ಮತ್ತೆ 3 ದಿನ ಸಿಬಿಐ ಕಸ್ಟಡಿಗೆ ಕಾರ್ತಿ

7
ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಆರೋಪ ಪ್ರಕರಣ

ಮತ್ತೆ 3 ದಿನ ಸಿಬಿಐ ಕಸ್ಟಡಿಗೆ ಕಾರ್ತಿ

Published:
Updated:
ಮತ್ತೆ 3 ದಿನ ಸಿಬಿಐ ಕಸ್ಟಡಿಗೆ ಕಾರ್ತಿ

ನವದೆಹಲಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ಮಗ ಕಾರ್ತಿಯವರ ಸಿಬಿಐ ಕಸ್ಟಡಿಯನ್ನು ದೆಹಲಿಯ ನ್ಯಾಯಾಲಯವೊಂದು ಮೂರು ದಿನ ವಿಸ್ತರಿಸಿದೆ.

ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಕಾರ್ತಿ ಅವರನ್ನು ಸಿಬಿಐ ಕಳೆದ ವಾರ ಬಂಧಿಸಿತ್ತು. ಐದು ದಿನಗಳ ಸಿಬಿಐ ಕಸ್ಟಡಿಮಂಗಳವಾರಕ್ಕೆ ಕೊನೆಗೊಂಡಿದ್ದರಿಂದಾಗಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹೊಸ ಪುರಾವೆಗಳು ಸಿಕ್ಕಿದ್ದರಿಂದಾಗಿ ಇನ್ನಷ್ಟು ತನಿಖೆಯ ಅಗತ್ಯ ಇದೆ. ಹಾಗಾಗಿ ಇನ್ನೂ ಒಂಬತ್ತು ದಿನ ಕಸ್ಟಡಿಗೆ ಕೊಡಬೇಕು ಎಂದು ಸಿಬಿಐ ಕೋರಿತಾದರೂ ನ್ಯಾಯಾಲಯ ಮೂರು ದಿನ ಕಸ್ಟಡಿಗೆ ಒಪ್ಪಿಸಿದೆ.

ನಾಲ್ಕು ದಿನಗಳಲ್ಲಿ ತನಿಖೆಯಲ್ಲಿ ಗಣನೀಯ ಪ್ರಗತಿ ಸಾಧ್ಯವಾಗಿದೆ. ಆದರೆ ಕಾರ್ತಿ ತನಿಖೆಗೆ ಸಹಕರಿಸುತ್ತಿಲ್ಲ. ಮೊಬೈಲ್‌ಗಳ ಪಾಸ್‌ವರ್ಡ್‌ ನೀಡುತ್ತಿಲ್ಲ. ಯಾವುದೇ ಪ್ರಶ್ನೆ ಕೇಳಿದರೂ ‘ನನ್ನನ್ನು ರಾಜಕೀಯವಾಗಿ ಬಲಿಪಶುವಾಗಿಸಲಾಗಿದೆ’ ಎನ್ನುತ್ತಿದ್ದಾರೆ ಎಂದು ಸಿಬಿಐ ಹೇಳಿದೆ.

ಪ್ರಕರಣದ ಸಾಕ್ಷಿಗಳನ್ನು ಸಂ‍ಪರ್ಕಿಸಲಾಗುತ್ತಿದೆ ಮತ್ತು ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗುತ್ತಿದೆ ಎಂದು ಸಿಬಿಐ ಆರೋಪಿಸಿದೆ.

ಕಾರ್ತಿ ಜಾಮೀನು ಅರ್ಜಿಯನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಿರೋಧಿಸಿದರು. ತನಿಖೆ ನಿರ್ಣಾಯಕ ಹಂತದಲ್ಲಿದೆ. ಜಾಮೀನು ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವುದಕ್ಕೇ ಸಿಬಿಐಗೆ ಎರಡು ವಾರ ಸಮಯ ಬೇಕು ಎಂದು ಅವರು ತಿಳಿಸಿದರು.

‘ಹೇಗಾದರೂ ಸರಿ ಕಾರ್ತಿ ಅವರನ್ನು ಕಸ್ಟಡಿಯಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಸಿಬಿಐ ಬಯಸುತ್ತಿದೆ. ಕಾರ್ತಿ ಅವರು ತನಿಖೆಗೆ ಸಹಕರಿಸಿದ್ದಾರೆ. ಸಿಬಿಐಗೆ ಏನು ಬೇಕೋ ಅದನ್ನು ಹೇಳುವುದಕ್ಕೆ ಅವರು ಬದ್ಧ ಅಲ್ಲ. ತನಿಖೆಗೆ ಲಭ್ಯರಾಗುವುದು ಮಾತ್ರ ಅವರ ಕರ್ತವ್ಯ’ ಎಂದು ಕಾರ್ತಿ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹೇಳಿದರು.

‘ಕಾರ್ತಿಯನ್ನು ಕಸ್ಟಡಿಯಲ್ಲಿ ಉಳಿಸಿಕೊಳ್ಳುವುದಕ್ಕಾಗಿ ನೀಡುತ್ತಿರುವ ಕಾರಣ ಮತ್ತು ನಿಲುವುಗಳನ್ನು ಸಿಬಿಐ ಬದಲಾಯಿಸುತ್ತಲೇ ಇದೆ. ಕಸ್ಟಡಿಯನ್ನು ವಿಸ್ತರಿಸುವ ದುರುದ್ದೇಶಪೂರಿತ ಪ್ರಯತ್ನ ಇದು. ಸ್ವಂತ ಮಗಳನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿಯ ಹೇಳಿಕೆ ಸಮರ್ಥನೀಯ ಪುರಾವೆಯೇ’ ಎಂದು ಸಿಂಘ್ವಿ ಪ್ರಶ್ನಿಸಿದರು.

ನ್ಯಾಯಾಲಯದಲ್ಲಿ ಹಾಜರಿದ್ದ ತಂದೆ ಚಿದಂಬರಂ ಮತ್ತು ತಾಯಿ ನಳಿನಿ ಜತೆ ಹತ್ತು ನಿಮಿಷ ಮಾತನಾಡಲು ಕಾರ್ತಿ ಅವರಿಗೆ ನ್ಯಾಯಾಧೀಶರು ಅವಕಾಶ ಕೊಟ್ಟರು.  ಮುಂದಿನ ವಿಚಾರಣೆ ಶುಕ್ರವಾರ ನಡೆಯಲಿದೆ.

‌ಪೀಟರ್‌ ಜತೆ ಮುಖಾಮುಖಿ: ಐಎನ್‌ಎಕ್ಸ್‌ ಮೀಡಿಯಾ ಸಂಸ್ಥೆಯಪ್ರವರ್ತಕಿಯಾಗಿದ್ದ ಇಂದ್ರಾಣಿ ಮುಖರ್ಜಿ ಅವರ ಜತೆ ಕಾರ್ತಿಯ ಮುಖಾಮುಖಿ ನಡೆಸಲಾಗಿತ್ತು. ಐಎನ್‌ಎಕ್ಸ್‌ ಮೀಡಿಯಾದ ಮತ್ತೊಬ್ಬ ಪ್ರವರ್ತಕ ಪೀಟರ್‌ ಮುಖರ್ಜಿ ಜತೆಗೂ ಕಾರ್ತಿಯವರನ್ನು ಮುಖಾಮುಖಿಯಾಗಿಸಲು ಸಿಬಿಐ

ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

‘ರಕ್ಷಣೆ’ ನೀಡದ ಸುಪ್ರೀಂ ಕೋ‌ರ್ಟ್‌

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿನ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ.) ಬಂಧಿಸುವುದರಿಂದ ಕಾರ್ತಿ ಅವರಿಗೆ ರಕ್ಷಣೆ ಕೊಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಕಾರ್ತಿ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠವು ಇ.ಡಿ.ಗೆ ಸೂಚಿಸಿದೆ. ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.

ಇ.ಡಿ. ನೀಡಿರುವ ನೋಟಿಸ್‌ಗೆ ಸಂಬಂಧಿಸಿ ಕಾರ್ತಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಆಧಾರದಲ್ಲಿ ನೋಟಿಸ್ ನೀಡಲು ಇ.ಡಿ.ಗೆ ಅಧಿಕಾರ ಇಲ್ಲ ಎಂದು ಈ ಅರ್ಜಿಯಲ್ಲಿ ಅವರು ವಾದಿಸಿದ್ದಾರೆ. ‌ ಇ.ಡಿ. ನೀಡಿದ ನೋಟಿಸ್‌ಗೆ ತಡೆ ನೀಡುವಂತೆ ಕೋರಿ ಕಾರ್ತಿ ಹಿಂದೆಯೂ ಅರ್ಜಿ ಸಲ್ಲಿಸಿದ್ದರು. ಆದರೆ, ತಡೆ ನೀಡಲು ಫೆಬ್ರುವರಿ 23ರಂದು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry