ಬಾಳೆದಿಂಡು ಮಸಾಲ ತಿಂದು ನೋಡಿ

ಗುರುವಾರ , ಮಾರ್ಚ್ 21, 2019
30 °C

ಬಾಳೆದಿಂಡು ಮಸಾಲ ತಿಂದು ನೋಡಿ

Published:
Updated:
ಬಾಳೆದಿಂಡು ಮಸಾಲ ತಿಂದು ನೋಡಿ

ಸಣ್ಣದಾಗಿ ಕತ್ತರಿಸಿದ ಹಸಿ ಬಾಳೆದಿಂಡು, ಮೊಳಕೆ ಬರಿಸಿದ ಹೆಸರು ಕಾಳು, ಕ್ಯಾರೆಟ್‌ ತುರಿ, ಈರುಳ್ಳಿ, ಮಾವಿನಕಾಯಿ ತುಂಡುಗಳು, ಅಲಂಕಾರಕ್ಕೆ ಮೇಲಿಂದ ಹರಡಿದ ಸೇವ್‌...ಒಂದು ಚಮಚ ತೆಗೆದು ಬಾಯಿಗಿಟ್ಟರೆ, ಸಿಹಿ, ಖಾರ, ಉಪ್ಪಿನ ಹದ ರುಚಿಗೆ, ಬಾಯಿಂದ ಅರಿವಿಲ್ಲದಂತೆ ವಾಹ್‌! ಎಂಬ ಪದ ಹೊಮ್ಮುತ್ತದೆ.

ಮಲ್ಲೇಶ್ವರದ 9ನೇ ಕ್ರಾಸ್‌ನ ಕೃಷ್ಣಯ್ಯ ಚೆಟ್ಟಿ ಜ್ಯವೆಲ್ಲರ್ಸ್‌ ಮುಂಭಾಗದಲ್ಲಿನ ‘ಮೈಸೂರು ಸ್ಪೆಷಲ್‌ ಚಾಟ್’ ಎಂಬ ಬೋರ್ಡ್‌ ಪಕ್ಕದಲ್ಲಿ ‘ಬಾಳೆದಿಂಡು ಮಸಾಲ, ಮೆಂತ್ಯ ಮೊಳಕೆ ಕಾಳು ಮಸಾಲ, ಹೆಸರುಕಾಳು ಮೊಳಕೆ ಮಸಾಲ’ ಸಿಗುತ್ತದೆ ಎಂಬ ಬರಹ ಕಾಣಿಸಿತು. ಹೊಸ ರುಚಿ ನೋಡುವ ಮನಸಾಯಿತು. ಪುಟ್ಟ ಅಂಗಡಿಯಲ್ಲಿ ಮಹಿಳೆಯೊಬ್ಬರೇ ಇದ್ದರು. ನಮ್ಮನ್ನು ನಗುನಗುತ್ತಲೇ ಮಾತನಾಡಿಸಿದ ಅವರು, 'ಏನು ಕೊಡಲಿ' ಎಂದಾಗ ‘ಬಾಳೆದಿಂಡು ಮಸಾಲ’ ಎಂದೆ. 2- 3 ನಿಮಿಷದಲ್ಲೇ ರೆಡಿ ಮಾಡಿ, ಉಪ್ಪು , ಖಾರ ಸರಿಯಾಗಿದೆಯೇ ಎಂದು ತಮ್ಮ ಕೈಯಲ್ಲಿದ್ದ ಸೌಟಿನಿಂದಲೇ ನನ್ನ ಅಂಗೈಗೆ ರುಚಿ ನೋಡಲು ಕೊಟ್ಟರು. ಬಾಯಿಗಿಟ್ಟಾಗ ಮೊಳಕೆ ಬರಿಸಿದ ಕಾಳು, ಕ್ಯಾರೆಟ್‌ ತುರಿ, ಮಾವಿನ ಸಣ್ಣಹೋಳುಗಳ ನಡುವೆ ‘ಬಾಳೆದಿಂಡು ಮಸಾಲ’ ರುಚಿಯಾಗಿತ್ತು. ‘ಹಸಿ ಬಾಳೆದಿಂಡು’ ಇದೆ ಎಂದು ಅನಿಸುವುದೇ ಇಲ್ಲ.

‘ಬಾಳೆಯ ದಿಂಡಿನ ಮೇಲಿನ ಪದರಗಳನ್ನು ತೆಗೆದರೆ, ಒಳಭಾಗದಲ್ಲಿರುವ ಎಳೆದಿಂಡು ಒಂದು ಉತ್ತಮ ಆಹಾರ. ಬಾಳೆದಿಂಡಿನಲ್ಲಿರುವ ನಾರಿನಂಶ ದೇಹಕ್ಕೆ ಬಹಳ ಪ್ರಯೋಜನಕಾರಿ. ಇದು ಕಿಡ್ನಿಯ ಕಲ್ಲುಗಳನ್ನು ನಿವಾರಿಸುತ್ತದೆ. ಅಸಿಡಿಟಿಯನ್ನು ನಿಯಂತ್ರಣದಲ್ಲಿಡುತ್ತದೆ. ಬಾಳೆದಿಂಡಿನಿಂದ ರೊಟ್ಟಿ, ಕೋಸಂಬರಿ, ಪಲ್ಯ ಮಾಡುತ್ತಾರೆ. ಮೈಸೂರಿನಲ್ಲಿ ಬಾಳೆದಿಂಡು ಮಸಾಲ ಫೇಮಸ್‌. ನಾನೂ ಮೈಸೂರಿನವಳಾಗಿದ್ದರಿಂದ ಈ ರೆಸಿಪಿ ಗೊತ್ತಿತ್ತು. ಬೆಂಗಳೂರಿನಲ್ಲಿ ನಮ್ಮ ಅಂಗಡಿಯಲ್ಲಿ ಮಾತ್ರ ಇದು ಸಿಗುತ್ತದೆ’ ಎಂದು ವಿವರಣೆ ನೀಡಿದರು ಅಂಗಡಿ ಮಾಲಕಿ ರೇವತಿ ಪ್ರಸನ್ನ.ಹಾಗಲಕಾಯಿ ಮಸಾಲ

ರೇವತಿ ಅವರು ಕಳೆದ ಆರು ವರ್ಷಗಳಿಂದ ಈ ಚಾಟ್‌ ಅಂಗಡಿ ನಡೆಸುತ್ತಿದ್ದಾರೆ. ಹಸಿ ಬಾಳೆದಿಂಡಿನ ಮಸಾಲ, ಮೊಳಕೆ ಬರಿಸಿದ ಮೆಂತ್ಯ ಕಾಳು ಮಸಾಲ, ಮೊಳಕೆ ಬರಿಸಿದ ಹೆಸರು ಕಾಳು ಮಸಾಲ, ಹಾಗಲಕಾಯಿ ಮಸಾಲ, ಕಾರ್ನ್‌ ಮಸಾಲ, ಸೌತೆಕಾಯಿ ಮಸಾಲ ಈ ಚಾಟ್‌ ಅಂಗಡಿಯ ವಿಶೇಷ. ಇಲ್ಲಿ ಮೈಸೂರು ಸ್ಪೆಷಲ್‌ ‘ಮೈಸೂರು ಚುರುಮುರಿ’ ಕೂಡ ಸಿಗುತ್ತದೆ. ಹಾಗಲಕಾಯಿ ಮಸಾಲ ಎಂದಾಕ್ಷಣ ಕಹಿ ಎಂದು ಮುಖ ಕಿವುಚಬೇಕಾಗಿಲ್ಲ. ಹಸಿ ಹಾಗಲಕಾಯಿ ಜೊತೆ ನಿಂಬೆ, ಕಡ್ಲೆಕಾಯಿ, ಈರುಳ್ಳಿ, ಕ್ಯಾರೆಟ್‌, ಸೇವ್‌ ಮಿಶ್ರಣ ತಿನ್ನಲು ರುಚಿಯಾಗಿದೆ. ಮೆಂತ್ಯಕಾಳು ಮೊಳಕೆ ಬರಿಸಿರುವುದರಿಂದ ಈ ಚಾಟ್‌ ಸಹ ಮತ್ತೊಮ್ಮೆ ರುಚಿ ನೋಡುವಂತಿದೆ.

ರೇವತಿ ಅವರು ಕಳೆದ 5 ವರ್ಷದ ಹಿಂದೆ ಈ ಅಂಗಡಿ ಆರಂಭಿಸಿದರು. ‘ಮಗ ತುಂಬ ಚಿಕ್ಕವನಿದ್ದಾಗ ಚಿತ್ರಕಲಾ ಪರಿಷತ್‌ ವಸ್ತು ಪ್ರದರ್ಶನಗಳಲ್ಲಿ ಅಂಗಡಿ ಹಾಕುತ್ತಿದ್ದೆ. ಅನಂತರ ಸ್ವಂತ ಅಂಗಡಿ ಆರಂಭಿಸೋಣ ಎಂದು ಇಲ್ಲಿ ಅಂಗಡಿ ಆರಂಭಿಸಿದೆ. ಬರೀ ಚುರುಮುರಿ ಆದ್ರೆ ವ್ಯಾಪಾರ ಸಾಗಲ್ಲ, ಹೊಸದೇನಾದರೂ ಮಾಡಬೇಕು ಎಂದು ಬಾಳೆದಿಂಡು, ಹೆಸರು ಕಾಳು, ಮೆಂತ್ಯ ಮಸಲಾ ಆರಂಭಿಸಿದೆ. ಬಾಳೆದಿಂಡು ಮಸಾಲ ಮೈಸೂರಿನಲ್ಲಿ ಫೇಮಸ್‌. ಆದ್ರೆ ಹೆಸರುಕಾಳು, ಮೆಂತ್ಯ ನನ್ನದೇ ರೆಸಿಪಿ. ನಾನೇ ಒಂದು ಬಾರಿ ರೆಸಿಪಿ ಪ್ರಯೋಗ ಮಾಡಿ 5–6 ಪ್ಲೇಟ್‌ ಗಿರಾಕಿಗಳಿಗೆ ಕೊಟ್ಟೆ. ಎಲ್ಲರೂ ಇಷ್ಟಪಟ್ಟರು. ಅದನ್ನೇ ಮುಂದುವರಿಸಿದೆ’ ಎಂದು ಅಂಗಡಿಯ ರೆಸಿಪಿ ಗುಟ್ಟನ್ನು ಬಿಟ್ಟುಕೊಟ್ಟರು.

ರೇವತಿ ಅವರು ‘ಫುಡ್‌ ಆ್ಯಂಡ್‌ ನ್ಯೂಟ್ರಿಷನ್‌’ ಕುರಿತಂತೆ ಕೋರ್ಸ್ ಸಹ ಮಾಡಿದ್ದಾರೆ. ದೇಹಕ್ಕೆ ಆರೋಗ್ಯಕರವಾದ ತಿನಿಸುಗಳನ್ನೇ ನೀಡುತ್ತಾರೆ.

‘ಹಸಿ ಬಾಳೆದಿಂಡು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊಳಕೆ ಬರಿಸಿದ ಹೆಸರು ಕಾಳು, ಕ್ಯಾರೆಟ್‌ ಜೊತೆ ಸೇರಿಸಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ನಿಂಬೆ, ಕಡ್ಲೆಕಾಯಿಬೀಜವನ್ನೂ ಸೇರಿಸಿರುತ್ತೇನೆ. ಮಧುಮೇಹದವರು ಹೆಚ್ಚಾಗಿ ಮೆಂತ್ಯ ಮಸಾಲ, ಕಿಡ್ನಿ ಕಲ್ಲು ಸಮಸ್ಯೆ ಇದ್ದವರು ಬಾಳೆದಿಂಡು ಮಸಾಲ ತಿನ್ನುತ್ತಾರೆ’ ಎಂದು ಗ್ರಾಹಕರ ಮನಸು ಅರಿತವರಂತೆ ವಿವರಣೆ ಕೊಡುತ್ತಾರೆ.

ರೇವತಿ

ದಿನಕ್ಕೆ 150ರಿಂದ 200 ಪ್ಲೇಟ್‌ ಖರ್ಚಾಗುತ್ತದೆ. ಗಿರಾಕಿಗಳನ್ನು ಮಾತನಾಡಿಸುವುದು, ಅವರ ಬೇಕು ಬೇಡ ವಿಚಾರಿಸುವುದು, ಮಸಲಾ ರೆಡಿ ಮಾಡುವುದು, ಕ್ಲೀನಿಂಗ್‌, ಬಿಲ್ಲಿಂಗ್‌ ಎಲ್ಲಾ ಕೆಲಸಗಳನ್ನು ರೇವತಿ ಒಬ್ಬರೇ ನಿರ್ವಹಿಸುತ್ತಾರೆ.

‘ಈ ಕೆಲಸಗಳು ನನಗೆ ರೂಢಿಯಾಗಿಬಿಟ್ಟಿದೆ. ಕಷ್ಟವೆನಿಸುವುದಿಲ್ಲ. ಸಂಜೆ 7 ಗಂಟೆ ಹೊತ್ತಿಗೆ ಪತಿ ಬರುತ್ತಾರೆ. ಅವರೂ 10 ಗಂಟೆ ತನಕ ನನಗೆ ಸಹಾಯ ಮಾಡುತ್ತಾರೆ. ಮರುದಿನದ ಕೆಲಸಕ್ಕೆ ರೆಡಿ ಮಾಡಿ ಇಟ್ಟು ಮನೆಗೆ ಹೋಗುತ್ತೇನೆ’ ಎಂದು ತಮ್ಮ ದಿನಚರಿ ವಿವರಿಸುತ್ತಾರೆ.

***

‘ಮೈಸೂರು ಸ್ಪೆಷಲ್‌ ಚಾಟ್’ ಅಂಗಡಿ

ಸ್ಥಳ– ಕೃಷ್ಣಯ್ಯ ಚೆಟ್ಟಿ ಜ್ಯುವೆಲ್ಲರ್ಸ್‌ ಮುಂಭಾಗ, 9ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರ

ಸಂಪರ್ಕಕ್ಕೆ– ಮೊ 97423 76660

ಒಬ್ಬರಿಗೆ: ₹50

***

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry