ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಣಿ ಕಾಂಗ್ರೆಸ್ ಸೇರ್ಪಡೆ ರಾಜಕೀಯ ಅತ್ಯಾಚಾರ: ಈಶ್ವರಪ್ಪ

ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಟೀಕೆ
Last Updated 7 ಮಾರ್ಚ್ 2018, 6:42 IST
ಅಕ್ಷರ ಗಾತ್ರ

ಯಾದಗಿರಿ: ‘ನೈಸ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ಅಧ್ಯಕ್ಷರೂ ಆಗಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಶೋಕ್ ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ರಾಜಕೀಯ ಬಹಿರಂಗ ಅತ್ಯಾಚಾರ ಮಾಡಿದ್ದಾರೆ’ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆಯನ್ನು ಬಹಳಷ್ಟು ಕಾಂಗ್ರೆಸ್ ಶಾಸಕರೇ ವಿರೋಧಿಸಿದ್ದಾರೆ. ಆದರೂ ಸಿದ್ದರಾಮಯ್ಯ ಭ್ರಷ್ಟರನ್ನು ಬಹಿರಂಗವಾಗಿ ಅಪ್ಪಿಕೊಳ್ಳುವ ಮೂಲಕ ಸಿದ್ದರಾಮಯ್ಯ ತಾವೊಬ್ಬ ಭ್ರಷ್ಟ ಸಿಎಂ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹಾಗಾಗಿ, ಮುಂದಿನ ಚುನಾವಣೆಯಲ್ಲಿ ಭ್ರಷ್ಟ ಮುಖ್ಯಮಂತ್ರಿಯನ್ನು ರಾಜ್ಯದ ಜನರು ಕಿತ್ತೊಗೆಯಲಿದ್ದಾರೆ’ ಎಂದು ಕುಟುಕಿದರು.

‘ಸಿದ್ದರಾಮಯ್ಯ ಕಾಂಗ್ರೆಸ್‌ನ ಕಟ್ಟಕಡೆಯ ಮುಖ್ಯಮಂತ್ರಿಯಾಗಲಿದ್ದಾರೆ. ಮತ್ತೆಂದೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ’ ಎಂದರು.

‘ರಾಜ್ಯದಲ್ಲಿ ಕೆಜೆಪಿ, ಬಿಜೆಪಿ ಒಡೆಯದಿದ್ದರೆ ಸಿದ್ದರಾಮಯ್ಯ ಲಾಟರಿ ಹೊಡೆದಂತೆ ಸಿಎಂ ಆಗುತ್ತಿರಲಿಲ್ಲ. ಈಗ ರಾಜ್ಯದಲ್ಲಿ ಕೆಜೆಪಿ ಮತ್ತು ಬಿಜೆಪಿ ಒಂದಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ ಬಿಜೆಪಿ ಮುಖಂಡರನ್ನು, ಕಾರ್ಯಕರ್ತರನ್ನು ಗೂಂಡಾಗಳೆಂದೂ ಟೀಕಿಸುತ್ತಿದ್ದಾರೆ. ಆದರೆ, ವಿದ್ವತ್ ಮೇಲೆ ಹಲ್ಲೆ ಮಾಡಿರುವ ನಲಪಾಡ್ ಯಾರು? ಸಿದ್ದರಾಮಯ್ಯ ಅವರ ಆಪ್ತ ನಾರಾಯಣಸ್ವಾಮಿ ಇತ್ತೀಚೆಗೆ ಬೆಂಗಳೂರಿನಲ್ಲಿ ಕಾರ್ಪೋರೇಷನ್ ಕಚೇರಿಗೆ ನುಗ್ಗಿ ಅಲ್ಲಿ ಪೆಟ್ರೋಲ್ ಸುರಿದು ದೌರ್ಜನ್ಯ ನಡೆಸಿರುವುದು ಕಾಂಗ್ರೆಸ್ ಸರ್ಕಾರದ ಗೂಂಡಾಗಿರಿ, ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ. ಇದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಜನರೇ ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT