ಸಿಂಧನಕೇರಾ ಶಾಲೆಯಲ್ಲಿ ಸೌಲಭ್ಯ ಕೊರತೆ

ಸೋಮವಾರ, ಮಾರ್ಚ್ 25, 2019
29 °C
ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಮೈದಾನ ನಿರ್ಮಿಸಲು ಪಾಲಕರ ಒತ್ತಾಯ

ಸಿಂಧನಕೇರಾ ಶಾಲೆಯಲ್ಲಿ ಸೌಲಭ್ಯ ಕೊರತೆ

Published:
Updated:
ಸಿಂಧನಕೇರಾ ಶಾಲೆಯಲ್ಲಿ ಸೌಲಭ್ಯ ಕೊರತೆ

ಹುಮನಾಬಾದ್: ಶಾಲೆ ಹಿಂಬದಿ ಇಸ್ಪೀಟ್‌ ಕಾರ್ಡ್‌, ಮದ್ಯದ ಬಾಟಲಿ ದೊರೆಯುತ್ತವೆ. ವಿದ್ಯಾರ್ಥಿಗಳು ಪ್ರಾರ್ಥನೆಗೂ ಮುನ್ನ ಪ್ರಾಂಗಣ ಸ್ವಚ್ಛಗೊಳಿಸಬೇಕು. ಇದು ತಾಲ್ಲೂಕಿನ ಸಿಂಧನಕೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ.

ತಾಲ್ಲೂಕು ಕೇಂದ್ರದಿಂದ ಕೇವಲ 4 ಕಿ.ಮೀ ಅಂತರದಲ್ಲಿರುವ ಗ್ರಾಮದಲ್ಲಿ 1ರಿಂದ 8ನೇ ತರಗತಿವರೆಗೆ ಶಾಲೆ ಇದ್ದು, 216 ವಿದ್ಯಾರ್ಥಿಗಳಿದ್ದಾರೆ. ಸಮರ್ಪಕ ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಆವರಣಗೋಡೆ ಇದೆ. ಆದರೆ ಕ್ರೀಡಾ ಮೈದಾನ, ಕ್ರೀಡಾ ಸಾಮಗ್ರಿ, ವಿಜ್ಞಾನ, ಸಮಾಜ, ಗಣಿತ ಬೋಧನಾ ಪರಿಕರ ಮತ್ತು ಕಂಫ್ಯೂಟರ್‌ ಸೌಲಭ್ಯವಿಲ್ಲ.

‘ಗ್ರಾಮದ ಜನರು ಶಾಲೆ ಪ್ರಾಂಗಣವನ್ನು ಶಾಲಾ ಅವಧಿ ನಂತರ ಸಾರ್ವಜನಿಕ ಶೌಚಾಲಯವಾಗಿ ಬಳಸುತ್ತಾರೆ. ರಜೆ ದಿನಗಳಲ್ಲಿ ಶಾಲಾ ಪ್ರಾಂಗಣ ವ್ಯಸನಿಗಳ ತಾಣವಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದ ವಿದ್ಯಾರ್ಥಿಗಳ ಓದಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಇಲಾಖೆ ಮೇಲಧಿಕಾರಿಗಳು ಮತ್ತು ಗ್ರಾಮದ ಮುಖಂಡರಿಗೆ ತಿಳಿಸಿದರೂ ಪ್ರಯೋಜನ ಆಗಿಲ್ಲ’ ಎನ್ನುತ್ತಾರೆ ಮುಖ್ಯಶಿಕ್ಷಕಿ ಜಯಲಕ್ಷ್ಮಿ ಬಿ.ಪೋಚಂಪಳ್ಳಿ.

ಉತ್ತಮ ಸಾಧನೆ: 400 ಮೀಟರ್‌ ರಿಲೆ ಹಾಗೂ ಎತ್ತರ ಜಿಗಿತದಲ್ಲಿ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸ್ಪರ್ಧಿಸಿದ್ದಾರೆ. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಣ್ಣಿನಿಂದ ಆಕೃತಿ ನಿರ್ಮಿಸುವ, ಗುಡಿಸಲು ನಿರ್ಮಾಣ, ಚಿತ್ರಕಲೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಓದು ಕರ್ನಾಟಕ ಸ್ಪರ್ಧೆಯಲ್ಲಿ ಸಿಂಧನಕೇರಾ ಸಿ.ಆರ್‌.ಸಿ ವಲಯದಿಂದ ಆಯ್ಕೆಗೊಂಡ ಏಕೈಕ ಶಾಲೆ ಎಂಬ ಹೆಗ್ಗಳಿಕೆ ಇದೆ.

‘ಪರಿಸರ ಜಾಗೃತಿ, ಸ್ವಚ್ಛ ಭಾರತ ಅಭಿಯಾನದ ಜೊತೆಗೆ ಪ್ರತಿ ಶನಿವಾರ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ಮಕ್ಕಳನ್ನು ಪ್ರೋತ್ಸಾಹಿಸುತ್ತೇವೆ. ಶಿಕ್ಷಕರಾದ ಅರ್ಜುನ, ರವೀಂದ್ರ, ಸುನೀತಾ, ಕಲ್ಪನಾ, ಸ್ನೇಹಲತಾ ತರನಳ್ಳಿ ಪರಿಣಾಮಕಾರಿಯಾಗಿ ಪಾಠ ಮಾಡುತ್ತಾರೆ . ಶಾಲಾ ಅವಧಿ ನಂತರ ನಡೆಯುವ ಚಟುವಟಿಕೆ ಸ್ಥಗಿತಗೊಂಡರೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಮುಖ್ಯಶಿಕ್ಷಕಿ.

**

ಸೌಲಭ್ಯಗಳ ಕೊರತೆ ನಡುವೆಯೂ ನಿರೀಕ್ಷೆಗಿಂತ ಉತ್ತಮ ಸಾಧನೆ ಮಾಡಿದ್ದೇವೆ. ಸೌಲಭ್ಯ ಕಲ್ಪಿಸಿದರೆ ಇನ್ನೂ ಉತ್ತಮ ಶಿಕ್ಷಣ ನೀಡಬಹುದು.

– ಜಯಲಕ್ಷ್ಮಿ ಬಿ.ಪೋಚಂಪಳ್ಳಿ, ಮುಖ್ಯಶಿಕ್ಷಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry