ಅರ್ಜಿ ಹಾಕದಿದ್ದರೂ ಟಿಕೆಟ್ ಕೊಟ್ಟರು

7
ಹೂವಿನಹಡಗಲಿ ಮೀಸಲು ಕ್ಷೇತ್ರದ ಮೊದಲ ಶಾಸಕ ಚಂದ್ರ ನಾಯ್ಕ ರಾಜಕೀಯ ಹಾದಿ

ಅರ್ಜಿ ಹಾಕದಿದ್ದರೂ ಟಿಕೆಟ್ ಕೊಟ್ಟರು

Published:
Updated:
ಅರ್ಜಿ ಹಾಕದಿದ್ದರೂ ಟಿಕೆಟ್ ಕೊಟ್ಟರು

ಹೊಸಪೇಟೆ: ‘ನನ್ನ ತಂದೆ ಮಂಡಲ ಉಪಪ್ರಧಾನರಾಗಿದ್ದರು. ಜೆ.ಡಿ.ಎಸ್‌. ಮೂಲಕ ರಾಜಕೀಯ ಪ್ರವೇಶಿಸಿದ್ದರು. ಅವರ ಪ್ರಭಾವದಿಂದ ನಾನು ರಾಜಕಾರಣಕ್ಕೆ ಬಂದೆ. ಎದುರಿಸಿದ ಮೊದಲ ಚುನಾವಣೆಯಲ್ಲೇ ಗೆದ್ದು ಶಾಸಕನಾದೆ’

ಇದು ಜಿಲ್ಲೆಯ ಹೂವಿನಹಡಗಲಿ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಬಿ. ಚಂದ್ರ ನಾಯ್ಕ ಅವರ ಮಾತುಗಳಿವು.

2008ರಲ್ಲಿ ಹೂವಿನಹಡಗಲಿ ಕ್ಷೇತ್ರ ಪರಿಶಿಷ್ಟ ಜಾತಿಗೆ (ಎಸ್ಸಿ) ಮೀಸಲಾಯಿತು. ಕ್ಷೇತ್ರ ಮೀಸಲಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲೇ ಚಂದ್ರ ನಾಯ್ಕ ಅವರು ಜಯ ಗಳಿಸಿದರು. ಚಂದ್ರ ನಾಯ್ಕ ಅವರು ಆರಂಭದಲ್ಲಿ ತಂದೆಯ ಹಾದಿಯಲ್ಲಿ ಮುನ್ನಡೆದು ಜೆ.ಡಿ.ಎಸ್‌.ನಲ್ಲಿದ್ದುಕೊಂಡು ರಾಜಕೀಯ ಮಾಡಿದರು. ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಅವರೊಂದಿಗೆ ನಂಟು ಬೆಳೆಸಿಕೊಂಡು ಅವರಿಗೆ ಹತ್ತಿರವಾದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎಂ.ಪಿ. ಪ್ರಕಾಶ್‌ ಅವರು ಕಾಂಗ್ರೆಸ್‌ ಕಡೆ ಮುಖ ಮಾಡಿದರು. ಆಗ ಚಂದ್ರ ನಾಯ್ಕ ಅವರು ಬಿಜೆಪಿ ಆಯ್ಕೆ ಮಾಡಿಕೊಂಡರು. ನಂತರ ಅವರು ಬಿಜೆಪಿ ಟಿಕೆಟ್‌ ಪಡೆದು ಹೇಗೆ ಶಾಸಕರಾದರು ಎನ್ನುವುದನ್ನು ಅವರ ಮಾತುಗಳಲ್ಲೇ ಕೇಳೋಣ.

‘ನನ್ನ ಹುಟ್ಟೂರು ಹೂವಿನಹಡಗಲಿ ತಾಲ್ಲೂಕಿನ ಅಡವಿಮಲ್ಲನಕೆರೆ ತಾಂಡಾ. ನನ್ನ ತಂದೆ ತಾವರೆ ನಾಯ್ಕ. ಅವರು ರಾಮಕೃಷ್ಣ ಹೆಗಡೆ ಕಾಲದಿಂದ ರಾಜಕೀಯ ಮಾಡುತ್ತ ಬಂದವರು. ಅವರಿಂದಾಗಿ ನಾನು ಸೇರಿದಂತೆ ಕುಟುಂಬದ ಅನೇಕ ಜನ ರಾಜಕೀಯ ಪ್ರವೇಶಿಸು ವಂತಾಯಿತು. ಮಹಾಜನರ ಹಳ್ಳಿಯಿಂದ ಪಂಚಾಯ್ತಿಗೆ ಸದಸ್ಯನಾಗಿ ಆಯ್ಕೆಯಾದೆ. ನಂತರ ಸೋಗಿ ಕ್ಷೇತ್ರದಿಂದ ಜಯಿಸಿ ಜಿಲ್ಲಾ ಪಂಚಾಯಿತಿ ಸದಸ್ಯನಾದೆ. 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೂವಿನಹಡಗಲಿ ಕ್ಷೇತ್ರದಿಂದ ಸ್ಪರ್ಧಿಸಲು ಅನೇಕ ಜನ ಆಕಾಂಕ್ಷಿಗಳಿದ್ದರು. ಹೀಗಾಗಿ ನಾನು ಟಿಕೆಟ್‌ಗೆ ಅರ್ಜಿ ಹಾಕಲಿಲ್ಲ. ಒಂದುದಿನ ಏಕಾಏಕಿ ಜನಾರ್ದನ ರೆಡ್ಡಿ ಅವರು ನನಗೆ ಕರೆದು ಟಿಕೆಟ್‌

ನೀಡಿದರು. ಚುನಾವಣೆಗೆ ಸ್ಪರ್ಧಿಸಿ ನಿರಾಯಾಸವಾಗಿ ಗೆದ್ದೆ’ ಎಂದು ನೆನಪಿಸಿಕೊಂಡರು.

‘ನನ್ನ ಹೆಂಡತಿ, ನನ್ನ ಅಣ್ಣ ಗ್ರಾಮ ಪಂಚಾಯಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಅತ್ತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯಾಗಿದ್ದರು. ನನ್ನ ತಂದೆಯಿಂದ ಕುಟುಂಬದಲ್ಲಿನ ಬಹುತೇಕ ಸದಸ್ಯರು ರಾಜಕೀಯಕ್ಕೆ ಬರುವಂತಾಯಿತು. ಜನ ಕೂಡ ನಮ್ಮ ಕೈಬಿಡಲಿಲ್ಲ. ಅಲ್ಲದೇ ನಮ್ಮ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಿ ತೋರಿಸಿದ್ದೇವೆ. ಅನೇಕ ವರ್ಷಗಳಿಂದ ರಾಜಕೀಯದಲ್ಲಿದ್ದರೂ ಒಬ್ಬರ ಮೇಲೆಯೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ’ ಎಂದು ಹೇಳಿದರು.

‘ಎಂ.ಪಿ. ಪ್ರಕಾಶ್‌ ಅವರೊಂದಿಗೆ ನಾನಿನ್ನೂ ಜೆ.ಡಿ.ಎಸ್‌.ನಲ್ಲೇ ಇದ್ದೆ. ಒಂದು ದಿನ ಬೆಂಗಳೂರಿನಲ್ಲಿ ಅವರ ಮನೆಗೆ ಹೋಗಿದ್ದೆ. ಹೀಗೆ ಸುಮ್ಮನೆ ಮಾತಾಡುತ್ತ ಕುಳಿತಿದ್ದಾಗ ಎಂ.ಪಿ. ಪ್ರಕಾಶ್‌ ಅವರು, ‘ಹೂವಿನಹಡಗಲಿ ಎಸ್ಸಿ ಮೀಸಲು ಕ್ಷೇತ್ರವಾದರೆ ಚಂದ್ರ ನಾಯ್ಕ ಮುಂದಿನ ಎಂ.ಎಲ್‌.ಎ. ಎಂದು ಹೇಳಿದ್ದರು. ಮುಂದೊಮ್ಮೆ ಹೂವಿನಹಡಗಲಿಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲೂ

ಹೀಗೆ ಹೇಳಿದ್ದರು. ಅವರು ಹೇಳಿದ್ದು 2008ರಲ್ಲಿ ನಿಜವಾಯಿತು’ ಎಂದರು.

***

‘ಏಕಕಾಲಕ್ಕೆ ಹತ್ತು ಸಾವಿರ ಮನೆ’

‘ನಾನು ಶಾಸಕನಾಗಿದ್ದಾಗ ಬಸವ ವಸತಿ ಯೋಜನೆಯಡಿ ಏಕಕಾಲಕ್ಕೆ ಹತ್ತು ಸಾವಿರ ಮನೆಗಳನ್ನು ಮಂಜೂರು ಮಾಡಿಸಿ ಕ್ಷೇತ್ರದ ಜನರಿಗೆ ವಿತರಿಸಿದ್ದೆ. ಅದೊಂದು ದಾಖಲೆಯೇ ಸರಿ’ ಎನ್ನುತ್ತಾರೆ ಚಂದ್ರ ನಾಯ್ಕ.

‘ಅನೇಕ ವರ್ಷಗಳಿಂದ ಸಿಂಗಟಾಲೂರು ನೀರಾವರಿ ಯೋಜನೆ ನನೆಗುದಿಗೆ ಬಿದ್ದಿತ್ತು. ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಕರೆಸಿ ಅದಕ್ಕೆ ಚಾಲನೆ ಕೊಡಿಸಿದ್ದೆ. ತುಂಗಭದ್ರಾ ಜಲಾಶಯದಿಂದ ಹತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೂಡ ನನ್ನ ಕಾಲದಲ್ಲೇ ಆರಂಭಗೊಂಡಿತ್ತು. ಈಗ ಬಹುತೇಕ ಯೋಜನೆಗಳು ಪೂರ್ಣಗೊಳ್ಳಲು ಬಂದಿವೆ’ ಎಂದು ನೆನಕೆ ಮಾಡಿದರು.

‘ಕ್ಷೇತ್ರದಲ್ಲಿ ಎಂಜಿನಿಯರಿಂಗ್‌ ಕಾಲೇಜು, ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆ, ಎರಡು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ಮೈಲಾರ ಹಾಗೂ ಮದ್ಲಗಟ್ಟದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಶ್ರಮಿಸಿದ್ದೇನೆ’ ಎಂದು ಅವರು ಮಾಡಿದ ಕೆಲಸಗಳ ಪಟ್ಟಿ ಹೇಳಿದರು.

***

ಶಾಸಕನಾಗಿ ಕ್ಷೇತ್ರದಲ್ಲಿ ಹತ್ತು ಹಲವು ಕೆಲಸಗಳನ್ನು ಮಾಡಿದ್ದೇನೆ. ಆ ಕಾರಣಕ್ಕಾಗಿಯೇ ಜನ ಈಗಲೂ ನನ್ನನ್ನು ನೆನಪಿಸಿಕೊಳ್ಳುತ್ತಾರೆ.

–ಬಿ. ಚಂದ್ರ ನಾಯ್ಕ, ಬಿಜೆಪಿ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry