ಇಂದು ಮಹಿಳೆಯರಿಗೆ ಮಣೆ!

7

ಇಂದು ಮಹಿಳೆಯರಿಗೆ ಮಣೆ!

Published:
Updated:
ಇಂದು ಮಹಿಳೆಯರಿಗೆ ಮಣೆ!

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್‌ಗಳಲ್ಲಿ ಗುರುವಾರ ಮಹಿಳಾ ಸಿಬ್ಬಂದಿಯದ್ದೇ ಪಾರಮ್ಯ ಇರಲಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 8ರಂದು ಬೆಳಿಗ್ಗೆಯ ಪಾಳಿಯ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಮಹಿಳೆಯರ ತಂಡವೇ ನಿರ್ವಹಿಸಲಿದೆ. ಮಹಿಳೆಯರು ಪುರುಷರಿಗೆ ಸಮಾನವಾಗಿ ಕೆಲಸ ನಿರ್ವಹಿಸಬಲ್ಲರು ಎಂಬುದನ್ನು ತೋರಿಸುವ ಉದ್ದೇಶದಿಂದ ವಿಮಾನನಿಲ್ದಾಣ ಪ್ರಾಧಿಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.

ನಗರಗಳ ಸಮೀಪದ ಟೋಲ್‌ಗಳಲ್ಲಿ ಮಹಿಳಾ ಸಿಬ್ಬಂದಿ ನಿಯೋಜಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮುಂದಾಗಿದೆ. ಬೆಂಗಳೂರು, ಮಂಗಳೂರು, ರಾಮನಗರ, ಹಾಸನದ ಎನ್‌ಎಚ್‌ಎಐ ಪ್ರಾದೇಶಿಕ ಕಚೇರಿಗಳು ವಿವಿಧ ಹುದ್ದೆಗಳಿಗೆ (ವ್ಯವಸ್ಥಾಪಕರು, ಟೋಲ್‌ ಸಂಗ್ರಾಹಕರು, ಸ್ವಚ್ಛತಾ ಸಿಬ್ಬಂದಿ, ಪಥ ಸಹಾಯಕರು) ಮಹಿಳೆಯರನ್ನು ನೇಮಿಸಿವೆ. ಬೆಳಿಗ್ಗೆ 8 ರಿಂದ ಸಂಜೆ 4ರವರೆಗಿನ ಪಾಳಿಯಲ್ಲಿ ಇವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಕ್ರಮ ಯಶಸ್ವಿಯಾದರೆ, ಮುಂದಿನ ಮೂರು ತಿಂಗಳಲ್ಲಿ ಪ್ರಾಧಿಕಾರದ ಎಲ್ಲ ಟೋಲ್‌ಗಳಲ್ಲಿ ಮಹಿಳಾ ಸಿಬ್ಬಂದಿ ನಿಯೋಜಿಸಲಾಗುವುದು. ಈ ನಿಟ್ಟಿನಲ್ಲಿ ಪ್ರಾದೇಶಿಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ರೈಲ್ವೆ ಇಲಾಖೆಯಿಂದ ಮಹಿಳಾ ದಿನಾಚರಣೆ

ಬೆಂಗಳೂರು:
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇದೇ 8ರಂದು (ಗುರುವಾರ) ನೈರುತ್ಯ ರೈಲ್ವೆಯ ಬೆಂಗಳೂರು ಕಚೇರಿಯು ವಿಶೇಷ ಕ್ರಮಗಳನ್ನು ಕೈಗೊಳ್ಳಲಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣದಿಂದ ಬೆಳಿಗ್ಗೆ 9ಕ್ಕೆ ಪಟ್ನಾಕ್ಕೆ ಹೊರಡಲಿರುವ ಸಂಘಮಿತ್ರ ಎಕ್ಸ್‌ಪ್ರೆಸ್‌ ಅನ್ನು ಸಂಪೂರ್ಣ ಮಹಿಳೆಯರೇ ನಿರ್ವಹಿಸಲಿದ್ದಾರೆ. ಈ ರೈಲಿನ ಸಹಾಯಕ ಲೋಕೊಪೈಲಟ್‌, ಟ್ರೈನಿ ಗಾರ್ಡ್‌, ಮೂವರು ಭದ್ರತಾ ಸಿಬ್ಬಂದಿ, ಆರು ಮಂದಿ ಟಿಕೆಟ್ ತಪಾಸಣಾ ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ. ಅವರು ಚೆನ್ನೈವರೆಗೆ ಕಾರ್ಯನಿರ್ವಹಿಸಿ ಅಲ್ಲಿಂದ ಮರಳಲಿದ್ದಾರೆ.

ಈ ನಿಲ್ದಾಣದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ ಮಾರಾಟ ಯಂತ್ರವನ್ನು ಅಳವಡಿಸಲಾಗಿದೆ. ಇದನ್ನು ನೈರುತ್ಯ ರೈಲ್ವೆ ಮಹಿಳಾ ಅಭಿವೃದ್ಧಿ ಸಂಘಟನೆಯ ಬೆಂಗಳೂರು ವಿಭಾಗೀಯ ಅಧ್ಯಕ್ಷೆ ವಂದನಾ ಸಕ್ಸೇನಾ ಉದ್ಘಾಟಿಸಲಿದ್ದಾರೆ.

ಬಾಣಸವಾಡಿಯ ರೈಲು ನಿಲ್ದಾಣವನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ. ಇಲ್ಲಿನ ಸ್ಟೇಷನ್ ಮಾಸ್ಟರ್‌ ಹಾಗೂ ಟಿಕೆಟ್‌ ನೀಡುವ ಗುಮಾಸ್ತ ಹುದ್ದೆಗಳಿಗೆ ಮಹಿಳೆಯರನ್ನು ನಿಯೋಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry