ನಿಧಾನವೇ ಪ್ರಧಾನ

7

ನಿಧಾನವೇ ಪ್ರಧಾನ

Published:
Updated:
ನಿಧಾನವೇ ಪ್ರಧಾನ

ನಮ್ಮ ಸಾಧನೆಯನ್ನು ಗುರುತಿಸುವ ಜನರೇ ನಿಷ್ಠುರವಾಗಿ ಹೆಣ್ಣುಮಕ್ಕಳ ಮಿತಿಗಳನ್ನು ಪಟ್ಟಿ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ತಮ್ಮ ಕೆಟ್ಟ ಮನೋಧರ್ಮಗಳಿಗೆ ಬಳಸಿಕೊಳ್ಳುತ್ತಾರೆ. ಇತ್ತೀಚೆಗೆ ಮಿಥಾಲಿ ರಾಜ್ ಅವರ ಉಡುಗೆ ಬಗ್ಗೆ ಎದುರಾದ ಆಕ್ಷೇಪ ಒಮ್ಮೆ ನಮ್ಮಲ್ಲಿದ್ದ ಆಶಾಬಲವನ್ನೇ ಅಲ್ಲೋಲ ಕಲ್ಲೋಲ ಮಾಡಿತು.. ಹೀಗೆ ಹೇಳಿದ್ದು ಕರ್ನಾಟಕದ ಹೆಮ್ಮೆಯ ಕ್ರಿಕೆಟ್‌ ಆಟಗಾರ್ತಿ ವೇದಾ ಕೃಷ್ಣಮೂರ್ತಿ.

ಕಡೂರಿನಲ್ಲಿ ಹುಟ್ಟಿ ಬೆಳೆದ ವೇದಾ ಚಿಕ್ಕಂದಿನಿಂದಲೂ ಹೆಣ್ಣು, ಗಂಡು ಎಂಬ ಭೇದ ಇರದ ಮುಕ್ತ ವಾತಾವರಣದಲ್ಲಿ ಬೆಳೆದರು. ತಮ್ಮ ಹಳ್ಳಿಯಲ್ಲಿ ಇದ್ದ ಸರ್ಕಾರಿ ಶಾಲೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭ್ಯಾಸ ಮಾಡಿದರು. 2005ರಿಂದ ವೇದಾ ಕರ್ನಾಟಕ ರಾಜ್ಯ ತಂಡಕ್ಕೆ ಆಡತೊಡಗಿದರು. ಹೈದರಾಬಾದ್‌ನಲ್ಲಿ 2010ರಲ್ಲಿ ನಡೆದ ಅಂತರ ರಾಜ್ಯ ಕ್ರಿಕೆಟ್ ಟೂರ್ನಿಯಲ್ಲಿ ಅವರು ಎರಡು ಶತಕ ದಾಖಲಿಸಿದರು. ತಮಿಳುನಾಡು ಹಾಗೂ ಬೆಂಗಾಲ್‌ ತಂಡಗಳ ಎದುರು ರನ್ ಹೊಳೆ ಹರಿಸಿದರು.

ಇದೇ ಟೂರ್ನಿ ಅವರ ಭವಿಷ್ಯದ ಬಾಗಿಲು ತೆರೆಸಿತು. ಆಯ್ಕೆ ಸಮಿತಿ ಗಮನಸೆಳೆದ ಅವರು 2011ರಲ್ಲಿ ಭಾರತ ತಂಡಕ್ಕೆ ಆಡುವ ಅವಕಾಶ ಪಡೆದರು. ಇಂಗ್ಲೆಂಡ್‌ನಲ್ಲಿ ಭಾರತ ತಂಡಕ್ಕಾಗಿ ಚೊಚ್ಚಲ ಪಂದ್ಯ ಆಡುವುದು ಎಂದರೆ ಸಾಮಾನ್ಯ ಅಲ್ಲ. ಈ ಸವಾಲನ್ನು ಮೀರಿ ನಿಂತ ಅವರು ಪದಾರ್ಪಣೆ ಪಂದ್ಯದಲ್ಲಿಯೇ ಅರ್ಧಶತಕ ದಾಖಲಿಸುವ ಮೂಲಕ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.

‘ವಿದೇಶದಲ್ಲಿ ಮಹಿಳೆಯರ ಕ್ರಿಕೆಟ್‌ ಪಂದ್ಯಗಳು ನಡೆದಾಗ ಸಾಕಷ್ಟು ಜನ ಸೇರಿ ನೋಡುತ್ತಾರೆ. ಆದರೆ ಭಾರತದಲ್ಲಿ ಮಹಿಳೆಯರ ಕ್ರಿಕೆಟ್ ನೋಡುವ ದೃಷ್ಟಿಕೋನ ಬದಲಾಗಬೇಕು. ಆಡುವಾಗ ಇದನ್ನೆಲ್ಲ ಯೋಚಿಸುವುದಿಲ್ಲ. ನೇರಪ್ರಸಾರವಾದಾಗ ಜನ ನೋಡಿ ಮೆಚ್ಚಿಕೊಳ್ಳುತ್ತಾರೆ. ವಿಶ್ವಕಪ್‌ನಲ್ಲಿ ನಾವು ಫೈನಲ್ ತಲುಪಿದ ಮೇಲೆ ಸಾಕಷ್ಟು ಬದಲಾವಣೆಗಳು ಆಗಿವೆ. ನಿಧಾನವಾಗಿ ಆಗುವ ಬದಲಾವಣೆ ಎಂದಿಗೂ ಶಾಶ್ವತವಾದದ್ದು ಎಂದು ನಾನು ನಂಬುತ್ತೇನೆ’ ಎಂದು ವೇದಾ ಭರವಸೆಯ ಮಾತುಗಳನ್ನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry