ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಹಿಂದುಳಿದವರ ನಕಲಿ ನಾಯಕ

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಟೀಕೆ
Last Updated 7 ಮಾರ್ಚ್ 2018, 7:48 IST
ಅಕ್ಷರ ಗಾತ್ರ

ಬೀದರ್: ‘ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರಿಗೆ ಟೋಪಿ ಹಾಕಿ ಕಾಂಗ್ರೆಸ್‌ಗೆ ಬಂದಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗದವರ ನಕಲಿ ನಾಯಕ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಟೀಕಿಸಿದರು.

ಮಾರ್ಚ್‌ 10 ರಂದು ಕೂಡಲಸಂಗಮದಲ್ಲಿ ನಡೆಯಲಿರುವ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದ ಪ್ರಯುಕ್ತ ನಗರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆ ಹಾಗೂ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ನಕಲಿ ಆರೋಪಿಯನ್ನು ಹಿಡಿದಿದ್ದಾರೆ. ಸಿದ್ದರಾಮಯ್ಯ ನಕಲಿ ನಾಯಕರಾದರೆ, ರಾಮಲಿಂಗಾರೆಡ್ಡಿ ನಕಲಿ ಗೃಹ ಸಚಿವ. ರಾಜ್ಯದಲ್ಲಿ ಬಹಿರಂಗವಾಗಿಯೇ ಕೊಲೆ ಹಾಗೂ ಅತ್ಯಾಚಾರಗಳು ನಡೆಯುತ್ತಿದ್ದರೂ ಕೇಳುವವರಿಲ್ಲ’ ಎಂದು ಆರೋಪಿಸಿದರು.

‘ಕನಕದಾಸ, ವಾಲ್ಮೀಕಿ ಹೆಸರು ಹೇಳಿಕೊಂಡು ಮುಖ್ಯಮಂತ್ರಿ ಆದರೂ ಹಿಂದುಳಿದ ವರ್ಗದವರ ಬಡತನ ನಿವಾರಣೆಯಾಗುವ ನಿಟ್ಟಿನಲ್ಲಿ ಉದ್ಯೋಗ ಕಲ್ಪಿಸಿಲ್ಲ. ಬಡವರಿಗೆ ಮನೆಗಳನ್ನು ಮಂಜೂರು ಮಾಡಿಲ್ಲ. ಕೆಲವರಿಗೆ ಹಕ್ಕು ಪತ್ರಗಳನ್ನೇ ಕೊಟ್ಟಿಲ್ಲ’ ಎಂದು ಆರೋಪಿಸಿದರು.

‘ಬೆಳಗಾವಿ ಜಿಲ್ಲೆಯ ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳ ಹಾಗೂ ಕಾಗಿನೆಲೆಗೆ ಭೇಟಿ ನೀಡಿಲ್ಲ. ಸಂಪೂರ್ಣವಾಗಿ ಹಿಂದುಳಿದವರ ಕೈಬಿಟ್ಟಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ 36 ಸಮುದಾಯಗಳ ಮಠ ಮಂದಿರಗಳಿಗೆ ₹ 96 ಕೋಟಿ ಅನುದಾನ ಕೊಟ್ಟಿತ್ತು. 36 ಮಹಾಪುರುಷರ ಜಯಂತಿ ಆಚರಿಸಿ ಸ್ಫೂರ್ತಿ ನೀಡಿತ್ತು’ ಎಂದು ತಿಳಿಸಿದರು.

ಬೆಂಬಲ ನೀಡುತ್ತಿಲ್ಲ: ‘ಹಿಂದುಳಿದ ವರ್ಗಗಳ ಕಲ್ಯಾಣದ ಮಸೂದೆಗೆ ಕಾಂಗ್ರೆಸ್‌ ಪಕ್ಷ ಲೋಕಸಭೆಯಲ್ಲಿ ಬೆಂಬಲ ನೀಡಿದರೂ ರಾಜ್ಯಸಭೆಯಲ್ಲಿ ತಡೆ ಉಂಟು ಮಾಡಿದೆ’ ಎಂದು ಆರೋಪಿಸಿದರು.

‘ಮಾರ್ಚ್‌ 10 ರಂದು ಕೂಡಲಸಂಗಮದಲ್ಲಿ ನಡೆಯಲಿರುವ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಬಾಗಲಕೋಟೆ, ವಿಜಯಪುರ, ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೆಳಗಾವಿ ಜಿಲ್ಲೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಫೆ. 25ರಂದು ಕಾಗಿನೆಲೆಯಲ್ಲಿ ನಡೆಯಲಿರುವ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ದಕ್ಷಿಣ ಕರ್ನಾಟಕದ ಜಿಲ್ಲೆಗಳ ಹಿಂದುಳಿದ ವರ್ಗದವರು ಭಾಗವಹಿಸಲಿದ್ದಾರೆ. ನಾನು ಹಾಗೂ ರಘುನಾಥ ಮಲ್ಕಾಪುರೆ ಸಮಾವೇಶದ ನೇತೃತ್ವ ವಹಿಸಿಕೊಂಡಿದ್ದೇವೆ’ ಎಂದು ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಅಧ್ಯಕ್ಷತೆ ವಹಿಸಿದ್ದರು. ಔರಾದ್ ಶಾಸಕ ಪ್ರಭು ಚವಾಣ್, ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮಾರುತಿರಾವ್‌ ಮುಳೆ, ಸ್ಲಂ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಾಬು ವಾಲಿ, ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರಸಿಂಗ್‌ ಠಾಕೂರ್, ಜಯಕುಮಾರ ಕಾಂಗೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಕೆ.ಸಿದ್ರಾಮ, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಗುಂಡು ರೆಡ್ಡಿ, ಜಿಲ್ಲಾ ಘಟಕದ ವಕ್ತಾರ ಬಸವರಾಜ ಜೋಜನಾ ಇದ್ದರು.
***
ಇಂದಿರಾ ಗಾಂಧಿ ಅವರಿಗೂ ಆರ್‌ಎಸ್‌ಎಸ್‌ ನಿಷೇಧಿಸಲು ಆಗಿಲ್ಲ. ಆರ್‌ಎಸ್ಎಸ್‌ ಪಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಲೆಕ್ಕಕ್ಕೂ ಇಲ್ಲ.
– ಕೆ.ಎಸ್‌.ಈಶ್ವರಪ್ಪ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT