ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ಅವಳೆಂಬ ಮಾಯಾಜಿಂಕೆ

Last Updated 7 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನಾನು ಫೇಸ್‌ಬುಕ್‌ ಖಾತೆ ಆರಂಭ ಮಾಡಿದ ಸಮಯವದು. ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವುದು, ವಾಲ್‌ನಲ್ಲಿ ಫೋಟೊ ಅಪ್ ಲೋಡ್ ಮಾಡುವುದು ಬಿಟ್ಟರೆ ಬೇರೇನೂ ಮಾಡುತ್ತಿರಲಿಲ್ಲ. ಆಮೇಲೆ ನಾನು ಸ್ಟೇಟಸ್‌ಗಳನ್ನು ಬರೆಯತೊಡಗಿದಾಗ ಸ್ನೇಹಿತರ ಸಂಖ್ಯೆಯೂ ಜಾಸ್ತಿಯಾಗುತ್ತಾ ಬಂತು. ಹೀಗೆ ಒಂದುದಿನ ಫೇಸ್‌ಬುಕ್‌ಗೆ ಲಾಗಿನ್ ಆದಾಗ ಹುಡುಗಿಯೊಬ್ಬಳ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಆಕೆಯ ಪ್ರೊಫೈಲ್ ಕ್ಲಿಕ್ ಮಾಡಿ ನೋಡಿದೆ. ಪ್ರೊಫೈಲ್ ಫೋಟೊ ಬಿಟ್ಟರೆ ನಾಲ್ಕೈದು ಫೋಟೊ ಅಲ್ಲಿತ್ತು. ಅವೂ ಸಿನಿಮಾ ನಟಿಯರ ಫೋಟೊಗಳಾಗಿದ್ದವು. ಕವರ್ ಇಮೇಜ್‌ನಲ್ಲಿ ಪ್ರೀತಿ ಬಗ್ಗೆ ಬರೆದ ಸುಂದರ ಸಾಲು, ಹೃದಯದ ಫೋಟೊ. ಇನ್ನಿತರ ಮಾಹಿತಿಗಳಿಗಾಗಿ ಹುಡುಕಾಟ ಶುರು ಮಾಡಿದೆ. ಆಕೆ ಹುಟ್ಟಿದ್ದು ಜನವರಿ 1ರಂದು. ಆಹಾ ಹೊಸ ವರುಷದಂದೇ ಹುಟ್ಟಿದ ಹುಡುಗಿ ಎಂದು ಮುಗುಳ್ನಕ್ಕೆ. ನೋಡಿದರೆ 10 ಮಂದಿ ಮ್ಯೂಚುವಲ್ ಫ್ರೆಂಡ್ಸ್ ಕೂಡ ಇದ್ದರು. ಈ ಹುಡುಗಿ ಯಾರಪ್ಪಾ ಎಂದು ಯೋಚಿಸುತ್ತಲೇ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದೆ.

ಆಮೇಲೆ ನಾನು ಬರೆಯುವ ಎಲ್ಲ ಸ್ಟೇಟಸ್‌ಗಳಿಗೂ ಅವಳ ಲೈಕು ಇರುತ್ತಿತ್ತು, ಅದೊಂದು ದಿನ ಅದೆಷ್ಟು ಚೆಂದ ಬರೆಯುತ್ತೀರಿ ನೀವು ಎಂಬ ಮೆಸೇಜ್. ಥ್ಯಾಂಕ್ಸ್ ಎಂದು ರಿಪ್ಲೈ ಮಾಡಿ, ಜತೆಗೊಂದು ನಗುವ ಇಮೋಜಿ ಕಳುಹಿಸಿದೆ. ಮರುದಿನ ಮತ್ತೊಂದು ಸ್ಟೇಟಸ್ ಹಾಕಿದಾಗ ಮೊದಲ ಲೈಕ್ ಅವಳದ್ದೇ. ಲೈಕ್ ಬಿದ್ದ ಕೂಡಲೇ ಇನ್‌ಬಾಕ್ಸ್ ತೆರೆದರೆ ಇದು ನಿಮ್ಮ ಅನುಭವಾನಾ ಎಂಬ ಪ್ರಶ್ನೆ ಅವಳದ್ದು. ಅಲ್ಲ, ಸುಮ್ನೆ ಗೀಚಿದೆ ಎಂದು ಉತ್ತರಿಸಿದೆ. ಅವಳು ನಗುವ ಇಮೋಜಿ ಮೂಲಕ ಪ್ರತಿಕ್ರಿಯಿಸಿದಳು.

ನಾನು ಪ್ರೀತಿ, ಪ್ರೇಮದ ಬಗ್ಗೆ ಸಾಲುಗಳನ್ನು ಗೀಚುತ್ತಿದ್ದರೆ, ಅವಳು ಇನ್‌ಬಾಕ್ಸ್‌ನಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿ ಹುರಿದುಂಬಿಸುತ್ತಿದ್ದಳು. ಸ್ಟೇಟಸ್ ಅಪ್ ಡೇಟ್ ಮಾಡಿ ಆಕೆಯ ಲೈಕ್ ಬಾರದೇ ಇದ್ದರೆ ಮನಸ್ಸಿನಲ್ಲಿ ಚಡಪಡಿಕೆ. ಯಾಕೆ ಅವಳು ಲೈಕ್ ಮಾಡಿಲ್ಲ ಎಂಬ ಗೊಂದಲ. ಪ್ರೀತಿಯ ಸಾಲುಗಳಲ್ಲಿ ಕಾಯುವಿಕೆಯ ಪದಗಳು ಸ್ಥಾನಗಿಟ್ಟಿಸಿಕೊಂಡವು.

ಒಂದೆರಡು ದಿನಗಳ ನಂತರ ಆಕೆಯ ಲೈಕ್ ನೋಟಿಫಿಕೇಶನ್ ಕಂಡಕೂಡಲೇ ಮನಸ್ಸಿಗೆ ಸಮಾಧಾನ. ‘ಎಲ್ಲಿ ನಾಪತ್ತೆ?’ ಎಂದು ನಾನೇ ಸಂದೇಶ ಕಳುಹಿಸಿದೆ. ಊರಿಗೆ ಹೋಗಿದ್ದೆ, ಎಫ್.ಬಿ. ನೋಡಿರಲಿಲ್ಲ ಎಂಬ ಉತ್ತರ. ಅಲ್ಲಿಯವರೆಗೆ ನಾನು ಬರೆದ ಎಲ್ಲ ಸ್ಟೇಟಸ್‌ಗಳಿಗೆ ಲೈಕ್ ಒತ್ತಿದ ನೋಟಿಫಿಕೇಶನ್ ಬಂದಾಗ ಮನಸ್ಸಿಗೆ ಸಮಾಧಾನವಾಯಿತು. ಆಕೆ ಇನ್‌ಬಾಕ್ಸ್‌ನಲ್ಲಿ ಹೆಚ್ಚಿಗೇನೂ ಮಾತನಾಡುತ್ತಿರಲಿಲ್ಲ. ನನಗೂ ಸಂಕೋಚ. ಆದರೆ ಆಕೆಯ ಲೈಕ್‌ಗಳ ಮೇಲೆ ಆಸೆ ಹುಟ್ಟಿತ್ತು. ಒಂದು ದಿನ ಆಕೆಯ ಊರು, ಓದಿದ್ದು, ಅದೂ ಇದು ಅಂತ ಸುಮಾರು ಪ್ರಶ್ನೆ ಕೇಳಿಯೇ ಬಿಟ್ಟೆ. ಆಕೆ ನಿರಾತಂಕವಾಗಿ ಉತ್ತರಿಸಿದ್ದಳು. ಪ್ರತಿದಿನ ನನ್ನ ಗುಡ್ ಮಾರ್ನಿಂಗ್‌ನೊಂದಿಗೆ ನಮ್ಮ ಚಾಟ್ ಆರಂಭವಾದರೆ ರಾತ್ರಿ ಗುಡ್‌ನೈಟ್ ಹೇಳಿದ ನಂತರವೂ ನಿದ್ದೆ ಬರುವವರೆಗೆ ಚಾಟ್ ಮುಂದುವರಿಯುತ್ತಿತ್ತು.

ನಾನು ಬರೆಯುತ್ತಿದ್ದ ಸ್ಟೇಟಸ್‌ಗಳಲ್ಲಿ ಪ್ರೀತಿಯ ತೀವ್ರತೆ ಇತ್ತು. ನೇರವಾಗಿ ಹೇಳಲಾಗದೆ ಇರುವ ಪ್ರೀತಿಯ ಚಡಪಡಿಕೆಯೂ. ಅವಳಿಗೆ ಇದೆಲ್ಲವೂ ಅರ್ಥವಾಗಲಿ ಎಂದು ಬಯಸಿದರೆ, ಆ ಕಡೆಯಿಂದ ಆ ರೀತಿಯ ಯಾವುದೇ ಉತ್ತರವೂ ಇರುತ್ತಿರಲಿಲ್ಲ. ಹೆಣ್ಮಕ್ಕಳಿಗೆ ಸಂಕೋಚ ಜಾಸ್ತಿ ಎಂದು ನಾನೂ ಸುಮ್ಮನಾಗಿದ್ದೆ. ಅದೊಂದು ದಿನ ನಾನು ಆಕೆಯ ಫೋನ್ ನಂಬರ್ ಕೇಳಿದೆ. ಕೊಡಲು ಒಲ್ಲೆ ಅಂದಳು. ಹೋಗ್ಲಿ ಬಿಡಿ ಎಂದರೂ ಮರುದಿನ ಆಕೆಯಿಂದ ಯಾವುದೇ ಸಂದೇಶ ಬರದೇ ಇದ್ದಾಗ ನಾನೇ ಸಂದೇಶ ಕಳುಹಿಸಿದೆ. ಅಲ್ಲಿಂದ ಯಾವುದೇ ಉತ್ತರವಿಲ್ಲ. ನಾನು ಫೋನ್ ನಂಬರ್ ಕೇಳಿದ್ದಕ್ಕೆ ಆ ಹುಡುಗಿ ಸಿಟ್ಟು ಮಾಡಿಕೊಂಡಳಾ? ಛೇ, ನಾನು ಹಾಗೆ ಕೇಳಬಾರದಿತ್ತು ಎಂದು ನನ್ನನ್ನೇ ಬೈದುಕೊಂಡೆ. ದಿನಗಳು ಕಳೆದವು. ಆಕೆಯ ಲೈಕ್ , ಮೆಸೇಜ್‌ಗಾಗಿ ಕಾಯುತ್ತಾ ಕುಳಿತೆ. ವಿರಹದ ಪದ್ಯ ಬರೆದೆ, ಗೂಗಲ್ ಮಾಡಿ ಹಲವಾರು ಕೋಟ್‌ಗಳನ್ನು ಹಾಕಿದೆ. ಮೆಸೆಂಜರ್‌ನಲ್ಲಿ ಕಾಲ್ ಮಾಡಿದರೂ ಉತ್ತರವಿಲ್ಲ.

ಆಕೆ ನನ್ನಿಂದ ದೂರವಾದ ನೋವಿನಲ್ಲಿ ಒದ್ದಾಡಿದೆ. ‘ಏನಾಯ್ತೋ ಮಗಾ’ ಅಂದ ರೂಮ್‌ಮೇಟ್. ಏನಿಲ್ಲಾ ಎಂದು ಹೇಳಿದರೂ ಆಮೇಲೆ ಅವನ ಒತ್ತಾಯಕ್ಕೆ ಮಣಿದು ಆ ಕಥೆ ಹೇಳಿದೆ. ಅಷ್ಟೇನಾ? ಅವಳನ್ನು ಹುಡುಕೋಣ ಎಂದು ಸಮಾಧಾನ ಮಾಡಿದ. ನಿದ್ದೆ ಬರದ ಆ ರಾತ್ರಿ ಫೇಸ್‌ಬುಕ್‌ನಲ್ಲಿ ಕಣ್ಣು ನೆಟ್ಟು ಕುಳಿತಿರುವಾಗ ಆಕೆಯ ಮೆಸೇಜ್. ‘ಎಲ್ಲಿದ್ದೀರಿ? ನನಗೆ ನಿಮ್ಮನ್ನ ನೋಡಬೇಕು’ ಎಂದು ಅನಿಸುತ್ತಿದೆ, ‘ನೀನೆಲ್ಲಿ?’ ಎಂದು ರಿಪ್ಲೈ ಕಳುಹಿಸಿ ಥಟ್ಟನೆ ಎದ್ದು ಕೂತೆ.

‘ಮಗಾ ಇಲ್ಲೇ ಇದ್ದಾಳೆ ನೋಡು’ ಎಂದ ರೂಮ್‌ಮೇಟ್. ತಿರುಗಿ ನೋಡಿದರೆ ನನ್ನ ಸ್ನೇಹಿತರೆಲ್ಲರೂ ನಗುತ್ತಾ ನಿಂತಿದ್ದರು. ಆಗಲೇ ಗೊತ್ತಾಗಿದ್ದು, ಹುಡುಗಿ ಹೆಸರಲ್ಲಿ ಫೇಕ್ ಅಕೌಂಟ್ ಮಾಡಿ ನನ್ನನ್ನು ಹಳ್ಳಕ್ಕೆ ಬೀಳಿಸಿದ್ದು ಇವರೇ ಅಂತ. ನನ್ನ ಪೆದ್ದುತನಕ್ಕೆ ನಾನೇ ನಾಚಿಕೊಂಡರೂ ನನ್ನನ್ನು ಮೋಸ ಮಾಡಿದ ಅವಳೆಂಬ ಅವನ ಬೆನ್ನಿಗೆ ಗುದ್ದಿ ಸಿಟ್ಟು ತೀರಿಸಿಕೊಂಡೆ. ಫೇಸ್‌ಬುಕ್‌ನಲ್ಲಿ ಹುಡುಗಿಯ ಹೆಸರಲ್ಲಿರುವ ಎಲ್ಲ ಫೇಕ್ ಅಕೌಂಟ್‌ಗಳಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂಬ ಸ್ಟೇಟಸ್ ನೋಡಿದಾಗ ಇದೆಲ್ಲ ನೆನಪಿಗೆ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT