ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಿಸ್‌ ಕೊಟ್ಟು ನೋಡಿ: ಸಚಿವ ಹೆಗಡೆ ಸವಾಲು

ದೇವಾಲಯ ವಶಕ್ಕೆ ಪಡೆಯಲು ಮುಂದಾದ ಸರ್ಕಾರ: ಆಕ್ರೋಶ
Last Updated 7 ಮಾರ್ಚ್ 2018, 10:06 IST
ಅಕ್ಷರ ಗಾತ್ರ

ಮಂಗಳೂರು: ಸುಳ್ಳಿನ ಸಿದ್ದಣ್ಣ ಬೇಕೋ, ಗಂಡು ಯಡಿಯೂರಪ್ಪ ಬೇಕೋ ಎಂಬುದನ್ನು ನಿರ್ಧಾರ ಮಾಡುವ ಕಾಲ ಬಂದಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.

ನಗರದಲ್ಲಿ ಮಂಗಳವಾರ ಬಿಜೆಪಿ ಜನಸುರಕ್ಷಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯೋಗಿ ಆದಿತ್ಯನಾಥ ಅವರು ಇಲ್ಲಿಗೆ ಬರಲಿದ್ದಾರೆ. ಸಿದ್ದರಾಮಯ್ಯ ಮೇಲಕ್ಕೆ ಹೋಗುತ್ತಾರೆ ಎಂದು ಲೇವಡಿ ಮಾಡಿದರು.

‘ಕಾಂಗ್ರೆಸ್ ಒಂದು ಪಕ್ಷವಲ್ಲ. ಅದೊಂದು ಸಂಸ್ಕೃತಿ. ದೇಶ ವಿಭಜಿಸಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್. ಮಠ- ಮಂದಿರಗಳನ್ನು ವಶಕ್ಕೆ ಪಡೆಯಲು ಮುಂದಾಗಿರುವುದು ಕಾಂಗ್ರೆಸ್. ಸಿದ್ದರಾಮಯ್ಯ ಅವರೇ ನಿಮಗೆ ದಮ್ ಇದ್ದರೆ ದೇವಾಲಯ ವಶಕ್ಕೆ ಪಡೆಯುವ ನೋಟಿಸ್ ಕೊಟ್ಟು ನೋಡಿ’ ಎಂದು ಸವಾಲು ಹಾಕಿದರು.

‘ಭಾಗ್ಯಗಳ ಸರದಾರ ಸಿದ್ದರಾಮಯ್ಯ ರಾಜ್ಯದ ಜನರಿಗೆ ಸಾವಿನ ಭಾಗ್ಯವನ್ನು ನೀಡಿದ್ದಾರೆ. ನಾಲ್ಕೂವರೆ ವರ್ಷದಲ್ಲಿ ಲಕ್ಷಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ನಡೆದಿವೆ. ಇದು ಕಾಂಗ್ರೆಸ್ ಸರ್ಕಾರವೇ ನೀಡಿದ ಮಾಹಿತಿ. 7,784 ಕೊಲೆ, 9,400 ಡಕಾಯಿತಿ, 7,538 ಅತ್ಯಾಚಾರ, 9,180 ದಲಿತರ ಮೇಲಿನ ದೌರ್ಜನ್ಯ, 11,900 ಅಪಹರಣ ಪ್ರಕರಣಗಳು ನಡೆದಿವೆ. ಸಿದ್ದರಾಮಯ್ಯನವರೇ ಕನ್ನಡಿ ಮುಂದೆ ನಿಂತು ನೋಡಿ. ನಿಮ್ಮ ಕಿತ್ತುಹೋದ ಮುಖವನ್ನು ತೋರಿಸುತ್ತೇವೆ’ ಎಂದು ಟೀಕಿಸಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ಉತ್ತರಪ್ರದೇಶದಲ್ಲಿ ಎನ್‌ಕೌಂಟರ್ ಭಯದಿಂದಾಗಿ ನ್ಯಾಯಾಲಯ ಜಾಮೀನು ನೀಡಿದರೂ ಜೈಲಿನಿಂದ ಹೊರಗೆ ಹೋಗಲು ಅಪರಾಧಿಗಳು ಹೆದರುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅಪರಾಧಿಗಳು ಮೆರವಣಿಗೆಯಲ್ಲಿ ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತ್ರಿಪುರಾ ವಿಧಾನಸಭೆ ಚುನಾವಣೆ ಫಲಿತಾಂಶದ ರಾಹುಲ್ ಗಾಂಧಿ ಅವರಿಗೆ ಅಜ್ಜಿಯ ನೆನಪಾಗಿದೆ. ಕರ್ನಾಟಕಕ್ಕೂ ರಾಹುಲ್ ಗಾಂಧಿ ಬರಬೇಕು. ಅವರನ್ನು ಇಟಲಿಗೆ, ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸುತ್ತೇವೆ ಎಂದು ಲೇವಡಿ ಮಾಡಿದರು.

ಸಂಸದ ನಳಿನ್‌ಕುಮಾರ್ ಕಟೀಲ್‌ ಮಾತನಾಡಿ, ಮೂರು ಮಾರಿಗಳನ್ನು ಸಮುದ್ರಕ್ಕೆ ಎಸೆಯಲು ಹಾಗೂ ಕರಾವಳಿಯ ಜನರಿಗೆ ಸುರಕ್ಷತೆಯ ಭಾವವನ್ನು ಮೂಡಿಸಲು ಈ ಯಾತ್ರೆ ಹಮ್ಮಿಕೊಂಡಿರುವುದಾಗಿ ಹೇಳಿದರು.

ಮೊದಲನೇ ಮಾರಿ ಕಾಂಗ್ರೆಸ್‌, ಎರಡನೇ ಮಾರಿ ಸಿದ್ದರಾಮಯ್ಯ, ಮೂರನೇ ಮಾರಿ ಸಚಿವ ರಮಾನಾಥ ರೈ ಅವರನ್ನು ಓಡಿಸಬೇಕಾಗಿದೆ. ಅದಕ್ಕಾಗಿ ಬಿಜೆಪಿ ಕಾರ್ಯಕರ್ತರು ಈಗಾಗಲೇ ಸಿದ್ಧರಾಗಿದ್ದಾರೆ ಎಂದರು.

ರಾಜ್ಯದಲ್ಲಿ ಇರುವುದು ಗೋಹಂತಕರ ಸರ್ಕಾರ. ಇದನ್ನು ಗೋಹಂತಕರೇ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇನ್ನು ಸಚಿವ ಬಿ. ರಮಾನಾಥ ರೈ ಹಾಗೂ ಸಚಿವ ಯು.ಟಿ. ಖಾದರ್‌, ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗೋಹಂತಕ ಸರ್ಕಾರವನ್ನು ಪ್ರತಿಬಿಂಬಿಸುವ ಟ್ಯಾಬ್ಲೋ ಅನ್ನು ವಿನಾಕಾರಣ ವಶಕ್ಕೆ ಪಡೆಯಲಾಯಿತು. ಜನಸುರಕ್ಷಾ ಯಾತ್ರೆಯ ಯಶಸ್ಸು ಸಹಿಸಲಾಗದೇ, ಪಕ್ಷದ ಬ್ಯಾನರ್‌ಗಳನ್ನು ಕಿತ್ತುಹಾಕುವ ಕೆಲಸವನ್ನು ಅಧಿಕಾರಿಗಳ ಮೂಲಕ ಸಚಿವರು ಮಾಡಿದ್ದಾರೆ. ಇದು ಕಾಂಗ್ರೆಸ್‌ನ ಜನವಿರೋಧಿ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.

ಸಚಿವ ಯು.ಟಿ. ಖಾದರ್ ಅವರು ಜನಸುರಕ್ಷಾ ಯಾತ್ರೆಯನ್ನು ದಸರಾ ವೇಷಕ್ಕೆ ಹೋಲಿಸುವ ಮೂಲಕ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದರು.

ಶಾಸಕರಾದ ಸುನೀಲ್‌ಕುಮಾರ್, ಎಸ್‌. ಅಂಗಾರ, ಕ್ಯಾ. ಗಣೇಶ್‌ ಕಾರ್ಣಿಕ್‌, ಕದ್ರಿ ಯೋಗಿ ಮಠದ ನಿರ್ಮಲನಾಥ್‌ಜಿ,  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಭಾರತಿ, ಮಾಜಿ ಶಾಸಕ ಮೋನಪ್ಪ ಭಂಡಾರಿ, ಡಿ.ವೇದವ್ಯಾಸ ಕಾಮತ್‌, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್‌ ಮಠಂದೂರು, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಭಾರತೀಶ ವೇದಿಕೆಯಲ್ಲಿದ್ದರು. ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿದರು.

**

ಕುಟುಂಬಗಳಿಗೆ ಸಾಂತ್ವನ

ಶರತ್‌ ಮಡಿವಾಳ, ದೀಪಕ್‌ ರಾವ್, ಪರೇಶ್‌ ಮೇಸ್ತಾ ಸೇರಿದಂತೆ ಹತ್ಯೆಗೀಡಾದ ಕುಟುಂಬಗಳ ಸದಸ್ಯರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಾಂತ್ವನ ಹೇಳಿದರು.

ಹತ್ಯೆಗೀಡಾದವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದ ಅವರು, ಕುಟುಂಬದವರನ್ನು ಸನ್ಮಾನಿಸಿದರು. ನಂತರ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಯೋಗಿ, ‘ಮಂಗಳೂರಿನ ನನ್ನ ಜನರಿಗೆ ವಂದನೆಗಳು’ ಎಂದು ಹೇಳಿದರು.

ಮಂಗಳೂರು ಮತ್ತು ಗೋರಕ್ಷನಾಥರ ಸಂಬಂಧವನ್ನು ಸ್ಮರಿಸಿದ ಅವರು, ಮಂಜುನಾಥ ಮತ್ತು ಗೋರಕ್ಷನಾಥ ಪರಂಪರೆಯನ್ನು ನಮಿಸುತ್ತೇನೆ. ಮಂಗಳಾ ದೇವಿ, ಕಟೀಲು ದುರ್ಗಾಪರಮೇಶ್ವರಿ ದೇವಿಗೆ ನಮಸ್ಕರಿಸುತ್ತೇನೆ ಎಂದು ಹೇಳಿದರು.

**

ಸಚಿವರಾದ ಯು.ಟಿ. ಖಾದರ್, ರಮಾನಾಥ ರೈ ಅವರಿಗೆ ‘ನಮಗೆ ಅಲ್ಪಸಂಖ್ಯಾತರ ಮತಗಳಷ್ಟೇ ಸಾಕು’ ಎಂದು ಹೇಳುವ ಧೈರ್ಯವಿದೆಯೇ?
–ನಳಿನ್‌ಕುಮಾರ್ ಕಟೀಲ್‌, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT