6

ಯುದ್ಧಕ್ಕೆ ಮಹಿಳಾ ಪೈಲಟ್‌ಗಳು ಸಜ್ಜು

Published:
Updated:
ಯುದ್ಧಕ್ಕೆ ಮಹಿಳಾ ಪೈಲಟ್‌ಗಳು ಸಜ್ಜು

ನವದೆಹಲಿ: ಭಾರತೀಯ ವಾಯುಪಡೆಯ ಯುದ್ಧವಿಮಾನಗಳ ಸ್ಕ್ವಾಡ್ರನ್‌ ಗಳಲ್ಲಿ ಮಹಿಳಾ ಪೈಲಟ್‌ಗಳ ಯುಗ ಈಗಷ್ಟೇ ಆರಂಭವಾಗಿದೆ. ಯುದ್ಧ ವಿಮಾನಗಳ ಚಾಲನೆಗೆ ಮಹಿಳೆಯರು ಸಮರ್ಥರಲ್ಲ ಎಂಬ ನೆಪ ಕಳೆದ ತಿಂಗಳಷ್ಟೇ ನೇಪಥ್ಯಕ್ಕೆ ಸರಿದಿದೆ.

ದಶಕಗಳ ಕಾಲ ಇದ್ದ ಈ ಪೂರ್ವಗ್ರಹವನ್ನು ಕೊನೆಗಾಣಿಸಿದ್ದು ಅವನಿ ಚತುರ್ವೇದಿ ಎಂಬ ಮಹಿಳಾ ಪೈಲಟ್. ಫೆಬ್ರುವರಿ 22ರಂದು ಅವರು ಜಾಮ್‌

ನಗರ ವಾಯುನೆಲೆಯಲ್ಲಿ ಮಿಗ್–21 ಬಿಸನ್ ಯುದ್ಧವಿಮಾನವನ್ನು ಏರಿ ಕುಳಿತಿದ್ದರು. 2016ರಿಂದಲೇ ಅವರು ಮಿಗ್–21 ಬಿಸನ್‌ ಅನ್ನು ಚಲಾಯಿಸುತ್ತಿ

ದ್ದರೂ, ಅವರ ಯುದ್ಧವಿಮಾನದ ಹಿಂದೆ ತರಬೇತುದಾರರ ವಿಮಾನಗಳಿರುತ್ತಿದ್ದವು. ಆದರೆ ಫೆ.22ರಂದು ಅವನಿ ಏಕಾಂಗಿಯಾಗಿ ಮಿಗ್‌–21 ವಿಮಾನ

ವನ್ನು ಚಲಾಯಿಸಲು ಸಿದ್ಧರಾಗಿದ್ದರು.

ಜಾಮ್‌ನಗರ ವಾಯುನೆಲೆಯ ರನ್‌ವೇಯಿಂದ ಮೇಲಕ್ಕೆ ಜಿಗಿದ ವಿಮಾನವನ್ನು ಅವರು ಏಕಾಂಗಿಯಾಗಿ ಬರೋಬ್ಬರಿ 30 ನಿಮಿಷ ಚಲಾಯಿಸಿದರು. ಅಲ್ಲಿಗೆ ಭಾರತದ ಯುದ್ಧ ವಿಮಾನಗಳ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆ ಅವನಿ ಪಾಲಾಯಿತು.

‘ಪ್ರತಿ ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ಗಳು ಹೊಸ ಅನುಭವ ನೀಡುವ ಕಾರಣ ಯುದ್ಧ ವಿಮಾನ ಹಾರಾಟದಲ್ಲಿ ಕಲಿಕೆ ಕೊನೆಗೊಳ್ಳುವುದೇ ಇಲ್ಲ’ ಎಂಬುದು ಅವರ ಅಭಿಮತ. ಮಹಿಳಾ ದಿನಾಚರಣೆ ಅಂಗವಾಗಿ ‘ಪ್ರಜಾವಾಣಿ’ ನಡೆಸಿದ ಚುಟುಕು ಸಂದರ್ಶನದಲ್ಲಿ ಅವರು ಹಂಚಿಕೊಂಡ ಮಾತು ಇದು.

ಅವರ ಜತೆಯಲ್ಲಿ ಭಾವನಾ ಕಾಂತ್ ಮತ್ತು ಮೋಹನಾ ಸಿಂಗ್ ಎಂಬ ಇನ್ನಿಬ್ಬರು ಮಹಿಳಾ ಪೈಲಟ್‌ಗಳು ಸಹ ಯುದ್ಧವಿಮಾನಗಳನ್ನು ಚಲಾಯಿಸಿ ಸಾಧನೆ ಮೆರೆದರು.

ಯುದ್ಧವಿಮಾನಗಳನ್ನು ಚಲಾಯಿಸುವಷ್ಟು ಮಹಿಳೆಯರು ಸಮರ್ಥರಲ್ಲ ಎಂಬ ವಾದ ವಾಯುಪಡೆಯಲ್ಲಿ ಈಚಿನವರೆಗೂ ಇತ್ತು. ಯುದ್ಧವಿಮಾನಗಳ ಪೈಲಟ್‌ಗಳಾಗಿ ಮಹಿಳೆಯರನ್ನು ನಿಯೋಜಿಸಬೇಕು ಎಂಬ ಪ್ರಸ್ತಾವ ವನ್ನು ವಾಯುಪಡೆ ಮುಖ್ಯಸ್ಥರು ಈಚಿನವರೆಗೂ ನಿರಾಕರಿಸುತ್ತಲೇ ಬಂದಿದ್ದರು. ಪ್ರಸ್ತಾವ ನಿರಾಕರಣೆಗೆ ಈ ಮೊದಲೇ ಹೇಳಿದ ಅಂಶ ಮೊದಲನೇ ಕಾರಣ. ಅದರ ಜತೆಯಲ್ಲೇ ವಾಯುಪಡೆ ಮತ್ತೊಂದು ಕಾರಣವನ್ನು ಮುಂದಿಡುತ್ತಿತ್ತು.

‘ಮಹಿಳಾ ಪೈಲಟ್‌ಗಳು ವಿವಾಹ ವಾದರೆ, ಅವರು ತಾಯಿಯಾಗುವ ಸಂದರ್ಭ ಒದಗುತ್ತದೆ. ಆ ಅವಧಿಯಲ್ಲಿ ಅವರು ಯುದ್ಧವಿಮಾನಗಳ ಪೈಲಟ್‌ಗಳಾಗಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ. ಅವರಿಗೆ ತರಬೇತಿ ನೀಡಲು ಸುಮಾರು ₹ 15 ಕೋಟಿ ಖರ್ಚು ಮಾಡಬೇಕಾಗುತ್ತದೆ. ಅಷ್ಟೂ ಹಣವ್ಯರ್ಥವಾಗುತ್ತದೆ’ ಎಂಬುದೇ ಆ ಇನ್ನೊಂದು ಕಾರಣ. ಆದರೆ ವಾಯುಪಡೆಯ ಈ ನೀತಿಗೆ ರಕ್ಷಣಾ ಸಚಿವಾಲಯವು 2015ರಲ್ಲಿ ತಡೆಯೊಡ್ಡಿತು. ವಾಯುಪಡೆ ನೀಡುತ್ತಿದ್ದ ಕಾರಣಗಳನ್ನು ಬದಿಗೊತ್ತಿದ ಸಚಿವಾಲಯವು ಮಹಿಳಾ ಪೈಲಟ್‌ಗಳಿಗೆ ಐದು ವರ್ಷಗಳ ಯುದ್ಧವಿಮಾನ ಚಾಲನೆ ತರಬೇತಿ ನೀಡುವ ಯೋಜನೆ

ಪ್ರಾಯೋಗಿಕವಾಗಿ ಜಾರಿಗೆ ತಂದಿತು.

2016ರಲ್ಲಿ ಆಯ್ಕೆಯಾದ ಮೊದಲ ತಂಡದಲ್ಲಿ ಅವನಿ, ಭಾವನಾ ಮತ್ತು ಮೋಹನಾ ಇದ್ದರು. ಈ ಮೂವರು ಇನ್ನೂ ಒಂದೂವರೆ ವರ್ಷ ತರಬೇತಿ

ಯಲ್ಲಿ ಇರಬೇಕಾಗುತ್ತದೆ. ಈಅವಧಿಯಲ್ಲಿ ಅವರು ಯುದ್ಧವಿಮಾನ ಚಾಲನೆಯಲ್ಲಿ ಪರಿಣತರಾಗಲಿದ್ದಾರೆ.

‘ಸೇವೆಗೆ ನಿಯೋಜನೆಯಾದ ನಂತರದ ನಾಲ್ಕು ವರ್ಷ ತಾಯಿಯಾಗಬಾರದು ಎಂದು ಈ ಮೂವರಿಗೂ ವಾಯುಪಡೆ ಸೂಚನೆ ನೀಡಿದೆ’ ಎಂದು ಮೂಲಗಳು ಹೇಳಿವೆ. ಆದರೆ ‘ಅಂತಹ ಯಾವುದೇ ಸೂಚನೆ ನನಗೆ ಬಂದಿಲ್ಲ’ ಎಂದು ಅವನಿ ಸ್ಪಷ್ಟಪಡಿಸಿದ್ದಾರೆ.

ಈಗ ಎರಡನೇ ತಂಡಕ್ಕೆ ಮತ್ತೆ ಮೂವರು ಮಹಿಳೆಯರು ಆಯ್ಕೆಯಾಗಿದ್ದಾರೆ. ಅವರ ತರಬೇತಿ ಇನ್ನಷ್ಟೇ ಆರಂಭವಾಗಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry