ನವದೆಹಲಿ: ಮುಂಬೈನಲ್ಲಿ ಮೂರು ವರ್ಷದಿಂದ ಸಬ್‌ಅರ್ಬನ್ ರೈಲು ಓಡಿಸುತ್ತಿರುವುದರಿಂದ ₹ 4,000ಕ್ಕೂ ಹೆಚ್ಚು ಕೋಟಿ ನಷ್ಟವಾಗಿದೆ ಎಂದು ಸರ್ಕಾರ ಸಂಸತ್ತಿಗೆ ಬುಧವಾರ ತಿಳಿಸಿತು. ಪ್ರಮುಖ ನಗರಗಳಲ್ಲಿ ಸಬ್‌ಅರ್ಬನ್ ರೈಲು ಜಾಲ ವಿಸ್ತರಿಸಲು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡುತ್ತಿರುವ ಹಿನ್ನಲೆಯಲ್ಲಿಯೇ ಈ ಅಂಕಿ–ಅಂಶಗಳು ಹೊರಬಿದ್ದಿವೆ.
2014ರಿಂದ 2017ರ ವರೆಗಿನ ಅವಧಿಯಲ್ಲಿ ಮುಂಬೈನಲ್ಲಿ ಸಬ್‌ಅರ್ಬನ್(ಉಪನಗರ ಸಾರಿಗೆ) ರೈಲು ಓಡಿಸಿರುವುದರಿಂದ ₹ 4,280.50 ಕೋಟಿ ನಷ್ಟ ಉಂಟಾಗಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ರಾಜನ್ ಗೋಹೆನ್ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
‘ಮುಂಬೈನ ಸಬ್‌ಅರ್ಬನ್ ರೈಲು ಸಾರಿಗೆಯಿಂದ ಮೂರು ವರ್ಷದಲ್ಲಿ ₹ 5,206 ಕೋಟಿ ವರಮಾನ ಬಂದಿದೆ. ಹಾಗೆಯೇ, ಆ ಸಾರಿಗೆಗಾಗಿ ₹ 9,486 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಸಚಿವರು ತಿಳಿಸಿದ್ದಾರೆ.
ನಗರದಲ್ಲಿ 465 ಕಿ.ಮೀ. ಉದ್ದವಿರುವ ಈ ರೈಲು ಜಾಲವನ್ನು ₹ 11,000 ಕೋಟಿ ವೆಚ್ಚದಲ್ಲಿ ವಿಸ್ತರಿಸಲಾಗುವುದು. ನಗರದಲ್ಲಿನ ರೈಲು ಮಾರ್ಗಗಳ ಉನ್ನತಿಕರಣ, ವಿಸ್ತರಣೆಗಾಗಿ ₹ 40,000 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ 2018 ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು.
ಮುಂಬೈನ ಸಬ್‌ಅರ್ಬನ್ ರೈಲುಗಳು 2,342 ಟ್ರಿಪ್‌ಗಳಿಂದ 75 ಲಕ್ಷಕ್ಕಿಂತಲೂ ಹೆಚ್ಚು ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡುತ್ತಿವೆ.