ಜಲಕ್ಷಾಮ ನೀಗಿಸಿದ ಕೆರೆಗಳು

7
ಆಗ ಕೆರೆ ನಿರ್ಮಾಣ, ಈಗ ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು

ಜಲಕ್ಷಾಮ ನೀಗಿಸಿದ ಕೆರೆಗಳು

Published:
Updated:
ಜಲಕ್ಷಾಮ ನೀಗಿಸಿದ ಕೆರೆಗಳು

ಕನಕಗಿರಿ: ಜಿಲ್ಲೆಯ ಕನಕಗಿರಿ ಐತಿಹಾಸಿಕ, ಚಾರಿತ್ರಿಕ ಹಿನ್ನೆಲೆ ಹೊಂದಿದ ತಾಣ. ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ಉನ್ನತ ಸ್ಥಾನಮಾನ ಪಡೆದುಕೊಂಡ ಇಲ್ಲಿನ ಗುಜ್ಜಲ ವಂಶದ ನಾಯಕರು ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು.

ದೇವಾಲಯ, ಬಾವಿಗಳು, ಪುಷ್ಕರಣಿ,  ಸ್ಮಾರಕಗಳು ನಾಯಕ ವಂಶದ ಆಡಳಿತದಲ್ಲಿ ನಿರ್ಮಾಣ ಗೊಂಡಿವೆ.

ಕನಕಗಿರಿ ಬಯಲು ಪ್ರದೇಶವಾಗಿದ್ದು ಕೆಂಪು, ಕಪ್ಪು ಮಣ್ಣು, ಸವುಳು ಭೂಮಿ ಹೊಂದಿದೆ. ಈ ಭಾಗದಲ್ಲಿ ವರ್ಷಪೂರ್ತಿ ಹರಿಯುವ ನದಿ, ನೀರಾವರಿ ವ್ಯವಸ್ಥೆ ಇಲ್ಲ. ಬಿಸಿಲು, ಸೆಖೆ ಜಾಸ್ತಿ ಇದೆ.

ಕೆರೆ, ಬಾವಿಗಳು ನೀರಿನ ಸಂಪನ್ಮೂಲ ಎಂದು ತಿಳಿದಿದ್ದ ಅರಸರು ಜನ, ಜಾನುವಾರುಗಳಿಗೆ ಅನುಕೂಲವಾಗಲು ಅನೇಕ ಕೆರೆ, ಬಾವಿಗಳನ್ನು ನಿರ್ಮಿಸಿದ್ದಾರೆ. ಕನಕಗಿರಿ ಪಟ್ಟಣದಲ್ಲಿ 701 ಬಾವಿಗಳು ಇವೆ. ಹೀಗಾಗಿ ‘ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು’ ಎಂಬ ನಾಣ್ನುಡಿ ಹೆಚ್ಚು ಪ್ರಚಲಿತದಲ್ಲಿದೆ.

ಹದಿನೈದನೆ ಶತಮಾನದಲ್ಲಿ ಕನಕಗಿರಿಯನ್ನು ಆಳಿದ ನಾಯಕರು ತಮ್ಮ ಅಧಿಕಾರ ವ್ಯಾಪ್ತಿಯ ಕೆ. ಕಾಟಾಪುರ, ಶಿರಿವಾರ, ಹನುಮನಾಳ, ಬಂಕಾಪುರ, ಬಸರಿಹಾಳ, ಗೌರಿಪುರ, ಕನ್ನೇರಮಡಗು, ರಾಂಪುರ, ಗೋಡಿನಾಳ, ಕರಡೋಣ, ಇಂಗಳದಾಳ ಹೀಗೆ ವಿವಿಧ ಗ್ರಾಮಗಳಲ್ಲಿ ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ.

ಕನಕಗಿರಿ ಪಟ್ಟಣ ವ್ಯಾಪ್ತಿಯಲ್ಲಿರುವ ಲಕ್ಷ್ಮೀದೇವಿ ಕೆರೆ, ಚಿನ್ನದೇವಿ ಕೆರೆ, ಓಣಿಮನಿ ಕೆರೆಗಳು ಇಂದಿಗೂ ಇವೆ.

ಕನಕಗಿರಿಯ 5ನೇ ದೊರೆ ಇಮ್ಮಡಿ ಉಡಚನಾಯಕನ ಪತ್ನಿಯಾದ ರಾಣಿ ಚಿನ್ನಾದೇವಿ ಅವರು 1674ರ ಅವಧಿಯಲ್ಲಿ ಕೆರೆಯನ್ನು ಕಟ್ಟಿಸಿದ ಪರಿಣಾಮ ಈ ಕೆರೆಗೆ ರಾಣಿ ಚಿನ್ನಾದೇವಿ ಕೆರೆ ಎಂದು ಕರೆಯಲಾಗುತ್ತಿದೆ.

ಗೌರಿಪುರ, ಬೈಲಕ್ಕುಂಪುರ ಗ್ರಾಮಗಳ ಹಳ್ಳಕೊಳ್ಳಗಳಿಂದ ಹರಿದು ಬರುವನೀರು ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿರುವ ಜಮೀನುಗಳ ಕೃಷಿಗೆ ಅನುಕೂಲವಾಗಿತ್ತು.

ಪಟ್ಟಣದಿಂದ ಎರಡು ಕಿ.ಮೀ ದೂರದಲ್ಲಿರುವ ಲಕ್ಷ್ಮೀದೇವಿ ಕೆರೆ ಅಂದಾಜು 30 ಎಕರೆ ವಿಸ್ತರವಾಗಿದೆ. ಇಮ್ಮಡಿ ಉಡಚನಾಯಕ ರಾಣಿ ಲಕ್ಷ್ಮೀದೇವಿ ಹೆಸರಿನಲ್ಲಿ ನಿರ್ಮಿಸಿದ್ದಾರೆ. ಕೆರೆಯ ವ್ಯಾಪ್ತಿ 98.43 ಹೆಕ್ಟೇರ್‌ ಇದೆ. ಕೆರೆಗೆ ಹೊಂದಿಕೊಂಡಂತೆ 576 ಹೆಕ್ಟೇರ್‌ ಪ್ರದೇಶ ನೀರಾವರಿ ಕ್ಷೇತ್ರವಾಗಿದೆ. ಕೆರೆ ಪರಿಸರದಲ್ಲಿಯೆ ಹಿರೇಹಳ್ಳ ಬಸವೇಶ್ವರ ದೇವಸ್ಥಾನ ನಿರ್ಮಿಸಲಾಗಿದೆ.

ಕರಡೋಣ ಕೆರೆ ಸಹ ಪ್ರಮುಖವಾಗಿದೆ. ಸುತ್ತಲೂ ಬೆಟ್ಟ ಗುಡ್ಡದ ಪ್ರದೇಶ ಇದೆ. ಗುಡ್ಡದ ಇಳಿಜಾರಿನ ಪ್ರದೇಶದಲ್ಲಿ ಕೆರೆ ನಿರ್ಮಿಸಲಾಗಿದೆ. ಈ ಕೆರೆಯು 80 ಎಕರೆ ವಿಸ್ತೀರ್ಣ ಇದೆ. 300 ಎಕರೆಗೂ ಹೆಚ್ಚು ಭೂಮಿಗೆ ನೀರು ಒದಗಿಸುತ್ತದೆ. ರಾಂಪುರ ಕೆರೆಯು 75 ಎಕರೆ ಇದೆ. ಸಮೀಪದ ಲಾಯದುಣಸಿ ಕೆರೆ ಸಹ 60 ಎಕರೆ ವ್ಯಾಪ್ತಿ ಹೊಂದಿದೆ. ಹೀಗೆ ಪ್ರತಿಯೊಂದು ಕೆರೆಗೂ ಇತಿಹಾಸ ಇದೆ.

ಶಿವರಾಜ ತಂಗಡಗಿ ಅವರು ಸಣ್ಣ ನೀರಾವರಿ ಸಚಿವರಾಗಿದ್ದ 2014ರ ಸಮಯದಲ್ಲಿ ಜಾರಿಗೆ ತಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಈ ಭಾಗಕ್ಕೆ ವರದಾನವಾಗಿದೆ.

ದೇವಲಾಪುರ ಸೇರಿದಂತೆ ಒಟ್ಟು 8 ಕೆರೆಗಳಿಗೆ ತುಂಗಭದ್ರಾ ನದಿಯ ನೀರನ್ನು ಪೈಪ್‌ಲೈನ್ ಮೂಲಕ ಭರ್ತಿ ಮಾಡುವ ಯೋಜನೆ ಇದಾಗಿದೆ. ಈ ಯೋಜನೆಗೆ ₹ 141 ಕೋಟಿ ವೆಚ್ಚ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಚೆಗೆ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ.

ದೇವಲಾಪುರ ಕೆರೆ, ರಾಂಪುರ ಕೆರೆ, ಲಕ್ಷ್ಮೀದೇವಿ ಕೆರೆ, ಲಾಯದುಣಸಿ ಕೆರೆ, ಕಾಟಾಪುರ ಕೆರೆ, ಹಾಗೂ ಬಸರಿಹಾಳ ಕೆರೆಗಳು ತುಂಬಿವೆ. ರೈತರ ಭೂಮಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದ್ದು ಜೋಳ, ಸಜ್ಜೆ, ಭತ್ತ ಹಾಗೂ ತರಕಾರಿಯನ್ನು ಬೆಳೆಯುತ್ತಾರೆ.

*

ಒಣಭೂಮಿ ಪ್ರದೇಶದ ರೈತರ ಅನುಕೂಲಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತರಲಾಗಿದ್ದು, ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ.

-ಶಿವರಾಜ ತಂಗಡಗಿ, ಶಾಸಕ, ಕನಕಗಿರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry