ಸಚಿವಾಲಯ ನೇಮಕಾತಿಯಲ್ಲಿ ಎಲ್ಲವೂ ‘ರಹಸ್ಯ’ !

7
ಮೆರಿಟ್‌, ಮೀಸಲಾತಿ ಪಾಲನೆ ಆಗಿಲ್ಲ: ಅಧಿಕಾರಿಗಳ ದೂರು

ಸಚಿವಾಲಯ ನೇಮಕಾತಿಯಲ್ಲಿ ಎಲ್ಲವೂ ‘ರಹಸ್ಯ’ !

Published:
Updated:

ಬೆಂಗಳೂರು: ವಿಧಾನಸಭಾ ಸಚಿವಾಲಯದ ‘ಸಿ’ ಮತ್ತು ‘ಡಿ’ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಮೆರಿಟ್‌ ಮತ್ತು ಮೀಸಲಾತಿ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ನೇಮಕಾತಿ ಪಟ್ಟಿ ಸಿದ್ಧಗೊಳಿಸುವುದಕ್ಕೆ ಮುನ್ನ ನಿರ್ದೇಶಕರು ಮತ್ತು ಜಂಟಿ ಕಾರ್ಯದರ್ಶಿಗಳ ಜತೆ ಸಚಿವಾಲಯ ಕಾರ್ಯದರ್ಶಿ ಚರ್ಚಿಸಬೇಕು. ಬಳಿಕ ಅಂತಿಮ ಪಟ್ಟಿಯನ್ನು ವಿಧಾನಸೌಧದ ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು ಎಂಬ ನಿಯಮ ಇದೆ. ಈ ಬಾರಿ ಅವೆಲ್ಲವನ್ನೂ ಗಾಳಿಗೆ ತೂರಲಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ಆರೋಪಿಸಿದ್ದಾರೆ.

ಸಚಿವಾಲಯದ ಕಾರ್ಯದರ್ಶಿ ಎಸ್‌.ಮೂರ್ತಿ ಮತ್ತು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ಆಪ್ತರು ನೇಮಕಾತಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲ ಪ್ರಕ್ರಿಯೆಗಳನ್ನು ರಹಸ್ಯವಾಗಿ ನಡೆಸಲಾಗುತ್ತಿದೆ. ಪಾರದರ್ಶಕವಾಗಿ ಏನೂ ನಡೆಯುತ್ತಿಲ್ಲ ಎಂದು ಅವರು ‘ಪ್ರಜಾವಾಣಿ’ ಗೆ ತಿಳಿಸಿದರು.

ಈ ಹಿಂದೆ ಯಾವುದೇ ಹುದ್ದೆಗೆ ನೇಮಕ ಮಾಡುವಾಗ ಕಾರ್ಯದರ್ಶಿಗಳು (ಮೂರ್ತಿಗೆ ಮೊದಲು) ಜಂಟಿ ಕಾರ್ಯದರ್ಶಿಗಳು ಮತ್ತು ಇತರ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುತ್ತಿದ್ದರು. ಆದರೆ, ಈಗಿನ ಕಾರ್ಯದರ್ಶಿಗಳು ಆ ಪರಂಪರೆ ಪರಿಪಾಲಿಸುತ್ತಿಲ್ಲ ಎಂದು ಅವರು ಹೇಳಿದರು.

ಕರ್ನಾಟಕ ವಿಧಾನಸಭೆ ಸಚಿವಾಲಯ (ನೇಮಕಾತಿ ಹಾಗೂ ಸೇವೆಗಳ ಷರತ್ತು) (ತಿದ್ದುಪಡಿ) ನಿಯಮಾವಳಿ  2003 ರ ಪ್ರಕಾರ ಯಾವುದೇ ನೇಮಕಾತಿ ಮಾಡುವ ಮೊದಲು ಲಿಖಿತ ಪರೀಕ್ಷೆ ನಡೆಸಿ, ಬಳಿಕ ಸಂದರ್ಶನಕ್ಕೆ ಕರೆಯಬೇಕು. ಮೆರಿಟ್‌ ಮತ್ತು ರೋಸ್ಟರ್‌ ಆಧಾರದಲ್ಲಿ ಆಯ್ಕೆಯಾದವರ ಪಟ್ಟಿಯನ್ನು ತಯಾರಿಸಬೇಕು. ಇದು ಹಿಂದಿನಿಂದಲೂ ಚಾಚೂ ತಪ್ಪದೆ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ, ಸದ್ಯ ವಿಧಾನಸಭೆ ಸಚಿವಾಲಯ ನಡೆಸುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಇದ್ಯಾವುದನ್ನೂ ಪಾಲಿಸುತ್ತಿಲ್ಲ.

‘ಈ ಬಾರಿಯಂತೂ ಆಯ್ಕೆ ಪಟ್ಟಿಯನ್ನು ಹಿರಿಯ ಅಧಿಕಾರಿಗಳು ಕೇಳಿದರೂ ಪರಿಶೀಲಿಸಲು ಕೊಡುತ್ತಿಲ್ಲ. ಎಷ್ಟು ಜನರನ್ನು ಆಯ್ಕೆ ಮಾಡಿದ್ದಾರೆ ಎಂಬ ನಿಖರ ಮಾಹಿತಿ ನಮಗೂ ಸಿಗುತ್ತಿಲ್ಲ. ಗುಟ್ಟು ಮಾಡುವ ಮೂಲಕ ನಮ್ಮನ್ನು ಕತ್ತಲಲ್ಲಿ ಇಡಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ  ಅಧಿಕಾರಿ ದೂರಿದ್ದಾರೆ.

ಚುನಾವಣಾ ಆಯೋಗಕ್ಕೆ ದೂರು

ಸಚಿವಾಲಯದ ‘ಸಿ’ ಮತ್ತು ‘ಡಿ’ ದರ್ಜೆ ಹುದ್ದೆಗಳಿಗೆ ಕಾನೂನು ಬಾಹಿರವಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ವಕೀಲ ಎಸ್.ಎನ್. ಶರ್ಮಾ ಎಂಬುವವರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಈ ದೂರನ್ನು ವಿಧಾನಸಭಾ ಕಾರ್ಯದರ್ಶಿಯವರಿಗೆ ಕಳುಹಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಯ ಹಿರಿಯ ಸಲಹೆಗಾರ ಡಿ.ಎನ್‌.ನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಚುನಾವಣಾ ನೀತಿಸಂಹಿತೆ ಇನ್ನೂ ಜಾರಿ ಆಗಿಲ್ಲ. ಆದ್ದರಿಂದ ಇಂತಹ ದೂರುಗಳ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಈ ದೂರಿನ ಬಗ್ಗೆ ಕ್ರಮ ತೆಗೆದುಕೊಂಡು ಮಾಹಿತಿ ನೀಡುವಂತೆ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗೆ ಸೂಚಿಸಿರುವುದಾಗಿ ನಾಯಕ್‌ ಹೇಳಿದರು.

ಸಚಿವಾಲಯದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2017 ಡಿಸೆಂಬರ್‌ 30 ಕೊನೆಯ ದಿನವಾಗಿತ್ತು. ಆದರೆ, ತರಾತುರಿಯಲ್ಲಿ ಆಯ್ಕೆ ಪ್ರಾರಂಭಿಸಲಾಯಿತು. ಚುನಾವಣೆ ಘೋಷಣೆಯಾಗಿ ತಮ್ಮ ಅಧಿಕಾರಾವಧಿ ಮುಗಿಯಬಹುದು ಎಂಬುದೇ ಈ ಆತುರಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ನೇಮಕಾತಿ ಪ್ರಕ್ರಿಯೆಯಲ್ಲಿ ಸೇವಾ ನಿಯಮ ಪಾಲಿಸಿಲ್ಲ. ಅದರಲ್ಲೂ ನಿವೃತ್ತ ಯೋಧರು ಮತ್ತು 371(ಜೆ) ಅನ್ವಯ ಹೈದರಾಬಾದ್‌– ಕರ್ನಾಟಕ ಭಾಗದವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಅದನ್ನೂ ಉಲ್ಲಂಘಿಸಲಾಗಿದೆ. ಇದು ಸಂವಿಧಾನ ವಿರೋಧಿ ಕ್ರಮ’ ಎಂದು ಶರ್ಮ ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry