ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮಪ್ಪ ಕೆರೆ ಅಭಿವೃದ್ಧಿಗೆ ₹ 12 ಕೋಟಿ

ಕಂಪ್ಲಿ ಹೊಸ ತಾಲ್ಲೂಕು ಉದ್ಘಾಟನೆ ಸಂಭ್ರಮ
Last Updated 7 ಮಾರ್ಚ್ 2018, 7:39 IST
ಅಕ್ಷರ ಗಾತ್ರ

ಕಂಪ್ಲಿ: ‘ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ಐತಿಹಾಸಿಕ ಸೋಮಪ್ಪನ ಕೆರೆಯನ್ನು ಪ್ರವಾಸೋದ್ಯಮ ಇಲಾಖೆ ಅನುದಾನ ₹ 12 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ತಿಳಿಸಿದರು.

ಇಲ್ಲಿಯ ಎಸ್‌.ಎನ್‌. ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಕಂಪ್ಲಿ ನೂತನ ತಾಲ್ಲೂಕು ಉದ್ಘಾಟಿಸಿ, ‘ಹಾಲಿ ಕೆರೆಯಲ್ಲಿ ಉದ್ಯಾನ, ಬೋಟಿಂಗ್‌, ವಾಯುವಿಹಾರ ಇತ್ಯಾದಿ ಸುಸಜ್ಜಿತ ವ್ಯವಸ್ಥೆ ಹೊಂದಿರುತ್ತದೆ’ ಎಂದು ಹೇಳಿದರು.

‘ಕಂಪ್ಲಿ ಹೊಸ ತಾಲ್ಲೂಕು ಕಚೇರಿಯಲ್ಲಿ ಸಕಾಲ ವ್ಯಾಪ್ತಿಗೊಳಪಡುವ 165 ವ್ಯವಸ್ಥೆಗಳು ನಾಗರಿಕರಿಗೆ ಸುಲಭವಾಗಿ ದೊರೆಯುತ್ತವೆ. ಜನರಿಗೆ ಆಡಳಿತ ಹತ್ತಿರವಾಗಲಿ ಎನ್ನುವ ಉದ್ದೇಶದಿಂದ ಸಿದ್ದರಾಮಯ್ಯ ಅವರ ಸರ್ಕಾರ ರಾಜ್ಯದಲ್ಲಿ 49 ನೂತನ ತಾಲ್ಲೂಕುಗಳನ್ನು ಅನುಷ್ಠಾನ ಮಾಡಿದೆ’ ಎಂದರು.

ಜಿಲ್ಲೆಯ ಖನಿಜ ನಿಧಿ ₹ 300 ಕೋಟಿಯಲ್ಲಿ ಶೇ 9ರಷ್ಟನ್ನು ಜಿಲ್ಲೆಯ ಶೈಕ್ಷಣಿಕ ಪ್ರಗತಿಗಾಗಿ ಬಳಕೆ ಮಾಡಿಕೊಂಡಿದ್ದು, 70 ಸಾವಿರ ವಿದ್ಯಾರ್ಥಿಗಳಿಗೆ ಬೆಳಕು ಯೋಜನೆಯಿಡಿ ಪ್ರೋತ್ಸಾಹ ಧನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೌಶಲ ಅಭಿವೃದ್ಧಿ ತರಬೇತಿ, ಸ್ಮಾರ್ಟ್ ತರಗತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುವುದು. ತಮ್ಮ ಸರ್ಕಾರ ಐದು ವರ್ಷದಲ್ಲಿ ಜಾರಿಗೆ ತಂದ ವಿವಿಧ ಯೋಜನೆಗಳನ್ನು ಸಚಿವರು ವಿವರಿಸಿದರು.

ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಎಚ್‌. ಸುರೇಶ್‌ಬಾಬು ಮಾತನಾಡಿ, ‘1851ರ ಬ್ರಿಟಿಷ್‌ ಆಳ್ವಿಕೆಯಲ್ಲಿ ಕಂಪ್ಲಿ ತಾಲ್ಲೂಕು ಸ್ಥಾನ ಹೊಂದಿತ್ತು. ಮತ್ತೆ ಕಂಪ್ಲಿ 166 ವರ್ಷಗಳ ನಂತರ ನೂತನ ತಾಲ್ಲೂಕು ಆಗಿ ಉದಯಿಸಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ತಾಲ್ಲೂಕು ರಚನೆಗಾಗಿ ಹೋರಾಡಿದ ಕಲ್ಗುಡಿ ರಾಚಪ್ಪ ಸೇರಿದಂತೆ ಎಲ್ಲ ಹೋರಾಟಗಾರರು ನಾಲ್ಕು ದಶಕಗಳ ಕಾಲ ಧರಣಿ, ಉಪವಾಸ ಸತ್ಯಾಗ್ರಹ ನಡೆಸಿದ ಪರಿಣಾಮ ಇಂದು ಪ್ರತಿಫಲ ಸಿಕ್ಕಿದೆ’ ಎಂದು ಸ್ಮರಿಸಿದರು.

ವಿಧಾನಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ, ಜಿಲ್ಲಾಧಿಕಾರಿ ಡಾ. ರಾಮಪ್ರಸಾದ್‌ ಮನೋಹರ ಮಾತನಾಡಿದರು. ಪುರಸಭೆ ಅಧ್ಯಕ್ಷ ಎಂ. ಸುಧೀರ್, ಎಪಿಎಂಸಿ ಅಧ್ಯಕ್ಷ ಟಿ. ಮಲ್ಲಿಕಾರ್ಜುನ, ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಅರವಿ ಬಸವನಗೌಡ, ಕಾರ್ಯಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ. ಶ್ರೀನಿವಾಸರಾವ್, ಎಂ. ವೆಂಕಟನಾರಮ್ಮ, ವಿ. ಜನಾರ್ದನ, ಬನಶಂಕರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಿ. ನೀಲಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್. ಹನುಮಂತ, ಹೋರಾಟ ಸಮಿತಿಯ ಎ.ಸಿ. ದಾನಪ್ಪ, ಜಿ. ರಾಮಣ್ಣ, ಬಿ. ಸಿದ್ದಪ್ಪ, ಪಿ. ಬ್ರಹ್ಮಯ್ಯ, ಸಯ್ಯದ್‌ ಉಸ್ಮಾನ್‌, ಕರೇಕಲ್ ಮನೋಹರ, ರೈತ ಅಧ್ಯಕ್ಷ ಕೆ. ಸುದರ್ಶನ, ಮೆಹಮೂದ್, ಕೆ. ಚಂದ್ರಶೇಖರ್, ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್. ಗಿರಿಮಲ್ಲಪ್ಪ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎ. ಮಾನಯ್ಯ, ಕೃಷಿ ಉತ್ಪನ್ನಗಳ ಸಂಸ್ಕರಣೆ, ರಫ್ತು ನಿಗಮದ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ, ತಹಶೀಲ್ದಾರ್‌ರಾದ ಎಚ್. ವಿಶ್ವನಾಥ, ಬಿ. ರವೀಂದ್ರಕುಮಾರ್, ಎಸ್.ಜಿ. ಚಿತ್ರಗಾರ ಇದ್ದರು.
***
ವಿರೋಧ, ಸಮಾಧಾನ
ತಾಲ್ಲೂಕು ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರು ವೇದಿಕೆಗೆ ಬರುವಂತೆ ಸ್ವತಃ ಆಹ್ವಾನಿಸಿದರು. ಈ ವೇಳೆ ದಿಢೀರನೆ ವೇದಿಕೆ ಮುಂಭಾಗದಲ್ಲಿದ್ದ ಹೋರಾಟ ಸಮಿತಿಯ ಜಿ. ರಾಮಣ್ಣ, ಎ.ಸಿ. ದಾನಪ್ಪ, ಬಿ. ನಾಗೇಶ್ವರಾವ್ ಇದನ್ನು ತೀವ್ರವಾಗಿ ವಿರೋಧಿಸಿದರು. ನಾವೆಲ್ಲರೂ ತಾಲ್ಲೂಕಿಗಾಗಿ ಹೋರಾಟ ನಡೆಸಿದ್ದೇವೆ ಎಂದು ಅಂದಿನ ಹೋರಾಟದ ಭಾವಚಿತ್ರಗಳನ್ನು ಪ್ರದರ್ಶಿಸಿದರು. ಆಗ ಮಧ್ಯ ಪ್ರವೇಶಿಸಿದ ವಿಧಾನಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ ಪಕ್ಷಾತೀತವಾಗಿ ಎಲ್ಲರನ್ನೂ ಹೆಸರಿಸಿ ವೇದಿಕೆಗೆ ಕರೆದು ಸಮಾಧಾನಪಡಿಸಿದ ನಂತರ ಉದ್ಘಾಟನೆಗೆ ಚಾಲನೆ ದೊರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT