ಬಲಿಷ್ಠ ರಾಜ್ಯ, ಕನಿಷ್ಠ ಕೇಂದ್ರ: ಕೆಸಿಆರ್‌ ಹೊಸ ಚಿಂತನೆ

7

ಬಲಿಷ್ಠ ರಾಜ್ಯ, ಕನಿಷ್ಠ ಕೇಂದ್ರ: ಕೆಸಿಆರ್‌ ಹೊಸ ಚಿಂತನೆ

Published:
Updated:
ಬಲಿಷ್ಠ ರಾಜ್ಯ, ಕನಿಷ್ಠ ಕೇಂದ್ರ: ಕೆಸಿಆರ್‌ ಹೊಸ ಚಿಂತನೆ

ಈಶಾನ್ಯದ ರಾಜ್ಯಗಳಲ್ಲಿನ ಸಾಧನೆಯಿಂದಾಗಿ ಬಿಜೆಪಿ ಶನಿವಾರ ಸಂಭ್ರಮದ ಉತ್ತುಂಗದಲ್ಲಿದ್ದಾಗ ದಕ್ಷಿಣದ ವ್ಯಕ್ತಿಯೊಬ್ಬರು ಈ ಬೆಲೂನಿಗೆ ಸೂಜಿ ಚುಚ್ಚಲು ಯತ್ನಿಸಿದರು. ಕಾಂಗ್ರೆಸ್‍ ಮತ್ತು ಬಿಜೆಪಿಯ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‍ (ಕೆಸಿಆರ್‌) ವ್ಯಕ್ತಪಡಿಸಿದ ಆಕ್ರೋಶ ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ಪಾತ್ರ ವಹಿಸುವುದಾಗಿ ಮಾಡಿದ ಘೋಷಣೆ ಹೆಚ್ಚಿನವರಲ್ಲಿ ಅಚ್ಚರಿಗೆ ಕಾರಣವಾಗಿದೆ.

ರಾಜ್ಯವನ್ನು ‘ಬಂಗಾರು ತೆಲಂಗಾಣ’ (ಸುವರ್ಣ ತೆಲಂಗಾಣ) ಆಗಿಸುವ ತನಕ ಹೈದರಾಬಾದ್‍ನಲ್ಲಿಯೇ ಕೆಲಸ ಮಾಡುವುದಾಗಿ ಹಿಂದೆ ಅವರು ಹೇಳಿದ್ದು ಈ ಅಚ್ಚರಿಗೆ ಒಂದು ಕಾರಣ. ಏನು ಮಾಡಬೇಕು ಎಂದು 2014ರಲ್ಲಿ ನಿರ್ಧರಿಸಿದ್ದರೋ ಆ ಕೆಲಸ ಮುಗಿದಿದೆ ಮತ್ತು ಆದ್ದರಿಂದ ಅವರು ತಮ್ಮ ಹೆಜ್ಜೆಗುರುತು ವಿಸ್ತರಿಸಲು ನಿರ್ಧರಿಸಿದ್ದಾರೆ ಎಂಬುದನ್ನು ಅವರ ಮಾತುಗಳು ಸೂಚಿಸುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಕಟು ಟೀಕಾಕಾರರಾಗಿ ಕೆಸಿಆರ್ ದಿನ ಬೆಳಗಾಗುವುದರೊಳಗೆ ಬದಲಾಗಲು ಕಾರಣವೇನು, ಇವರಿಬ್ಬರ ನಡುವೆ ನಡೆದಿದ್ದಾದರೂ ಏನು ಎಂಬ ಪ್ರಶ್ನೆ ನಮ್ಮ ಮುಂದಿದೆ. 2016ರ ನವೆಂಬರ್‌ನಷ್ಟು ಹಿಂದಕ್ಕೆ ಹೋದರೆ, ಗರಿಷ್ಠ ಮುಖಬೆಲೆಯ ನೋಟು ರದ್ದತಿಯ ನಿರ್ಧಾರವನ್ನು ಬೆಂಬಲಿಸಿದ ಎನ್‍ಡಿಎಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯದ ಮೊದಲ ಮುಖ್ಯಮಂತ್ರಿ ಕೆಸಿಆರ್.

ಜಿಎಸ್‍ಟಿ ವಿಚಾರದಲ್ಲಿಯೂ ಮೋದಿಯ ಬೆನ್ನಿಗೆ ಅವರು ನಿಂತಿದ್ದರು. ರಾಷ್ಟ್ರಪತಿ ಹುದ್ದೆಗೆ ಎನ್‍ಡಿಎ ಅಭ್ಯರ್ಥಿಯಾಗಿದ್ದ ರಾಮನಾಥ ಕೋವಿಂದ್‍ಗೆ ಬೆಂಬಲ ನೀಡುವ ವಿಚಾರದಲ್ಲಿಯೂ ಅವರು ಇದೇ ಗಟ್ಟಿ ನಿಲುವು ತಳೆದಿದ್ದರು. ಈ ಬೆಂಬಲ ಎಷ್ಟು ದೃಢವಾಗಿತ್ತು ಎಂದರೆ, ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಹೈದರಾಬಾದ್‍ಗೆ ಬಂದಾಗ ಅವರನ್ನು ಭೇಟಿಯಾಗಲೂ ಕೆಸಿಆರ್ ನಿರಾಕರಿಸಿದ್ದರು.

ಸಿಟ್ಟು, ಮಹತ್ವಾಕಾಂಕ್ಷೆ, ತೆಲಂಗಾಣದ ರಾಜಕಾರಣ ಮತ್ತು ಸ್ವಲ್ಪ ಮಟ್ಟಿನ ಸ್ವಹಿತಾಸಕ್ತಿಯ ಸಂಯೋಜನೆಯೇ ಇದರ ಹಿಂದಿನ ಕಾರಣ ಎಂದು ತೋರುತ್ತಿದೆ. ಮುಂದಿನ ಲೋಕಸಭೆ ಚುನಾವಣೆ ವಿಚಾರದಲ್ಲಿ ಕೆಲವು ಲೆಕ್ಕಾಚಾರಗಳು ನಡೆಯುತ್ತಿವೆ. ಬಿಜೆಪಿಯನ್ನು 200 ಸ್ಥಾನಗಳ ಒಳಗೆ ಕಟ್ಟಿ ಹಾಕಿದರೆ ಮತ್ತು ಕಾಂಗ್ರೆಸ್‍ ಮೂರಂಕಿ ತಲುಪದಿದ್ದರೆ ಎನ್‍ಡಿಎ ಅಥವಾ ಯುಪಿಎಯ ಕೆಲವು ಮಿತ್ರಪಕ್ಷಗಳನ್ನು ಸೇರಿಸಿಕೊಂಡು ಮೂರನೇ ರಂಗದ ಸಾಧ್ಯತೆಯನ್ನು ನನಸಾಗಿಸಬಹುದು ಎಂಬುದು ಈ ಎಣಿಕೆ. ಇದು ಸರಿಸುಮಾರು 1996-96ರ ಸಂಯುಕ್ತ ರಂಗದ ರೀತಿಯ ಪ್ರಯೋಗ.

ಅವಿಭಜಿತ ಆಂಧ್ರಪ್ರದೇಶ ರಾಜಕಾರಣದ ವಿಚಾರವೂ ಇದರಲ್ಲಿ ಅಡಗಿದೆ. 2004 ಮತ್ತು 2009ರಲ್ಲಿ ಅವಿಭಜಿತ ಆಂಧ್ರಪ್ರದೇಶದಿಂದ ಕಾಂಗ್ರೆಸ್‍ ಪಕ್ಷವು ಕ್ರಮವಾಗಿ 29 ಮತ್ತು 33 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿತ್ತು. ಇದು ಯುಪಿಎ-1 ಮತ್ತು ಯುಪಿಎ-2ರ ರಚನೆಗೆ ದೊಡ್ಡ ನೆರವು ನೀಡಿತ್ತು. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮೋದಿ ಮೇಲೆ ಸಿಟ್ಟಾಗಿದ್ದಾರೆ.

ವಿಭಜನೆ ಬಳಿಕ ಆಂಧ್ರಪ್ರದೇಶಕ್ಕೆ ಸಾಷಕ್ಟು ನೆರವು ಮತ್ತು ಅನುದಾನ ದೊರೆತಿಲ್ಲ ಎಂಬುದು ಅವರ ಮುನಿಸಿಗೆ ಕಾರಣ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಮಿತ್ರಕೂಟ ಸೇರಲು ಅವರು ಸಿದ್ಧರಾಗಿದ್ದಾರೆ. ಕೆಸಿಆರ್ ಅವರ ಟಿಆರ್‌ಎಸ್‍ ಮತ್ತು ನಾಯ್ಡು ಅವರ ಟಿಡಿಪಿ ಜತೆಯಾಗಿ ಎರಡೂ ರಾಜ್ಯಗಳ 42 ಸ್ಥಾನಗಳ ಪೈಕಿ 30ರಿಂದ 35ರಷ್ಟನ್ನು ಗೆಲ್ಲುವುದು ಸಾಧ್ಯವಾಗಬಹುದು. ಹಾಗಾದರೆ ಹೊಸ ರಾಜಕೀಯ ರಂಗದ ಸ್ಥಾಪನೆ ತೆಲುಗು ರಾಜಕೀಯದ ಸುತ್ತಲೇ ಸುತ್ತಬೇಕಾಗಬಹುದು ಎಂಬುದು ಒಂದು ಸಾಧ್ಯತೆ.

ಕೆಸಿಆರ್‌ ಅವರಲ್ಲಿ ಮೋದಿ ವಿರುದ್ಧದ ದೂರುಗಳ ಪಟ್ಟಿಯೇ ಇದೆ. ಮುಸ್ಲಿಮರಿಗೆ ಶೇ 12ರಷ್ಟು ಮೀಸಲಾತಿ ನೀಡುವ ಪ್ರಸ್ತಾವಕ್ಕೆ ಒಪ್ಪಿಗೆ ಕೊಟ್ಟಿಲ್ಲ, ತೆಲಂಗಾಣ ಹೈಕೋರ್ಟ್‌ ಇನ್ನೂ ಕಾರ್ಯಾರಂಭ ಮಾಡಿಲ್ಲ, ಹೊಸ ವಿಧಾನಸಭಾ ಕಾರ್ಯಾಲಯ ನಿರ್ಮಾಣಕ್ಕೆ ಬೈಸನ್‌ ಪೋಲೊ ಮೈದಾನವನ್ನು ಹಸ್ತಾಂತರಿಸಿಲ್ಲ, ಕೆಲವು ಆಯ್ದ ಯೋಜನೆಗಳ ಅನುದಾನ ಬಿಡುಗಡೆ ಮಾಡಿಲ್ಲ ಮತ್ತು ತೆಲಂಗಾಣ ವಿಧಾನಸಭೆಯ ಸದಸ್ಯರ ಸಂಖ್ಯೆಯನ್ನು 119ರಿಂದ 153ಕ್ಕೆ ಏರಿಸಿಲ್ಲ ಎಂಬ ವಿಚಾರಗಳಲ್ಲಿ ಅವರಿಗೆ ಅಸಮಾಧಾನ ಇದೆ.

ಇದೇ ರೀತಿ, ಆಂಧ್ರಪ್ರದೇಶ ವಿಧಾನಸಭೆಯ ಸ್ಥಾನಗಳ ಸಂಖ್ಯೆಯನ್ನು 175ರಿಂದ 225ಕ್ಕೆ ಏರಿಸಲು ನಾಯ್ಡು ಬಯಸಿದ್ದಾರೆ. ವಿರೋಧ ಪಕ್ಷಗಳಿಂದ ಹಲವು ಮುಖಂಡರನ್ನು ಈ ಇಬ್ಬರೂ ನಾಯಕರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಕ್ಷೇತ್ರಗಳ ಸಂಖ್ಯೆ ಏರಿಕೆಯಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಎಲ್ಲರಿಗೂ ಅವಕಾಶ ಕೊಡುವುದು ಕಷ್ಟ ಎಂಬುದು ಇದಕ್ಕೆ ಒಂದು ಕಾರಣ.

ಕೆಸಿಆರ್‌ ಮಗ, ತೆಲಂಗಾಣದ ಕೈಗಾರಿಕಾ ಸಚಿವ ಕೆ.ಟಿ. ರಾಮರಾವ್‌ ಅವರೂ ಇತ್ತೀಚೆಗೆ ತಮ್ಮ ಅತೃಪ್ತಿಯನ್ನು ತೋಡಿಕೊಂಡಿದ್ದಾರೆ. ಯೋಜನೆಗಳ ವಿಚಾರಕ್ಕೆ ಬಂದರೆ ಕೇಂದ್ರದ ಯೋಚನೆ ದೆಹಲಿ–ಮುಂಬೈಗೆ ಸೀಮಿತವಾಗಿರುತ್ತದೆ, ದಕ್ಷಿಣ ಭಾರತಕ್ಕೆ ಗಮನಾರ್ಹವಾದದ್ದೇನೂ ಸಿಗುವುದಿಲ್ಲ ಎಂಬುದು ಅವರ ಅಸಮಾಧಾನಕ್ಕೆ ಕಾರಣ. ಕೃಷಿ ಕ್ಷೇತ್ರದ ಸಂಕಷ್ಟಕ್ಕೆ ಸಂಬಂಧಿಸಿಯೂ ಕೆಸಿಆರ್‌ ಅವರು ಮೋದಿ ವಿರುದ್ಧ ಹರಿಹಾಯುತ್ತಿದ್ದಾರೆ. ಎನ್‌ಡಿಎ ಸರ್ಕಾರದ ನೀತಿ ಸರಿ ಇಲ್ಲ ಎಂದು ಹೇಳುತ್ತಿದ್ದಾರೆ. ಇದು ಸ್ವಲ್ಪ ವಿಚಿತ್ರವಾದ ಆರೋಪ ಯಾಕೆಂದರೆ, ರೈತರ ಆತ್ಮಹತ್ಯೆಯ ಸಂಖ್ಯೆಯಲ್ಲಿ ಮೊದಲ ಮೂರು ರಾಜ್ಯಗಳಲ್ಲಿ ತೆಲಂಗಾಣವೂ ಒಂದು.

ಇದು ರಾಜಕೀಯ ತಂತ್ರ ಎಂಬುದು ಗೊತ್ತಾಗದಂತೆ ನೋಡಿಕೊಳ್ಳಲು ಕೆಸಿಆರ್‌ ಪ್ರಯತ್ನಿಸುತ್ತಿರುವಂತೆ ಕಾಣಿಸುತ್ತಿದೆ. ರಾಜ್ಯಗಳು ತನ್ನ ಕೈಗೊಂಬೆ ಎಂಬಂತೆ ಕೇಂದ್ರ ವರ್ತಿಸುತ್ತಿದೆ ಎಂಬ ಆರೋಪದ ಮೂಲಕ ಅವರು ಇದನ್ನು ಕೇಂದ್ರ ಮತ್ತು ರಾಜ್ಯದ ನಡುವಣ ಸಂಘರ್ಷ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ವಿದೇಶಾಂಗ ವ್ಯವಹಾರ, ರಕ್ಷಣೆ, ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರೀಯ ಹೆದ್ದಾರಿ ಬಿಟ್ಟು ಉಳಿದೆಲ್ಲ ಸಚಿವಾಲಯಗಳನ್ನು ರದ್ದುಪಡಿಸುವಂತೆ ಕೆಸಿಆರ್‌ ಆಗ್ರಹಿಸುತ್ತಿದ್ದಾರೆ. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್‌ ಯೋಜನೆಯನ್ನು ಬೊಟ್ಟು ಮಾಡಿ ಗ್ರಾಮೀಣ ರಸ್ತೆಯಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ ಏನು ಕೆಲಸ ಎಂದು ಪ್ರಶ್ನಿಸುತ್ತಿದ್ದಾರೆ.

ಕೇಂದ್ರದ ಕೈಯಲ್ಲಿ ಹೆಚ್ಚಿನ ಅಧಿಕಾರ ಕೇಂದ್ರೀಕೃತವಾಗಿದ್ದು ತಮಗೆ ಹೆಚ್ಚಿನ ಅವಕಾಶವೇ ಇಲ್ಲ ಎಂಬ ಅಸಮಾಧಾನ ಹೊಂದಿರುವ ಹಲವು ರಾಜ್ಯಗಳ ಭಾವನೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಕೆಸಿಆರ್‌ ಪ್ರಯತ್ನಿಸುತ್ತಿದ್ದಾರೆ. ವಿವಿಧ ಯೋಜನೆಗಳಿಗೆ ಅನುದಾನ ನೀಡುವಂತೆ ಕೇಂದ್ರವನ್ನು ಕೇಳುತ್ತಲೇ ಇರಬೇಕಾದ ಸ್ಥಿತಿಯ ಬಗ್ಗೆ ಮತ್ತು ಆ ಮೂಲಕ ಕೇಂದ್ರ–ರಾಜ್ಯ ಸಂಬಂಧವನ್ನು ಅಸಮಾನಗೊಳಿಸಿರುವುದಕ್ಕೆ ರಾಜ್ಯಗಳಿಗೆ ಸಿಟ್ಟಿದೆ ಎಂಬುದು ಅವರಿಗೆ ಗೊತ್ತಿದೆ. ಕೇಂದ್ರಕ್ಕೆ ಸೀಮಿತ ಅಧಿಕಾರ ಮತ್ತು ರಾಜ್ಯಗಳಿಗೆ ಗರಿಷ್ಠ ಅಧಿಕಾರ ನೀಡುವ ಸಹಕಾರಿ ಒಕ್ಕೂಟ ವ್ಯವಸ್ಥೆಯ ಹೊಸ ಮಾದರಿಯೊಂದನ್ನು ಅವರು ಪ್ರತಿಪಾದಿಸುತ್ತಿದ್ದಾರೆ. ಭಾರತವನ್ನು ಭಾರತ ಸಂಯುಕ್ತ ಸಂಸ್ಥಾನ ಎಂದು ಪರಿವರ್ತಿಸುವುದು ಕೆಸಿಆರ್‌ ಅವರು ಮುಂದಿಟ್ಟಿರುವ ಹೊಸ ಮಾದರಿ.

ಅಸಮಾನತೆಯ ಬಗೆಗಿನ ಅತೃಪ್ತಿಯ ನೆಲೆಗಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಮೈತ್ರಿಕೂಟ ಕಟ್ಟಲು ಕೆಸಿಆರ್‌ ಅವರಿಗೆ ಸಾಧ್ಯವಾಗಬಹುದೇ? ಪ್ರಾದೇಶಿಕ ನಾಯಕರು ಒಟ್ಟಾಗಿ ಕೇಂದ್ರದಲ್ಲಿ ಸರ್ಕಾರ ರಚಿಸುವ ಚಿಂತನೆ ಹೆಚ್ಚು ಪ್ರಾತಿನಿಧಿಕವಾದ ಅಧಿಕಾರ ವ್ಯವಸ್ಥೆ ಎಂಬಂತೆ ಕಾಣಿಸುತ್ತಿದೆ. ಆದರೆ, ವಾಸ್ತವದಲ್ಲಿ ಇದು ಮಿತಿಮೀರಿದ ಅಹಂ ಮತ್ತು ತಾವು ಹೇಳಿದ್ದೇ ಸರಿ ಎಂಬ ಮನೋಭಾವಕ್ಕೆ ದಾರಿ ಮಾಡಿಕೊಡುತ್ತದೆ.

ತೃತೀಯ ರಂಗದ ಭಾಗವಾಗಬಹುದಾದ ಹೆಚ್ಚಿನವರು ಪ್ರಾದೇಶಿಕ ಪಕ್ಷಗಳ ಪ್ರಬಲ ಮುಖ್ಯಸ್ಥರು. ಇವರೆಲ್ಲರೂ ಭಟ್ಟಂಗಿತನದ ವ್ಯವಸ್ಥೆಗೆ ಒಗ್ಗಿಕೊಂಡವರು ಮತ್ತು ಈ ಪಕ್ಷಗಳಲ್ಲಿ ಅಂತರಿಕ ಪ್ರಜಾಪ್ರಭುತ್ವ ಎಂಬುದು ಇಲ್ಲವೇ ಇಲ್ಲ. ತೃತೀಯ ರಂಗದ ಸರ್ಕಾರ ಸುಸ್ಥಿರವಾಗಿ ಇರುವುದೇ ಇಲ್ಲ ಎಂಬುದು ನಮ್ಮ ಈವರೆಗಿನ ಅನುಭವವಾಗಿದೆ.

*–ಟಿ.ಎಸ್‌. ಸುಧೀರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry