ಅಜ್ಜಿಯ ದಾಸೋಹ

7

ಅಜ್ಜಿಯ ದಾಸೋಹ

Published:
Updated:
ಅಜ್ಜಿಯ ದಾಸೋಹ

ಹತ್ತಿರತ್ತಿರ 85 ವರುಷ. ಸರಿಯಾಗಿ ಕಿವಿ ಕೇಳದು, ದೃಷ್ಟಿಯೂ ಮಸುಕು. ತಲೆ ಮೇಲೆ ಸೆರಗು ಹೊದ್ದು, ನಡುಗುತ್ತಲೇ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಶಾಲೆಯ ಬಳಿ ಬುತ್ತಿಯೊಂದಿಗೆ ಬರುವುದೇ ತಡ, ‘ಓ ಅಜ್ಜಿ...’ ಎಂದು ಕೂಗುತ್ತಾ ಮಕ್ಕಳು ಪ್ರೀತಿಯಿಂದ ಇವರ ಕೈ ಹಿಡಿದು ಒಳಗೆ ಕರೆತರುತ್ತಾರೆ. ಅಜ್ಜಿ ಬಂದದ್ದನ್ನು ಮಕ್ಕಳ ಈ ಸದ್ದಿನಿಂದಲೇ ತಿಳಿದುಕೊಳ್ಳುವ ಶಿಕ್ಷಕರು, ಅಜ್ಜಿಯ ಕೈ ಊಟಕ್ಕೆ ಅಣಿಯಾಗುತ್ತಾರೆ.

ಹೀಗೊಂದು ವಿಶಿಷ್ಟ ಸಂಪ್ರದಾಯ ಒಂದೆರಡಲ್ಲ, ಮೂವತ್ತು ವರ್ಷಗಳಿಂದಲೂ ನಿರಂತರವಾಗಿ ನಡೆದು ಕೊಂಡು ಬಂದಿದೆ. ಈ ಅನ್ನದಾಸೋಹದ ಕಥೆಯ ಹಿಂದೆ ಸಾವಮ್ಮ ಹೊಂಗಲ ಅವರ ಬತ್ತದ ಪ್ರೀತಿಯಿದೆ.

30 ವರ್ಷಗಳ ಹಿಂದೆ, ಧಾರವಾಡ ಜಿಲ್ಲೆಯ ಜೀರಿಗವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದವರು ಏಕೋಪಾಧ್ಯಾಯ ಶಿಕ್ಷಕರು ವೈ.ಐ.ಗಿಡನವರ. ಶಿಕ್ಷಕರೆಂದರೆ ದೇವರ ಸಮಾನ ಎಂದೇ ಭಾವಿಸಿದ್ದವರು ಸಾವಮ್ಮ. ಅವರಿಗೆ ಕನಿಷ್ಠ ಮಧ್ಯಾಹ್ನದ ಊಟವನ್ನಾದರೂ ನೀಡಿದರೆ, ಶಿಕ್ಷಣಕ್ಕೆ ತನ್ನ ಕೈಲಾದ ಸೇವೆ ಮಾಡಿದಂತೆ ಎಂದೇ ಭಾವಿಸಿದ ಸಾವಮ್ಮ, ಅಂದಿನಿಂದ ಮಧ್ಯಾಹ್ನದ ಊಟ ನೀಡಲು ಆರಂಭಿಸಿದರು.

‘ಈಗ ಶಾಲೆಗೆ ಬಿಸಿಯೂಟದ ಪೂರೈಕೆ ಆಗುತ್ತಿದೆ. ಅಡುಗೆ ಬೇಡವೆಂದರೂ ಅಜ್ಜಿ ಕೇಳುತ್ತಿಲ್ಲ. ಅವರ ಪ್ರೀತಿಯ ಒತ್ತಾಯಕ್ಕೆ ಮಣಿಯದೇ ಇರಲು ಹೇಗೆ ಸಾಧ್ಯ’ ಎಂದು ನೆನೆಸಿಕೊಳ್ಳುತ್ತಾರೆ ಈಗಿನ ಮುಖ್ಯೋಪಾಧ್ಯಾಯ ಎ.ಎಚ್.ನದಾಫ್.

*

ಶಾಲೆಯ ಎದುರೇ ನಮ್ಮ ಮನೆ. ನಮ್ಮೂರಿನ ಮಕ್ಕಳಿಗೆ ಕಲಿಸಲು ಪರ ಊರಿನಿಂದ ಬರುವ ಶಿಕ್ಷಕರಿಗೆ ಊಟ ಬಡಿಸುವುದು ನನ್ನ ಕರ್ತವ್ಯ ಎಂದೇ ಭಾವಿಸಿದ್ದೇನೆ. ಇದರಲ್ಲಿ ನನಗೆ ಸಂತೋಷವಿದೆ. ಈ ಕಾಯಕವನ್ನು ಮುಂದುವರಿಸಿಕೊಂಡು ಹೋಗಲಿದ್ದೇನೆ.

– ಸಾವಮ್ಮ ಹೊಂಗಲ್‌

*

ಶಿಕ್ಷಕರು ನಮ್ಮ ಮನೆ ಕುಟುಂಬದ ಸದಸ್ಯರು ಎಂಬ ಅಜ್ಜಿಯ ನಂಬಿಕೆಯನ್ನು ನಾವು ಪಾಲಿಸಿಕೊಂಡು ಬರುತ್ತಿದ್ದೇವೆ. ಮನೆಯಲ್ಲಿ ಏಳು ಜನರಿದ್ದೇವೆ. ಶಾಲೆಗೆ ಬರುವ ಐವರು ಶಿಕ್ಷಕರಿಗೆ ಊಟ ನೀಡುತ್ತಿದ್ದೇವೆ. ಇದು ನಮಗೆ ಸಂತೋಷವೆನಿಸುತ್ತಿದೆ.

– ಆತ್ಮಾನಂದ ಹೊಂಗಲ, ಸಾವಮ್ಮ ಅವರ ಮೊಮ್ಮಗ

*

ಕಳೆದ ಮೂರು ದಶಕಗಳಿಂದ ನಿರಂತರವಾಗಿ ಊಟ ನೀಡುತ್ತಿರುವ ಸಾವಮ್ಮ ಅವರ ಋಣವನ್ನು ನಾವು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಊಟವನ್ನು ನಾವು ತರುತ್ತೇವೆ ಎಂದರೂ, ಸಾವಮ್ಮ ಅವರು ನಾನು ಕೊಡುತ್ತೇನೆ ಎಂದು ಗಟ್ಟಿ ಧನಿಯಲ್ಲಿ ಹೇಳಿದಾಗ ನಮ್ಮ ಗಂಟಲು ಕಟ್ಟಿದಂಗಾಗುತ್ತದೆ. ಹೀಗಾಗಿ ನಿತ್ಯ ಪ್ರಸಾದ ಎಂಬಂತೆ ಅವರು ನೀಡಿದ ಊಟವನ್ನು ಸೇವಿಸುತ್ತೇವೆ.

– ವೈ.ಐ.ಗಿಡನವರ, ಶಿಕ್ಷಕರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry