ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಟಿಕೆಟ್ ಖರೀದಿ ಈಗ ಸುಲಭ

ಕಾಯ್ದಿರಿಸದ ಟಿಕೆಟ್‌ ಪಡೆಯಲು ಹೊಸ ಆ್ಯಪ್‌ ರೂಪಿಸಿದ ರೈಲ್ವೆ ಇಲಾಖೆ
Last Updated 6 ಮಾರ್ಚ್ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಮೈಸೂರಿಗೆ ಹೋಗಬೇಕು. 6.15ಕ್ಕೆ ಚಾಮುಂಡಿ ಎಕ್ಸ್‌ಪ್ರೆಸ್‌ ಇದೆ. ಈಗಲೇ 5.45 ಆಯ್ತು. ಸಿಟಿ ರೈಲು ನಿಲ್ದಾಣದಲ್ಲಿ ವಿಪರೀತ ಕ್ಯೂ ಇರುತ್ತೆ. ಟಿಕೆಟ್ ತಗೊಳ್ಳೋ ಹೊತ್ತಿಗೆ ರೈಲು ಹೊರಟೇ ಹೋಗಿರುತ್ತೆ. ಏನು ಮಾಡೋದು?’

ನಗರದ ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಹಿರಿಯರೊಬ್ಬರು ಮಗಳ ಜೊತೆಗೆ ಜೋರಾಗಿ ಮಾತನಾಡುತ್ತಾ ಆತಂಕ ತೋಡಿಕೊಳ್ಳುತ್ತಿದ್ದರು. ಅವರ ನೆರವಿಗೆ ಬಂದ ಸೇಂಟ್ ಜೋಸೆಫ್ ಪ್ರೌಢಶಾಲೆಯ ಬಾಲಕ, ಅದೇ ಕ್ಷಣ ಅವರ ಸ್ನೇಹ ಸಂಪಾದಿಸಿ, ಅವರ ಮೊಬೈಲ್‌ಗೆ ಯುಟಿಎಸ್ ಆ್ಯಪ್ ಹಾಕಿಕೊಟ್ಟು, ಟಿಕೆಟ್‌ ಕೂಡಾ ತೆಗೆದುಕೊಟ್ಟ.

‘ಹೋಗಿ ಅಜ್ಜ, ನಿಮ್ಮ ಟಿಕೆಟ್ ನಿಮ್ಮ ಫೋನಿನಲ್ಲಿದೆ. ತಲೆಬಿಸಿ ಮಾಡಿಕೋಬೇಡಿ’ ಎಂದು ಹೆಮ್ಮೆಯಿಂದ ಹೇಳಿದ. ಇದು ಕೇವಲ ಐದೇ ನಿಮಿಷಗಳಲ್ಲಿ ನಡೆದ ವಿದ್ಯಮಾನವಾಗಿತ್ತು.

ಇಷ್ಟು ದಿನ ರೈಲ್ವೆ ಇಲಾಖೆಯು ಐಆರ್‌ಸಿಟಿಸಿ ಆ್ಯಪ್ ಕೇವಲ ಕಾಯ್ದಿರಿಸಿದ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಿತ್ತು. ಕಾಯ್ದಿರಿಸದ (ಅನ್‌ರಿಸ
ರ್ವಡ್) ಟಿಕೆಟ್ ಪಡೆಯುವವರಿಗೆ ಆನ್‌ಲೈನ್ ಖರೀದಿಯ ಅವಕಾಶ ಇರಲಿಲ್ಲ. ಇದೀಗ ರೈಲ್ವೆ ಇಲಾಖೆಯು ಗೂಗಲ್‌ ಪ್ಲೇಸ್ಟೋರ್ ಮೂಲಕ ಡೌನ್‌
ಲೋಡ್ ಮಾಡಿಕೊಳ್ಳಲು ಅವಕಾಶ ಕೊಟ್ಟಿರುವ UTS (ಅನ್‌ ರಿಸರ್ವಡ್‌ ಟಿಕೆಟಿಂಗ್ ಸಿಸ್ಟಂ ಆನ್ ಮೊಬೈಲ್) ಆ್ಯಪ್ ಬಿಡುಗಡೆ ಮಾಡುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ.

ಈ ಆ್ಯಪ್ ಬಳಸಿ ನಿರ್ದಿಷ್ಟ ಸಂಚಾರದ ಟಿಕೆಟ್‌ಗಳು, ಉಪನಗರ ರೈಲುಗಳ ಸೀಸನ್ ಟಿಕೆಟ್‌ಗಳು (ಸಬ್‌ ಅರ್ಬನ್ ರೈಲ್ವೆ ಪಾಸ್‌ಗಳು), ಪ್ಲಾಟ್‌ಫಾರಂ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ. ಸುಮಾರು 10 ಲಕ್ಷ ಮಂದಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆ್ಯಪ್‌ಗೆ 3.8 ಸ್ಟಾರ್‌ (ಉತ್ತಮ) ರೇಟಿಂಗ್ ಸಿಕ್ಕಿದೆ.

ಬಳಸುವುದು ಹೇಗೆ: ಗೂಗಲ್ ಪ್ಲೇಸ್ಟೋರ್‌ನಲ್ಲಿ UTS ಎಂದು ಹುಡುಕಿ. ನಿಮ್ಮ ಮೊಬೈಲ್‌ಗೆ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಿ. ಮೊಬೈಲ್‌ ಸಂಖ್ಯೆ, ಆಧಾರ್ ಅಥವಾ ಯಾವುದೇ ಗುರುತಿನ ಪತ್ರದ ದಾಖಲಾತಿ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಿ. ಎಟಿಎಂ ಪಿನ್ ಮಾದರಿಯಲ್ಲಿ ನಾಲ್ಕು ಅಂಕಿಗಳ ಪಾಸ್‌ವರ್ಡ್‌ ಬರುತ್ತದೆ. ನಂತರ ಅದನ್ನು ನೀವು ಬದಲಿಸಬಹುದು. ರೈಲ್ ವ್ಯಾಲೆಟ್, ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್–ಕ್ರೆಡಿಟ್ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು.

ಟಿಕೆಟ್ ಖರೀದಿಗೆ ಪೇಪರ್‌ಲೆಸ್ ಮತ್ತು ಪೇಪರ್ ಟಿಕೆಟ್ ಎಂಬ ಎರಡು ಆಯ್ಕೆಗಳನ್ನು ಕೊಡಲಾಗಿದೆ. ಪೇಪರ್‌ಲೆಸ್ ಟಿಕೆಟ್ ಖರೀದಿಸಬೇಕಿದ್ದರೆ ಜಿಪಿಎಸ್ ಎನೇಬಲ್ ಆಗಿರುವ ಫೋನ್ ಹಿಡಿದ ನೀವು ರೈಲು ನಿಲ್ದಾಣದಿಂದ ಕನಿಷ್ಠ 20 ಮೀಟರ್ ದೂರ ಇರಬೇಕು. ಟಿಕೆಟ್ ಖರೀದಿಸಿದ ಮೂರು ತಾಸಿನ ಒಳಗೆ ಪ್ರಯಾಣ ಆರಂಭಿಸಬೇಕು. ಟಿಕೆಟ್ ಪರೀಕ್ಷಕರು ಕೇಳಿದಾಗ, ನಿಮ್ಮ ಮೊಬೈಲ್‌ನ ಯುಟಿಎಸ್ ಆ್ಯಪ್‌ನಲ್ಲಿ ‘show ticket’ ಮೂಲಕ ಟಿಕೆಟ್ ತೋರಿದರೆ ಸಾಕು. ಅದೇ ನಿಮ್ಮ ಪ್ರಯಾಣದ ಅಧಿಕೃತ ಟಿಕೆಟ್ ಆಗಿರುತ್ತದೆ. ಪೇಪರ್‌ಲೆಸ್ ಟಿಕೆಟ್‌ ರದ್ದು ಮಾಡಲು ಅವಕಾಶ ಇರುವುದಿಲ್ಲ.

ಪೇಪರ್‌ ಟಿಕೆಟ್‌ಗಳನ್ನು ನೀವು ನಿಲ್ದಾಣದ ಒಳಗೆ ಇದ್ದಾಗಲೂ ಖರೀದಿಸಬಹುದು. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಬುಕಿಂಗ್ ಸಂಖ್ಯೆ ನೀಡುವ ಮೂಲಕ ಸ್ವಯಂ ಚಾಲಿತ ಟಿಕೆಟ್ ಮಾರಾಟ ಯಂತ್ರಗಳಿಂದ (ಎಟಿವಿಎಂ) ಟಿಕೆಟ್‌ಗಳನ್ನು ಮುದ್ರಿಸಿಕೊಳ್ಳಬೇಕು. ಪೇಪರ್‌ ಟಿಕೆಟ್‌ಗಳನ್ನು ರದ್ದುಪಡಿಸಲು ಅವಕಾಶ ಇದೆ.

ಉಪನಗರ ರೈಲು ಬಳಕೆದಾರರ ಪಾಲಿಗೆ ಇದು ಈ ಆ್ಯಪ್ ವರದಾನ ಎನಿಸಿದೆ. ಆ್ಯಪ್ ಬಳಕೆ ಕುರಿತ ಹೆಚ್ಚಿನ ಮಾಹಿತಿಗೆ www.utsonmobile.indianrail.gov.in ವೆಬ್‌ಸೈಟ್ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT