ಖೇಣಿ ಜೈಲಿಗೆ ಹೋಗಿ ಬಂದಿಲ್ಲ: ಸಿದ್ದರಾಮಯ್ಯ

ಭಾನುವಾರ, ಮಾರ್ಚ್ 24, 2019
33 °C

ಖೇಣಿ ಜೈಲಿಗೆ ಹೋಗಿ ಬಂದಿಲ್ಲ: ಸಿದ್ದರಾಮಯ್ಯ

Published:
Updated:
ಖೇಣಿ ಜೈಲಿಗೆ ಹೋಗಿ ಬಂದಿಲ್ಲ: ಸಿದ್ದರಾಮಯ್ಯ

ನವದೆಹಲಿ: ಶಾಸಕ ಅಶೋಕ್‌ ಖೇಣಿ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಂಡಿರುವುದನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಎಸ್‌. ಯಡಿಯೂರಪ್ಪ ಅವರಂತೆ ಖೇಣಿ ಜೈಲಿಗೆ ಹೋಗಿ ಬಂದಿಲ್ಲ ಎಂದು ತಿಳಿಸಿದರು.

ಇಲ್ಲಿನ ಕರ್ನಾಟಕ ಭವನದಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನೈಸ್‌ ಪ್ರಕರಣದ ಕುರಿತು ಖೇಣಿ ವಿರುದ್ಧ ಇದ್ದ ಆರೋಪಗಳ ಸತ್ಯಾಸತ್ಯತೆ ಅರಿಯುವ ನಿಟ್ಟಿನಲ್ಲಿ ರಚಿಸಲಾಗಿದ್ದ ಕಾನೂನು ಸಚಿವರ ನೇತೃತ್ವದ ಸದನ ಸಮಿತಿಯ ವರದಿಯನ್ನು ಆಧರಿಸಿ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಸದನ ಸಮಿತಿಯು ಈಗಾಗಲೇ ಖೇಣಿ ವಿರುದ್ಧ ವರದಿ ಸಲ್ಲಿಸಿದೆ. ಸರ್ಕಾರ ಅದನ್ನು ಇನ್ನಷ್ಟೇ ಪರಿಶೀಲಿಸಬೇಕಿದೆ. ಒಂದೊಮ್ಮೆ ವರದಿಯಲ್ಲಿ ಖೇಣಿ ತಪ್ಪಿ

ತಸ್ಥರು ಎಂಬ ಅಂಶ ಇದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಪಕ್ಷ ಸೇರುವ ಮೂಲಕ ಖೇಣಿ ಈ ಆರೋಪ ಮುಕ್ತರಾಗುವ ಉದ್ದೇಶ ಹೊಂದಿರಬಹುದು. ಆದರೆ, ಸರ್ಕಾರ ಅದಕ್ಕೆ ಅವಕಾಶ ನೀಡುವುದಿಲ್ಲ. ಪಕ್ಷಕ್ಕೆ ಯಾರನ್ನಾದರೂ ಸೇರಿಸಿಕೊಳ್ಳುವಂತೆ ಹೈಕಮಾಂಡ್‌ ಒತ್ತಡವನ್ನೂ ಹೇರಿಲ್ಲ ಎಂದು ಅವರು ಒತ್ತಿಹೇಳಿದರು.

ಆನಂದ್‌ಸಿಂಗ್‌ ಹಾಗೂ ಬಿ.ನಾಗೇಂದ್ರ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಕುರಿತೂ ಸಮರ್ಥನೆ ಮಾಡಿಕೊಂಡ ಮುಖ್ಯಮಂತ್ರಿ, ಈ ಇಬ್ಬರೂ ಗಣಿ ಅಕ್ರಮದ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿರಬಹುದು. ಆದರೆ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರು ನೀಡಿದ್ದ ವರದಿಯಲ್ಲಿ ಅವರ ಹೆಸರು ಇರಲಿಲ್ಲ ಎಂದು ಹೇಳಿದರು.

‘ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಪ್ರಸ್ತಾವ ಇಲ್ಲ ಎಂದ ಅವರು, ಲೋಕಾಯುಕ್ತ ವರದಿ ಆಧರಿಸಿ ಅಕ್ರಮ ಗಣಿಗಾರಿಕೆ ಹಾಗೂ ಗಾಲಿ ಜನಾರ್ದನ ರೆಡ್ಡಿ ವಿರುದ್ಧವೇ ನಾವು 2010ರಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದೆವು. ಹಾಗಾಗಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇಲ್ಲ’ ಎಂದರು.

‘ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಬಿಜೆಪಿಯು ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದೂ ಘೋಷಿಸಿರುವುದರಿಂದ ನಾನು ಅವರ ವಿರುದ್ಧ ಆರೋಪ ಮಾಡುತ್ತೇನೆ. ನಾವು ಅಶೋಕ್‌ ಖೇಣಿ, ಆನಂದ್‌ಸಿಂಗ್‌ ಹಾಗೂ ನಾಗೇಂದ್ರ ಅವರಿಗೆ ಟಿಕೆಟ್‌ ನೀಡುವ ಭರವಸೆಯನ್ನೂ ನೀಡಿಲ್ಲ. ಅವರಿಗೆ ಸಚಿವ ಸ್ಥಾನ, ಮುಖ್ಯಮಂತ್ರಿ ಪಟ್ಟ ನೀಡುವುದಾಗಿ ಹೇಳಿಕೊಂಡಿಲ್ಲ’ ಎಂದು ಅವರು ವಿವರಿಸಿದರು.

ಮೋದಿಯಿಂದ ಕಾಂಗ್ರೆಸ್‌ಗೇ ಲಾಭ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಪದೇಪದೇ ರಾಜ್ಯಕ್ಕೆ ಭೇಟಿ ನೀಡುವುದರಿಂದ ಕಾಂಗ್ರೆಸ್‌ ಪಕ್ಷಕ್ಕೇ ಲಾಭವಾಗಲಿದೆ ಎಂದು ಹೇಳಿದ ಅವರು, ಕೋಮುವಾದದ ವಿರುದ್ಧ ಕಾಂಗ್ರೆಸ್‌ ಹೋರಾಡಲಿದೆ ಎಂದರು.

‘ರಾಹುಲ್‌ ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡುವುದರಿಂದ ಬಿಜೆಪಿಗೆ ಲಾಭವಾಗಲಿದೆ ಎಂದು ಆ ಪಕ್ಷದವರು ಹೇಳಿಕೊಳ್ಳುತ್ತಾರೆ. ಅದೇ ರೀತಿ, ಮೋದಿ ಮತ್ತು ಅಮಿತ್‌ ಶಾ ಭೇಟಿಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂಬುದು ನಮ್ಮ ಲೆಕ್ಕಾಚಾರವಾಗಿದೆ’ ಎಂದು ಅವರು ಚಟಾಕಿ ಹಾರಿಸಿದರು.

‘ಈಶಾನ್ಯ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶವು ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶಾದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಪುನರುಚ್ಚರಿಸಿದ ಅವರು, ದೇಶದ ಅನೇಕ ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ಇದ್ದುದರಿಂದ ಬಿಜೆಪಿ ಗೆದ್ದಿರಬಹುದು. ಆದರೆ, ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಹಾಗಾಗಿ ಗೆಲುವು ನಮ್ಮದೇ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿಯವರೇ ಭಯೋತ್ಪಾದಕರು ಎಂಬುದು ಇಡೀ ದೇಶಕ್ಕೇ ಗೊತ್ತಿದೆ’ ಎಂದು ಸಿದ್ದರಾಮಯ್ಯ ಅವರು ಸಂಸದ ನಳಿನ್‌ಕುಮಾರ್ ಕಟೀಲ್‌ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry