‘ಅವರೇನು ನಮ್ಮನೆ ಬಿಟ್ಟಿ ಕೆಲಸಕ್ಕೆ ಬರ್ತಾರಾ?’

ಸೋಮವಾರ, ಮಾರ್ಚ್ 25, 2019
26 °C
ವಿಚಾರಣೆಗೆ ಬಾರದ ಅಧಿಕಾರಿಗಳ ವಿರುದ್ಧ ಮಾಹಿತಿ ಆಯುಕ್ತ ಕಿಡಿ

‘ಅವರೇನು ನಮ್ಮನೆ ಬಿಟ್ಟಿ ಕೆಲಸಕ್ಕೆ ಬರ್ತಾರಾ?’

Published:
Updated:
‘ಅವರೇನು ನಮ್ಮನೆ ಬಿಟ್ಟಿ ಕೆಲಸಕ್ಕೆ ಬರ್ತಾರಾ?’

ಕಲಬುರ್ಗಿ: ಕರ್ನಾಟಕ ಮಾಹಿತಿ ಆಯೋಗದ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ ಅವರು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಹಿತಿ ಹಕ್ಕು ಅರ್ಜಿಗಳ ಮೇಲ್ಮನವಿ ಪ್ರಕರಣಗಳ ವಿಚಾರಣೆಯನ್ನು ಮಂಗಳವಾರ ಆರಂಭಿಸಿದರು.

ಮಾಹಿತಿ ನೀಡಬೇಕಿದ್ದ ಬಹುತೇಕ ಅಧಿಕಾರಿಗಳು ಗೈರು ಉಳಿದಿದ್ದರಿಂದ ಕೆರಳಿದ ಅವರು, ‘ಅವರೇನು ನಮ್ಮನೆ ಕೆಲಸಕ್ಕೆ ಬರ್ತಾರಾ? ಸರ್ಕಾರಿ ಸಂಬಳ ತಿಂತಾರೆ. ಯಾರೇನು ಬಿಟ್ಟಿ ಬರಲ್ಲ’ ಎಂದು ಹರಿಹಾಯ್ದರು.

‘ಈ ಅಧಿಕಾರಿಗಳು ಸಾಮಾನ್ಯ ಜನರ ಸೇವಕರು ಎನ್ನುವುದನ್ನು ಮರೆತು ಬಿಡುತ್ತಾರೆ. ಸೀಟ್‌ನಲ್ಲಿ ಕುಳಿತರೆ ಇವರು ದೇವಲೋಕದ ಇಂದ್ರರು ಎಂದು ಭಾವಿಸುತ್ತಾರೆ’ ಎಂದರು.

ಚಿಂಚೋಳಿಯ ಅಧಿಕಾರಿಯೊಬ್ಬರು ಅರ್ಜಿದಾರರಿಗೆ ಮಾಹಿತಿ ನೀಡಿದ್ದಾಗಿ ಹೇಳಿದಾಗ, ‘ನೀನು ಈ ಮಾಹಿತಿ ನೀಡಲು ಸಾಧ್ಯವೇ ಇಲ್ಲ? ನೀನು ದುಡ್ಡುಕೊಟ್ಟು ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಬೇಕು. ಮಾಹಿತಿ ಕೊಟ್ಟಿದ್ದು ತೋರಿಸಿದರೆ ನಿನಗೆ ₹5 ಸಾವಿರ ಬಹುಮಾನ ಕೊಡ್ತೀನಿ. ಇಲ್ಲಾ ಅಂದ್ರೆ ನಿನ್ನ ಅಮಾನತಿಗೆ ಇಲಾಖೆಗೆ ಬರೀತಿನಿ’ ಎಂದರು.

ಆಗ ಅಧಿಕಾರಿ ತಡಬಡಾಯಿಸಿದರು. ‘ನಾನು ವಿದ್ಯಾರ್ಥಿಯಾಗಿದ್ದಾಗ ನಿಮ್ಮಂತಹ ಛತ್ರಿಗಳೊಂದಿಗೆ ಇದ್ದೆ. 40 ವರ್ಷ ನೌಕರಿ ಮಾಡುವಾಗ ಮತ್ತು ಈಗಲೂ ಛತ್ರಿಗಳೊಂದಿಗೆ ಇದ್ದೇನೆ’ ಎಂದು ಆಯುಕ್ತರು ಹೇಳಿದಾಗ ನಗೆಯ ಅಲೆ ಎದ್ದಿತು.

‘ನೀವೇನು ಕಾಡು ಜನಾನಾ? ಮನುಷ್ಯರಾ? ಮರ್ಯಾದೆ ಇರೋರು ಹೀಗೆ ಮಾತನಾಡಲ್ಲ’ ಎಂದು ಸಭೆಯಲ್ಲಿ ಪರಸ್ಪರ ಮಾತನಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು.

‘ಅನುದಾನ ರಹಿತ ಶಾಲೆಗಳ ಬಗೆಗಿನ ಮಾಹಿತಿ ನೀಡಲು ಬರುವುದಿಲ್ಲ’ ಎಂದು ಅರ್ಜಿದಾರರೊಬ್ಬರಿಗೆ ಸ್ಪಷ್ಟಪಡಿಸಿದರು.

‘ಶಾದಿ ಮಹಲ್‌ ನಿರ್ಮಾಣವಾಗಿದ್ದು, ಅದರ ಉದ್ಘಾಟನೆಗೆ ಜಿಲ್ಲಾಧಿಕಾರಿಯಿಂದ ಸಮಯ ಕೊಡಿಸಿ’ ಎಂಬ ಬಂದಾನವಾಜ್‌ ಎಂಬವರ ಬೇಡಿಕೆಯನ್ನು ತಳ್ಳಿ ಹಾಕಿ, ‘ಇದು ನಮ್ಮ ವ್ಯಾಪ್ತಿಗೆ ಬರಲ್ಲ. ಬೇಕಿದ್ದರೆ ನೀವೇ ಅವರನ್ನು ಸಂಪರ್ಕಿಸಿ’ ಎಂದರು.

‘ಪ್ರಕರಣಗಳ ವಿಚಾರಣೆಯನ್ನು ಬೆಂಗಳೂರಿನಲ್ಲಿ ಮಾಡಿದರೆ ದೂರುದಾರರು ಮತ್ತು ಅಧಿಕಾರಿಗಳು ಅಲ್ಲಿಗೆ ಬರಬೇಕಾಗುತ್ತದೆ. ಅವರ ಹಣ ಮತ್ತು ಸಮಯ ಉಳಿಸಲು ಇಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಗೈರು ಹಾಜರಾದ ಅಧಿಕಾರಿಗಳು ಬುಧವಾರದ ವಿಚಾರಣೆಗೆ ಹಾಜರಾಗಬೇಕು’ ಎಂದು ಸೂಚಿಸಿದರು.

‘ದೂರುದಾರರನ್ನು ಅಲೆಸುವುದು ಬೇಡ. ಲಭ್ಯವಿರುವ ಮಾಹಿತಿಯನ್ನು ಅವಧಿಯೊಳಗೆ ಕೊಡಬೇಕು. ಮಾಹಿತಿ ಹಕ್ಕು ಕಾಯ್ದೆ 4(1)(ಎ) ಮತ್ತು 4(1)(ಬಿ) ಪ್ರಕಾರ ಕಚೇರಿಯಲ್ಲಿರುವ ಕಡತಗಳು ಮತ್ತು 17 ಅಂಶಗಳ ಮಾಹಿತಿಯನ್ನು ಕಡ್ಡಾಯವಾಗಿ ಸಾರ್ವಜನಿಕರಿಗೆ ಪ್ರದರ್ಶಿಸಬೇಕು’ ಎಂದು ಅವರು ಹೇಳಿದರು.

ಶಿಷ್ಟಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry