ನೋಂದಣಿ ಪತ್ರ ಅಮಾನತು

7
47 ವಾಹನಗಳಲ್ಲಿ ದೋಷಪೂರಿತ ಸೈಲೆನ್ಸರ್‌ ಅಳವಡಿಕೆ ಪತ್ತೆ

ನೋಂದಣಿ ಪತ್ರ ಅಮಾನತು

Published:
Updated:

ಬೆಂಗಳೂರು: ‘ದೋಷಪೂರಿತ ಸೈಲೆನ್ಸರ್‌ ಅಳವಡಿಸಿಕೊಂಡಿದ್ದ 47 ವಾಹನಗಳ ನೋಂದಣಿ ಪ್ರಮಾಣಪತ್ರ ಅಮಾನತು ಮಾಡಲಾಗಿದೆ’ ಎಂದು ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್‌ ತಿಳಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲೆಕ್ಟ್ರಾನಿಕ್ ಸಿಟಿ, ಜಯನಗರ ಹಾಗೂ ಕೆ.ಆರ್.ಪುರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದೆವು. ವಾಹನಗಳು ನಿಯಮ ಉಲ್ಲಂಘಿಸಿದ್ದು ಪತ್ತೆಯಾಗಿದ್ದು, ನೋಂದಣಿ ಪತ್ರವನ್ನು 30 ದಿನಗಳವರೆಗೆ ಅಮಾನತು ಮಾಡಿದ್ದೇವೆ’ ಎಂದರು.

‘ದೋಷಪೂರಿತ ಹಾರ್ನ್‌ ಅಳವಡಿಸಿಕೊಂಡ ವಾಹನಗಳ ನೋಂದಣಿ ಪತ್ರವನ್ನು ಅಮಾನತು ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಕೆಲವೇ ದಿನಗಳಲ್ಲಿ ಅದು ಜಾರಿಗೆ ಬರಬಹುದು’ ಎಂದರು.

ಓಮ್ನಿ ಆಂಬುಲೆನ್ಸ್‌ ನೋಂದಣಿಗೆ ಅವಕಾಶ: ‘ಓಮ್ನಿ ಆಂಬುಲೆನ್ಸ್‌ ನೋಂದಣಿಯನ್ನು ಈ ಹಿಂದೆ ರದ್ದುಪಡಿಸಲಾಗಿತ್ತು. ಹೈಕೋರ್ಟ್‌ ತೀರ್ಪಿನಂತೆ, ನೋಂದಣಿಗೆ ಏಪ್ರಿಲ್‌ 1ರವರೆಗೆ ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

‘ನೋಂದಣಿ ನಿಷೇಧಿಸಿ ಸುತ್ತೋಲೆ ಹೊರಡಿಸಲಾಗಿತ್ತು. ಅದನ್ನು ಪ್ರಶ್ನಿಸಿ, ವಾಹನ ತಯಾರಿಕಾ ಕಂಪನಿಯು ಹೈಕೋರ್ಟ್‌ ಮೆಟ್ಟಿಲೇರಿತ್ತು. ನೋಂದಣಿಗೆ ಅವಕಾಶ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ (ಆರ್‌ಟಿಒ) ಸೂಚಿಸಿ ಹೊಸ ಸುತ್ತೋಲೆ ಹೊರಡಿಸಿದ್ದೇವೆ’ ಎಂದರು.

ಸಬ್ಸಿಡಿ ಹೆಚ್ಚಿಸಲು ಪ್ರಸ್ತಾವ: ‘2 ಸ್ಟ್ರೋಕ್‌ ಬದಲು 4 ಸ್ಟ್ರೋಕ್ ಆಟೊಗಳನ್ನು ಖರೀದಿಸುವ ಮಾಲೀಕರಿಗೆ ನೀಡುವ ₹30 ಸಾವಿರ ಸಬ್ಸಿಡಿಯನ್ನು ₹50 ಸಾವಿರಕ್ಕೆ ಹೆಚ್ಚಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ದಯಾನಂದ್ ತಿಳಿಸಿದರು.

‘ಏಪ್ರಿಲ್‌ 1ರಿಂದ ನಗರದಲ್ಲಿ 2 ಸ್ಟ್ರೋಕ್‌ ಆಟೊಗಳನ್ನು ನಿಷೇಧಿಸಲು ತಯಾರಿ ನಡೆದಿದೆ. ಹೀಗಾಗಿ  2 ಸ್ಟ್ರೋಕ್‌ಆಟೊಗಳನ್ನು ಗುಜರಿಗೆ ಹಾಕಬಹುದು.

ಎಲೆಕ್ಟ್ರಿಕ್ ಆಟೊ ಆಗಿ ಮಾರ್ಪಾಡು ಮಾಡಿಕೊಳ್ಳಬಹುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry