ಮಹಿಳೆಗೆ ತಂತ್ರಜ್ಞಾನದ ರಕ್ಷೆ

7

ಮಹಿಳೆಗೆ ತಂತ್ರಜ್ಞಾನದ ರಕ್ಷೆ

Published:
Updated:
ಮಹಿಳೆಗೆ ತಂತ್ರಜ್ಞಾನದ ರಕ್ಷೆ

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಶೇ 12.4ರಷ್ಟು ಹೆಚ್ಚಿವೆ. ಇದು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ (ಎನ್‍ಸಿಆರ್‌ಬಿ) 2016ರ ವರದಿ ಬಹಿರಂಗ ಪಡಿಸಿದ ಅಂಕಿ-ಅಂಶ. ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನ ಸೇರಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ತೋರುತ್ತಿರುವ ‘ಮಹಿಳೆ’ಗೆ ಸುರಕ್ಷತೆ ಇನ್ನೂ ಕಾಡುತ್ತಿರುವ ಸಮಸ್ಯೆ. ತಾಂತ್ರಿಕವಾಗಿ ಬೆಳವಣಿಗೆ ಕಾಣುತ್ತಿರುವ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಶ್ರೀರಕ್ಷೆ ಪರಿಣಾಮಕಾರಿಯಾಗಬಲ್ಲದು. ಮಹಿಳೆಯ ಸುರಕ್ಷತೆಗೆ ಸಹಕಾರಿಯಾಗುವ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಅಪ್ಲಿಕೇಷನ್‍ಗಳ ಅಭಿವೃದ್ಧಿ ನಿರಂತರವಾಗಿದೆ.

ಲೈಂಗಿಕ ಕಿರುಕುಳ, ದೌರ್ಜನ್ಯಗಳಿಗೆ ಎದುರಾಗುವ ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗುವಂತೆ ಅನೇಕ ಸ್ಟಾರ್ಟ್‍ಅಪ್ ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಿಂದಲೇ ಸುರಕ್ಷತಾ ಉಪಕರಣಗಳನ್ನು ಸಿದ್ಧಪಡಿಸಿ ಸುದ್ದಿಯಾಗಿವೆ. ಹುಡುಗಿ ಅಥವಾ ಮಹಿಳೆಯು ತನ್ನ ಬ್ಯಾಗ್‍ನಲ್ಲಿ ಇಟ್ಟುಕೊಳ್ಳಬಹುದಾದ, ಇಲ್ಲವೇ ಧರಿಸ ಬಹುದಾದ ಆಭರಣ-ವಸ್ತುಗಳೇ ಸಾಧನಗಳಾಗಿ ವರ್ತಿಸುವಂತಹ ಆವಿಷ್ಕಾರಗಳನ್ನೂ ಮಾಡಲಾಗಿದೆ.

ಅಥೆನಾ ಧರಿಸಿ...

ಸರದ ಪದಕದಂತೆ ಕಾಣುವ ಸಿಲಿಕಾನ್‍ನಿಂದ ಮಾಡಲ್ಪಟ್ಟ ಲೋಲಕ ‘ಅಥೆನಾ’. ಕಪ್ಪು ಬಣ್ಣದ ಈ ಸಾಧನವನ್ನು ಬಟ್ಟೆ, ಪರ್ಸ್‌ಗಳಿಗೆ ಕೂಡಿಸಬಹುದು ಅಥವಾ ಕಂಠಿ ಹಾರದಂತೆ ಧರಿಸಬಹುದು. ಅಪಾಯದ ಸಂದರ್ಭದಲ್ಲಿ ಪದಕದ ಮಧ್ಯದಲ್ಲಿ ಅಡಗಿಸಿರುವ ಬಟನ್ ಒತ್ತುವ ಮೂಲಕ ರಕ್ಷಣೆಗಾಗಿ ಆಪ್ತರ ಮೊರೆ ಹೋಗಬಹುದು. 3 ಸೆಕೆಂಡ್‍ಗಳವರೆಗೆ ಬಟನ್ ಒತ್ತಿ ಹಿಡಿದರೆ ದಿಗಿಲು ಹುಟ್ಟಿಸುವಷ್ಟು ದೊಡ್ಡ ಸದ್ದು ಹೊಮ್ಮುವ ಜೊತೆಗೆ ಸ್ನೇಹಿತರು ಮತ್ತು ಕುಟುಂಬದವರ ಮೊಬೈಲ್‍ಗಳಿಗೆ ಸ್ಥಳದ ಮಾಹಿತಿ ರವಾನೆಯಾಗುತ್ತದೆ. ಅಪಾಯದ ಮುನ್ಸೂಚನೆ, ಸಂಶಯ ಮೂಡಿದ ಸಮಯದಲ್ಲಿ ಮೂರು ಬಾರಿ ಬಟನ್ ಒತ್ತಿ ಗುಟ್ಟಾಗಿಯೇ ಎದುರಾಗುತ್ತಿರುವ ಅಪಾಯದ ಸೂಚನೆ ರವಾನಿಸಬಹುದು.***

ಒಂದೇ ಕ್ಲಿಕ್

ಕಾರಿನ ಕೀ, ಪರ್ಸ್ ಅಥವಾ ಬಟ್ಟೆಯೊಂದಿಗೆ ಧರಿಸಬಹುದಾದ ಪುಟ್ಟ ಉಪಕರಣದಲ್ಲಿ ‘ಪ್ಯಾನಿಕ್ ಬಟನ್’ ಇರುತ್ತದೆ. ರಿಯಾಕ್ಟ್ ಮೊಬೈಲ್ ಸುರಕ್ಷತಾ ಸೇವೆ ಒದಗಿಸುತ್ತಿದ್ದು, ಒಮ್ಮೆ ಬಟನ್ ಒತ್ತಿದರೆ ನಿಮ್ಮ ಮೊಬೈಲ್‍ನಲ್ಲಿ ನಿಗದಿಪಡಿಸಿರುವ ತುರ್ತು ಸಂಖ್ಯೆಗಳಿಗೆ ಜಿಪಿಎಸ್ ಸ್ಥಳದ ಮಾಹಿತಿ ಮತ್ತು ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ.***

ನಾನು ಸುರಕ್ಷಿತ...

ಕೀಗಳೊಂದಿಗೆ ಅಥವಾ ಪ್ಯಾಂಟ್‍ಗೆ ಸಿಕ್ಕಿಸಿಕೊಳ್ಳಬಹುದಾದ ಎಲೆಕ್ಟ್ರಾನಿಕ್ ಉಪಕರಣ ರಿವೋಲರ್. ಮೊಬೈಲ್ ಡಾಟಾ ಬಳಸಿ ಸಂಪರ್ಕ ಸಾಧಿಸುವ ಈ ಉಪಕರಣ ಅಪ್ಲಿಕೇಷನ್ ರೀತಿಯಲ್ಲಿಯೂ ಲಭ್ಯವಿದೆ. ತಡವಾಗಿ ಮನೆಗೆ ತೆರಳುವಾಗ ಅಥವಾ ಪ್ರಯಾಣದ ಸಮಯದಲ್ಲಿ ತನ್ನ ಆಪ್ತರಿಗೆ ತಾನು ಸುರಕ್ಷಿತ ಎಂದು ಸಂದೇಶ ರವಾನಿಸಲು ಒಂದು ಬಾರಿ ರಿವೋಲರ್‌ನ ಗುಂಡಿ ಒತ್ತಿದರೆ ಸಾಕು. ಎರಡು ಬಾರಿ ಗುಂಡಿ ಒತ್ತಿದರೆ ಅಪಾಯದ ಸೂಚನೆ ಹಾಗೂ ಮೂರು ಬಾರಿ ಒತ್ತಿದರೆ ತೀವ್ರ ತೊಂದರೆಯಲ್ಲಿ ಸಿಲುಕಿರುವ ಸಂದೇಶ ಕಳುಹಿಸಲ್ಪಡುತ್ತದೆ.

***

ಸ್ಟೈಲಿಶ್ ಲುಕ್‍ನೊಂದಿಗೆ...

ಸರ ಮತ್ತು ಬಳೆಯೊಂದಿಗೆ ಬಳಸಬಹುದಾದ, ಸ್ಟೈಲಿಶ್ ಆಗಿ ಕಾಣುವ ಸ್ಟೈಲೆಟೊ ಪದಕವನ್ನು ಒಮ್ಮೆ ಒತ್ತಿ ಹಿಡಿದರೆ ಸೂಚಿತ ಕರೆ ಪಟ್ಟಿಗೆ ಕರೆ ಮಾಡಲಾಗುತ್ತದೆ. ಬಳಕೆದಾರರು ಮಾತನಾಡಲು ಸಾಧ್ಯವಾಗದಿದ್ದರೆ ಧ್ವನಿ ಸಹಾಯಕದ ಮೂಲಕ ಸ್ವಯಂ ಚಾಲನೆಯಾಗುತ್ತದೆ.

***

* ಸಮಯ ನೀಡಿ ಗಮನಿಸುತ

ಮಹಿಳೆ ಒಂಟಿಯಾಗಿ ಪ್ರಯಾಣಿಸುವಾಗ ‘ವಾಚ್ ಓವರ್ ಮಿ’ ಅಪ್ಲಿಕೇಷನ್ ಮೂಲಕ ಟೈಮರ್ ನಿಗದಿ ಪಡಿಸಿ ಹೊರಡಬಹುದು. ತೊಂದರೆಗೆ ಸಿಲುಕಿದಾದ ಮೊಬೈಲ್ ಲಾಕ್ ಆಗಿದ್ದರೂ, ಅದನ್ನು ಅಲುಗಾಡಿಸಿದರೆ ಸಾಕು- ವಿಡಿಯೊ ಕ್ಯಾಮೆರ ತೆರೆದುಕೊಳ್ಳುತ್ತದೆ ಹಾಗೂ ಎಚ್ಚರಿಕೆ ಸಂದೇಶವನ್ನು ತುರ್ತು ಕರೆದಾರರ ಪಟ್ಟಿಗೆ ಕಳುಹಿಸುತ್ತದೆ.

ಚಿತ್ರ, ವಿಡಿಯೊ ಅಥವಾ ಅಕ್ಷರಗಳ ರೂಪದಲ್ಲಿ ಸಂದೇಶ ರವಾನಿಸುವುದು ಸಾಧ್ಯವಿದೆ. ಟೈಮರ್ ಮುಗಿಯುವುದರೊಳಗೆ ‘ನಾನು ಸುರಕ್ಷಿತ’ ಎಂದು ನೀಡಿರುವ ಆಯ್ಕೆ ಒತ್ತದಿದ್ದರೆ ತಕ್ಷಣವೇ ಬಳಕೆದಾರರು ನೀಡಿರುವ ಸಂದೇಶ ಮತ್ತು ಸ್ಥಳದ ಮಾಹಿತಿ ಮೊಬೈಲ್‍ನಿಂದ ಇತರರಿಗೆ ತಲುಪುತ್ತದೆ.

***

ಹೋರಾಡಲು ಸಿದ್ಧರಾಗಿ

ಬೆಳ್ಳಂಬೆಳಿಗ್ಗೆ ಜಾಗ್ ಅಥವಾ ರಾತ್ರಿಯಲ್ಲಿ ವಾಕಿಂಗ್ ಹೋಗುವ ಮಹಿಳೆಯರು ತುರ್ತು ಸಂದರ್ಭದಲ್ಲಿ ನಡೆಸಬಹುದಾದ ಹೋರಾಟಕ್ಕೆ ಉಂಗುರದಂತೆ ಧರಿಸುವ ‘ಗೋ ಗಾರ್ಡೆಡ್’ ಸಾಧನ ಸಹಕಾರಿ. ಹೆವಿ ಪ್ಲಾಸ್ಟಿಕ್‍ನಿಂದ ತಯಾರಿಸಿರುವ ಇದನ್ನು ಕೈಬೆರಳಿಗೆ ಧರಿಸಬಹುದು. ಚಾಕುವಿನ ರೀತಿಯಲ್ಲಿ ಮೊನಚಾದ ಪ್ಲಾಸ್ಟಿಕ್ ತುದಿಯನ್ನು

ಹೊಂದಿದ್ದು ದಾಳಿ ನಡೆದ ಕ್ಷಣಾರ್ಧದಲ್ಲಿ ಮುಷ್ಟಿಯಿಂದ ಪಂಚ್ ಕೊಟ್ಟು ಅಪಾಯದಿಂದ ಪಾರಾಗಬಹುದು.

***

ಸೇಫ್ಲೆಟ್ ಕಡಗ

ಕೈಕಡಗ ಅಥವಾ ವಾಚ್ ರೀತಿ ಕಾಣುವ ಸೇಫ್ಲೆಟ್‍ನ ಎರಡು ಬದಿಯಲ್ಲಿ ನೀಡಿರುವ ಎರಡು ಬಟನ್‍ಗಳನ್ನು ಒಟ್ಟಿಗೆ ಒತ್ತಿದರೆ ನಿಗದಿತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಮೊಬೈಲ್ ಸಂಖ್ಯೆಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಇದರೊಂದಿಗೆ ಬಳಕೆದಾರರ ಮೊಬೈಲ್ ಫೋನ್‍ನೊಂದಿಗೂ ಸಂಪರ್ಕ ಸಾಧಿಸಿ ಶಬ್ದ ರೆಕಾರ್ಡ್ ಮಾಡುವುದು ಶುರುವಾಗುತ್ತದೆ.

***

ಮಾದಕ ವಸ್ತು ಪತ್ತೆಗೆ ಉಗುರು ಬಣ್ಣ

ಪಾನೀಯಗಳಲ್ಲಿ ಮಾದಕ ವಸ್ತುಗಳನ್ನು ಬೆರೆಸಿ ಅತ್ಯಾಚಾರ ನಡೆಸುವ ಪ್ರಕರಣಗಳೂ ಹೆಚ್ಚು. ಮಹಿಳೆಯರು ಕುಡಿಯುವ ಪಾನೀಯವನ್ನು ಕೈಬೆರಳಿನಲ್ಲಿಯೇ ಪರೀಕ್ಷಿಸಬಹುದಾದ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ. ಅಂಡರ್‌ಕವರ್ ಕಲರ್ಸ್ ಹೆಸರಿನ ಉಗುರು ಬಣ್ಣವನ್ನು ಬಳಸಿರುವವರು ಪಾನೀಯದಲ್ಲಿ ಬೆರಳು ಸೋಕಿಸಿದರೆ ಸಾಕು. ಮತ್ತು ತರಿಸುವ ಅಂಶಗಳಿದ್ದರೆ ಉಗುರು ಬಣ್ಣ ಮತ್ತೊಂದು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಎಚ್ಚರವಹಿಸುವುದು ಸಾಧ್ಯವಾಗುತ್ತದೆ.

ಇಲ್ಲಿನ ಬಹುತೇಕ ಉಪಕರಣಗಳು ಭಾರತಕ್ಕಿಂತ ಹೊರ ದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿವೆ. ಆದರೆ, ಪ್ರಸ್ತುತ ಅಭಿವೃದ್ಧಿಯಾಗಿರುವ ಹಾಗೂ ಆಗುತ್ತಿರುವ ಸುರಕ್ಷತಾ ವ್ಯವಸ್ಥೆಗಳು ಮೊಬೈಲ್ ತಂತ್ರಜ್ಞಾನ ಆಧಾರಿತವೇ ಆಗಿವೆ. ದೇಶದಲ್ಲಿಯೂ ಜಿಪಿಎಸ್ ಆಧಾರಿತ ತುರ್ತು ಸಂದೇಶ ರವಾನಿಸುವ ಸ್ಮಾರ್ಟ್‌ಫೋನ್ ಅಪ್ಲಿಕೇಷನ್‍ಗಳು ಬಳಕೆಯಲ್ಲಿವೆ.

ದೇಶದಲ್ಲಿ ಬಳಕೆಯಲ್ಲಿರುವ ಕೆಲವು ಪ್ರಮುಖ ಆ್ಯಪ್‌ಗಳು:

* ಸೇಫ್ಟಿಪಿನ್

* ವಿತ್‍ಯು

* ರಕ್ಷಾ * ಹಿಮ್ಮತ್(ದೆಹಲಿ ಪೊಲೀಸ್ ಇಲಾಖೆ)

* ಸ್ಟೇ ಸೆಕ್ಯೂರ್

* ವುಮೆನ್ ಸೇಫ್ಟಿ

* ಸ್ಮಾರ್ಟ್ 24*7

* ಚಿಲ್ಲಾ(ಕಿರುಚುವ ಧ್ವನಿ ಗ್ರಹಿಸುತ್ತದೆ)

* ಶೇಕ್2ಸೇಫ್ಟಿ

* ಬಿ ಸೇಫ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry