‘ಶಿಕ್ಷಣ ಪಡೆದು ಸಮಾಜಕ್ಕೆ ದಾರಿದೀಪವಾಗಿ’

7

‘ಶಿಕ್ಷಣ ಪಡೆದು ಸಮಾಜಕ್ಕೆ ದಾರಿದೀಪವಾಗಿ’

Published:
Updated:
‘ಶಿಕ್ಷಣ ಪಡೆದು ಸಮಾಜಕ್ಕೆ ದಾರಿದೀಪವಾಗಿ’

ದಶವಾರ (ಚನ್ನಪಟ್ಟಣ): ಗ್ರಾಮೀಣ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಸಮಾಜಕ್ಕೆ ದಾರಿದೀಪವಾಗಬೇಕು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ ಸಲಹೆ ನೀಡಿದರು.

ಗ್ರಾಮದಲ್ಲಿ ಸೋಮವಾರ ನಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು. ವಿದ್ಯಾರ್ಥಿಗಳು ಓದಿನ ಜತೆಗೆ ಸೇವಾ ಮನೋಭಾವ ಹಾಗೂ ಸ್ವಚ್ಛತೆ, ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶಿಕ್ಷಕರು, ಪೋಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸದಿದ್ದರೆ ಮುಂದೆ ಅನಾಹುತ ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿ ಆಗಿರುವ ದಿನದಿಂದ ಗುರಿ ಇಟ್ಟುಕೊಳ್ಳಬೇಕು. ಆ ನಿಟ್ಟಿನಲ್ಲಿ ಸಾಗಿದರೆ ಯಶಸ್ಸು ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಮುಖಂಡ ಡಿ.ಎಂ.ಮಂಜುನಾಥ್ ಮಾತನಾಡಿ, ಸತತ ಅಧ್ಯಯನ, ಪರಿಶ್ರಮ, ಸನ್ಮಾರ್ಗದಲ್ಲಿ ಜೀವನ ನಡೆಸಬೇಕು. ದುಶ್ಚಟಗಳ ದಾಸರಾಗುವ ಬದಲಾಗಿ ದೊಡ್ಡ ಸಾಧನೆ ಮಾಡುವತ್ತ ಗುರಿ ಹೊಂದಿದರೆ ಅದಕ್ಕೆ ಪ್ರತಿಫಲ ಸಿಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಶಿವಯ್ಯ ಮಾತನಾಡಿ, ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರ್ಕಾರಿ ಶಾಲೆಗಳು ಉತ್ತಮವಾಗಿ ಶ್ರಮಿಸುತ್ತಿವೆ. ಇದಕ್ಕೆ ದಾನಿಗಳು, ಗ್ರಾಮಸ್ಥರ ಸಹಕಾರವೇ ಕಾರಣ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಮು, ಮುಖಂಡ ರಾಮು, ಗ್ರಾಮ ಪಂಚಾಯಿತಿ ಸದಸ್ಯರಾದ ಬೋರೇಗೌಡ, ರಾಮಕೃಷ್ಣ, ರತ್ನಮ್ಮ ಇದ್ದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry