ಸೆಷನ್ಸ್‌ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ತಡೆ

ಬುಧವಾರ, ಮಾರ್ಚ್ 20, 2019
31 °C

ಸೆಷನ್ಸ್‌ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ತಡೆ

Published:
Updated:
ಸೆಷನ್ಸ್‌ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಹಾಗೂ ಅವರ ಐವರು ಶಿಷ್ಯರ ವಿರುದ್ಧದ ರಾಮನಗರ ಸೆಷನ್ಸ್ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್‌ ತಡೆ ನೀಡಿದೆ.

ಈ ಕುರಿತ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರ ವಾದವನ್ನು ಆಲಿಸಿತು.

‘ಸಂತ್ರಸ್ತೆ ಈ ಹಿಂದೆ ಹೈಕೋರ್ಟ್‌ನಲ್ಲಿ ನೀಡಿರುವ ಹೇಳಿಕೆ ಅನುಸಾರ ಆಕೆಯದು ಒಪ್ಪಿತ ಸಂಬಂಧವಾಗಿತ್ತು. ಹೀಗಾಗಿ ಅತ್ಯಾಚಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂಬ ನಾಗೇಶ್ ಅವರ ವಾದವನ್ನು ಪರಿಗಣಿಸಿ ಅಧೀನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತು. ವಿಚಾರಣೆ ಬುಧವಾರವೂ (ಮಾ.7) ಮುಂದುವರಿಯಲಿದೆ.

ಪ್ರಕರಣವೇನು?: ಭಕ್ತೆಯೊಬ್ಬರ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ನಿತ್ಯಾನಂದ ಸ್ವಾಮೀಜಿ  ಹಾಗೂ ಅವರ ಐವರ ಶಿಷ್ಯರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ವಂಚನೆ, ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ, ಜೀವ ಬೆದರಿಕೆ ಮತ್ತು ಅಪರಾಧಿಕ ಒಳಸಂಚು ಆರೋಪ ಹೊರಿಸಲಾಗಿದೆ. ಈ ಸಂಬಂಧ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ.

ಈ ದೋಷಾರೋಪ ಪಟ್ಟಿ ಆಧರಿಸಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್, 2017ರ ಡಿಸೆಂಬರ್‌ನಲ್ಲಿ ರಾಮನಗರ ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು. ವಿಚಾರಣೆ ನಡೆಸುತ್ತಿರುವ ಅಧೀನ ನ್ಯಾಯಾಲಯಕ್ಕೆ ನಿತ್ಯಾನಂದ ಸ್ವಾಮೀಜಿ ಹಾಗೂ ಅವರ ಶಿಷ್ಯರು, ‘ನಮ್ಮನ್ನು ಆರೋಪಗಳಿಂದ ಮುಕ್ತಗೊಳಿಸಬೇಕು’ ಎಂದು ಕೋರಿದ್ದರು. ಆದರೆ, ಸೆಷನ್ಸ್‌ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿದೆ. ಸೆಷನ್ಸ್‌ ನ್ಯಾಯಾಲಯದ ಈ ಆದೇಶವನ್ನು ನಿತ್ಯಾನಂದ ಸ್ವಾಮೀಜಿ ಮತ್ತು ಶಿಷ್ಯರಾದ ಶಿವವಲ್ಲಭನೇನಿ, ರಾಗಿಣಿ ವಲ್ಲಭನೇನಿ, ಧನಶೇಖರ ಮತ್ತು ಜಮುನಾ ರಾಣಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

₹ 50 ಸಾವಿರ ಠೇವಣಿಗೆ ಆದೇಶ

ಬೆಂಗಳೂರು:
‘ಒಂದು ವರ್ಷವಾದರೂ ಕೋರ್ಟ್‌ ನೋಟಿಸ್‌ಗೆ ಉತ್ತರ ನೀಡಿಲ್ಲ’ ಎಂಬ ಕಾರಣಕ್ಕೆ ಬೆಂಗಳೂರು ನಗರ ಜಿಲ್ಲೆಯ ಸಹಕಾರ ಸಂಘಗಳ ನೋಂದಣಾಧಿಕಾರಿ ₹ 50 ಸಾವಿರ ಠೇವಣಿ ಇರಿಸಿ ವಿಚಾರಣೆ ಎದುರಿಸುವಂತೆ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಪ್ರತಿವಾದಿ ನೋಂದಣಾಧಿಕಾರಿಯು ಠೇವಣಿ ಮೊತ್ತವನ್ನು ರಿಜಿಸ್ಟ್ರಾರ್ ಜನರಲ್‌ ಕಚೇರಿಯಲ್ಲಿ ಪಾವತಿಸಬೇಕು. ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಿ ಆಕ್ಷೇಪಣೆ ಸಲ್ಲಿಸಬೇಕು’ ಎಂದು ನಿರ್ದೇಶಿಸಿದೆ.

ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿದ ಈ ರಿಟ್‌ ಅರ್ಜಿಯಲ್ಲಿ ನೋಂದಣಾಧಿಕಾರಿ ಪ್ರತಿವಾದಿ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry