ಮಹಿಳೆಯ ಸಶಕ್ತ ದನಿ ರಾಜಕೀಯದಲ್ಲೂ ಮೊಳಗಲಿ

7

ಮಹಿಳೆಯ ಸಶಕ್ತ ದನಿ ರಾಜಕೀಯದಲ್ಲೂ ಮೊಳಗಲಿ

Published:
Updated:
ಮಹಿಳೆಯ ಸಶಕ್ತ ದನಿ ರಾಜಕೀಯದಲ್ಲೂ ಮೊಳಗಲಿ

ಈ ಬಾರಿಯ ಅಂತರರಾಷ್ಟ್ರೀಯ ಮಹಿಳಾ ದಿನದ ಮುನ್ನಾ ದಿನ ಸಕಾರಾತ್ಮಕ ವರದಿಯೊಂದು ಪ್ರಕಟವಾಗಿದೆ. ಬಾಲ್ಯವಿವಾಹಗಳ ಪ್ರಮಾಣ ಭಾರತದಲ್ಲಿ ಶೇ 47ರಿಂದ ಶೇ 27ಕ್ಕೆ ಇಳಿಕೆಯಾಗಿದೆ ಎಂಬುದು ಆ ವರದಿ. ಹಿಂದೆ ನಾಲ್ಕು ಹೆಣ್ಣುಮಕ್ಕಳಲ್ಲಿ ಒಂದು ಮಗು ಬಾಲ್ಯವಿವಾಹಕ್ಕೆ ಒಳಗಾಗುತ್ತಿತ್ತು. ಈಗ ಐದು ಹೆಣ್ಣುಮಕ್ಕಳಲ್ಲಿ ಒಂದು ಮಗು ಬಾಲ್ಯವಿವಾಹ ಪಿಡುಗಿಗೆ ಸಿಲುಕುತ್ತಿದೆ ಎಂದು ಯುನಿಸೆಫ್ ಪ್ರಕಟಣೆ ತಿಳಿಸಿದೆ. ಶಾಲೆಗಳಿಗೆ ಹೋಗುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು, ಹೆಣ್ಣುಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಹೆಚ್ಚಿದ ಸರ್ಕಾರಿ ಹೂಡಿಕೆ ಹಾಗೂ ಬಾಲ್ಯವಿವಾಹದ ಅಪಾಯಗಳ ಬಗ್ಗೆ ಸಾರ್ವಜನಿಕ ಅರಿವು ಮೂಡಿರುವುದು ಇದಕ್ಕೆ ಕಾರಣ ಎಂದು ಗುರುತಿಸಲಾಗಿದೆ. ಬಾಲ್ಯವಿವಾಹ ತಡೆ ಪ್ರಯತ್ನಗಳು ಒಂದಿಷ್ಟಾದರೂ ಫಲ ನೀಡಿರುವುದು ಸಂತಸದ ಸಂಗತಿ. ಆದರೆ, ಹೆರಿಗೆಗಳಲ್ಲಿ ತಾಯಂದಿರ ಮರಣ, ಶಿಶುಮರಣ, ಮಹಿಳೆಯರಲ್ಲಿ ರಕ್ತಹೀನತೆ, ಮಕ್ಕಳ ಅಪೌಷ್ಟಿಕತೆ ಇತ್ಯಾದಿ ಸಮಸ್ಯೆಗಳನ್ನೂ ಭಾರತ ಎದುರಿಸುತ್ತಿದೆ. ಈ ಸಮಸ್ಯೆಗಳಿಗೆಲ್ಲಾ ಮೂಲ ಕಾರಣ ಬಾಲ್ಯವಿವಾಹ ಎಂಬುದು ನಮಗೆ ನೆನಪಿರಬೇಕು. ಹೀಗಾಗಿ ಬಾಲ್ಯವಿವಾಹ ಪಿಡುಗಿಗೆ ಪೂರ್ಣ ತಡೆ ಹಾಕಲು ವಿವಿಧ ನೆಲೆಗಳಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು.

ಹಲವು ವೈರುಧ್ಯಗಳ ನಾಡು ಭಾರತ. ಒಂದೆಡೆ ಹೆಣ್ಣುಭ್ರೂಣ ಹತ್ಯೆ, ಬಾಲ್ಯವಿವಾಹದಂತಹ ಪಿಡುಗು ನಮ್ಮನ್ನು ಇನ್ನೂ ಕಾಡುತ್ತಿವೆ. ಮತ್ತೊಂದೆಡೆ ಈವರೆಗೆ ಪುರುಷ ಕೋಟೆಗಳಾಗಿದ್ದ ಕ್ಷೇತ್ರಗಳಿಗೆ ಪ್ರವೇಶಿಸಿ ಮಹಿಳೆಯರು ಹೊಸ ಇತಿಹಾಸ ಬರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಯುದ್ಧವಿಮಾನವನ್ನು ಏಕಾಂಗಿಯಾಗಿ ಯಶಸ್ವಿಯಾಗಿ ಹಾರಿಸಿದ ಆವನಿ ಚತುರ್ವೇದಿ ಭಾರತದಲ್ಲಿ ಹೊಸ ಇತಿಹಾಸವೊಂದನ್ನು ನಿರ್ಮಿಸಿದರು. ವಾಯುಪಡೆಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದರೂ ಯುದ್ಧ ವಿಮಾನ ಹಾರಿಸುವ ಅವಕಾಶ ಮಹಿಳೆಗೆ ಇರಲಿಲ್ಲ. ಇದರ ವಿರುದ್ಧ ಮಹಿಳೆಯರು ಕಾನೂನು ಹೋರಾಟ ನಡೆಸಬೇಕಾಯಿತು. ಆ ನಂತರ, 2016ರಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಚಾಲನೆಗೆ ಆವನಿ ಸೇರಿದಂತೆ ಮೂವರು ಮಹಿಳೆಯರು ಆಯ್ಕೆಯಾಗಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಅಮೆರಿಕ, ಇಸ್ರೇಲ್, ಬ್ರಿಟನ್ ಹಾಗೂ ಪಾಕಿಸ್ತಾನಗಳಲ್ಲಿ ಈಗಾಗಲೇ ಯುದ್ಧ ವಿಮಾನ ಚಾಲಕಿಯರಿದ್ದಾರೆ. ಭಾರತವೂ ಈಗ ಈ ಜಾಗತಿಕ ಪಟ್ಟಿಗೆ ಸೇರ್ಪಡೆಯಾಗಿದೆ ಎಂಬುದು ಸಂಭ್ರಮದ ಸಂಗತಿ. ರಾಜ್ಯದ ಬೀದರ್‌ನಲ್ಲಿ ಮೂರನೇ ಹಂತದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಆವನಿಯವರು ಸುಖೊಯ್ ಹಾಗೂ ತೇಜಸ್‌ನಂತಹ ಯುದ್ಧ ವಿಮಾನಗಳನ್ನೂ ಹಾರಿಸುವ ಸಾಮರ್ಥ್ಯ ಗಳಿಸಿಕೊಳ್ಳಲಿದ್ದಾರೆ. ಈ ಮಧ್ಯೆ ನೌಕಾಪಡೆಯಲ್ಲೂ ಹೆಚ್ಚಿನ ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳಲು ಪ್ರಯತ್ನಗಳು ನಡೆದಿವೆ. ಯುದ್ಧ ನೌಕೆಗಳಲ್ಲಿ ಮಹಿಳೆಯರನ್ನು ನಿಯೋಜಿಸುವ ಸಾಧ್ಯತೆಯನ್ನು ಅನ್ವೇಷಿಸಲಾಗುತ್ತಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಹೇಳಿದ್ದಾರೆ. ಯುದ್ಧರಂಗದಲ್ಲಿ ಮಹಿಳೆಯ ಶಕ್ತಿ ಪ್ರದರ್ಶನದ ಇನ್ನೊಂದು ಮಜಲಿಗೆ ಇದು ಮುನ್ನುಡಿಯಾಗಲಿದೆ.

ಈ ಬೆಳವಣಿಗೆಗಳು ನೀಡುವ ಸಂದೇಶವೇನು? ಮಹಿಳೆಗೆ ಪ್ರವೇಶ ನಿಷಿದ್ಧವಾಗಿದ್ದ ಪುರುಷ ಕೋಟೆಗಳು 21ನೇ ಶತಮಾನದಲ್ಲಿ ಛಿದ್ರವಾಗುತ್ತಿವೆ. ನಾರಿ ಶಕ್ತಿ ಹೊರಹೊಮ್ಮುತ್ತಿದೆ. ಕೆಲವು ಕ್ಷೇತ್ರಗಳು ಪುರುಷರಿಗೆ ಮಾತ್ರ ಎಂಬ ಮಾತುಗಳು ಸವಕಲಾಗುತ್ತಿವೆ ಎಂಬುದು ಚೈತನ್ಯ ನೀಡುವಂತಹದ್ದು. ಈ ಚೈತನ್ಯ, ರಾಜಕೀಯ ರಂಗವನ್ನೂ ತುಂಬಬೇಕಿದೆ. ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಳಕ್ಕೆ ರಾಜ್ಯ ವಿಧಾನಸಭೆ ಚುನಾವಣೆ ಸನಿಹದಲ್ಲೇ ಇರುವ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಹಿಳಾಮೀಸಲು ಮಸೂದೆಗೆ ಬಹುತೇಕ ರಾಜಕೀಯ ಪಕ್ಷಗಳು ಬಾಯಿಮಾತಿನ ಬೆಂಬಲ ನೀಡುತ್ತಲೇಇವೆ. ಹೀಗಿದ್ದೂ ಸಂಸತ್‌ನಲ್ಲಿ ಅದರ ಅನುಮೋದನೆಗೆ ಬೇಕಾದ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಹಿಳೆಗೂ ಸಮಾನ ರಾಜಕೀಯ ಪ್ರಾತಿನಿಧ್ಯ ಅತ್ಯವಶ್ಯ ಎಂಬುದು ನಮ್ಮ ಅರಿವಿನಲ್ಲಿರಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry