ಸದನವೀರರ ಸಾಧನೆ ಉತ್ತಮ

ಸೋಮವಾರ, ಮಾರ್ಚ್ 25, 2019
28 °C

ಸದನವೀರರ ಸಾಧನೆ ಉತ್ತಮ

Published:
Updated:
ಸದನವೀರರ ಸಾಧನೆ ಉತ್ತಮ

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಜೋರಾಗಿ ಸದ್ದು ಮಾಡುವವರು, ಆಡಳಿತ ಪಕ್ಷವಾದ ಕಾರಣಕ್ಕೆ ಸದನದಲ್ಲಿ ಮೌನಕ್ಕೆ ಶರಣಾದವರು ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

‘ಪ್ರಜಾವಾಣಿ’ ಜತೆ ಕೈಜೋಡಿಸಿರುವ ‘ದಕ್ಷ್‌’ ಸಂಸ್ಥೆ ಎಲ್ಲ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಿದೆ. ಸದನವೀರರು ಹಾಗೂ ಮೂರೂ ಪಕ್ಷಗಳಲ್ಲಿ ನಾಲ್ಕೈದು ಬಾರಿ ಗೆದ್ದು, ಹಿಂದಿನ ಸರ್ಕಾರಗಳಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವ ಇರುವವರು 2013ರಿಂದ ಇಲ್ಲಿಯವರೆಗೆ ಕ್ಷೇತ್ರಕ್ಕಾಗಿ ಮಾಡಿದ್ದೇನು ಎಂಬ ಪರಾಮರ್ಶೆ ಇಲ್ಲಿದೆ.

ಅಧಿವೇಶನದಲ್ಲಿ ಯಾವಾಗಲೂ ಅಬ್ಬರಿಸುವ ಬಿಜೆಪಿ ಶಾಸಕರ ಪೈಕಿ ಶಿರಸಿ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ 10ಕ್ಕೆ 6.56 ಅಂಕ ಪಡೆದಿದ್ದಾರೆ. ಎಲ್ಲ ವಿಷಯದಲ್ಲೂ ಏರುಧ್ವನಿಯಲ್ಲಿ ಮಾತನಾಡುವ ಚಿಕ್ಕಮಗಳೂರು ಕ್ಷೇತ್ರದ ಸಿ.ಟಿ. ರವಿ ಒಟ್ಟಾರೆ ಸಾಧನೆಯಲ್ಲಿ 7.44 ಅಂಕ ಪಡೆದಿದ್ದರೆ, ಮತದಾರರ ಕೈಗೆ ಸಿಗುತ್ತಾರೆಯೇ ಎಂಬ ವಿಷಯದಲ್ಲಿ 6.67 ಅಂಕಗಳಿಗೆ ಇಳಿದಿದ್ದಾರೆ. ಹಿರೀಕರಾದ ಮುಧೋಳ ಶಾಸಕ ಗೋವಿಂದ ಕಾರಜೋಳ ಇಂದು ಪ್ರಕಟವಾಗಿರುವ ಅಂಕಪಟ್ಟಿಯ ಯಾದಿಯಲ್ಲಿ ಅತ್ಯಂತ ಹೆಚ್ಚಿನ ಶ್ರೇಯಾಂಕ ಪಡೆದಿರುವುದು ವಿಶೇಷ. ಮತದಾರರ ಕೈಗೆ ಸಿಗುವ ವಿಷಯದಲ್ಲಿ ಹುಕ್ಕೇರಿಯ ಉಮೇಶ ಕತ್ತಿ 8.47 ಅಂಕ ಪಡೆದು ಬಿಜೆಪಿಯಲ್ಲಿ ಎಲ್ಲರಿಗಿಂತ ಮುಂದಿದ್ದಾರೆ.

ಕಾಂಗ್ರೆಸ್‌ ಶಾಸಕರ ಪೈಕಿ ಹಿರಿತನದ ಆಧಾರದ ಮೇಲೆ ಆರು ಜನರ ಅಂಕಪಟ್ಟಿಗಳನ್ನು ಇಂದು ಪ್ರಕಟಿಸಲಾಗಿದೆ. ಒಟ್ಟಾರೆ ಅಂಕ ಗಳಿಕೆಯಲ್ಲಿ ಗುರುಮಠಕಲ್‌ ಶಾಸಕ ಬಾಬುರಾವ್ ಚಿಂಚನಸೂರ ಅತಿ ಹೆಚ್ಚು ಅಂಕ ಪಡೆದಿದ್ದಾರೆ. ಅಫಜಲ್‌ಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಒಟ್ಟಾರೆ ಅಂಕದಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಜನರ ಕೈಗೆ ಸಿಗುತ್ತಾರೆಯೇ ಎಂಬ ಪ್ರಶ್ನೆಯಲ್ಲಿ 6 ಅಂಕ ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ಈ ಹಿಂದೆ ಸಚಿವರಾಗಿದ್ದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ, ಮಂಡ್ಯದ ಅಂಬರೀಷ್ ಕ್ಷೇತ್ರದ ಹಿತಕ್ಕೆ ಎಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ ಎಂಬ ಪ್ರಶ್ನೆಗೆ 7ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಶಾಸಕರು ಕೈಗೆ ಸಿಗುತ್ತಾರೆಯೇ ಎಂಬ ಪ್ರಶ್ನೆಗೆ ಯಮಕನಮರಡಿ ಕ್ಷೇತ್ರದ ಮತದಾರರು ಜಾರಕಿಹೊಳಿಗೆ 4.90 ಅಂಕ ಕೊಟ್ಟಿದ್ದು, ಎಲ್ಲರಿಗಿಂತ ಕಡಿಮೆ ಅಂಕ ಪಡೆದಿದ್ದಾರೆ.

ಜೆಡಿಎಸ್‌ನವರೇ ಹಿಂದೆ...

ವಿಧಾನಸಭೆಯಲ್ಲಿ ರೈತರು, ಗ್ರಾಮೀಣ ಜನರ ಸಂಕಷ್ಟದ ಬಗ್ಗೆ ಏರುಧ್ವನಿಯಲ್ಲಿ ಮಾತನಾಡುವ ಅರಸೀಕೆರೆಯ ಕೆ.ಎಂ. ಶಿವಲಿಂಗೇಗೌಡ ಅಂಕ ಗಳಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಜೆಡಿಎಸ್‌ನ ಎಲ್ಲ ಶಾಸಕರಿಗಿಂತ ಇವರ ಗಳಿಕೆ ಕಡಿಮೆ ಇದೆ ಎಂದು ಸಮೀಕ್ಷೆ ಹೇಳಿದೆ. ಕ್ಷೇತ್ರದ ಕೈಗೆ ಸಿಗುತ್ತಾರೆಯೇ ಎಂಬ ಪ್ರಶ್ನೆಗೆ 5.90 ಅಂಕಗಳನ್ನು ಅಲ್ಲಿನ ಮತದಾರರು ಗೌಡರಿಗೆ ಕೊಟ್ಟಿದ್ದಾರೆ.

ಒಟ್ಟು ಅಂಕ ಗಳಿಕೆಯಲ್ಲಿ ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ ಕಡಿಮೆ ಅಂಕ ಪಡೆದಿದ್ದಾರೆ. ಆದರೆ, ಮತದಾರರ ಕೈಗೆ ಸಿಗುತ್ತಾರೆಯೇ ಎಂಬ ಪ್ರಶ್ನೆಗೆ 10ಕ್ಕೆ 9.73 ಅಂಕ ಗಳಿಸಿ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಶಾಸಕರಿಗೆ ಹೋಲಿಸಿದರೆ ಅಂಕ ಗಳಿಕೆಯಲ್ಲಿ ಜೆಡಿಎಸ್‌ ಶಾಸಕರ ಸಾಧನೆ ಕಡಿಮೆ ಇದೆ. ಈ ಪೈಕಿ ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ. ದೇವೇಗೌಡ, ಮದ್ದೂರಿನ ಡಿ.ಸಿ. ತಮ್ಮಣ್ಣ ಮಾತ್ರ 7ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್‌  ಅಂಕ ಗಳಿಕೆ ಸಮಾನ: ಜೆಡಿಎಸ್‌ ಬಗ್ಗೆ ದುಮ್ಮಾನ

ಬೆಂಗಳೂರು: ವಿದ್ಯುತ್ ಪೂರೈಕೆ, ಉತ್ತಮ ಶಾಲೆ, ಕೃಷಿ ಸಾಲ ಲಭ್ಯತೆ ವಿಷಯಗಳಲ್ಲಿ ಮೂರೂ ಪಕ್ಷಗಳ ಶಾಸಕರು ಸಮಾನ ಸಾಧನೆ ಮಾಡಿದ್ದಾರೆ. ಆದರೆ, ಉದ್ಯೋಗ ಸೃಷ್ಟಿ ಮತ್ತು ತರಬೇತಿ, ಭ್ರಷ್ಟಾಚಾರ ನಿರ್ಮೂಲನೆ ವಿಷಯದಲ್ಲಿ ಏಳಕ್ಕಿಂತ ಹೆಚ್ಚು ಅಂಕಗಳನ್ನು ಯಾವ ಪಕ್ಷದ ಶಾಸಕರೂ ಪಡೆದಿಲ್ಲ.

ಜನರ ಜೀವನದ ಜತೆಗೆ ನೇರವಾಗಿ ಸಂಬಂಧಪಡುವ ವಿಷಯಗಳ ಬಗ್ಗೆ ‘ದಕ್ಷ್‌’ ಸಮೀಕ್ಷೆ ವಿವಿಧ ಪ್ರಶ್ನೆಗಳನ್ನು ಮತದಾರರಿಗೆ ಕೇಳಿತ್ತು. ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ, ಕೆರೆ ಪುನರುಜ್ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳ ಬೆಲೆ, ನೀರಾವರಿ ಯೋಜನೆಗಳ ಅನುಷ್ಠಾನ, ಕೃಷಿ ಸಾಲ ಮತ್ತಿತರ ವಿಷಯಗಳಿಗೆ ಒತ್ತು ನೀಡಲಾಗಿತ್ತು.

ನಗರವಾಸಿಗಳ ಅಭಿಮತ

ಉತ್ತಮ ಶಾಲೆಗಳ ವಿಷಯದಲ್ಲಿ ನಗರವಾಸಿಗಳು ಕಾಂಗ್ರೆಸ್‌ ಶಾಸಕರಿಗೆ 10ಕ್ಕೆ 8 ಅಂಕ ನೀಡಿದ್ದರೆ, ಬಿಜೆಪಿಗೆ 7.9 ಅಂಕ, ಜೆಡಿಎಸ್‌ಗೆ 7.6 ಅಂಕ ಕೊಟ್ಟಿದ್ದಾರೆ. ವಿದ್ಯುತ್ ಪೂರೈಕೆ ವಿಷಯದಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದೆ. ಮಹಿಳೆಯರ ಸುರಕ್ಷೆ ವಿಷಯದಲ್ಲಿ ಮೂರೂ ಪಕ್ಷಗಳು ಸಮಾನ ಅಂಕ ಪಡೆದಿವೆ. ಶಾಸಕರ ಲಭ್ಯತೆ ಕ್ಷೇತ್ರದಲ್ಲಿ ಬಿಜೆಪಿ ಮುಂದಿದ್ದರೆ, ಕಾಂಗ್ರೆಸ್‌ ಹಿನ್ನಡೆ ಕಂಡಿದೆ.

ಪರಿಸರ ಹಾಗೂ ಕೆರೆಗಳ ಸಂರಕ್ಷಣೆ ವಿಷಯದಲ್ಲಿ ಬಿಜೆಪಿಯೇ ಉತ್ತಮ ಎಂದು ಮತದಾರರು ಹೇಳಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷ ಜೆಡಿಎಸ್‌ಗೆ ಉತ್ತಮ ಅಂಕ ಸಿಕ್ಕಿಲ್ಲ. ಘನತ್ಯಾಜ್ಯ ಉತ್ತಮ ನಿರ್ವಹಣೆಯಲ್ಲಿ ಬಿಜೆಪಿ ಕಡೆಗೆ ಜನ ಒಲವು ತೋರಿದ್ದಾರೆ.

ಗ್ರಾಮೀಣರ ಅನಿಸಿಕೆ

ಶಾಲೆ, ವಿದ್ಯುತ್‌ ‍‍ಪೂರೈಕೆ ವಿಷಯದಲ್ಲಿ ಮೂರೂ ಪಕ್ಷಗಳು ಸಮಾನ ಅಂಕ ಗಿಟ್ಟಿಸಿವೆ. ಕೃಷಿ ಸಾಲ ಕೊಡಿಸುವಲ್ಲಿ ಬಿಜೆಪಿ, ಕಾಂಗ್ರೆಸ್‌ ಒಂದೇ ರೀತಿಯ ಸಾಧನೆ ಮಾಡಿದ್ದರೆ, ಜೆಡಿಎಸ್‌ ಸ್ವಲ್ಪ ಹಿಂದೆ ಉಳಿದಿದೆ.

ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಹಾಗೂ ಸಾರಿಗೆ ಸೌಲಭ್ಯ ಒದಗಿಸುವ ವಿಷಯದಲ್ಲೂ ಜೆಡಿಎಸ್‌ಗೆ ಕಡಿಮೆ ಅಂಕ ದೊರೆತಿದೆ.

ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಕೆ ವಿಷಯದಲ್ಲಿ ಬಿಜೆಪಿಗೆ 7.4, ಕಾಂಗ್ರೆಸ್‌ಗೆ 7.1 ಅಂಕ ಸಿಕ್ಕಿದೆ. ಆದರೆ, ಜೆಡಿಎಸ್‌ ಶಾಸಕರು ಒಟ್ಟಾರೆ ಪಡೆದ ಅಂಕ 6.8. ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಕಲ್ಪಿಸುವ ವಿಷಯದಲ್ಲಿ ಜೆಡಿಎಸ್‌ ಮುಗ್ಗರಿಸಿದೆ.

ಶಿಕ್ಷಣ, ತರಬೇತಿ, ಉದ್ಯೋಗದ ವಿಷಯದಲ್ಲಿ ಗ್ರಾಮೀಣ ಭಾಗದಲ್ಲಿ ಮೂರೂ ಪಕ್ಷಗಳು ಸಮಾನ ಸಾಧನೆ ಮಾಡಿವೆ. ಆದರೆ, ಯಾವ ಪಕ್ಷದ ಅಂಕ ಗಳಿಕೆಯೂ ಏಳಕ್ಕೆ ಏರಿಲ್ಲ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ವಿಷಯದಲ್ಲಿ ಗ್ರಾಮೀಣ ಜನರು ಮೂರು ಪಕ್ಷಗಳಿಗೆ ಸಮಾನ ಅಂಕಗಳನ್ನೇ ನೀಡಿದ್ದಾರೆ.

ನಗರ, ಗ್ರಾಮೀಣ ಲೆಕ್ಕಾಚಾರ

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್‌, ಬಿಜೆಪಿ ಶಾಸಕರು ಸರಿಸುಮಾರು ಸಮಾನ ಅಂಕ ಪಡೆದಿದ್ದರೆ, ರೈತರ ಪಕ್ಷವೆಂದೇ ಬಿಂಬಿಸಿಕೊಳ್ಳುವ ಜೆಡಿಎಸ್‌ ಗ್ರಾಮೀಣ ಪ್ರದೇಶದಲ್ಲಿ ತುಸು ಹಿನ್ನಡೆ ಅನುಭವಿಸಿದೆ.

ನಗರ ಪ್ರದೇಶದ ಮತದಾರರು ಬಿಜೆಪಿ ಶಾಸಕರಿಗೆ ಶೇ 7.3 ಅಂಕ ನೀಡಿದ್ದಾರೆ. ಕಾಂಗ್ರೆಸ್ ಎರಡೂ ಕಡೆಗಳಲ್ಲಿ 7.1 ಅಂಕ ಪಡೆದಿದೆ. ಆದರೆ, ಜೆಡಿಎಸ್‌ ಶಾಸಕರಿಗೆ ನಗರಗಳಲ್ಲಿ 7.1 ಅಂಕ ಸಿಕ್ಕಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 6.9 ಅಂಕ ಸಿಕ್ಕಿದೆ.

ವಿಶ್ವಾಸಾರ್ಹತೆ ಹೆಚ್ಚು: ಉಳಿದ ಎರಡು ಪಕ್ಷಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಜೆಡಿಎಸ್‌ ಶಾಸಕರ ವಿಶ್ವಾಸಾರ್ಹತೆ ಹೆಚ್ಚಿದೆ. ಗ್ರಾಮೀಣ ಭಾಗದಲ್ಲಿ ಮೂರೂ ಪಕ್ಷಗಳ ಶಾಸಕರ ವಿಶ್ವಾಸಾರ್ಹತೆ ಸಮನಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry