ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶೋಕ ಖೇಣಿಗೆ ಬೆಣ್ಣೆ: ‘ನೈಸ್’ ವರದಿಗೆ ಸುಣ್ಣ

ಖೇಣಿಗೆ ಮಣೆ ಹಾಕಿದ ಕಾಂಗ್ರೆಸ್‌: ರಾಜಕೀಯ ವಲಯದಲ್ಲಿ ಚರ್ಚೆ
Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಭಾರಿ ಸದ್ದು ಮಾಡಿದ್ದ ‘ನಂದಿ ಇನ್ಫಾಸ್ಟ್ರಕ್ಚರ್‌ ಕಾರಿಡಾರ್ ಎಂಟರ್ ಪ್ರೈಸಸ್’ (ನೈಸ್) ಕಂಪನಿಯ ಬೆಂಗಳೂರು -ಮೈಸೂರು ಇನ್ಫಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿ) ಯೋಜನೆ ಅಕ್ರಮಗಳ ಕುರಿತು ಸದನ ಸಮಿತಿ ನೀಡಿದ ವರದಿ ಲೋಕೋಪಯೋಗಿ ಇಲಾಖೆಯಲ್ಲಿ ದೂಳು ಹಿಡಿಯುತ್ತಿರುವಾಗಲೇ ಈ ಸಂಸ್ಥೆಯ ಮುಖ್ಯಸ್ಥ ಅಶೋಕ ಖೇಣಿ ಅವರನ್ನು ಕಾಂಗ್ರೆಸ್‌ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಬೀದರ್ ದಕ್ಷಿಣ ಕ್ಷೇತ್ರದ ಶಾಸಕ, ಕರ್ನಾಟಕ ಮಕ್ಕಳ ಪಕ್ಷದ ಸಂಸ್ಥಾಪಕ ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದಕ್ಕೆ ಕಾಂಗ್ರೆಸ್ ಆಂತರಿಕ ವಲಯದಲ್ಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಖೇಣಿ ಅವರಿಗೂ ಮುನ್ನ, ಗಣಿ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಆನಂದ್ ಸಿಂಗ್‌ ಮತ್ತು ನಾಗೇಂದ್ರ ಅವರಿಗೆ ಕಾಂಗ್ರೆಸ್‌ ಪಕ್ಷ ಮಣೆ ಹಾಕಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದರು.

ಖೇಣಿ ಪಕ್ಷ ಸೇರಿರುವುದರಿಂದ ಮತ್ತೆ ಅಧಿಕಾರಕ್ಕೆ ಬಂದರೂ ನೈಸ್‌ ವರದಿ ಬಗ್ಗೆ ಕಾಂಗ್ರೆಸ್‌ ಮೌನ ವಹಿಸಬೇಕಾದ ಅನಿವಾರ್ಯತೆಗೆ ಸಿಕ್ಕಿಕೊಳ್ಳಲಿದೆ ಎಂದೂ ಕಾಂಗ್ರೆಸ್‌ ನಾಯಕರ ಒಂದು ಗುಂಪು ಆರೋಪಿಸಿದೆ.

ಇತ್ತೀಚೆಗೆ ಕಾಂಗ್ರೆಸ್‌ ಜೊತೆ ಖೇಣಿ ಸಂಬಂಧ ಬೆಳೆಸಿಕೊಳ್ಳಲು ಮುಂದಾಗಿದ್ದರು. 2016ರಲ್ಲಿ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಹಾಕಿದ್ದರು. ವಿಧಾನಸಭೆಯಲ್ಲೂ ಕಾಂಗ್ರೆಸ್‌ ವಿರುದ್ಧ ಅವರು ಧ್ವನಿ ಎತ್ತಿದ್ದು ಕಡಿಮೆಯೇ. ಖೇಣಿ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವಲ್ಲಿ ಕೆಲವು ಪ್ರಭಾವಿ ಸಚಿವರ ಒತ್ತಡವೂ ಇತ್ತು. ಅದಕ್ಕಾಗಿ ದೆಹಲಿ ಮಟ್ಟದಲ್ಲೂ ಲಾಬಿ ನಡೆದಿತ್ತು ಎಂದು ಈ ಗುಂಪು ಹೇಳಿದೆ.

‘ಖೇಣಿ ಸೇರ್ಪಡೆಗೆ ಪಕ್ಷದೊಳಗೆವ್ಯಕ್ತವಾಗಿರುವ ವಿರೋಧ ಕ್ಷಣಿಕವಾದುದು. ಬಿಎಂಐಸಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿರುವ ಕ್ಷೇತ್ರಗಳ ಶಾಸಕರು ಮಾತ್ರ ಆಕ್ಷೇಪವ್ಯಕ್ತಪಡಿಸುತ್ತಿದ್ದಾರೆ. ವಿರೋಧ ವ್ಯಕ್ತಪಡಿಸದೆ ಅವರಿಗೆ ಬೇರೆ ದಾರಿ ಇಲ್ಲ’ ಎಂದು ನಾಯಕರೊಬ್ಬರು ಪ್ರತಿಕ್ರಿಯಿಸಿದರು.

‘ಮೈಸೂರು– ಬೆಂಗಳೂರು ಹೆದ್ದಾರಿಯಲ್ಲಿ ಭೂಮಿ ಅತಿಕ್ರಮಣದ ಆರೋಪ ಎದುರಿಸುತ್ತಿರುವ ಅಶೋಕ ಖೇಣಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲಿಗೆ ಹಾಕಬೇಕಿತ್ತು. ಅದರ ಬದಲು, ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಸರ್ಕಾರವನ್ನು ‘ಸೀದಾ ರುಪಯ್ಯಾ ಸರ್ಕಾರ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದು ಇದರಿಂದ ಸಾಬೀತಾಗುತ್ತದೆ’ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ ಜಾವಡೇಕರ್‌ ಟ್ವೀಟ್‌ ಮಾಡಿದ್ದಾರೆ.

ಅಶೋಕ ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ ಭ್ರಷ್ಟಾಚಾರ ಪೋಷಿಸುವ ಪಕ್ಷ ಎನ್ನುವುದು ಸಾಬೀತಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ನೈಸ್‌ ಅಕ್ರಮ ಹಾಗೂ ರಾಜ್ಯ ಸರ್ಕಾರದ ಮೌನವನ್ನು ಜೆಡಿಎಸ್‌ ಮುಂದಿನ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿ ಬಳಸುವ ಸಾಧ್ಯತೆ ಇದೆ.

ಹಲವು ಅನುಮಾನ: ನೈಸ್‌ ಅಕ್ರಮ ಆರೋಪಗಳ ವಿಚಾರಣೆಗೆ ಸಚಿವ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ರಚಿಸಲಾಗಿದ್ದ ಸದನ ಸಮಿತಿ ವರದಿ ನೀಡಿ ವರ್ಷ ಕಳೆದರೂ, ಸರ್ಕಾರ ಯಾವುದೇ ಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸರ್ಕಾರದ ಒಳಗಿರುವ ಪ್ರಭಾವಿ ಶಕ್ತಿಗಳು ನೈಸ್‌ ಕಂಪನಿ ವಿರುದ್ಧ ಕ್ರಮಕ್ಕೆ ಅಡ್ಡಗಾಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಖೇಣಿ ಕಾಂಗ್ರೆಸ್‌ಗೆ ಸೇರ್ಪಡೆ ಆಗುವುದರೊಂದಿಗೆ ಈ ಅನುಮಾನ, ಆರೋಪಗಳಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.

2016ರ ಚಳಿಗಾಲದ ಅಧಿವೇಶನದಲ್ಲಿ ಸಮಿತಿ ವರದಿ ಮಂಡಿಸಿತ್ತು. ವರದಿ ಮಂಡಿಸದಂತೆ ಕೆಲವರು ಪ್ರಯತ್ನಿಸಿದರೂ, ಸಮಿತಿಯಲ್ಲಿದ್ದ ಶಾಸಕರು ವರದಿ ಮಂಡನೆಗೆ ಅವಕಾಶ ನೀಡುವಂತೆ ಧರಣಿ ನಡೆಸಿದ್ದರು. ಅಲ್ಲದೆ, ನೈಸ್‌ ಕಂಪನಿಯ ಅಕ್ರಮಗಳ ಬಗ್ಗೆ ಎಲ್ಲ ಸದಸ್ಯರೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ನೈಸ್‌ ಅಕ್ರಮಗಳ ಕುರಿತಂತೆ ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸುವಂತೆ ಸಮಿತಿ ಶಿಫಾರಸು ಮಾಡಿತ್ತು.

ನೈಸ್‌ ಕಂಪನಿ ವಶದಲ್ಲಿರುವ 11,660 ಎಕರೆ ಹೆಚ್ಚುವರಿ ಭೂಮಿ ವಾಪಸ್‌ ಪಡೆಯಬೇಕು. ಯೋಜನೆ ಪೂರ್ಣಗೊಳ್ಳದೆ ಸಂಪರ್ಕ ರಸ್ತೆಗಳಲ್ಲಿ (ಬೆಂಗಳೂರು ಸುತ್ತಮುತ್ತಲ ನೈಸ್‌ ರಸ್ತೆ) ಟೋಲ್‌ ಸಂಗ್ರಹ ಮಾಡುತ್ತಿರುವುದೂ ಅಕ್ರಮ. ಒಪ್ಪಂದದಂತೆ ಕಾಂಕ್ರಿಟ್‌ ರಸ್ತೆಗಳನ್ನು ನಿರ್ಮಾಣ ಮಾಡಿಲ್ಲದ ತಾಂತ್ರಿಕ ಲೋಪವನ್ನೂ ಬಳಸಿಕೊಂಡು ಕಂಪನಿ ಈವರೆಗೆ ಅಕ್ರಮವಾಗಿ ವಸೂಲು ಮಾಡಿರುವ ₹ 1,350 ಕೋಟಿ ಟೋಲ್‌ ಮೊತ್ತ ಮರು ವಸೂಲಿ ಮಾಡಬೇಕು ಎಂದು ಸದನ ಸಮಿತಿ ಶಿಫಾರಸು ಮಾಡಿತ್ತು.

ಸಮಿತಿಯ ವರದಿ ಪರಾಮರ್ಶೆಗೆ ಅಧಿಕಾರಿಗಳನ್ನು ಒಳಗೊಂಡ ಉನ್ನತಾಧಿಕಾರ ಸಮಿತಿ ರಚಿಸಿ ಕೈತೊಳೆದುಕೊಂಡ ಸರ್ಕಾರ ಈ ಬಗ್ಗೆ ಗಮನವನ್ನೇ ನೀಡದೆ ನಿರ್ಲಿಪ್ತವಾಗಿ ಉಳಿದಿದೆ. ನೋಟಿಸ್‌ ನೀಡುವುದಕ್ಕಷ್ಟೇ ಸರ್ಕಾರದ ಇಚ್ಛಾಶಕ್ತಿ ಸೀಮಿತಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ತರ್ಕಗಳಿಗೆ ಕಾರಣವಾಗಿದೆ.

ನೈಸ್‌ ಕಂಪನಿ ಅಕ್ರಮದ ಬಗ್ಗೆ ವಿಧಾನಸಭೆಯಲ್ಲಿ ಉಗ್ರ ಭಾಷಣ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಖೇಣಿ ಸೇರ್ಪಡೆ ಕುರಿತು ಮೌನ ವಹಿಸಿರುವುದೂ ಸಂದೇಹಗಳನ್ನು ಹುಟ್ಟುಹಾಕಿದೆ.

‘ಸಮೀಕ್ಷೆ ನಡೆಸಿ ಪಕ್ಷದ ಟಿಕೆಟ್‌ ಕೊಡಿ’
ಬೀದರ್: ‘ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮತದಾರರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್‌ ಕೊಡಬೇಕು’ ಎಂದು ಟಿಕೆಟ್‌ ಆಕಾಂಕ್ಷಿ ಚಂದ್ರಾಸಿಂಗ್ ಒತ್ತಾಯಿಸಿದರು.

‘ಶಾಸಕ ಅಶೋಕ್‌ ಖೇಣಿ ಸೇರ್ಪಡೆ ಸಂಬಂಧ ಪಕ್ಷದ ನಾಯಕರು ಕ್ಷೇತ್ರದ ಮುಖಂಡರ ಹಾಗೂ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯವನ್ನು ಕೇಳಿಲ್ಲ. ವರಿಷ್ಠರ ನಿರ್ಧಾರ ಕಾರ್ಯಕರ್ತರಿಗೆ ಆಘಾತವನ್ನು ಉಂಟು ಮಾಡಿದೆ’ ಎಂದು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಒಂಬತ್ತು ವರ್ಷಗಳಿಂದ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಡುಗೆ ಸಿದ್ಧಪಡಿಸಿದ ಮೇಲೆ ಬೇರೆಯವರು ನೇರವಾಗಿ ಊಟಕ್ಕೆ ಬಂದರೆ ಒಪ್ಪಲಾಗದು. ವರಿಷ್ಠರು ಸಾಧಕ– ಬಾಧಕಗಳನ್ನು ಅರಿತು ಅಂತಿಮ ತೀರ್ಮಾನ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಬಿಜೆಪಿಗೆ ಖೇಣಿ ಚುನಾವಣಾ ಅಸ್ತ್ರ’
ಬೀದರ್: ‘ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ ಖೇಣಿ ಕಾಂಗ್ರೆಸ್‌ಗೆ ಸೇರಿರುವುದು ಭ್ರಷ್ಟಾಚಾರವನ್ನು ಬಿಗಿದು ಅಪ್ಪಿಕೊಂಡಂತೆ ಆಗಿದೆ. ಬಿಜೆಪಿ ಈ ವಿಷಯವನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲಿದೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

‘ಕಾಂಗ್ರೆಸ್‌ ಭ್ರಷ್ಟರ ಕೂಟಕ್ಕೆ ಖೇಣಿ ಸೇರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟರ ಕೂಟವನ್ನು ದೊಡ್ಡದು ಮಾಡಿದ್ದಾರೆ’ ಎಂದು ಮಂಗಳವಾರ ಟೀಕಿಸಿದರು. ‘ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರ ಹೇಳಿಕೆ ಹಾಸ್ಯಾಸ್ಪದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT