾರ ಕಪತ್ತನವರ್ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry