ಹೈಟೆಕ್‌ ಈಜುಕೊಳ ಲೋಕಾರ್ಪಣೆ

ಬುಧವಾರ, ಮಾರ್ಚ್ 20, 2019
25 °C

ಹೈಟೆಕ್‌ ಈಜುಕೊಳ ಲೋಕಾರ್ಪಣೆ

Published:
Updated:
ಹೈಟೆಕ್‌ ಈಜುಕೊಳ ಲೋಕಾರ್ಪಣೆ

ಚಿಕ್ಕೋಡಿ: ‘ಚಿಕ್ಕೋಡಿ ಪಟ್ಟಣದ ನಿವಾಸಿಗಳ ಬೇಡಿಕೆಗೆ ಸ್ಪಂದಿಸಿ ಹೈಟೆಕ್‌ ಈಜುಕೊಳವನ್ನು ನಿರ್ಮಿಸಿದ್ದು, ಬರುವ ಸೆಪ್ಟಂಬರ್‌ ಒಳಗಾಗಿ ಸುಸಜ್ಜಿತ ಜಿಮ್‌ವೊಂದನ್ನೂ ನಿರ್ಮಿಸುವ ಮೂಲಕ ಪಟ್ಟಣದ ಯುವಕ–ಯುವತಿಯರಿಗೆ ದೈಹಿಕ ಆರೋಗ್ಯ ವೃದ್ಧಿಗೆ ಅನುಕೂಲ ಕಲ್ಪಿಸಲಾಗುವುದು’ ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.

ಪಟ್ಟಣದ ಹರಿನಗರದಲ್ಲಿ ಪುರಸಭೆಯ ಎಸ್‌ಎಫ್‌ಸಿ ವಿಶೇಷ ಅನುದಾನ ಮತ್ತು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಒಟ್ಟು ₹ 1.12 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್‌ ಈಜುಕೊಳವನ್ನು ಸೋಮವಾರ ಸಂಜೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಈಜುಕೊಳವನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಪುರಸಭೆ ಹೊಂದಿದೆ. ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ವೇಳಾಪಟ್ಟಿಯನ್ನು ನಿಗದಿಪಡಿಸಿ ಈಜುಕೊಳದ ಬಳಕೆಗೆ ಅವಕಾಶ ನೀಡಬೇಕು. ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಈಜುಕೊಳ ನಿರ್ಮಿಸುವ ಚಿಂತನೆಯೂ ಇದೆ. ಅದಕ್ಕೂ ಮುನ್ನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ₹ 1.5 ಕೋಟಿ ವೆಚ್ಚದಲ್ಲಿ ಹೈಟೆಕ್‌ ವ್ಯಾಯಾಮಶಾಲೆ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲಾ ಮಟ್ಟದಲ್ಲಿರುವ 100 ಹಾಸಿಗೆಗಳ ಮಹಿಳೆ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಚಿಕ್ಕೋಡಿಯಲ್ಲಿ ಆರಂಭಿಸಲಾಗುತ್ತಿದ್ದು, ₹ 17 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಇದೇ 10ರಂದು ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ. ಅದೇ ದಿನ ಕಲ್ಲೋಳ–ಯಡೂರ ಗ್ರಾಮಗಳ ಮಧ್ಯೆದ ಸೇತುವೆ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

ಶಾಸಕ ಗಣೇಶ ಹುಕ್ಕೇರಿ ಮಾತನಾಡಿದರು.  ಅಂತರರಾಷ್ಟ್ರೀಯ ಈಜುಪಟು ಬೆಳಗಾವಿಯ ರಾಘವೇಂದ್ರ, ಪುರಸಭೆ ಸದಸ್ಯ ಶಾಮ ರೇವಡೆ, ಪಿ.ಐ.ಕೋರೆ, ನಿವೃತ್ತ ಪ್ರಾಧ್ಯಾಪಕ ಆರ್‌.ವೈ.ಚಿಕ್ಕೋಡಿ, ಉಪನ್ಯಾಸಕ ಮಹಾಂತೇಶ ಬಿರಾದಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry