ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಮೂರೂ ಸ್ಥಾನಗಳಿಗೆ ಕನ್ನಡಿಗರನ್ನೇ ಪರಿಗಣಿಸಿ: ರಾಹುಲ್‌ ಗಾಂಧಿಗೆ ಸಿದ್ದರಾಮಯ್ಯ ಮನವಿ

Last Updated 7 ಮಾರ್ಚ್ 2018, 12:59 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಗೆ ಕನ್ನಡೇತರರ ಆಯ್ಕೆಗೆ ಸಿಎಂ ಸಿದ್ದರಾಮಯ್ಯ ಅಸಮ್ಮತಿ ಸೂಚಿಸಿದ್ದಾರೆ.

ಮಂಗಳವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಕನ್ನಡೇತರರ ಆಯ್ಕೆ ಸೂಕ್ತವಲ್ಲ ಎಂದಿರುವುದಾಗಿ ಸಿಎನ್‌ಎನ್‌–ನ್ಯೂಸ್‌ 18 ವರದಿ ಮಾಡಿದೆ.

ಕನ್ನಡೇತರರಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ಧನ್‌ ದ್ವಿವೇದಿ ಹಾಗೂ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರಿಗೆ ಆಪ್ತರಾಗಿದ್ದ ಸ್ಯಾಂ ಪಿತ್ರೋಡಾ  ಅವರು ಕರ್ನಾಟಕದಿಂದ ರಾಜ್ಯಸಭೆ ಪ್ರವೇಶಿಸುವುದಕ್ಕೆ ಸಿದ್ದರಾಮಯ್ಯ ಅಸಮ್ಮತಿಸಿದ್ದಾರೆ ಎನ್ನಲಾಗಿದೆ.

ಲೋಕಸಭೆಯ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಅವರನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡುವ ಇರಾದೆಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಹೊಂದಿರುವುದಾಗಿಯೂ ತಿಳಿದು ಬಂದಿದೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿ ಆಯ್ಕೆಗೆ ಮಾ.23ರಂದು ಚುನಾವಣೆ ನಿಗದಿಯಾಗಿದೆ. ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್‌ ಎರಡು ಸ್ಥಾನಗಳಿಗೆ ಬಹುಮತದೊಂದಿಗೆ ಸದಸ್ಯರ ಆಯ್ಕೆ ಮಾಡಬಹುದಾಗಿದೆ. ವಿರೋಧ ಪಕ್ಷ ಬಿಜೆಪಿ 1 ಸ್ಥಾನ ಹಾಗೂ ಮತ್ತೊಂದು ಸ್ಥಾನಕ್ಕೆ ಕಾಂಗ್ರೆಸ್‌–ಜೆಡಿಎಸ್‌ ನಡುವೆ ಪೈಪೋಟಿ ಏರ್ಪಟ್ಟಿದೆ.

ಮೂರೂ ಸ್ಥಾನಗಳಿಗೆ ಕನ್ನಡಿಗರನ್ನೇ ಆಯ್ಕೆ ಮಾಡುವ ಸಂಬಂಧ ರಾಹುಲ್‌ ಗಾಂಧಿ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ದಲಿತ, ಅಲ್ಪಸಂಖ್ಯಾತ ಹಾಗೂ ಲಿಂಗಾಯತ ಸಮುದಾಯಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಇಚ್ಛೆಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದು, ರಾಹುಲ್‌ ಗಾಂಧಿ ಯಾವುದೇ ನಿರ್ಧಾರ ತಿಳಿಸಿಲ್ಲ ಎಂದು ವರದಿಯಾಗಿದೆ.

ಬಿಜೆಪಿಯು ಉದ್ಯಮಿ ರಾಜೀವ್‌ ಚಂದ್ರಶೇಖರ್‌ ಮತ್ತು ವಿಜಯ ಸಂಕೇಶ್ವರ ಅವರ ಹೆಸರನ್ನು ಶಿಫಾರಸು ಮಾಡಿದ್ದು, ಜೆಡಿಎಸ್‌ ಮಂಗಳೂರು ಮೂಲದ ಕೈಗಾರಿಕೋದ್ಯಮಿ ಬಿ.ಎಂ.ಫಾರೂಕ್‌ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದೆ.

ಕನ್ನಡಿಗರನ್ನೇ ರಾಜ್ಯಸಭೆಗೆ ಆಯ್ಕೆ ಮಾಡುವಂತೆ ಕನ್ನಡ ಸಂಘಗಳು ರಾಜಕೀಯ ಪಕ್ಷಗಳಿಗೆ ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT