ಜಾತಿ, ಅಸ್ಪೃಶ್ಯತೆ ವಿರೋಧಿ ಆಂದೋಲನ ನಡೆಯಲಿ

ಮಂಗಳವಾರ, ಮಾರ್ಚ್ 19, 2019
28 °C
ದಲಿತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮೂರು ನಿರ್ಣಯಗಳ ಅಂಗೀಕಾರ

ಜಾತಿ, ಅಸ್ಪೃಶ್ಯತೆ ವಿರೋಧಿ ಆಂದೋಲನ ನಡೆಯಲಿ

Published:
Updated:
ಜಾತಿ, ಅಸ್ಪೃಶ್ಯತೆ ವಿರೋಧಿ ಆಂದೋಲನ ನಡೆಯಲಿ

ದಾವಣಗೆರೆ: ‘ಸರ್ಕಾರವು ನೂರಾರು ಕೋಟಿ ಹಣ ವ್ಯಯ ಮಾಡಿ, ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತಂದಿತು. ಆದರೆ, ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದ ಮೇಲೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಇಂದಿಗೂ ಜ್ಯೋತಿಷ್ಯವನ್ನು ನಂಬುವವರ ಸಂಖ್ಯೆ ಹೆಚ್ಚುತ್ತಲೇ ಇದೆ’ ಎಂದು ಹಿರಿಯ ಲೇಖಕಿ ಡಾ.ಬಿ.ಟಿ.ಲಲಿತಾ ನಾಯಕ್‌ ವಿಷಾದಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಇಲ್ಲಿನ ಕುವೆಂಪು ಕನ್ನಡಭವನದಲ್ಲಿ ಎರಡು ದಿನ ಆಯೋಜಿಸಿದ್ದ ದಲಿತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.

ವಿದ್ಯುನ್ಮಾನ ಮಾಧ್ಯಮಗಳು ಪರೋಕ್ಷವಾಗಿ ಜ್ಯೋತಿಷ್ಯ, ವಾಸ್ತುಶಾಸ್ತ್ರವನ್ನು ಪೋಷಿಸುತ್ತಿವೆ. ಇವುಗಳ ಗುಂಗಿನಿಂದ ಜನರು ಹೊರಬರಬೇಕಿದೆ ಎಂದು ಹೇಳಿದರು.

ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತಾಪವಾದ ‘ವಚನಗಳಲ್ಲಿ ದಲಿತ ಅಭಿವ್ಯಕ್ತಿ’, ‘ಸಂವಿಧಾನ ಮತ್ತು ಸಮಾಕಾಲೀನ ಸಂದರ್ಭ’, ‘ದಲಿತ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ’ ಒಳಗೊಂಡಂತೆ ಎಲ್ಲಾ ಗೋಷ್ಠಿ ಹಾಗೂ ಕವಿಗೋಷ್ಠಿಗಳು ಅದ್ಭುತವಾಗಿ ಮೂಡಿಬಂದಿವೆ ಎಂದರು.

ಈ ಹಿಂದೆ ದಲಿತ ಸಂಘಟನೆಗಳಿಗೆ ಶಕ್ತಿ ಹಾಗೂ ಬದ್ಧತೆ ಇತ್ತು. ಆದರೆ, ಇಂದು ಶಕ್ತಿಹೀನವಾಗಿ ಹತ್ತಾರು ಸಂಘಟನೆಗಳ ಮೂಲಕ ಒಡೆದುಹೋಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಹಾರ ಪದ್ಧತಿಯು ಅವರವರ ಇಚ್ಛೆ. ಅದನ್ನು ಪ್ರಶ್ನಿಸುವ, ವಿರೋಧಿಸುವ ಹಕ್ಕು ಯಾರಿಗೂ ಇಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಸ್ವತಂತ್ರವಾಗಿ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ, ಅದು ಸ್ವೇಚ್ಛಾಚಾರ ಆಗಬಾರದು ಎಂದರು.

ಲಾರ್ಡ್‌ಮೆಕಾಲೆ ಅವರು ಶಿಕ್ಷಣವನ್ನು ಸಾರ್ವತ್ರಿಕಗೊಳಿಸದೆ ಇದ್ದರೆ, ನಾವ್ಯಾರೂ ಬದುಕುತ್ತಿರಲಿಲ್ಲ. ಶಿಕ್ಷಣದಿಂದ ಮಾತ್ರ ಎಲ್ಲರೂ ಉತ್ತಮ ಬದುಕು ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಯುವಪಡೆ ಕಟ್ಟಿ, ಪೋಷಿಸಿ: ಪ್ರತಿ ಕೇರಿಯಲ್ಲಿ ಯುವಪಡೆ ಕಟ್ಟುವ ಮನಸ್ಸುಗಳ ಅಗತ್ಯವಿದೆ. ಇದರಿಂದ ಆ ಕೇರಿಯ ಹತ್ತಾರು ಸಮಸ್ಯೆಗಳನ್ನು ಪ್ರೀತಿಯಿಂದ ಬಗೆಹರಿಸಬಹುದು. ಈ ನಿಟ್ಟಿನಲ್ಲಿ ಯುವಕರು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನದ ಅಧ್ಯಕ್ಷ ಡಾ.ಎಲ್‌.ಹನುಮಂತಯ್ಯ ಮಾತನಾಡಿ, ‘ಲೇಖಕನ ಜಾತಿ, ಧರ್ಮದ ಮೂಲಕ ಆತನ ಕೃತಿಯನ್ನು ನೋಡಬಾರದು. ನಾವು ದಲಿತರು. ಆದರೆ, ನಮ್ಮ ಕೃತಿಗಳು ದಲಿತ ಸಾಹಿತ್ಯವಲ್ಲ. ನಾವು ಕಂಡಂತಹ, ಅನುಭವಿಸಿದ ಕಷ್ಟ, ದೌರ್ಜನ್ಯಗಳನ್ನು ಕೃತಿಗಳ ಮೂಲಕ ಅಭಿವ್ಯಕ್ತಪಡಿಸುತ್ತೇವೆ. ಆ ಸಾಹಿತ್ಯ ಕೃತಿಯು ಎಂದಿಗೂ ಮೀಸಲಾತಿಯನ್ನು ಬಯಸುವುದಿಲ್ಲ. ನಮ್ಮ ಸಾಹಿತ್ಯ ಇತರೆ ಸಾಹಿತ್ಯ ಕೃತಿಗಳಿಗಿಂತ ಭಿನ್ನವಾಗಿರುತ್ತದೆ’ ಎಂದು ಪ್ರತಿಪಾದಿಸಿದರು.

ಭಾವನಾತ್ಮಕವಾಗಿ ದಲಿತ ಸಂಘಟನೆಗಳನ್ನು ಕಟ್ಟಲಾಗಿತ್ತು. ಆದರೆ, ಇಂದಿನ ದಲಿತ ಸಂಘಟನೆಗಳಲ್ಲಿ ಆ ಭಾವನಾತ್ಮಕತೆ ಕಾಣುತ್ತಿಲ್ಲ. ಅವು ಛಿದ್ರವಾಗಿವೆ. ಇವುಗಳನ್ನು ಒಂದು ಗೂಡಿಸುವುದು ಕಷ್ಟವಲ್ಲ. ಎಲ್ಲರಲ್ಲಿ ಈ ಬಗ್ಗೆ ಬದ್ಧತೆ ಬರಬೇಕಿದೆ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಮಲ್ಲಿಕಾರ್ಜುನ ಕಡಕೋಳ, ಸೌಭಾಗ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ಬಾಬು ಬೆಕ್ಕೇರಿ ಅವರೂ ಇದ್ದರು.

**

ನಮ್ಮ ಹೆಬ್ಬೆಟ್ಟನ್ನು ಕತ್ತರಿಸು ವವರ ಸಂಖ್ಯೆ ಹೆಚ್ಚಾಗಿದೆ. ಎಂದಿಗೂ ನಾವು ಹೆಬ್ಬೆಟ್ಟನ್ನು ಕಳೆದುಕೊಳ್ಳಬಾರದು. ಅದುವೇ ನಮ್ಮ ಹೋರಾಟದ ಧ್ವನಿಯಾಗಿದೆ.

– ಬಿ.ಟಿ.ಲಲಿತಾನಾಯಕ್‌, ಹಿರಿಯ ಲೇಖಕಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry