ಕುಡಿಯುವ ನೀರು ಪೂರೈಕೆಗೆ ಆಗ್ರಹ

ಮಂಗಳವಾರ, ಮಾರ್ಚ್ 19, 2019
32 °C

ಕುಡಿಯುವ ನೀರು ಪೂರೈಕೆಗೆ ಆಗ್ರಹ

Published:
Updated:
ಕುಡಿಯುವ ನೀರು ಪೂರೈಕೆಗೆ ಆಗ್ರಹ

ಬಾಗೇಪಲ್ಲಿ: ಕೊಳವೆ ಮಾರ್ಗ ಅಳವಡಿಸಿದ್ದರೂ ಪುರಸಭೆಯು ಜನರಿಗೆ ಕುಡಿಯುವ ನೀರು ಪೂರೈಸದೆ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ, ವಾರ್ಡ್‌ನ ಮಹಿಳೆಯರು ಮಂಗಳವಾರ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು.

ಪಟ್ಟಣದ 1ನೇ ವಾರ್ಡ್‌ನ ಶಿರಡಿ ಸಾಯಿ ಬಾಬಾ ಮಂದಿರ ಪಕ್ಕದಲ್ಲಿ 50 ಮನೆಗಳಿದ್ದು, ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ. ಕುಡಿಯುವ ನೀರಿಗಾಗಿ ಐದು ವರ್ಷದಿಂದ ಪರಿತಪಿಸುತ್ತಿದ್ದಾರೆ. ಖಾಸಗಿ ಕೊಳವೆ ಬಾವಿಯಿಂದ ಹಣ ನೀಡಿ, ಕುಡಿಯಲು ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಬಡಾವಣೆಯ ನಿವಾಸಿಗಳಾದ ಚಾಂದ್‌ ಪಾಷಾ, ಲಲಿತಮ್ಮ ಆರೋಪಿಸಿದರು.

ಸಿ.ಆರ್‌.ಎಂ. ಸುಬ್ಬು ಮಾತನಾಡಿ 2012–13ರಲ್ಲಿ ಆಶ್ರಯ ಬಡಾವಣೆ ಯಡಿ ಪುರಸಭೆಯ ಎಸ್‌ಎಫ್‌ಸಿ ಯೋಜನೆ ಮೂಲಕ ₹ 2.40 ಲಕ್ಷ ಅನುದಾನ ನೀಡಿ ಪೈಪ್‌ಲೈನ್ ಹಾಕಿಸಲಾಗಿತ್ತು. ನಗರದಲ್ಲಿ ಪೈಪ್‌ಲೈನ್‌ಗಳಿವೆ ಹೊರತು ನೀರು ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಅದಕ್ಕಾಗಿ ಪ್ರತಿಭಟನೆ ಮಾರ್ಗ ಹಿಡಿದಿದ್ದಾಗಿ ತಿಳಿಸಿದರು.

ನೀರಿನ ಜೊತೆಗೆ ಒಳ ಚರಂಡಿ, ರಸ್ತೆ, ಬೀದಿ ದೀಪಗಳು ಬಡಾವಣೆಯಲ್ಲ ಇವರ. ಸದಸ್ಯರಿಗೆ ಮನವಿ ಮಾಡಿದರೆ ಕನಿಷ್ಠ ಸ್ಪಂದನೆಯನ್ನೂ ತೋರುತ್ತಿಲ್ಲ. ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಆರೋಪಿಸಿದರು.

ಪುರಸಭೆ ಅಧ್ಯಕ್ಷೆ ಮಮತಾ ನಾಗರಾಜರೆಡ್ಡಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಪೈಪ್‌ಲೈನ್‌ಗೆ ನೀರು ಹರಿಸುವುದು ಮತ್ತು ಒಳಚರಂಡಿ ಅಭಿವೃದ್ದಿಪಡಿಸಲು ಮಂಡಳಿಗೆ ಸೂಚನೆ ನೀಡಲಾಗಿದೆ. ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಮುಖ್ಯಾಧಿಕಾರಿ ಎ.ಎನ್.ಮಂಜುನಾಥ್ ಅವರಿಗೆ ಸ್ಥಳ ಪರಿಶೀಲಿಸಿ ನೀರು ಸರಬರಾಜಿಗೆ ಗಮನ ನೀಡುವಂತೆ ಸೂಚಿಸಿದರು.

ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಮುಖಂಡರಾದ ಗಂಗಾಧರ, ವೆಂಕಟರವಣಪ್ಪ, ಅಶೋಕ್, ನಿವಾಸಿಗಳಾದ ಪದ್ಮಮ್ಮ, ನರಸಮ್ಮ, ಆದಿಲಕ್ಷ್ಮಮ್ಮ ಭೈರಮ್ಮ, ಅನಿತಮ್ಮ, ನಾಗಮಣಿ, ನವ್ಯಾ, ಪರ್ವೀನ್‌ ತಾಜ್, ಸುಶೀಲಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry