ವಿವಿಧೆಡೆ ಹರಡಿದ ಪ್ರತಿಮೆ ಭಗ್ನ ಕುಕೃತ್ಯ

ಬುಧವಾರ, ಮಾರ್ಚ್ 20, 2019
23 °C
ಮೀರಠ್‌ನಲ್ಲಿ ಅಂಬೇಡ್ಕರ್‌, ಕೋಲ್ಕತ್ತದಲ್ಲಿ ಮುಖರ್ಜಿ ಪುತ್ಥಳಿ ವಿರೂಪ

ವಿವಿಧೆಡೆ ಹರಡಿದ ಪ್ರತಿಮೆ ಭಗ್ನ ಕುಕೃತ್ಯ

Published:
Updated:
ವಿವಿಧೆಡೆ ಹರಡಿದ ಪ್ರತಿಮೆ ಭಗ್ನ ಕುಕೃತ್ಯ

ಲಖನೌ: ತ್ರಿಪುರಾದಲ್ಲಿ ಸ್ಥಾಪಿಸಲಾಗಿದ್ದ ರಷ್ಯಾ ಕಮ್ಯುನಿಸ್ಟ್‌ ನಾಯಕ ಲೆನಿನ್‌ನ ಎರಡು ಪ್ರತಿಮೆಗಳನ್ನು ಆ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸಿಪಿಎಂ ಸೋತ ಬಳಿಕ ಸೋಮವಾರ ಧ್ವಂಸಗೊಳಿಸಲಾಗಿತ್ತು. ನಂತರ ಇಂತಹ ಕೃತ್ಯಗಳು ದೇಶದ ವಿವಿಧ ಭಾಗಗಳಲ್ಲಿ ವರದಿಯಾಗಿವೆ. 

ಉತ್ತರ ಪ್ರದೇಶದ ಮೀರಠ್‌ನ ಮವಾನ್‌ ಖುರ್ದ್‌ ಎಂಬಲ್ಲಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಪುತ್ಥಳಿಯನ್ನು ಮಂಗಳವಾರ ತಡರಾತ್ರಿ ಭಗ್ನಗೊಳಿಸಿದೆ.

ಬುಧವಾರ ಈ ಸುದ್ದಿ ಹರಡುತ್ತಲೇ ದಲಿತ ಸಂಘಟನೆಗಳು ಮಿಂಚಿನ ಮುಷ್ಕರ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ. ಶೀಘ್ರದಲ್ಲಿಯೇ ಹೊಸ ಪ್ರತಿಮೆ ಅನಾವರಣಗೊಳಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ ನಂತರ ಮುಷ್ಕರ ಕೈಬಿಡಲಾಯಿತು.

ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಹೊಸ ಪ್ರತಿಮೆ ಅನಾವರಣಗೊಳಿಸಿದರು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

ಜನಸಂಘ ಸ್ಥಾಪಕನ ಮುಖಕ್ಕೆ ಮಸಿ

(ಕೋಲ್ಕತ್ತ ವರದಿ):
ಕೋಲ್ಕತ್ತದ ಕಾಳಿಘಾಟ್‌ನಲ್ಲಿದ್ದ ಜನಸಂಘದ ಸ್ಥಾಪಕ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ ಪುತ್ಥಳಿಗೆ ಕಪ್ಪುಮಸಿ ಬಳಿದು, ನಂತರ ಸುತ್ತಿಗೆಯಿಂದ ಪುಡಿ ಮಾಡಲಾಗಿದೆ.

ಘಟನಾ ಸ್ಥಳದಲ್ಲಿ ದೊರೆತಕಾಗದವೊಂದರಲ್ಲಿ ‘ತೀವ್ರಗಾಮಿಗಳು’ ಎಂದು ಬರೆಯಲಾಗಿದೆ. ಇದು ಅತ್ಯಂತ ಹೇಯ ಕೃತ್ಯ ಎಂದು ಬಿಜೆಪಿ ಖಂಡಿಸಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸವಿರುವ ಕಾಳಿಘಾಟ್‌ನ ಕಿಯೋರಾಟ್ಲಾ ಚಿತಾಗಾರದ ಬಳಿ ಈ ಪುತ್ಥಳಿ ಇದೆ.

ಈ ಸಂಬಂಧ ಒಬ್ಬ ಮಹಿಳೆ ಸೇರಿದಂತೆ ಒಟ್ಟು ಏಳು ಜನರನ್ನು ಬಂಧಿಸಲಾಗಿದ್ದು, ಅವರ ರಾಜಕೀಯ ಹಿನ್ನೆಲೆ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರೆಲ್ಲರೂ 22ರಿಂದ 29 ವರ್ಷದವರಾಗಿದ್ದಾರೆ.

ಕುಡಿದ ಮತ್ತಿನಲ್ಲಿ ಕೃತ್ಯ: ವೆಲ್ಲೂರ್‌ ಜಿಲ್ಲೆಯ ತಿರುಪತ್ತೂರು ನಗರ ಪಾಲಿಕೆ ಆವರಣದಲ್ಲಿದ್ದ ಪೆರಿಯಾರ್‌ ರಾಮಸ್ವಾಮಿ ಅವರ ಪುತ್ಥಳಿ ವಿರೂಪಗೊಳಿಸಿದ ಮುತ್ತುರಾಮನ್‌ ಬಿಜೆಪಿ ಕಾರ್ಯಕರ್ತ ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ಜತೆಗಿದ್ದ ಫ್ರಾನ್ಸಿಸ್‌ ಸಿಪಿಐ ಸದಸ್ಯನಾಗಿದ್ದು, ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸೆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ವೆಲ್ಲೂರು ಜಿಲ್ಲೆಯಲ್ಲಿರುವ ಪೆರಿಯಾರ್‌ ಅವರ ಪ್ರತಿಮೆಗಳಿಗೆ ಪೊಲೀಸ್‌ ಕಾವಲು ಹಾಕಲಾಗಿದೆ.

ಫೇಸ್‌ಬುಕ್‌ ನಿರ್ವಾಹಕನ ಮೇಲೆ ರಾಜಾ ಗೂಬೆ

ಚೆನ್ನೈ: ದ್ರಾವಿಡ ಚಳವಳಿಯ ಹರಿಕಾರ ಪೆರಿಯಾರ್‌ ರಾಮಸ್ವಾಮಿ ಅವರ ಪ್ರತಿಮೆಗಳನ್ನು ಭಗ್ನಗೊಳಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ಕೊಟ್ಟಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್‌. ರಾಜಾ ಬುಧವಾರ ಉಲ್ಟಾ ಹೊಡೆದಿದ್ದಾರೆ.

‘ನನ್ನ ಫೇಸ್‌ಬುಕ್‌ ಖಾತೆ ನಿರ್ವಹಿಸುತ್ತಿದ್ದ ವ್ಯಕ್ತಿ ನನ್ನ ಗಮನಕ್ಕೆ ತಾರದೆ ಈ ಸಂದೇಶ ಪೋಸ್ಟ್‌ ಮಾಡಿದ್ದು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಈ ವಿಷಯ ಗಮನಕ್ಕೆ ಬಂದ ತಕ್ಷಣ ಪೋಸ್ಟ್‌ ಮತ್ತು ಅದನ್ನು ಹಾಕಿದ ವ್ಯಕ್ತಿಯನ್ನು ಕಿತ್ತು ಹಾಕಿದ್ದೇನೆ’ ಎಂದು ರಾಜಾ ಹೇಳಿದ್ದಾರೆ.

ಶಿಸ್ತುಕ್ರಮ ಇಲ್ಲ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಎಚ್ಚರಿಕೆಗೆ ಹೆದರಿ ರಾಜಾ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಪಕ್ಷ ಅವರಿಂದ ವಿವರಣೆ ಕೇಳಿದ್ದು, ಯಾವುದೇ ಶಿಸ್ತುಕ್ರಮ ಜರಗಿಸುವ ಸಾಧ್ಯತೆ ಇಲ್ಲ ಎಂದು ತಿಳಿದು ಬಂದಿದೆ.

ತಮಿಳುನಾಡು ಬಿಜೆಪಿ ಘಟಕ ರಾಜಾ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟನೆ ನೀಡಿದೆ.

ಎಚ್‌. ರಾಜಾ ಅವರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸುವಂತೆ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್‌ ಮತ್ತು ನಾಯಕಿ ಕನಿಮೋಳಿ ಅವರು ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಿಪಿಎಂ–ಎಂ ಕಾರ್ಯಕರ್ತರು ಚೆನ್ನೈನ ಬಿಜೆಪಿ ಕಚೇರಿ ಎದುರು ರಸ್ತೆತಡೆ ನಡೆಸಿದರು.

ರಾಜಾ ಮತ್ತು ವಿವಾದಕ್ಕೆ ಬಿಡದ ನಂಟು. ತಮಿಳು ಚಿತ್ರ ‘ಮರ್ಸಲ್‌’ ನಾಯಕ ನಟ ವಿಜಯ್‌ ಅವರ ಜಾತಿಯ ಬಗ್ಗೆಯೂ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದರು. ನಟ ಕಮಲ್‌ ಹಾಸನ್‌ ಅವರನ್ನು ‘ಬೆನ್ನು ಮೂಳೆ ಇಲ್ಲದ ಪುಕ್ಕಲ’ ಎಂದು ಟೀಕಿಸಿದ್ದರು.

ಪೆಟ್ರೋಲ್‌ ಬಾಂಬ್‌

ಚೆನ್ನೈ:
ಕೊಯಮತ್ತೂರಿನ ಬಿಜೆಪಿ ಕಚೇರಿ ಮೇಲೆ ಬುಧವಾರ ಬೆಳಗಿನ ಜಾವ ಪೆಟ್ರೋಲ್‌ ಬಾಂಬ್‌ ಎಸೆಯಲಾಗಿದೆ. ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ.

ಆಟೊ ರಿಕ್ಷಾದಲ್ಲಿ ಬಂದ ಗುಂಪೊಂದು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆದಿದೆ. ಆದರೆ, ಅವು ಕಚೇರಿ ಮುಂದಿನ ರಸ್ತೆಯಲ್ಲಿ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.

ಬ್ರಾಹ್ಮಣ, ಮರಾಠರ ಮಧ್ಯೆ ವಾಗ್ವಾದ

ಮುಂಬೈ:
ಛತ್ರಪತಿ ಶಿವಾಜಿಗೆ ವಿದ್ಯೆ ಕಲಿಸಿದ ಗುರು ದಾದೋಜಿ ಕೊಂಡದೇವ್‌ ಭಾವಚಿತ್ರಕ್ಕೆ ಸಂಬಂಧಿಸಿದಂತೆ ಬುಧವಾರ ಪುಣೆಯಲ್ಲಿ ಬ್ರಾಹ್ಮಣರು ಮತ್ತು ಮರಾಠರ ನಡುವೆ ಗಲಾಟೆ ನಡೆದಿದೆ.

ಪುಣೆ ಮಹಾನಗರ ಪಾಲಿಕೆ 2010ರಲ್ಲಿ ದಾದೋಜಿ ಕೊಂಡದೇವ್‌ ಪುತ್ಥಳಿಯನ್ನು ಉದ್ಯಾನಕ್ಕೆ ಸ್ಥಳಾಂತರಿಸಿತ್ತು. ಹೀಗಾಗಿ ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ಸದಸ್ಯರು ಕೊಂಡದೇವ್‌ ಪುಣ್ಯತಿಥಿಯ ದಿನವಾದ ಬುಧವಾರ ಅವರ ಭಾವಚಿತ್ರವನ್ನು ಪಾಲಿಕೆ ಕಚೇರಿಗೆ ಒಯ್ದು ಗೌರವ ಸಲ್ಲಿಸಿದರು.

ಅಲ್ಲಿಗೆ ಧಾವಿಸಿದ ಮರಾಠ ಸಮುದಾಯದ ಸಾಂಭಾಜಿ ಬ್ರಿಗೇಡ್‌ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಎರಡೂ ಸಮುದಾಯದವರ ನಡುವೆ ನಡೆದ ಮಾತಿನ ಚಕಮಕಿಯ ನಂತರ ಬ್ರಾಹ್ಮಣ ಸಂಘದ ಸದಸ್ಯರು ಭಾವಚಿತ್ರ ತೆಗೆದುಕೊಂಡು ಹೋದರು.

*

ಸರ್ಕಾರದ ಆಣತಿಯಂತೆ ನವದೆಹಲಿಯ ಇಂಡಿಯಾ ಗೇಟ್‌ನಲ್ಲಿದ್ದ ಐದನೇ ಜಾರ್ಜ್‌ ಮತ್ತು ಕೋಲ್ಕತ್ತದಲ್ಲಿದ್ದ ವಿಕ್ಟೋರಿಯಾ ರಾಣಿ ಪ್ರತಿಮೆ ತೆರವುಗೊಳಿಸಲಾಗಿದೆ. ಔರಂಗಜೇಬ್‌ ರಸ್ತೆಯ ಹೆಸರು ಬದಲಿಸಲಾಗಿದೆ. ಹಾಗಾದರೆ ಲೆನಿನ್‌ ಪ್ರತಿಮೆಗಳನ್ನು ಧ್ವಂಸಗೊಳಿಸಿದ ಕೃತ್ಯದಲ್ಲಿ ತಪ್ಪೇನಿದೆ?

– ತಥಾಗತ್‌ ರಾಯ್‌,

ತ್ರಿಪುರಾ ರಾಜ್ಯಪಾಲ

*

ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ತಮಿಳುನಾಡಿಗೆ ಆದ ಹಿನ್ನಡೆಯಿಂದ ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರವು ಪೆರಿಯಾರ್‌ ಅವರ ಮೂರ್ತಿ ಧ್ವಂಸಗೊಳಿಸುವ ತಂತ್ರ ಹೆಣೆದಿದೆ.

–ಕಮಲ್‌ ಹಾಸನ್‌, ನಟ, ರಾಜಕಾರಣಿ

*

ಕಮ್ಯುನಿಸ್ಟ್‌ ಸಿದ್ಧಾಂತದ ಭಯದಿಂದ ಬಲಪಂಥೀಯರು ಈ ನೀಚ ಕೃತ್ಯ ಎಸಗಿದ್ದಾರೆ.

– ಸಿಪಿಎಂ

*

ಮೂರ್ತಿಗಳ ಧ್ವಂಸ ಮತ್ತು ವಿರೂಪಗೊಳಿಸುವ ಹೇಯ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

– ರಾಜನಾಥ ಸಿಂಗ್‌,

ಕೇಂದ್ರ ಗೃಹ ಸಚಿವ

*

ಪ್ರಧಾನಿ ನರೇಂದ್ರ ಮೋದಿ ಅವರು ‘ಮೊಸಳೆ ಕಣ್ಣೀರು’ ಸುರಿಸುತ್ತಿದ್ದಾರೆ.

– ಸೀತಾರಾಂ ಯೆಚೂರಿ,

ಸಿಪಿಎಂ ಪ್ರಧಾನ ಕಾರ್ಯದರ್ಶಿ

*–ಪೆರಿಯಾರ್‌ ಪುತ್ಥಳಿ ವಿರೂಪ ಖಂಡಿಸಿ ಎಐಎಡಿಎಂಕೆ ಸಂಸದರು ಸಂಸತ್‌ ಹೊರಗೆ ಮೆರವಣಿಗೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry