ಇಂದಿರಾ ಕ್ಯಾಂಟೀನ್‌: ಮಹಿಳೆಯರಿಗೆ ನಾಳೆ ಉಚಿತ ಆಹಾರ

ಬುಧವಾರ, ಮಾರ್ಚ್ 20, 2019
31 °C
ಬಿಬಿಎಂಪಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮೇಯರ್‌ ಆರ್‌.ಸಂಪತ್‌ ರಾಜ್‌ ಹೇಳಿಕೆ

ಇಂದಿರಾ ಕ್ಯಾಂಟೀನ್‌: ಮಹಿಳೆಯರಿಗೆ ನಾಳೆ ಉಚಿತ ಆಹಾರ

Published:
Updated:
ಇಂದಿರಾ ಕ್ಯಾಂಟೀನ್‌: ಮಹಿಳೆಯರಿಗೆ ನಾಳೆ ಉಚಿತ ಆಹಾರ

ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಇದೇ 8ರಂದು ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಎಲ್ಲ ಮಹಿಳೆಯರಿಗೆ ತಿಂಡಿ ಮತ್ತು ಊಟ ಉಚಿತ ವಿತರಿಸಲಾಗುವುದು ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ತಿಳಿಸಿದರು.

ಪಾಲಿಕೆಯಲ್ಲಿ ಮಂಗಳವಾರ ನಡೆದ ಬಜೆಟ್‌ ಮೇಲಿನ ಚರ್ಚೆಯಲ್ಲಿ ಈ ವಿಷಯ ತಿಳಿಸಿದರು.

ಪಾಲಿಕೆ ಸದಸ್ಯೆಯರಿಗೆ ಮತ್ತು ಮಾಧ್ಯಮದ ಮಹಿಳೆಯರಿಗೆ ಉಚಿತವಾಗಿ ಆಹಾರ ನೀಡಲು ತೀರ್ಮಾನಿಸಿರುವುದಾಗಿ ಮೇಯರ್‌ ಪ್ರಕಟಿಸಿದರು. ಇದಕ್ಕೆ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಎಲ್ಲ ಮಹಿಳೆಯರಿಗೂ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಮೇಯರ್‌ ಸ್ಪಂದಿಸಿದರು.

ಇದಕ್ಕೂ ಮೊದಲು ಮಾತನಾಡಿದ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, 'ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಪೂರ್ಣ ಖರ್ಚಾಗಿಲ್ಲ. ಆದಾಯ ಸಂಗ್ರಹದಲ್ಲೂ ಗುರಿ ಸಾಧಿಸಿಲ್ಲ. ಈಗ ಮಂಡಿಸಿರುವ ಬಜೆಟ್‌ ವಾಪಸ್‌ ಪಡೆದು, ವಾಸ್ತವ ಬಜೆಟ್‌ ಮಂಡಿಸಬೇಕು’ ಎಂದು ಒತ್ತಾಯಿಸಿದರು.

‘ಸಾರ್ವಜನಿಕ ಕಾಮಗಾರಿಗೆ ₹1,696 ಕೋಟಿ ಮೀಸಲಿಟ್ಟು ಬರೀ ₹584 ಕೋಟಿ ವಿನಿಯೋಗಿಸಲಾಗಿದೆ. ಶೇ 31ರಷ್ಟು ಮಾತ್ರ ಸಾಧನೆಯಾಗಿದೆ. ಅಲ್ಲದೆ, ಇಷ್ಟೂ ಹಣವನ್ನು ಬಾಕಿ ಬಿಲ್‌ಗೆ ಪಾವತಿಸಲಾಗಿದೆ. ಕಲ್ಯಾಣ ಕಾರ್ಯಕ್ರಮಗಳಿಗೆ ₹876.12 ಕೋಟಿ ಮೀಸಲಿಟ್ಟು, ಇದರಲ್ಲಿ ₹522.22 ಕೋಟಿ ವೆಚ್ಚವಾಗಿದೆ. ಶೇ 60ರಷ್ಟು ಸಾಧನೆಯಾಗಿದೆ. ಆದರೆ, ನಮ್ಮ ಪ್ರಕಾರ ಶೇ 10ರಷ್ಟೂ ಸಾಧನೆಯಾಗಿಲ್ಲ. ಆಯುಕ್ತರು ಸರಿಯಾದ ಲೆಕ್ಕ ಸಭೆ ಮುಂದಿಡಬೇಕು’ ಎಂದು ಒತ್ತಾಯಿಸಿದರು.

ಅರೇಬಿಕ್‌ ಕಾಲೇಜು, ಜಾಮಿಯಾ ಮಸೀದಿಗೆ ಅನುದಾನ ನೀಡಿರುವುದನ್ನು ಪ್ರಸ್ತಾಪಿಸಿದ ರೆಡ್ಡಿ, ‘ಕೆಂಪೇಗೌಡರು ಕಟ್ಟಿಸಿದ ಹಲಸೂರು ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ₹50 ಕೋಟಿ, ಕಾಚರಕನಹಳ್ಳಿಯ ಚನ್ನಕೇಶವ ದೇವಸ್ಥಾನದ ರಾಜಗೋಪುರ ಪುನರ್‌ ನಿರ್ಮಾಣಕ್ಕೆ ₹10 ಕೋಟಿ, ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡಬಸವಣ್ಣನಗುಡಿ, ಬಾಣಸವಾಡಿ ಆಂಜನೇಯ ದೇವಸ್ಥಾನ ಹಾಗೂ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ, ‘ಪಾಲಿಕೆಯು ಕಸ ಸಂಗ್ರಹ ಮತ್ತು ವಿಲೇವಾರಿಗೆ ವಾರ್ಷಿಕ ₹1,632 ಕೋಟಿ ಹಣ ವೆಚ್ಚ ಮಾಡುತ್ತಿದೆ. ಪ್ರತಿ ಕೆ.ಜಿ ಕಸ ವಿಲೇವಾರಿಗೆ ₹13ಕ್ಕಿಂತಲೂ ಹೆಚ್ಚು ವಿನಿಯೋಗಿಸುತ್ತಿದೆ. ಆದರೆ, ಫಲಿತಾಂಶ ಮಾತ್ರ ಶೂನ್ಯ. ಅಧಿಕಾರಿಗಳ ಮಾಹಿತಿ ಪ್ರಕಾರ 1143 ಟನ್‌ ಹಸಿ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ 350ರಿಂದ 450 ಟನ್‌ ಹಸಿ ಕಸ ಮಾತ್ರ ಕಸ ಸಂಸ್ಕರಣಾ ಘಟಕಕ್ಕೆ ರವಾನೆಯಾಗುತ್ತಿದೆ. ಉಳಿದ ಕಸ ಎಲ್ಲಿಗೆ ಹೋಗುತ್ತಿದೆ ಎಂಬ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.

ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ ಮಾತನಾಡಿ, ‘ಶುದ್ಧ ನೀರು ಘಟಕಗಳ ಸ್ಥಾಪನೆಗೆ ಪ್ರತಿ ವಾರ್ಡ್‌ಗೆ ಮೀಸಲಿಟ್ಟಿರುವ ₹15 ಲಕ್ಷ ಅನುದಾನ ಸಾಕಾಗುವುದಿಲ್ಲ. ಅನುದಾನ ಹೆಚ್ಚಿಸಬೇಕು. ಒಎಫ್‌ಸಿ ಕೇಬಲ್‌ ಶುಲ್ಕ ಮತ್ತು ತೆರಿಗೆಯಿಂದ ಆದಾಯ ಹೆಚ್ಚಿಸಿಕೊಳ್ಳಲು ನೀತಿ ಜಾರಿಗೆ ತರಬೇಕು. ಖಾಸಗಿ ಶಾಲೆಗಳಲ್ಲಿ ಡೊನೇಷನ್‌ ಹಾವಳಿ ಹೆಚ್ಚಿರುವುದರಿಂದ ಇಂತಹ ಶಾಲೆಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕು’ ಎಂದು ಸಲಹೆ ನೀಡಿದರು.

ಆಡಳಿತ– ವಿರೋಧ ಪಕ್ಷ ಜಟಾಪಟಿ

‘ನಾವು 101 ಸದಸ್ಯರಿದ್ದರೂ ನೀವು 97 ಸದಸ್ಯರು ನಮ್ಮ ಮೇಲೆ ಭಾರಿ ದಬ್ಬಾಳಿಕೆ ಮಾಡುತ್ತಿದ್ದೀರಿ. ಇನ್ನು ಎರಡು ತಿಂಗಳು ಸಹಿಸಿಕೊಳ್ಳುತ್ತೇವೆ’ ಎಂದು ಪದ್ಮನಾಭ ರೆಡ್ಡಿ ಆಡಳಿತ ಪಕ್ಷದವರಿಗೆ ಮಾತಿನಲ್ಲೇ ತಿವಿದರು.

ಕರ್ನಾಟಕ ಮತ್ತು ಪಂಜಾಬ್‌ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಿಗೆ ಕೇಸರಿ ಬಣ್ಣ ತುಂಬಿದ್ದ ದೇಶದ ನಕಾಶೆಯನ್ನು ರೆಡ್ಡಿ ಪ್ರದರ್ಶಿಸಿದಾಗ, ಕಾಂಗ್ರೆಸ್‌ ಸದಸ್ಯರು ಆಕ್ಷೇಪಿಸಿದರು.

‘ಕೆಲವೇ ದಿನಗಳಲ್ಲಿ ರಾಜ್ಯವೂ ಕೇಸರಿಮಯವಾಗುತ್ತದೆ. ಕಾಂಗ್ರೆಸ್‌ ಮುಕ್ತಗೊಳಿಸುತ್ತೇವೆ’ ಬಿಜೆಪಿ ಸದಸ್ಯರು ಮೂದಲಿಸಿದರು. ಆಡಳಿತ ಪಕ್ಷದ ಸದಸ್ಯರು ಎದ್ದುನಿಂತು, ‘ನೀವು ಹಗಲುಗನಸು ಕಾಣಿ’ ಎಂದು ಕುಟುಕಿದರು.

‘ನಾವೆಲ್ಲರೂ ದೇಶದ ನಕಾಶೆ ನೋಡಿದ್ದೀವಿ. ನಕಾಶೆ ತೋರಿಸಿ ಸದಸ್ಯರಿಗೆ ಅವಮಾನ ಮಾಡುತ್ತಿದ್ದೀರಾ. ಕೇಸರಿ ಬಣ್ಣ ಚೆನ್ನಾಗಿಲ್ಲ, ಅದು ಇಲ್ಲಿಗೆ ಸರಿಹೊಂದುವುದಿಲ್ಲ’ ಎಂದು ಮೇಯರ್‌ ಮಾರ್ಮಿಕವಾಗಿ ನುಡಿದರು.

ನೀರಿನ ಸಮಸ್ಯೆ ಕಾಡದು: ಮೇಯರ್‌

ಬೆಂಗಳೂರು:
‘ನಗರಕ್ಕೆ ಈ ಬಾರಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ತಿಳಿಸಿದರು.

ಮಂಗಳವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್‌ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು.

‘ಮುಂಗಾರಿನಲ್ಲಿ ಸಾಕಷ್ಟು ಮಳೆಯಾದರೂ ಕೆಲವು ವಾರ್ಡ್‌ಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಸಿಲ್ಲ. ಕೊಳವೆ ಬಾವಿಗಳಲ್ಲಿ ನೀರಿಲ್ಲದಂತಾಗಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ ಸ್ಥಿತಿಯೂ ನಗರಕ್ಕೆ ಬರಲಿದೆ ಎಂದು ವರದಿಯಾಗಿದೆ. ಪಾಲಿಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, ‘ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲೇ ಪಾಲಿಕೆ ಮತ್ತು ಜಲಮಂಡಳಿ ಅಧಿಕಾರಿಗಳೊಂದಿಗೆ ಮಂಗಳವಾರ ಬೆಳಿಗ್ಗೆ ನಗರದ ಪ್ರಮುಖ ಜಲಾಗರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ನಮಗೆ ಈ ಬೇಸಿಗೆಗೆ ಬೇಕಾಗುವಷ್ಟು ನೀರು ಈಗಾಗಲೇ ಜಲಾಗರಗಳಿಗೆ ಬಂದಿದೆ. ನೀರಿನ ಸಮಸ್ಯೆ ಗಂಭೀರವಾಗಿರುವ ಪ್ರದೇಶಗಳಿಗೆ ಜಲಮಂಡಳಿಯು 60 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಿದೆ’ ಎಂದು ತಿಳಿಸಿದರು.

*

ಅಭಿವೃದ್ಧಿ ರಾಷ್ಟ್ರಗಳು ಬಜೆಟ್‌ನಲ್ಲಿ ಹೆಚ್ಚು ಹಣವನ್ನು ಶಿಕ್ಷಣ, ಆರೋಗ್ಯಕ್ಕೆ ಮೀಸಲಿಡುತ್ತಿವೆ. ಆರೋಗ್ಯ ವ್ಯವಸ್ಥೆ ಸುಧಾರಿಸಲು ಪಾಲಿಕೆ ರೋಗಿಗಳ ದತ್ತಾಂಶ ಸಂಗ್ರಹಿಸಬೇಕು.

–ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry