19ನೇ ಸ್ಥಾನಕ್ಕೆ ಜಿಗಿದ ಮುಕೇಶ್‌

7
ಸತತ 11ನೇ ವರ್ಷವೂ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ

19ನೇ ಸ್ಥಾನಕ್ಕೆ ಜಿಗಿದ ಮುಕೇಶ್‌

Published:
Updated:
19ನೇ ಸ್ಥಾನಕ್ಕೆ ಜಿಗಿದ ಮುಕೇಶ್‌

ನ್ಯೂಯಾರ್ಕ್‌: ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು ಸತತ 11ನೇ ವರ್ಷವೂ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಫೋರ್ಬ್ಸ್‌ ನಿಯತಕಾಲಿಕೆ ಬಿಡುಗಡೆ ಮಾಡಿರುವ ಸಿರಿವಂತರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಒಟ್ಟು ₹ 2.60 ಲಕ್ಷ ಕೋಟಿ ಆಸ್ತಿಯ ಒಡೆಯರಾಗಿರುವ ಅವರು ದೇಶದ 119 ಕುಬೇರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಜಾಗತಿಕವಾಗಿ ಕಳೆದ ವರ್ಷ 33ನೇ ಸ್ಥಾನದಲ್ಲಿದ್ದ ಅವರು ಈ ವರ್ಷ 19ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರ ಸಂಪತ್ತು ಶೇ 72.84ರಷ್ಟು ವೃದ್ಧಿಯಾಗಿದೆ.

ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿ ಅಮೆಜಾನ್ ಸಂಸ್ಥಾಪಕ ಜೆಫ್‌ ಬೆಜೊಸ್‌ ಅವರು ಪಟ್ಟಿಯಲ್ಲಿ ಮೊದಲ ಸ್ಥಾನ ಸಂಪಾದಿಸಿದ್ದಾರೆ. 18 ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಬಿಲಿಗೇಟ್ಸ್ ಅವರು ಈ ವರ್ಷ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.

₹ 7.28 ಲಕ್ಷ ಕೋಟಿ ಆಸ್ತಿಯ ಒಡೆಯರಾಗಿರುವ ಜೆಫ್‌ ಅವರು ಮೊದಲ ‘ಶತ ಕೋಟ್ಯಧಿಪತಿ’ಯಾಗಿ ಸ್ಥಾನ ಪಡೆದಿದ್ದಾರೆ. ಅಮೆಜಾನ್‌ನ ಷೇರುಗಳ ಮೌಲ್ಯ ಒಂದು ವರ್ಷದಲ್ಲಿ ಶೇ 59ರಷ್ಟು ಹೆಚ್ಚಾಗಿದೆ. ಇದರಿಂದ ಕೇವಲ ಒಂದು ವರ್ಷದಲ್ಲೇ ಸಂಸ್ಥೆಯ ಸಂಪತ್ತಿನ ಮೌಲ್ಯ ಸುಮಾರು ₹ 2.5 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ.

ಈ ವರ್ಷ ವಿಶ್ವದ ಒಟ್ಟು 2,043 ಕುಬೇರರ ಪಟ್ಟಿಯನ್ನು ಫೋರ್ಬ್ಸ್‌ ಬಿಡುಗಡೆ ಮಾಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಭಾರತದಲ್ಲಿ 18 ಕುಬೇರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಭಾರತದ ಅಗ್ರ ಹತ್ತು ಕುಬೇರರ ಪಟ್ಟಿಯಲ್ಲಿ ಕುಮಾರ ಮಂಗಳಂ ಬಿರ್ಲಾ ಅವರೂ ಸ್ಥಾನ ಪಡೆದಿದ್ದಾರೆ. ಅವರು ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 127ನೇ ಸ್ಥಾನ ಪಡೆದಿದ್ದಾರೆ. ಪಂತಜಲಿ ಆಯುರ್ವೇದ ಸಂಸ್ಥೆಯ ಆಚಾರ್ಯ ಬಾಲಕೃಷ್ಣ ಪಟ್ಟಿಯಲ್ಲಿ 274ನೇ ಸ್ಥಾನ ಪಡೆದಿದ್ದಾರೆ. ಮುಕೇಶ್‌ ಅಂಬಾನಿ ಅವರ ಕಿರಿಯ ಸಹೋದರ ಅನಿಲ್‌ ಅಂಬಾನಿ 887ನೇ ಸ್ಥಾನದಲ್ಲಿದ್ದಾರೆ.

ಪಟ್ಟಿಯಿಂದ ಕೈಬಿಟ್ಟವರು: ವಜ್ರ ವ್ಯಾಪಾರಿ ನೀರವ್‌ ಮೋದಿ, ಪಾಪಾ ಜಾನ್ಸ್ ‍ಪಿಜ್ಜಾ ಸಂಸ್ಥಾಪಕ ಜಾನ್ ಸ್ಕ್ಯಾಂಟರ್, ದಕ್ಷಿಣ ಆಫ್ರಿಕಾದ ಕ್ರಿಸ್ಟೊಫೆಲ್‌ ಮತ್ತು ಸೌದಿ ಅರೇಬಿಯಾದ ರಾಜಕುಮಾರ ಅಲ್ವೀದ್‌ ಬಿನ್ ತಲಾಲ್ ಅಲ್ ಸೌದ್‌ ಅವರನ್ನು ಈ ವರ್ಷ ಪಟ್ಟಿಯಿಂದ ಕೈ ಬಿಡಲಾಗಿದೆ.

ಕುಸಿದ ಟ್ರಂಪ್‌: 2017ರ  ಪಟ್ಟಿಯಲ್ಲಿ 544ನೇ ಸ್ಥಾನ ಸಂಪಾದಿಸಿ ದೇಶದ ಮೊದಲ ಕೋಟ್ಯಧಿಪತಿ ಅಧ್ಯಕ್ಷ ಎಂದು ಖ್ಯಾತಿ ಗಳಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಈ ವರ್ಷ 766ನೇ ಸ್ಥಾನಕ್ಕೆ ಕುಸಿದಿದ್ದಾರೆ.

2018ರ ಫೆಬ್ರುವರಿ 9ರ ವರೆಗಿನ  ಷೇರುಗಳ ಮೌಲ್ಯ ಆಧರಿಸಿ ಈ ಪಟ್ಟಿ ತಯಾರಿಸಿರುವುದಾಗಿ ಫೋರ್ಬ್ಸ್‌ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry