ಮಾದಿಗ ಸಮುದಾಯದ ಅಭಿವೃದ್ಧಿ ನಿಗಮ

ಶುಕ್ರವಾರ, ಮಾರ್ಚ್ 22, 2019
21 °C

ಮಾದಿಗ ಸಮುದಾಯದ ಅಭಿವೃದ್ಧಿ ನಿಗಮ

Published:
Updated:
ಮಾದಿಗ ಸಮುದಾಯದ ಅಭಿವೃದ್ಧಿ ನಿಗಮ

ಬೆಂಗಳೂರು: ಮಾದಿಗ ಸಮುದಾಯದ ಅಭಿವೃದ್ಧಿಗಾಗಿ ಬಾಬು ಜಗಜೀವನರಾಮ್‌ ಅಭಿವೃದ್ಧಿ ನಿಗಮ ಸ್ಥಾಪಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.

ಆ ಮೂಲಕ, ನ್ಯಾಯಮೂರ್ತಿ ಸದಾಶಿವ ಆಯೋಗ ನೀಡಿರುವ ವರದಿ ಅನುಷ್ಠಾನಕ್ಕೆ ಪಟ್ಟು ಹಿಡಿದಿರುವ ಎಡಗೈ ಬಣವನ್ನು ಓಲೈಸಲು ಸರ್ಕಾರ ಮುಂದಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.

ಎಡಗೈ ಬಣಕ್ಕೆ ಒಳ ಮೀಸಲಾತಿ ಕಲ್ಪಿಸುವಂತೆ ನ್ಯಾಯಮೂರ್ತಿ ಸದಾಶಿವ ಆಯೋಗ ಶಿಫಾರಸು ಮಾಡಿದೆ. ಆಯೋಗದ ವರದಿಯಲ್ಲಿರುವ ಅಂಶಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಸಂಪುಟ ಉಪ ಸಮಿತಿ ರಚಿಸಲಾಗಿದೆ.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ‘ಸಮಾಜದಲ್ಲಿ ತೀರಾ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯದ ಜೊತೆಗೆ ಆರ್ಥಿಕ ಸವಲತ್ತುಗಳನ್ನು ತುರ್ತಾಗಿ ತಲುಪಿಸುವ ಉದ್ದೇಶದಿಂದ ನಿಗಮ ಸ್ಥಾಪಿಸಲು ನಿರ್ಧರಿಸಲಾಗಿದೆ’ ಎಂದರು.

‘ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ವಿವಿಧ ನಿಗಮಗಳಿಗೆ ₹ 600 ಕೋಟಿ ಮೀಸಲಿಡಲಾಗಿದೆ. ಈ ಹಣವನ್ನು ಭೋವಿ ಅಭಿವೃದ್ಧಿ ನಿಗಮ, ಲಂಬಾಣಿ ತಾಂಡಾ ಅಭಿವೃದ್ಧಿ ನಿಗಮ ಸೇರಿ ಎಲ್ಲ ನಿಗಮಗಳಿಗೂ ಆಯಾ ಸಮುದಾಯಗಳ ಜನಸಂಖ್ಯೆ ಆಧರಿಸಿ ಹಂಚಿಕೆ ಮಾಡಲಾಗುವುದು’ ಎಂದರು.

‘ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯಿಸುತ್ತಿರುವ ಎಡಗೈ ಬಣವನ್ನು ಸಂತೃಪ್ತಿಪಡಿಸಲು ನಿಗಮ ಸ್ಥಾಪಿಸಲಾಗುತ್ತಿದೆಯೇ’ ಎಂಬ ಪ್ರಶ್ನೆಗೆ, ‘ಅದಕ್ಕೂ ನಿಗಮ ಸ್ಥಾಪನೆಗೂ ಯಾವುದೇ ಸಂಬಂಧ ಇಲ್ಲ. ಆಯೋಗದ ಶಿಫಾರಸುಗಳ ಕುರಿತು ಸಂಪುಟ ಉಪ ಸಮಿತಿ ನೀಡುವ ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಆಂಜನೇಯ ವಿವರಿಸಿದರು.

ಪಠ್ಯ ಪುಸ್ತಕ ವಿತರಣೆಗೆ ₹ 152 ಕೋಟಿ

2018– 19ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸರ್ಕಾರಿ ಶಾಲೆಗಳಲ್ಲಿ 4ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ, 1ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ದಿನಚರಿ ವಿತರಿಸಲು ₹ 152 ಕೋಟಿ ಅಂದಾಜು ವೆಚ್ಚದ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ನೀಡಿದೆ.

ಜಲ ಸಂರಕ್ಷಣೆಯ ಉದ್ದೇಶದಿಂದ ‘ಕರ್ನಾಟಕ ರಾಜ್ಯ ಸೂಕ್ಷ್ಮ ನೀರಾವರಿ ನೀತಿ’ಗೂ ಸಂಪುಟ ಅನುಮೋದನೆ ನೀಡಿದೆ. ಹನಿ ನೀರಾವರಿಗೆ ರಾಜ್ಯದಲ್ಲಿ ಶೇ 90ರಷ್ಟು ಸಹಾಯಧನ ನೀಡಲಾಗುತ್ತಿದೆ. ಐದು ವರ್ಷಗಳ ಅವಧಿಯಲ್ಲಿ ಇನ್ನೂ 14 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿ ಅಳವಡಿಸುವ ಗುರಿ ಇಟ್ಟುಕೊಂಡು ಈ ನೀತಿ ರೂಪಿಸಲಾಗಿದೆ ಎಂದು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry