ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲತಾಣದಲ್ಲಿ ‘ಖಾತೆ’ ತೆರೆದ ಜಿಲ್ಲಾಡಳಿತ

ಚುನಾವಣೆ: ಮತದಾರರ ಅಂಕಿಅಂಶ ಸೇರಿ ಹಲವು ಮಾಹಿತಿ ಲಭ್ಯ
Last Updated 7 ಮಾರ್ಚ್ 2018, 7:01 IST
ಅಕ್ಷರ ಗಾತ್ರ

ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ, ಕುಳಿತಲ್ಲಿಯೇ ಆನ್‌ಲೈನ್‌ನಲ್ಲಿ ಮಾಹಿತಿ ಬಯಸುವವರಿಗೆ ಅನುಕೂಲವಾಗು ವಂತೆ ಜಿಲ್ಲಾಡಳಿತದಿಂದ ಪ್ರತ್ಯೇಕ ಜಾಲತಾಣ ವಿನ್ಯಾಸಗೊಳಿಸಲಾಗಿದೆ.

ಜಾಲತಾಣದಲ್ಲಿ ಖಾತೆ ತೆರೆಯುವ ಮೂಲಕ, ‘ವೆಬ್ಬಿಗರ’ ಅಗತ್ಯ ಪೂರೈಸುವುದಕ್ಕೆ ಕ್ರಮ ಕೈಗೊಂಡಿದೆ. ಜಿಲ್ಲಾಡಳಿತದ ಅಧಿಕೃತ ಜಾಲತಾಣ http://belgaum.nic.in/ ಪ್ರವೇ ಶಿಸಿ, ಅಲ್ಲಿ ಮಿನುಗುತ್ತಿರುವ ಜಿಲ್ಲಾ ಚುನಾವಣಾಧಿಕಾರಿ ಎನ್ನುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ ‘ಜಿಲ್ಲಾ ಚುನಾ ವಣಾ ಅಧಿಕಾರಿ’ ಹೆಸರಿನ ಜಾಲತಾಣ ತೆರೆದುಕೊಳ್ಳುತ್ತದೆ. ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಮಾಹಿತಿ ಒದಗಿಸಲಾಗಿದೆ.

ಮುಖಪುಟ, ವಿಧಾನಸಭಾ ಕ್ಷೇತ್ರಗಳ ನಕ್ಷೆಗಳು (ಕೆಲ ಕ್ಷೇತ್ರದವು ಇನ್ನೂ ಲಭ್ಯವಿಲ್ಲ!), ಮತದಾರರ ಅಂಕಿಅಂಶಗಳ, ಪ್ರಮುಖ ಜಾಲತಾಣ ಗಳು (ಚುನಾವಣಾ ಆಯೋಗ, ಮುಖ್ಯ ಚುನಾವಣಾ ಅಧಿಕಾರಿ, ಪ್ರಾದೇಶಿಕ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯ್ತಿ ಹಾಗೂ ನಗರಪಾಲಿಕೆ ಕಚೇರಿಗಳ ಜಾಲತಾಣಗಳ ಕೊಂಡಿಗಳಿವೆ), ಮತದಾರರ ಅಂಕಣ ಹಾಗೂ ಪ್ರಮುಖ ಕಚೇರಿಗಳ ದೂರವಾಣಿ ಸಂಪರ್ಕ ಸಂಖ್ಯೆ ನೀಡಲಾಗಿದೆ.

ಪಟ್ಟಿಗೆ ಸೇರಿಸಲು: ಮತದಾರರ ಅಂಕಣದಲ್ಲಿ, ಆನ್‌ಲೈನ್‌ನಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡು ವುದು, ವಿಳಾಸ ಬದಲಿಸಿಕೊಳ್ಳುವುದು, ತಿದ್ದುಪಡಿ ಮಾಡುವುದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸ್ಥಿತಿ ತಿಳಿಯುವುದು, ಮತದಾನ ಕೇಂದ್ರದ ಮಾಹಿತಿ ಪಡೆಯುವುದಕ್ಕೂ ಅವಕಾಶವಿದೆ. ಸಂಬಂಧಿಸಿದ ಅರ್ಜಿ ಇಲ್ಲಿಂದಲೇ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಸಹಾಯವಾಣಿಯ ಬಗ್ಗೆಯೂ ಮಾಹಿತಿ ಇದೆ. ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳ ಪ್ರಾತ್ಯಕ್ಷಿಕೆಯನ್ನೂ ವೀಕ್ಷಿಸಬಹುದಾಗಿದೆ. ‘ವೇಳಾಪಟ್ಟಿ’ ವಿಭಾಗದಲ್ಲಿ ಶೀಘ್ರವೇ ಬರಲಿದೆ ಎಂದು ನಮೂದಿಸಲಾಗಿದೆ.

‘ಪ್ರತಿಶತ ಮತದಾನ, ಬೆಳಗಾವಿ ಜಿಲ್ಲೆಯ ವಾಗ್ದಾನ’ ಎನ್ನುವುದು ಈ ಬಾರಿಯ ಚುನಾವಣೆಗಾಗಿ ಜಿಲ್ಲೆಯ ಘೋಷಣೆಯಾಗಿದೆ. ಮತದಾನ ಜಾಗೃತಿ ಮೂಡಿಸುವುದಕ್ಕಾಗಿ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಜನರನ್ನು ತಲುಪುದಕ್ಕಾಗಿ ಹಲವು ಕಾರ್ಯಕ್ರಮಗಳನ್ನು  ಆಯೋಜಿಸಲಾಗುತ್ತಿದೆ. ಮೊಬೈಲ್‌ ಬಳಕೆದಾರರು ಹಾಗೂ ಆನ್‌ಲೈನ್‌ನಲ್ಲಿ ಮಾಹಿತಿ ಹುಡುಕಾಡುವವರಿಗೆ ನೆರವಾಗಲಿ ಎಂದು ಪ್ರತ್ಯೇಕ ಜಾಲತಾಣ ಆರಂಭಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗುವುದು. ಸಾಮಾಜಿಕ ಮಾಧ್ಯಮದಲ್ಲೂ ಖಾತೆ ತರೆದಿದ್ದೇವೆ. ಸಹಾಯವಾಣಿಯನ್ನೂ (0831-2565555) ಆರಂಭಿಸಲಾಗಿದ್ದು, ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಸಾರ್ವಜನಿಕರು ಕರೆ ಮಾಡಿ, ಮಾಹಿತಿ ಪಡೆಯಬಹುದಾಗಿದೆ’ ಎಂದು ಜಿಲ್ಲಾಧಿ ಕಾರಿ ಎಸ್‌. ಜಿಯಾವುಲ್ಲಾ ತಿಳಿಸಿದರು.

ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲೂ ಜಿಲ್ಲಾ ಚುನಾವಣಾಧಿಕಾರಿ ಹೆಸರಿನಲ್ಲಿ ಖಾತೆ ಆರಂಭಿಸಲಾಗಿದೆ. ಇದರ ಕೊಂಡಿಗಳನ್ನೂ ಜಾಲತಾಣದಲ್ಲಿ ನೀಡಲಾಗಿದೆ.

ಅಲ್ಲಿ ವ್ಯವಸ್ಥಿತ ಮತದಾರರ ನೋಂದಣಿ ಶಿಕ್ಷಣ ಮತ್ತು ಮತದಾನ ದಲ್ಲಿ ಭಾಗವಹಿಸುವಿಕೆ (ಸ್ವೀಪ್) ಸಮಿತಿ ನಡೆಸುತ್ತಿರುವ ಚಟು ವಟಿಕೆಗಳ ವಿಡಿಯೊ ಹಾಗೂ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಆಕಾಂಕ್ಷಿಗಳು: ಜಿಲ್ಲೆಯಲ್ಲಿ ಶಾಸಕ ರಾದ ಸತೀಶ ಜಾರಕಿಹೊಳಿ, ಫಿರೋಜ್‌ ಸೇಠ್‌, ಸಂಜಯ ಪಾಟೀಲ, ಪಿ. ರಾಜೀವ, ಲಕ್ಷ್ಮಣ ಸವದಿ, ಟಿಕೆಟ್‌ ಆಕಾಂಕ್ಷಿಗಳಾದ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಕರ್‌ ಕೂಡ ಸಾಮಾಜಿಕ ಮಾಧ್ಯಮ ದಲ್ಲಿ ಸಕ್ರಿಯವಾಗಿದ್ದಾರೆ.

ತಾವು ಭಾಗವಹಿಸುವ ಕಾರ್ಯಕ್ರಮಗಳ ಫೋಟೊಗಳನ್ನು ಫೇಸ್‌ಬುಕ್‌, ಟ್ವಿಟರ್‌ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕೆ ಈ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

ನೂರಾರು ಮಂದಿ ಈ ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ. ಪ್ರತಿಕ್ರಿಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT