ನವೀನ್‌ ಸಹಚರರ ಬಂಧಿಸಿ ವಿಚಾರಣೆ

7

ನವೀನ್‌ ಸಹಚರರ ಬಂಧಿಸಿ ವಿಚಾರಣೆ

Published:
Updated:
ನವೀನ್‌ ಸಹಚರರ ಬಂಧಿಸಿ ವಿಚಾರಣೆ

ಮಂಡ್ಯ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರಿನ ಕೆ.ಟಿ.ನವೀನ್‌ ಕುಮಾರ್‌ ಅವರ ಮೂವರು ಸಹಚರರನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಬಂಧಿಸಿ, ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ.

ಮದ್ದೂರು ತಾಲ್ಲೂಕು ಹೆಮ್ಮನಹಳ್ಳಿ ಗ್ರಾಮದ ಗಿರೀಶ್‌, ಕೆಸ್ತೂರಿನ ಅಭಿಲಾಷ್‌, ಶ್ರೀರಂಗಪಟ್ಟಣದ ಅನಿಲ್‌ ಕುಮಾರ್‌ ಅವರನ್ನು ವಿಚಾರಣೆ ನಡೆಸಲಾಗಿದೆ.

‘ಫೆ.18ರಂದು ನವೀನ್‌ ಕುಮಾರ್‌ ಅವರನ್ನು ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಗುಂಡು ಮಾರಾಟ ಮಾಡುವಾಗ ಬಂಧಿಸಿರುವುದಾಗಿ ಪೊಲೀಸರು ಹೇಳುತ್ತಾರೆ. ಆದರೆ ಫೆ.14ರಂದೇ ಬೀರೂರಿನ ಪತ್ನಿ ಮನೆಯಲ್ಲಿ ಇದ್ದಾಗಲೇ ಬಂಧಿಸಿರುವುದಾಗಿ ನವೀನ್‌ ಕುಮಾರ್‌ ನಮಗೆ ತಿಳಿಸಿದ್ದರು. ಅವರು ನೀಡಿದ ಮಾಹಿತಿ ಆಧಾರದ ಮೇಲೆ ಫೆ.14ರಂದೇ ಅನಿಲ್‌ ಕುಮಾರ್‌ನನ್ನು ವಶಕ್ಕೆ ಪಡೆದರು. ಫೆ.15ರಂದು ಅಭಿಲಾಷ್‌ ಮತ್ತು ನನ್ನನ್ನು ವಶಕ್ಕೆ ಪಡೆದರು’ ಎಂದು ಹೆಮ್ಮನಹಳ್ಳಿ ಗ್ರಾಮದ ಗಿರೀಶ್‌ ತಿಳಿಸಿದರು.

‘ಅಭಿಲಾಷ್‌ ಹಾಗೂ ನನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದರು. ಕಣ್ಣಿನ ಬಟ್ಟೆ ತೆಗೆದಾಗ ಹೋಟೆಲ್‌ವೊಂದರಲ್ಲಿ ಇದ್ದೆವು. ಅಲ್ಲಿ ನವೀನ್‌ ಕೂಡ ಇದ್ದರು. ನವೀನ್‌ ಮೇಲೆ ಪೊಲೀಸರು ತೀವ್ರವಾಗಿ ಹಲ್ಲೆ ಮಾಡಿದ್ದರು. ಗೌರಿ ಹತ್ಯೆ ಪ್ರಕರಣದಲ್ಲಿ ನವೀನ್‌ ನಮಗೆ ತರಬೇತಿ ನೀಡಿದ್ದ ಎಂದು ನ್ಯಾಯಧೀಶರ ಮುಂದೆ ಸಾಕ್ಷಿ ಹೇಳಬೇಕು ಎಂದು ಪೊಲೀಸರು ಒತ್ತಾಯಿಸಿದರು. ಅದಕ್ಕೆ ನಾವು ನಿರಾಕರಿಸಿದಾಗ ನಮ್ಮ ಮೇಲೂ ಹಲ್ಲೆ ಮಾಡಿದರು. ಫೆ.19ರಂದು ನ್ಯಾಯಾಧೀಶರ ಎದುರು ನಮ್ಮನ್ನು ಹಾಜರುಪಡಿಸಿದಾಗ ಪೊಲೀಸರು ಹೇಳಿದಂತೆ ನಾವು ಹೇಳಲಿಲ್ಲ. ಅಳು ತಡೆಯಲಾಗದೆ ಕಣ್ಣೀರು ಸುರಿಸಿದೆವು. ನಮ್ಮ ಬಾಯಿಯಿಂದ ಮಾತುಗಳೇ ಹೊರಡಲಿಲ್ಲ. ಪೊಲೀಸರ ಮೇಲೆ ಕೋಪಗೊಂಡ ನ್ಯಾಯಾಧೀಶರು ನಮ್ಮನ್ನು ಬಿಡುಗಡೆ ಮಾಡುವಂತೆ ಆದೇಶಿಸಿದರು’ ಎಂದು ಅವರು ವಿವರಿಸಿದರು.

‘ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪದಡಿ ಪ್ರಕರಣ ದಾಖಲಿಸಿ ಬಿಡುಗಡೆ ಮಾಡಿದರು. ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ನವೀನ್‌ ಮೇಲೆ ಹೊರಿಸಲು ಪೊಲೀಸರು ಸಂಚು ರೂಪಿಸುತ್ತಿದ್ದಾರೆ. ನವೀನ್‌ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ್ದೇವೆ ಎಂಬ ಒಂದೇ ಕಾರಣದಿಂದ ನಮ್ಮನ್ನು ಸಾಕ್ಷಿದಾರರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ನಾನು ನ್ಯಾಯಾಧೀಶರಿಗೆ ಪತ್ರ ಬರೆಯಲು ನಿರ್ಧರಿಸಿದ್ದೇನೆ. ನಮ್ಮ ಜೀವಕ್ಕೆ ಬೆದರಿಕೆ ಇದೆ’ ಎಂದು ಅವರು ಹೇಳಿದರು.

‘ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಜಿಲ್ಲೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry