ಹೆಣ್ಣು: ಬಲವೂ ಹೌದು, ಬುದ್ಧಿಯೂ ಹೌದು

ಮಂಗಳವಾರ, ಮಾರ್ಚ್ 19, 2019
28 °C

ಹೆಣ್ಣು: ಬಲವೂ ಹೌದು, ಬುದ್ಧಿಯೂ ಹೌದು

Published:
Updated:
ಹೆಣ್ಣು: ಬಲವೂ ಹೌದು, ಬುದ್ಧಿಯೂ ಹೌದು

ಸೃಷ್ಟಿಯ ಕಥೆ ಎಂದರೆ ಅದು ಹೆಣ್ಣಿನ ಕಥೆಯೇ ಹೌದು. ಎಲ್ಲ ಸಂಸ್ಕೃತಿಗಳ, ನಾಗರಿಕತೆಗಳ ಕಥೆಯನ್ನೂ ಕೂಡ ಹೆಣ್ಣಿನ ಕಥೆಯೇ ಹೌದು ಎನ್ನಲಾದೀತು. ಹೀಗಾಗಿ ಪ್ರಾಚೀನ ಭಾರತೀಯ ಸಂಸ್ಕೃತಿಯನ್ನೂ ಕೂಡ ನಾವು ಸ್ತ್ರೀಪರವಾದ ದೃಷ್ಟಿಯಿಂದಲೂ ನೋಡಬಹುದು. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ನೀಡಿರುವ ಸ್ಥಾನ ವಿಶೇಷವಾಗಿದೆ. ಇಡಿಯ ಸೃಷ್ಟಿಯನ್ನೇ ‘ಸ್ತ್ರೀ’ಯಂತೆ ಕಂಡಿರುವುದು ಮನೋಜ್ಞವಾದ ಚಿಂತನೆಯಾಗಿದೆ. ಈ ಚೀಂತನೆಯ ಸಾರವನ್ನು ನಾವು ‘ಸೌಂದರ್ಯಲಹರಿ’ಯ ಆರಂಭದ ಶ್ಲೋಕದಲ್ಲಿ ಕಾಣಬಹುದು:

ಶಿವಃ ಶಕ್ಯ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭುವಿತುಂ

ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ |

ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚಾದಿಭಿರಪಿ

ಪ್ರಣಂತುಂ ಸ್ತೋತುಂ ವಾ ಕಥಮಕೃತಪುಣ್ಯಃ ಪ್ರಭವತಿ ||

ಇದರ ತಾತ್ಪರ್ಯ: ‘ಶಕ್ತಿಯ ಜೊತೆಯಿದ್ದರೆ ಮಾತ್ರವೇ ಶಿವನಾದರೂ ಜಗತ್ತು ಸೃಷ್ಟಿಸಬಲ್ಲ. ಅವಳ ಸಂಗಡ ಇರದಿದ್ದರೆ ಅವನಿಗೆ ಅಲುಗಾಡಲೂ ಸಾಧ್ಯವಿಲ್ಲ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಕೂಡ ಅವಳನ್ನು ಆರಾಧಿಸುತ್ತಾರೆ. ಹೀಗಿರುವಾಗ ಇನ್ನು ಸಾಮಾನ್ಯರ ಪಾಡೇನು? ಅವಳನ್ನು ನಮಸ್ಕರಿಸುವುದಕ್ಕೂ ಪೂಜಿಸುವುದಕ್ಕೂ ಜನ್ಮಾಂತರದ ಪುಣ್ಯ ಬೇಕು. ಅಂಥ ಪುಣ್ಯವೇ ಇಲ್ಲದಿದ್ದರೆ ಅವಳನ್ನು ಪೂಜಿಸುವುದಕ್ಕಾಗಲೀ ಸ್ತುತಿಸುವುದಕ್ಕಾಗಲೀ ಬುದ್ಧಿಯೇ ಬರಲಾರದು.’

ಇಲ್ಲಿ ನಾವು ಗಮನಿಸಬೇಕಾದದ್ದು ‘ಶಕ್ತಿ’ಯ ಶಕ್ತಿ! ಶಕ್ತಿಯ ಜೊತೆ ಇಲ್ಲದಿದ್ದರೆ ತ್ರಿಮೂರ್ತಿಗಳ ಆಟ ಕೂಡ ಏನೂ ನಡೆಯುವುದಿಲ್ಲ!!

ಸ್ತ್ರೀ ಎಂದರೆ ಶಕ್ತಿ, ಶಕ್ತಿ ಎಂದರೆ ಸ್ತ್ರೀ – ಎಂಬ ಸಮೀಕರಣವೇ ಭಾರತೀಯ ಸಂಸ್ಕೃತಿಯ ಉದ್ದಕ್ಕೂ ಕಾಣುತ್ತೇವೆ. ವೇದಕಾಲದಿಂದಲೂ ಇಂಥ ಚಿಂತನೆ ಪ್ರವಹಿಸುತ್ತ ಬಂದಿರುವುದನ್ನು ನೋಡಬಹುದು. ಹೀಗಿದ್ದರೂ ನಮ್ಮ ಸಂಸ್ಕೃತಿಯಲ್ಲಿ ಇಂದು ಹೆಣ್ಣಿನ ಸ್ಥಾನಮಾನಗಳು ಹೇಗಿವೆ? ಈ ಪ್ರಶ್ನೆಯನ್ನೂ ನಾವು ಎದುರಿಸಬೇಕಿದೆ.

ವೇದಕಾಲದಲ್ಲಿ ಸಮಾಜದಲ್ಲಿ ಗೌರವಸ್ಥಾನವನ್ನು ಸಂಪಾದಿಸಿದ್ದವರು ಋಷಿಗಳು ಎನ್ನುವುದನ್ನು ಊಹಿಸಬಹುದು. ಅಂಥ ಋಷಿಗಳಲ್ಲಿ ಪುರುಷರಷ್ಟೇ ಇರಲಿಲ್ಲ, ಸ್ತ್ರೀಯರೂ ಇದ್ದರು. ಮಾತ್ರವಲ್ಲ, ವೇದಕಾಲದಲ್ಲಿ ಎಣಿಕೆಯಲ್ಲಿದ್ದ ದೇವತೆಗಳಲ್ಲಿ ಕೆಲವರನ್ನು ಸ್ತ್ರೀಸ್ವರೂಪದಲ್ಲೂ ಆರಾಧಿಸಲಾಗಿದೆ. ನಮ್ಮ ಜೀವನಕ್ಕೆ ಅತ್ಯಂತ ಪ್ರಮುಖವಾಗಿರುವ ಎರಡು ಸಂಗತಿಗಳು ಎಂದರೆ, ಒಂದು – ನೀರು; ಮತ್ತೊಂದು ಮಾತು. ಈ ಎರಡನ್ನೂ ಪ್ರತಿನಿಧಿಸುವ ದೇವತೆಯನ್ನು ಸ್ತ್ರೀರೂಪಲ್ಲಿಯೇ ಕಾಣಲಾಗಿದೆ.

ರಾಮಾಯಣ–ಮಹಾಭಾರತಗಳು ಭಾರತೀಯ ಸಂಸ್ಕೃತಿಯ ಎರಡು ಕೋಶಗಳು. ಪ್ರಾಚೀನ ಭಾರತೀಯ ಮಾನಸಿಕತೆಯ ಹಲವು ಆಯಾಮಗಳನ್ನು ಈ ಎರಡು ಮಹಾಕಾವ್ಯಗಳಲ್ಲಿ ಕಾಣಬಹುದಷ್ಟೆ. ಈ ಎರಡು ಕೃತಿಗಳ ಪ್ರಧಾನ ವಸ್ತುವೇ ಹೆಣ್ಣು. ರಾಮಾಯಣದ ನಾಯಕಿಯಾದ ಸೀತೆ ನಮ್ಮ ಸಂಸ್ಕೃತಿಗೆ ಆದರ್ಶವಾಗಿದ್ದಾಳೆ. ಅಂತೆಯೇ ಕೌಸಲ್ಯೆ, ಕೈಕೇಯಿ, ಮಂಡೋದರಿ, ಶೂರ್ಪಣಖೆ – ಇಂಥ ಹಲವು ಪಾತ್ರಗಳು ಹೆಣ್ತತನದ ಹಲವು ವಿವರಗಳನ್ನು ನಮಗೆ ತಿಳಿಸಿಕೊಡುತ್ತವೆ.

ಇನ್ನು ಮಹಾಭಾರತದಲ್ಲಂತೂ ಸ್ತ್ರೀಪಾತ್ರಗಳದ್ದೇ ಮೇಲುಗೈ ಎನ್ನಬಹುದು. ದ್ರೌಪದಿಯನ್ನು ನಾಯಕಿ ಎಂದು ಕರೆಯಬಹುದಾದರೂ ಹತ್ತಾರು ಪಾತ್ರಗಳು ಕೂಡ ಸ್ಥಾನಕ್ಕೆ ಪೈಪೋಟಿಯನ್ನು ನೀಡುವುದಂತೂ ಹೌದು. ಸತ್ಯವತೀ, ಕುಂತಿ, ಗಾಂಧಾರಿ, ಹಿಡಿಂಬೆ – ಹೀಗೆ ಹಲವು ಸ್ತ್ರೀಪಾತ್ರಗಳನ್ನು ಇಲ್ಲಿ ಹೆಸರಿಸಬಹುದು. ಇಷ್ಟು ಮಾತ್ರವಲ್ಲದೆ, ಮಹಾಭಾರತದ ಉಪಕಥೆಗಳಲ್ಲಿ ಬರುವ ಸ್ತ್ರೀಪಾತ್ರಗಳನ್ನು ಕೂಡ ಇಲ್ಲಿ ಮರೆಯುವಂತಿಲ್ಲ. ದಮಯಂತಿ, ಶಕುಂತಲೆಯರಂಥ ವ್ಯಕ್ತಿತ್ವಗಳನ್ನು ನಾವು ನೋಡುವುದು ಈ ಉಪಕಥೆಗಳಲ್ಲಿಯೇ.

ಪ್ರಾಚೀನ ಭಾರತದಲ್ಲಿ ಹೆಣ್ಣು ಎಲ್ಲ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯಳಾಗಿದ್ದಳು, ಸಬಲಳಾಗಿದ್ದಳು ಎನ್ನುವುದು ಆ ಕಾಲದ ವಾಙ್ಮಯದಿಂದ ಗೊತ್ತಾಗುತ್ತದೆ. ಆದರೆ ಕಾಲಕ್ರಮದಲ್ಲಿ ಹೆಣ್ಣಿನ ಬಗ್ಗೆ ಹಲವು ಅಪವ್ಯಾಖ್ಯೆಗಳೂ ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡದ್ದೂ ಸುಳ್ಳಲ್ಲ. ಇಂಥದೊಂದು ಪಲ್ಲಟಕ್ಕೆ ಕಾರಣಗಳು ಏನು ಎಂಬುದನ್ನು ನಾವು ಆಲೋಚಿಸಬೇಕಿದೆ.

ಶಕ್ತಿ ಇಲ್ಲದಿದ್ದರೆ ಸೃಷ್ಟಿಯೂ ಸಾಧ್ಯವಿಲ್ಲ ಎಂಬ ಮಾತು ಕೇವಲ ಸ್ತೋತ್ರಕ್ಕಷ್ಟೇ ಸೀಮಿತವಾಗಬಾರದು. ಕುಟುಂಬದ ಅಡಿಪಾಯವೂ ಸಮಾಜದ ಅಸ್ತಿತ್ವವೂ ಸ್ತ್ರೀತನದ ಮೌಲ್ಯದ ಮೇಲೆ ನಿಂತಿದೆ. ಆದುದರಿಂದ ನಮ್ಮ ಪ್ರಾಚೀನ ಸಂಸ್ಕೃತಿಯ ಸ್ಮರಣೆಯು ನಾವು ಕಳೆದುಕೊಂಡಿರುವ ಮೌಲ್ಯಗಳನ್ನು ಮತ್ತೆ ಪಡೆದುಕೊಳ್ಳಲು ನೆರವಾಗಬೇಕು. ಅಂಥದೊಂದು ತಿಳಿವಳಿಕೆಯೇ ಸಂಸ್ಕೃತಿಯ ನಿತ್ಯತ್ವವನ್ನು ಕಾಪಾಡಬಲ್ಲ ಬಲ. ಬಲವನ್ನೂ ಬುದ್ಧಿಯನ್ನೂ ಹೆಣ್ಣಿನ ರೂಪದಲ್ಲಿಯೇ ನಮ್ಮ ಪೂರ್ವಜರು ಕಂಡಿದ್ದಾರೆ ಎನ್ನುವುದನ್ನು ಮರೆಯದಿರೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry