ಸಿಬ್ಬಂದಿ ಕೊರತೆ ನಡುವೆಯೂ ವರ್ಗಾವಣೆ!

7
ಕಾರವಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಹಲವು ಹುದ್ದೆಗಳು ಖಾಲಿ: ಇಲಾಖೆ ಧೋರಣೆಗೆ ಸಾರ್ವಜನಿಕರ ಅಸಮಾಧಾನ

ಸಿಬ್ಬಂದಿ ಕೊರತೆ ನಡುವೆಯೂ ವರ್ಗಾವಣೆ!

Published:
Updated:
ಸಿಬ್ಬಂದಿ ಕೊರತೆ ನಡುವೆಯೂ ವರ್ಗಾವಣೆ!

ಕಾರವಾರ: ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ (ಆರ್‌ಟಿಒ) ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಒಬ್ಬ ವಾಹನ ನಿರೀಕ್ಷಕರನ್ನು ಬೆಂಗಳೂರಿನ ಜಯನಗರಕ್ಕೆ ವರ್ಗಾವಣೆ ಮಾಡಿ ಸಾರಿಗೆ ಇಲಾಖೆ ಆದೇಶಿಸಿದೆ. ಆದರೆ, ಚುನಾವಣೆ ಸಮೀಪದಲ್ಲೇ ಇರುವ ಕಾರಣ ವರ್ಗಾವಣೆಯನ್ನು ಮುಂದೂಡುವಂತೆ ಜಿಲ್ಲಾಧಿಕಾರಿ ಸಾರಿಗೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಇಲ್ಲಿನ ಆರ್‌ಟಿಒ ಕಚೇರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ಕಾಯಂ ಆಗಿ ನೇಮಕ ಮಾಡಿಲ್ಲ. ಗದಗದ ಅಧಿಕಾರಿಯೇ ಇಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ವಾಹನ ನಿರೀಕ್ಷಕರ ಹುದ್ದೆಗೂ ಬೇರೆಡೆಯಿಂದ ನಿಯೋಜನೆ ಮಾಡಲಾಗಿದೆ. ಮೂವರು ವಾಹನ ನಿರೀಕ್ಷಕರ ಪೈಕಿ ಇಬ್ಬರನ್ನು ಈಗಾಗಲೇ ಬೇರೆಡೆಗೆ ನಿಯೋಜನೆ ಮೇಲೆ ಕಳುಹಿಸಲಾಗಿದೆ. ಇರುವ ಒಬ್ಬರನ್ನೂ ವರ್ಗಾವಣೆಗೆ ಮುಂದಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ವಿರುದ್ಧ ಈಗಾಗಲೇ ಕೆಲವು ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

‘ದೇಶದಲ್ಲಿ ಅತಿಹೆಚ್ಚು ವಾಹನಗಳ ಸಂಚಾರ ಇರುವ ರಸ್ತೆಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಹೆದ್ದಾರಿ 66 ಕಾರವಾರ ಆರ್‌ಟಿಒ ವ್ಯಾಪ್ತಿಯಲ್ಲೂ ಸಾಗುತ್ತದೆ. ಈ ಭಾಗದ ರಸ್ತೆಯಲ್ಲಿ ತಿರುವು ಹೆಚ್ಚಿದ್ದು, ಪದೇಪದೇ ಅಪಘಾತಗಳಾಗುತ್ತಿರುತ್ತವೆ. ಇದರ ಪರಿಮಿತಿಯಲ್ಲಿ ಎಲ್ಲೇ ಅಪಘಾತವಾದರೂ ಇಲ್ಲಿನ ಅಧಿಕಾರಿಗಳು ಅಲ್ಲಿಗೆ ದೌಡಾಯಿಸಲೇಬೇಕಾಗುತ್ತದೆ. ಇದರಿಂದ ಕಚೇರಿ ಕೆಲಸಗಳಿಗೆ ಅಡಚಣೆಯಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಸಾರಿಗೆ ಇಲಾಖೆಯು ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವ ಬದಲು ವರ್ಗಾವಣೆ, ಬೇರೆಡೆಗೆ ನಿಯೋಜನೆಯಂತಹ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ’ ಎನ್ನುತ್ತಾರೆ ಹಬ್ಬುವಾಡದ ನಾಗರಾಜ.

ಹಲವು ಹುದ್ದೆಗಳು ಖಾಲಿ: ಒಟ್ಟು 26 ವಿವಿಧ ಹುದ್ದೆಗಳ ಪೈಕಿ 11 ಹುದ್ದೆಗಳು ಖಾಲಿಯಿವೆ. ಕೆಲಸ ನಿರ್ವಹಿಸುತ್ತಿರುವ 15 ಸಿಬ್ಬಂದಿಯಲ್ಲಿ ಐವರನ್ನು ಬೇರೆ ಬೇರೆ ಜಿಲ್ಲೆಗಳಿಗೆ ನಿಯೋಜನೆ ಮಾಡಲಾಗಿದೆ. ಹೀಗಾಗಿ ಅವರ ಕೆಲಸದ ಭಾರವೂ ಉಳಿದ ಸಿಬ್ಬಂದಿಯ ಮೇಲೆ ವರ್ಗಾವಣೆಯಾಗಿದೆ.

ವಾಹನ ನೋಂದಣಿ ಹೆಚ್ಚಳ: ಬೆಳೆಯುತ್ತಿರುವ ಕಾರವಾರದಲ್ಲಿ ವಾಹನಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. 2017ರ ಫೆಬ್ರುವರಿಯಲ್ಲಿ ವಿವಿಧ ಮಾದರಿಯ 425 ವಾಹನಗಳು ನೋಂದಣಿಯಾಗಿದ್ದವು. ಈ ವರ್ಷದ ಫೆಬ್ರುವರಿ ಅಂತ್ಯಕ್ಕೆ 522 ವಾಹನಗಳನ್ನು ನೋಂದಣಿ ಮಾಡಲಾಗಿದೆ.

ವಾಹನ ಚಾಲನೆ ಕಲಿಕಾ ಪರವಾನಗಿ ಪಡೆಯಲು ದಿನವೂ 15ರಿಂದ 20, ಚಾಲನಾ ಪರವಾನಗಿ ಪಡೆಯಲು 10ರಿಂದ 15 ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಈ ನಡುವೆ, ದಾಖಲೆಗಳಲ್ಲಿ ತಿದ್ದುಪಡಿ, ವಿಳಾಸ ಬದಲಾವಣೆ, ಪರ್ಮಿಟ್ ನವೀಕರಣ ಮುಂತಾದ ಕಾರ್ಯಗಳಿಗೆ ಸಲ್ಲಿಕೆಯಾಗುವ ಅರ್ಜಿಗಳನ್ನೂ ನಿಭಾಯಿಸಬೇಕಾಗಿದೆ. ಇದರಿಂದ ಒತ್ತಡ ಹೆಚ್ಚುತ್ತಿದ್ದು ಸಮರ್ಪಕವಾಗಿ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಮತ್ತೊಬ್ಬರು ಸಿಬ್ಬಂದಿ.

**

ಯಾವ ಹುದ್ದೆಗಳು ಖಾಲಿ?

ಪ್ರಥಮ ದರ್ಜೆ ಸಹಾಯಕರ ಮೂರು ಹುದ್ದೆಗಳು ಮಂಜೂರಾಗಿದ್ದು, ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರು ಮಂದಿ ದ್ವಿತೀಯ ದರ್ಜೆ ಸಹಾಯಕರ ಪೈಕಿ ಒಬ್ಬರ ನೇಮಕವಾಗಿಲ್ಲ, ಮತ್ತೊಬ್ಬರನ್ನು ಬೇರೆಡೆಗೆ ನಿಯೋಜನೆ ಮಾಡಲಾಗಿದೆ.

ಇಬ್ಬರು ಟೈಪಿಸ್ಟ್‌ಗಳಲ್ಲಿ ಒಬ್ಬರ ನೇಮಕವಾಗಿಲ್ಲ. ಇಬ್ಬರು ಚಾಲಕರಲ್ಲಿ ಒಬ್ಬರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕೇಂದ್ರಕ್ಕೆ ಇಬ್ಬರು ಅಟೆಂಡರ್‌ಗಳ ಹುದ್ದೆ ಮಂಜೂರಾಗಿದ್ದು, ಎರಡೂ ಖಾಲಿಯಿವೆ. ಅದೇರೀತಿ, ಗ್ರೂಪ್ ಡಿ ನೌಕರರ ನಾಲ್ಕು ಸ್ಥಾನಗಳ ಪೈಕಿ ಎರಡು ಭರ್ತಿಯಾಗಬೇಕಿದ್ದು, ಒಬ್ಬರನ್ನು ಬೇರೆಡೆಗೆ ನಿಯೋಜನೆ ಮಾಡಲಾಗಿದೆ.

**

ಈ ಹಿಂದೆ ಯಾವುದೇ ದಾಖಲೆಗಳು ಬೇಕಿದ್ದರೂ ಒಂದೇ ದಿನದಲ್ಲಿ ಸಿಗುತ್ತಿತ್ತು. ಆದರೆ, ಈಗ ಒಂದು ತಾಸಿನ ಕೆಲಸಕ್ಕೂ ಒಂದು ವಾರ ಕಾಯುವಂತಾಗಿದೆ. ಜಿಲ್ಲಾ ಕೇಂದ್ರಕ್ಕೆ ಆರ್‌ಟಿಒ ಕಾಯಂ ಆಗಿ ನೇಮಕವಾಗಬೇಕು.

–ರಾಘು ನಾಯ್ಕ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry