ವೇಗದ ರಾಣಿ ಅಲಿಶಾ

ಶನಿವಾರ, ಮಾರ್ಚ್ 23, 2019
21 °C

ವೇಗದ ರಾಣಿ ಅಲಿಶಾ

Published:
Updated:
ವೇಗದ ರಾಣಿ ಅಲಿಶಾ

ಪುರುಷರದ್ದೇ ಪಾರಮ್ಯ ಇರುವ ರೇಸಿಂಗ್ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಭಾರತೀಯ ಮಹಿಳೆಯರಲ್ಲಿ ಚೆನ್ನೈನ ಅಲಿಶಾ ಅಬ್ದುಲ್ಲಾ ಪ್ರಮುಖರು. ತಮ್ಮ ಒಂಬತ್ತನೇ ವಯಸ್ಸಿನಲ್ಲೇ ಗೋ-ಕಾರ್ಟಿಂಗ್ ಟ್ರ್ಯಾಕ್‌ಗೆ ಇಳಿದು ಪೈಪೋಟಿ ನಡೆಸಿದ್ದ ಅಲಿಶಾ ಇಂದು ಭಾರತದ ಪ್ರಮುಖ ರೇಸರ್‌ ಎನಿಸಿದ್ದಾರೆ. ಪುರುಷರೊಟ್ಟಿಗೆ ಸ್ಪರ್ಧಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇತ್ತೀಚೆಗೆ ನಡೆದಿದ್ದ ಎಂಆರ್‌ಎಫ್ ರಾಷ್ಟ್ರೀಯ ಬೈಕ್‌ ರೇಸಿಂಗ್‌ನಲ್ಲಿ ಚಾಂಪಿಯನ್ ಆಗಿದ್ದು, ಅವರ ಸಾಧನೆಯ

ಕಿರೀಟಕ್ಕೆ ಗರಿ ಮುಡಿಸಿದಂತಾಗಿದೆ. ವೇಗ ಮತ್ತು ವೇಗದ ಕಾರು-ಬೈಕ್‌ಗಳ ಬಗ್ಗೆ ಅಲಿಶಾಗೆ ಆಸಕ್ತಿ ಬಂದದ್ದು ರಕ್ತದಿಂದಲೇ ಎಂದರೆ ಉತ್ಪ್ರೇಕ್ಷೆ ಅನಿಸಲಾರದು. ಇವರ ತಂದೆ ಎ.ಆರ್.ಅಬ್ದುಲ್ಲಾ ರಾಷ್ಟ್ರೀಯ ಮಟ್ಟದ ಬೈಕ್‌ ರೇಸಿಂಗ್‌ನಲ್ಲಿ 7 ಬಾರಿ ಚಾಂಪಿಯನ್ ಆದವರು. ಚಿಕ್ಕ ವಯಸ್ಸಿನಲ್ಲೇ ತಮ್ಮ ಮಗಳಿಗೆ ರೇಸಿಂಗ್ ಬಗ್ಗೆ ಇದ್ದ ಆಸಕ್ತಿ ನೋಡಿ, ಅದಕ್ಕೆ ಅಬ್ದುಲ್ಲಾ ನೀರೆರೆದಿದ್ದರು. ಟಿವಿಎಸ್‌-ರೇಸಿಂಗ್ ತಂಡದಲ್ಲಿದ್ದ ಅಬ್ದುಲ್ಲಾ ಅವರು ತಮ್ಮ ನಾಲ್ಕರ ಪುಟ್ಟ ಪೋರಿಗೆಂದು ಒಂದು ಪಾಕೆಟ್ ಬೈಕ್ ಮಾಡಿಸಿಕೊಟ್ಟಿದ್ದರು. ಆ ಬೈಕ್‌ನಲ್ಲೇ ಅಲಿಶಾಗೆ ಬೈಕ್ ಚಾಲನೆಯ ಮತ್ತು ರೇಸಿಂಗ್‌ನ ಮೊದಲ ಪಾಠಗಳು ಶುರು. ನಂತರದ್ದೆಲ್ಲಾ ಅಲಿಶಾಳನ್ನು ವೃತ್ತಿಪರ ರೇಸರ್ ಆಗಿಸುವ ಪಯಣ.

ಅಲಿಶಾ 9ನೇ ವಯಸ್ಸಿನಲ್ಲೇ ಗೋ-ಕಾರ್ಟಿಂಗ್‌ ತರಬೇತಿ ಆರಂಭಿಸಿದ್ದರು. 11ನೇ ವಯಸ್ಸಿನಲ್ಲಿ ವೃತ್ತಿಪರ ರೇಸರ್ ಆಗಿ ಸ್ಪರ್ಧೆ ಆರಂಭಿಸಿದ್ದರು. 13ನೇ ವಯಸ್ಸಿನಲ್ಲಿ ಎಂಆರ್‌ಎಫ್ ರಾಷ್ಟ್ರೀಯ ಗೋ-ಕಾರ್ಟಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. 2004ರಲ್ಲಿ ಜೆ.ಕೆ.ಟೈರ್ ರಾಷ್ಟ್ರೀಯ ಫಾರ್ಮುಲಾ ಕಾರ್‌ ರೇಸಿಂಗ್‌ನಲ್ಲಿ 5ನೆಯವರಾಗಿ ಸ್ಪರ್ಧೆ ಮುಗಿಸಿದ್ದರು. ಫೋಕ್ಸ್‌ವ್ಯಾಗನ್‌ ಕಂಪನಿ ನಡೆಸುವ ಪೋಲೊ ಆರ್ ಕಪ್‌ ಚಾಂಪಿಯನ್‌ಶಿಪ್‌ನಲ್ಲೂ ಸ್ಪರ್ಧಿಸಿದ್ದಾರೆ.

‘ನಾನು ರೇಸಿಂಗ್ ಆರಂಭಿಸಿದಾಗ ಈ ಕ್ಷೇತ್ರದಲ್ಲಿ ಪುರುಷರದ್ದೇ ಪ್ರಾಬಲ್ಯ. ಎಲ್ಲರೂ ನನ್ನನ್ನು ಆಡಿಕೊಳ್ಳುತ್ತಿದ್ದರು. ಆದರೆ ನನ್ನ ಅಪ್ಪ ನನ್ನ ಬೆಂಬಲಕ್ಕೆ ನಿಂತರು. ಈಗ ನಿಧಾನವಾಗಿಯಾದರೂ ಭಾರತದಲ್ಲಿ ಮಹಿಳಾ ರೇಸರ್‌ಗಳನ್ನೂ ಒಪ್ಪಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಮಹಿಳೆಯರು ವೇಗವಾಗಿ ಬೈಕ್-ಕಾರ್ ಚಲಾಯಿಸಬಲ್ಲರು, ತಮ್ಮೊಂದಿಗೆ ಸ್ಪರ್ಧಿಸಬಲ್ಲರು ಮತ್ತು ಸ್ಪರ್ಧೆಯಲ್ಲಿ ಗೆಲ್ಲಬಲ್ಲರು ಎಂಬುದನ್ನು ಪುರುಷ ರೇಸರ್‌ಗಳು ಒಪ್ಪಿಕೊಳ್ಳಲು ಆರಂಭಿಸಿದ್ದಾರೆ’ ಎನ್ನುತ್ತಾರೆ ಅಲಿಶಾ.

2017ರ ಅಕ್ಟೋಬರ್‌ನಲ್ಲಿ ನಡೆದ ಎಂಆರ್‌ಎಫ್ ರಾಷ್ಟ್ರೀಯ ಬೈಕ್‌ ರೇಸಿಂಗ್‌ನಲ್ಲಿ ಅಲಿಶಾ ಚಾಂಪಿಯನ್ ಆಗಿ ಹೊರಹೊಮ್ಮಿ, ಭಾರತ ಹಾಲಿ ವೇಗದ ಮಹಿಳೆ ಎನಿಸಿದ್ದಾರೆ. ‘ಇದು ನಾನು 8 ವರ್ಷಗಳ ನಂತರ ಗೆದ್ದ ಮೊದಲ ಟ್ರೋಫಿ. ಈ ವರ್ಷದಲ್ಲಿ ಮತ್ತಷ್ಟು ಸಾಧನೆ ಮಾಡಬೇಕು ಎಂದು ತಯಾರಿ ನಡೆಸಿದ್ದೇನೆ’ ಎಂದು ಅವರು ನಗೆ ಬೀರುತ್ತಾರೆ.

ಆದರೆ ಅಲಿಶಾ ಇದೆಲ್ಲಕ್ಕಿಂತ ಮಹತ್ವ ಪಡೆಯುವುದು, ಮತ್ತಷ್ಟು ಯುವತಿಯರನ್ನು ರೇಸಿಂಗ್‌ನಲ್ಲಿ ತೊಡಗಿಸುತ್ತಿರುವ ಕಾರಣಕ್ಕೆ. ಅವರು ಅಲಿಶಾ ಅಬ್ದುಲ್ಲಾ ರೇಸಿಂಗ್ ಟೀಂ ನಡೆಸುತ್ತಿದ್ದಾರೆ. ಈ ತಂಡವು ಸದ್ಯ ಬೈಕ್ ರೇಸಿಂಗ್‌ಗಳಲ್ಲಿ ಮಾತ್ರ ಭಾಗವಹಿಸುತ್ತಿದೆ. ಈ ತಂಡ ದೇಶದಾದ್ಯಂತ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ತಮ್ಮದೇ ‘ಅಲಿಶಾ ಅಬ್ದುಲ್ಲಾ ರೇಸಿಂಗ್ ಅಕಾಡೆಮಿ ಫಾರ್ ವುಮೆನ್‌’ನಲ್ಲಿ ತಂಡದ ಸದಸ್ಯರಿಗೆ ರೇಸಿಂಗ್ ತರಬೇತಿ ನೀಡುತ್ತಿದ್ದಾರೆ. ಎ.ಆರ್.ಅಬ್ದುಲ್ಲಾ ಅವರು ತಮ್ಮ ಅನುಭವವನ್ನು ಈ ಹೊಸ ರೇಸರ್‌ಗಳಿಗೆ ಧಾರೆಯೆರೆಯುತ್ತಿದ್ದಾರೆ. ಮುಂದೆ ಕಾರ್ ರೇಸಿಂಗ್‌ ತಂಡವನ್ನೂ ಕಟ್ಟುವ ಕನಸು ಬಿಚ್ಚಿಡುತ್ತಾರೆ ಸ್ವತಃ ಕಾರ್ ರೇಸರ್ ಸಹ ಆಗಿರುವ ಅಲಿಶಾ.

ದೊಡ್ಡಮಟ್ಟದಲ್ಲಿ ಮಹಿಳಾ ರೇಸರ್‌ಗಳನ್ನು ರೂಪಿಸಬೇಕು ಎಂದು ಈ ತಂದೆ-ಮಗಳು ಆರಂಭಿಸಿದ ಅಕಾಡೆಮಿ, ಸದ್ಯ ಅವರ ತಂಡದ ತರಬೇತಿಗಷ್ಟೇ ಸೀಮಿತವಾಗಿದೆ. ಪ್ರಾಯೋಜಕರ ಕೊರತೆಯ ಕಾರಣ ಹೊರಗಿನವರಿಗೆ ತರಬೇತಿ ನೀಡಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಅಲಿಶಾ. ‘ರೇಸಿಂಗ್ ಅತ್ಯಂತ ದುಬಾರಿ ಬಾಬತ್ತು. ಬೈಕ್, ಬೈಕ್‌ನ ಮಾರ್ಪಾಡು, ಪೆಟ್ರೋಲ್, ಬೈಕ್ ನಿರ್ವಹಣೆ, ಬೈಕರ್ ಗಿಯರ್‌ಗಳು, ತರಬೇತಿ, ಸ್ಪರ್ಧೆ ನಡೆಯುವಲ್ಲಿಗೆಲ್ಲಾ ಓಡಾಟ, ಸ್ಪರ್ಧೆ ಖರ್ಚು, ಪ್ರತಿನಿತ್ಯದ ಅಭ್ಯಾಸದ ವೆಚ್ಚ... ಹೀಗೆ ರೇಸಿಂಗ್‌ಗೆ ತೀರಾ ಖರ್ಚಾಗುತ್ತದೆ. ರೇಸಿಂಗ್‌ಗೆ ಬಂದು ಹಣ ವೆಚ್ಚ ಮಾಡಿ, ಜೀವನ ನಡೆಸುವುದೂ ಕಷ್ಟವಾಗಿ ರೇಸಿಂಗ್ ತ್ಯಜಿಸಿದವರನ್ನು ನಾನು ನೋಡಿದ್ದೇನೆ. ಈ ಕ್ಷೇತ್ರವನ್ನು ವೃತ್ತಿಯನ್ನಾಗಿ ಆರಿಸಿಕೊಳ್ಳುವವರ ಮುಂದೆ ಇರುವ ಅತ್ಯಂತ ದೊಡ್ಡ ಸವಾಲು ಇದು.

ಇದರ ಜತೆಯಲ್ಲೇ ಅಭ್ಯಾಸದಲ್ಲಾಗಲೀ ಸ್ಪರ್ಧೆ ಯಲ್ಲಾಗಲೀ ಅಪಘಾತಗಳಾಗದಂತೆ ಎಚ್ಚರವಹಿಸುವುದು ಅತ್ಯಂತ ಮುಖ್ಯ. ಇದಕ್ಕಾಗಿ ದೈಹಿಕ ಕ್ಷಮತೆಯನ್ನೂ ಉತ್ತಮವಾಗಿಟ್ಟುಕೊಳ್ಳಬೇಕು. ರೇಸರ್‌ ಆಗುವ ಕನಸಿನ ಜತೆಗೆ ಈ ಕಟು ವಾಸ್ತವಗಳನ್ನೂ ಅರಿತಿದ್ದರೆ ಮಾತ್ರ ಈ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ ಎಂದು ಅವರು ಕಿವಿಮಾತು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry