3 ದಿನಗಳ ಒಳಗೆ ಮಾಹಿತಿ ಸಲ್ಲಿಸದಿದ್ದರೆ ಕ್ರಮ

7
ಜಿಲ್ಲಾಡಳಿತಕ್ಕೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಎಚ್ಚರಿಕೆ

3 ದಿನಗಳ ಒಳಗೆ ಮಾಹಿತಿ ಸಲ್ಲಿಸದಿದ್ದರೆ ಕ್ರಮ

Published:
Updated:
3 ದಿನಗಳ ಒಳಗೆ ಮಾಹಿತಿ ಸಲ್ಲಿಸದಿದ್ದರೆ ಕ್ರಮ

ದಾವಣಗೆರೆ: ಜಿಲ್ಲೆಯಲ್ಲಿ ಮಲ ಹೊರುವವರು ಹಾಗೂ ಅವರ ಅವಲಂಬಿತ ಕುಟುಂಬಗಳ ಬಗ್ಗೆ ನಡೆಸಿದ ಸಮೀಕ್ಷೆ ಮಾಹಿತಿಯನ್ನು ಇನ್ನು ಮೂರು ದಿನಗಳ ಒಳಗೆ ಕೇಂದ್ರ ಸರ್ಕಾರದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡದಿದ್ದರೆ ಜಿಲ್ಲಾಡಳಿತದ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ವಿವಿಧ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೆ 136 ಜನರನ್ನು ಗುರುತಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದ ವೆಬ್‌ಸೈಟ್‌ಗೆ ಈ ಮಾಹಿತಿಯನ್ನು ಅಪ್‌ಲೋಡ್ ಮಾಡದ ಕಾರಣ ಅವರಿಗೆ ದೊರಕಬೇಕಾದ ಸೌಲಭ್ಯ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಪ್‌ಲೋಡ್ ಮಾಡಿದ ನಂತರ ಪ್ರತಿಯೊಬ್ಬರಿಗೆ ಮೊದಲನೇ ಹಂತದಲ್ಲಿ ನಾಲ್ಕು ತಿಂಗಳ ಉಪ ಜೀವನ ನಡೆಸಲು ತಲಾ ₹ 90 ಸಾವಿರ ಬಿಡುಗಡೆ ಮಾಡಲಾಗುತ್ತದೆ. ಸ್ವಂತ ಉದ್ಯೋಗ ಕೈಗೊಳ್ಳಲು ₹ 50 ಸಾವಿರದಿಂದ ₹ 1 ಕೋಟಿವರೆಗೆ ಸಹಾಯಧನ. ಮನೆ ನಿರ್ಮಾಣಕ್ಕೆ ಸಹಾಯಧನವನ್ನೂ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 6 ಸಾವಿರ ಸಫಾಯಿ ಕರ್ಮಚಾರಿಗಳಿದ್ದು, 3,500 ಕಾರ್ಮಿಕರನ್ನು ಗುರುತಿಸಲಾಗಿದೆ. 500 ಜನರು ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಪಡೆದಿದ್ದಾರೆ. ಗುರುತಿಸುವಿಕೆ ಮತ್ತು ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಇನ್ನೂ ಆಗಬೇಕಿದೆ ಎಂದರು.

ರಾಜ್ಯದಲ್ಲಿ ಮಲ ಹೊರುವವರ ಸಮೀಕ್ಷೆ ಸರಿಯಾಗಿ ಆಗಿಲ್ಲ. ಪುನರ್‌ ಸಮೀಕ್ಷೆ ನಡೆಸಲು ಪ್ರಾಯೋಗಿಕವಾಗಿ ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರ್ಗಿ, ಹುಬ್ಬಳ್ಳಿ, ಕೋಲಾರ ಹಾಗೂ ಮೈಸೂರು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಫಾಯಿ ಕಾರ್ಮಿಕರಿಗೆ ಕೇಂದ್ರ, ರಾಜ್ಯ ಮತ್ತು ಸ್ಥಳೀಯವಾಗಿರುವ ಯೋಜನೆಗಳ ಕುರಿತು ಅರಿವು ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರ ನಡೆಸಲು ಸೂಚಿಸಲಾಗಿದೆ. ಸರ್ಕಾರಿ ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ ಕೆಲಸ ಮತ್ತು ಅಂಗಡಿ ಹಾಕಲು ಸ್ಥಳ ಮೀಸಲಿಡಲು, ತೋಟಗಾರಿಕೆ ಮತ್ತು ಕೆಎಂಎಫ್ ವತಿಯಿಂದ ತರಕಾರಿ ಅಂಗಡಿ, ಮಳಿಗೆಗಳನ್ನು ಹಾಕಿಕೊಳ್ಳಲು ಹಾಗೂ ಸುಲಭ್‌ ಶೌಚಾಲಯಗಳನ್ನು ನಿರ್ವಹಿಸಲು ಇವರಿಗೆ ಅವಕಾಶ ನೀಡಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದರು.

ಯಾವುದೇ ‘ಮ್ಯಾನುವಲ್ ಸ್ಕ್ಯಾವೆಂಜರ್’ ಮೃತಪಟ್ಟಾಗ ಕನಿಷ್ಠ ₹ 10 ಲಕ್ಷ  ಪರಿಹಾರಧನ ನೀಡಬಹುದಾಗಿದ್ದು, ಅದನ್ನು ಜಿಲ್ಲಾ ಆಡಳಿತ ಮಾಡಬೇಕು. ಮ್ಯಾನುವಲ್ ಸ್ಕ್ಯಾವೆಂಜರ್ಸ್‌ಗಳ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದಂತೆ ಎಂಎಸ್ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವ ಅವಕಾಶವಿದ್ದು ಜಾಮೀನಿಲ್ಲದೆ ಅಧಿಕಾರಿಗಳನ್ನು ಬಂಧಿಸಿರುವ ಪ್ರಕರಣವು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದೆ. ಪಿಎಫ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಎಸಿಬಿಗೆ ವರದಿ ನೀಡಲು ಸಹ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಮಿಕರ ಕಲ್ಯಾಣಕ್ಕೆ ಒತ್ತು: ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಮಾತನಾಡಿದ ಜಗದೀಶ್ ಹಿರೇಮನಿ, ‘ಸ್ಥಳೀಯವಾಗಿ ಪುನರ್ವಸತಿ ಕಲ್ಪಿಸಲು ಮೊದಲ ಆದ್ಯತೆ ನೀಡಬೇಕು. ಸಫಾಯಿ ಕರ್ಮಚಾರಿ, ಮಲಗುಂಡಿ ಕಾರ್ಮಿಕರಿಗೆ ಸಂಬಂಧಿಸಿದ ಎಲ್ಲ ಯೋಜನೆಗಳನ್ನು ಪೂರ್ಣ ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸಫಾಯಿ ಕರ್ಮಚಾರಿ ಮತ್ತು ಮ್ಯಾನುವಲ್ ಸ್ಕ್ಯಾವೆಂಜರ್ಸ್ ಗುರುತಿಸಿ ಪ್ರಮಾಣ ಪತ್ರ ನೀಡಬೇಕು. ನೀಡದೇ ಇರುವ ಅಧಿಕಾರಿಗಳ ವಿರುದ್ಧ ದೂರು ನೀಡಿದಲ್ಲಿ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ’ ಭರವಸೆ ನೀಡಿದರು.

ಸಫಾಯಿ ಕರ್ಮಚಾರಿ ನಿರ್ವಹಣಾ ಸಮಿತಿ ಸದಸ್ಯ ಓಬಳೇಶ್ ಮಾತನಾಡಿ, ‘ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅಲ್ಪ ಸ್ವಲ್ಪ ಪ್ರದೇಶ ಬಿಟ್ಟು ಬೇರೆಲ್ಲೂ ಯುಜಿಡಿ ಸಂಪರ್ಕ ಇಲ್ಲ. ಮಲ ಗುಂಡಿಗಳು ಎಲ್ಲೆಡೆ ಇವೆ. ಇವುಗಳ ಗುರುತಿಸುವ ಕೆಲಸ ಆಗಿಲ್ಲ. ಮಲಗುಂಡಿಗಳನ್ನು ಗುರುತಿಸಿ ನೋಟಿಸ್ ಜಾರಿ ಮಾಡುವುದು ಸ್ಥಳೀಯ ಆಡಳಿತದ ಕರ್ತವ್ಯ’ ಎಂದರು.

ಸಭೆಯಲ್ಲಿ ಪೌರಕಾರ್ಮಿಕರು ಮತ್ತು ಮ್ಯಾನುವಲ್ ಸ್ಕ್ಯಾವೆಂಜರ್ಸ್‌ ಸಂಘಟನೆಯ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್ ಗುಳೇದ್, ಜಿಲ್ಲಾ ಪಂಚಾಯ್ತಿ ಸಿಇಒ ಎಸ್.ಅಶ್ವತಿ, ರಾಜ್ಯ ಸಫಾಯಿ ಕರ್ಮಚಾರಿ ನಿಗಮದ ಸದಸ್ಯ ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕುಮಾರ್ ಹನುಮಂತಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ಪೌರ ಕಾರ್ಮಿಕರು ಉಪಸ್ಥಿತರಿದ್ದರು.

***

ಪರ್ಯಾಯ ವ್ಯವಸ್ಥೆ ಮಾಡಲು ಸೂಚನೆ

700 ಜನರಿಗೆ ಒಬ್ಬ ಪೌರಕಾರ್ಮಿಕ ಇರಬೇಕು. ಆದರೆ, ರಾಜ್ಯದ ಬಹಳಷ್ಟು ಕಡೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರ ನೇಮಕ ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ಗುತ್ತಿಗೆ ಪದ್ಧತಿ ರದ್ದುಪಡಿಸಿದ ಬಳಿಕ ಇಂತಹ ಕಾರ್ಮಿಕರು ನಿರುದ್ಯೋಗಿಗಳಾಗಬಾರದು. ಹೀಗಾಗಿ ಹಾಲಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ಜಗದೀಶ್ ಹಿರೇಮನಿ ಹೇಳಿದರು.

***

‘ತಿಂಗಳ ಅಂತ್ಯದೊಳಗೆ ಸಮೀಕ್ಷೆ ಮುಗಿಸಿ’

ರಾಜ್ಯದಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್‌ಗಳನ್ನು ಗುರುತಿಸದೇ ಇರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒದಗಿಸಿರುವ ಅನೇಕ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಪುನರ್ವಸತಿ ಸಾಧ್ಯವಾಗಿಲ್ಲ. ಕಳೆದ ಆರು ತಿಂಗಳ ಹಿಂದೆಯೇ ಮರು ಸಮೀಕ್ಷೆ ನಡೆಸಿ ಗುರುತಿಸುವ ಕೆಲಸ ಮಾಡಬೇಕೆಂದು ರಾಜ್ಯಕ್ಕೆ ನಿರ್ದೇಶನ ನೀಡಲಾಗಿದ್ದರೂ ಈ ಕೆಲಸ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಲ್ಲಿ ಇದುವರೆಗೆ ಮ್ಯಾನುವಲ್ ಸ್ಕ್ಯಾವೆಂಜರ್ಸ್‌ಗಳನ್ನು ಗುರುತಿಸಲಾಗಿಲ್ಲ. ಜಿಲ್ಲಾಧಿಕಾರಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಇನ್ನೊಂದು ತಿಂಗಳ ಅವಧಿಯಲ್ಲಿ ಅವರನ್ನು ಗುರುತಿಸಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

**

ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಲ ಹೊರುವವರ ಮಾಹಿತಿ ಕೊಡಲು ಹಿಂಜರಿಯುತ್ತಿದ್ದಾರೆ. ಅಧಿಕಾರಿಗಳು ಈ ಮನೋಭಾವದಿಂದ ಹೊರಬರಬೇಕು.

  –ಜಗದೀಶ್ ಹಿರೇಮನಿ, ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry