ದೇಹಾತ್ಮನಾಶ(ಫನಾ)

ಮಂಗಳವಾರ, ಮಾರ್ಚ್ 19, 2019
21 °C

ದೇಹಾತ್ಮನಾಶ(ಫನಾ)

Published:
Updated:
ದೇಹಾತ್ಮನಾಶ(ಫನಾ)

ಸಾಮಾನ್ಯವಾಗಿ ‘ಫನಾ ಎಂದರೆ ಸಾವು, ದೇಹತ್ಯಾಗ, ನಾಶ ಎಂಬ ಅರ್ಥವಿದೆ. ಅಧ್ಯಾತ್ಮ ಸಂದರ್ಭದಲ್ಲಿ ಇದನ್ನು ದೇಹಾತ್ಮನಾಶ, ಪರಿತ್ಯಾಗ, ಲೌಕಿಕ ದೇಹದ ಪರಿಸಮಾಪ್ತಿ ಎಂದೆಲ್ಲ ಅರ್ಥೈಸಲಾಗುತ್ತದೆ. ‘ಫನಾದ ಅಂತಿಮ ಹಂತವು ‘ಫನಾ ಅಲ್ ಫನಾ ಅಂದರೆ ಸಾವಿನ ಸಾವು ಎನ್ನಲಾಗುತ್ತದೆ. ಇಸ್ಲಾಮ್ ಪುನರ್ಜನ್ಮದಲ್ಲಿ ವಿಶ್ವಾಸ ಇರಿಸಿಕೊಳ್ಳದಿರುವುದರಿಂದ ಅಳಿಸಿಹಾಕುವುದು, ಸಂಪೂರ್ಣನಾಶವೆಂದು ಇದಕ್ಕೆ ಸೂಫಿ ಆಧ್ಯಾತ್ಮ ಅರ್ಥೈಸುತ್ತದೆ. ಇದರಿಂದಾಗಿ ಸೂಫಿ ಪಂಡಿತರು ಇದನ್ನು ಬೌದ್ಧಧರ್ಮ ಮತ್ತು ಹಿಂದೂ ಧರ್ಮದ ‘ನಿರ್ವಾಣಕ್ಕೆ ಹೋಲಿಸುವುದು ಸರಿಯಲ್ಲವೆಂದು ವಾದಿಸುತ್ತಾರೆ.

ಅಧ್ಯಾತ್ಮ ಪ್ರೇಮದ ಹಾದಿಯ ಕೊನೆಯ ಹಂತದಲ್ಲಿ ಪ್ರೇಮವಾಗಲಿ ಯಾ ಅಧ್ಯಾತ್ಮ ರಹಸ್ಯ ಜ್ಞಾನವಾಗಲಿ, ಸಾಧಕನು ಇದಾವುದರ ಗೊಡವೆಗೆ ಹೋಗದೆ ಸದಾ ತನ್ನ ಪೂರ್ವಸಿದ್ಧತೆಯ ತಯಾರಿಯಲ್ಲಿರುತ್ತಾನೆ. ಅಂದರೆ ದೇವರ ನಾಮದ ಜಪ(ದ್ಹಿಕ್ರ್), ಚಿತ್ತೈಕಾಗ್ರತೆಯಲ್ಲಿದ್ದು, ದೇಹಾತ್ಮನಾಶದ(ಫನಾ) ಅಂತಿಮಸ್ಥಿತಿಗೆ ತಲಪುವ ಗುರಿಯನ್ನು ಮುಟ್ಟುವುವುದಕ್ಕೆ ಸಿದ್ಧವಾಗಿರುತ್ತಾನೆ. ಸಾಧಕನು ಉದ್ದೇಶಿತ ಸಾಮೂಹಿಕ ಧ್ಯಾನದ(ಮುರಾಖಬಾ) ಮೇಲೆ ಏಕಾಗ್ರತೆಯನ್ನಿಟ್ಟುಕೊಳ್ಳುವುದನ್ನು ಸಿದ್ಧಿಸಿಕೊಂಡಾಗ ಅಂತರ್ ದರ್ಶನ(ಮುಶಾಹದಾ)ವನ್ನು ಪಡೆಯುತ್ತಾನೆ. ಆದರೆ ಈ ದರ್ಶನವನ್ನು ಅರ್ಥೈಸುವುದಾದರೆ ದೃಢನಂಬಿಕೆಯ ಜ್ಞಾನ(ಇಲ್ಮಲ್ ಯಖೀನ್)ಕ್ಕೆ ಹೊಂದಿಕೊಂಡಂತೆ ಹೆಚ್ಚುಕಮ್ಮಿ ಉಪಸ್ಥಿತಿ ಅಥವಾ ಸಾಮೀಪ್ಯ ಎಂದಾಗುತ್ತದೆ. ಮೊದಲು ‘ಫನಾ ಎನ್ನುವುದು ನೈತಿಕ ಭಾವನೆಗೆ ಸಂಬಂಧಿಸಿದ್ದೆಂದು ಪರಿಗಣಿಸಲ್ಪಟ್ಟಿತ್ತು. ಮನುಷ್ಯನೊಬ್ಬ ಸಂಪೂರ್ಣ ನಾಶವಾಗುವುದೆಂದರೆ ಸಾವು ಮಾತ್ರವಲ್ಲ, ದೇವರ ಗುಣಲಕ್ಷಣವನ್ನು ಪಡೆಯುವುದು; ಅಂದರೆ ‘ತಖಲ್ಲಕೂ ಬಿ ಅಖ್‌ಲಕ್ ಅಲ್ಲಾಹ್ ದೇವರ ಗುಣಲಕ್ಷಣಗಳಿಗೆ ಸರಿಸಮಾನವಾಗಿ ಹೊಂದುವುದಕ್ಕೆ ತೇರ್ಗಡೆಯನ್ನು ಪಡೆಯುವುದು. ಇಲ್ಲಿ ಮೂರು ಹಂತಗಳಿವೆ ಮೊದಲ ಹಂತದಲ್ಲಿ ಮನಸ್ಸಿನ ಏಕಾಗ್ರತೆ ಮತ್ತು ಸತತ ಪರಿಶ್ರಮ, ಧ್ಯಾನದ ಮೂಲಕ ಮನುಷ್ಯನ ಮೂಲದಲ್ಲಿರುವ ಗುಣಗಳನ್ನು ತ್ಯಜಿಸಿ ಪ್ರಶಂಸನೀಯ ಶ್ರೇಷ್ಠವಾದ ಗುಣವಿಶೇಷತೆಯನ್ನು ಪಡೆಯಲಾಗುತ್ತದೆ. ಎರಡನೆಯ ಹಂತದಲ್ಲಿ ಆತ್ಮವು ಆದಿಸ್ವರೂಪದ ದೇವರ ಬೆಳಕಿನ ಪ್ರಭೆಯಿಂದ ಸುತ್ತುವರಿದು ಉಂಟಾದ ದೈವೀ ದರ್ಶನದ ಮೂಲಕ ವಿನಾಶಹೊಂದುವುದು. ಮೂರನೆಯ ಹಂತದಲ್ಲಿ ತನ್ನ ಸ್ವತಹ ದೇಹಾತ್ಮನಾಶದ ದರ್ಶನದ ಮೂಲಕ ತಾನೇ ಸಂಪೂರ್ಣ ನಾಶಹೊಂದುವುದು ಅಂದರೆ ಸಾಧಕನು ಸಂಪೂರ್ಣವಾಗಿ ದೇವರ ‘ವಜೂದ್ ಅಥವಾ ಅಸ್ಥಿತ್ವದೊಂದಿಗೆ ಲೀನವಾಗುವುದು. ಇದರರ್ಥ ದೇವರ ಅಸ್ಥಿತ್ವದಲ್ಲಿ ತನ್ನನ್ನು ತಾನು ಕಂಡುಕೊಳ್ಳುವುದು. ಇದನ್ನು ‘ಅಧ್ಯಾತ್ಮ ಅನುಭವ ಎಂದು ಕರೆಯಲಾಗುತ್ತದೆ. ಅಬೂ ನಸ್ರ್ ಅಸ್ಸರ್ರಾಜ್‌ರ ‘ಕಿತಾಬ್ ಅಲ್ಲುಮಾ ಫೀ ತಸವ್ವದುಫ್ ಗ್ರಂಥದಲ್ಲಿ ಈ ಸಂದರ್ಭವನ್ನು ಹೀಗೆ ಕಾಣಲಾಗಿದೆ:

ನಾನೇನು ಪಾಪಮಾಡಿದೆ? ಎಂದು ಕೇಳಿದಾಗ ಅವಳು ಹೇಳಿದಳು,

ನಿನ್ನ ಅಸ್ತಿತ್ವವೇ ಒಂದು ಪಾಪ, ಇದರೊಂದಿಗೆ ಬೇರಿನ್ನಾವ ಪಾಪವೂ ಸರಿಗಟ್ಟಲಾರದು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry