ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಜಾಹೀರಾತು ಫಲಕ ತೆರವು

Last Updated 7 ಮಾರ್ಚ್ 2018, 20:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳು, ಹೋರ್ಡಿಂಗ್ಸ್ ಹಾಗೂ ಫ್ಲೆಕ್ಸ್‌ ತೆರವಿಗೆ ಇದೇ 16ರಂದು ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ಮೇಯರ್ ಆರ್.ಸಂಪತ್‍ರಾಜ್ ತಿಳಿಸಿದರು.

ಪಾಲಿಕೆಯಲ್ಲಿ ಬುಧವಾರ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ನನ್ನ, ಉಪಮೇಯರ್, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ನಾಯಕರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ಕಾರ್ಯಾಚರಣೆಗೆ ರಚಿಸಲಾಗುವುದು. ಪ್ರತಿ ತಂಡದಲ್ಲಿ 25 ಕಾರ್ಪೊರೇಟರ್‌ಗಳು ಮತ್ತು ಅಧಿಕಾರಿಗಳು ಇರುತ್ತಾರೆ. ಜೆಸಿಬಿ, ಕ್ರೇನ್‌ ಯಂತ್ರಗಳಿಂದ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗುವುದು’ ಎಂದರು.

ಬಿಜೆಪಿಯ ಕೆ.ಉಮೇಶ್ ಶೆಟ್ಟಿ ಮಾತನಾಡಿ, ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು 5 ಕಿ.ಮೀ ಸುತ್ತಳತೆಯಲ್ಲಿ ವಾರ್ಷಿಕ ₹200 ಕೋಟಿ ಜಾಹೀರಾತು ಶುಲ್ಕ ಸಂಗ್ರಹಿಸುತ್ತಿದೆ. ಆದರೆ, ಪಾಲಿಕೆಯು 800 ಚದರ ಕಿಲೋಮೀಟರ್‌ ವ್ಯಾಪ್ತಿ ಹೊಂದಿದ್ದರೂ ಜಾಹೀರಾತುಗಳಿಂದ ₹50 ಕೋಟಿ ಆದಾಯ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಗಮನ ಸೆಳೆದರು.

ಇದಕ್ಕೆ ಧ್ವನಿಗೂಡಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಆರ್.ಲಕ್ಷ್ಮಿನಾರಾಯಣ, ‘ಅನಧಿಕೃತವಾಗಿ ಜಾಹೀರಾತು ಫಲಕ ಅಳವಡಿಸಿರುವವರ ಮೇಲೆ ದಂಡಂ ದಶಗುಣಂ ಅಸ್ತ್ರ ಪ್ರಯೋಗಿಸಬೇಕು. ಕಾನೂನು ಬಿಗಿಗೊಳಿಸದಿದ್ದರೆ ನಿರೀಕ್ಷಿತ ಆದಾಯ ಸಂಗ್ರಹ ಕನಸಿನ ಮಾತು’ ಎಂದರು.

‘ಅಪಘಾತ, ಕಳವು ಪ್ರಕರಣಗಳಲ್ಲಿ ಸಂಚಾರ ಪೊಲೀಸರು ವಶಕ್ಕೆ ಪಡೆದಿರುವ ವಾಹನಗಳನ್ನು ಠಾಣೆಯ ಮುಂಭಾಗದ ರಸ್ತೆ ಮತ್ತು ಫುಟ್‍ಪಾತ್‍ಗಳಲ್ಲಿ ನಿಲ್ಲಿಸಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಹಾಗೆಯೇ ಖಾಸಗಿ ವ್ಯಕ್ತಿಗಳು ಹಳೆಯ ವಾಹನಗಳನ್ನು ರಸ್ತೆ ಬದಿಯೇ ಬಿಟ್ಟಿದ್ದಾರೆ. ಒಂದು ವಾರ ಅಥವಾ 15 ದಿನದ ಅವಧಿಯೊಳಗೆ ಇಂತಹ ವಾಹನಗಳನ್ನು ತೆರವು ಮಾಡದಿದ್ದರೆ ಪಾಲಿಕೆಯಿಂದಲೇ ತೆರವುಗೊಳಿಸಿ, ಡಂಪಿಂಗ್‍ಯಾರ್ಡ್‍ನಲ್ಲಿ ಹಾಕಲು ಜಾಹೀರಾತು ಪ್ರಕಟಿಸಲಾಗುವುದು’ ಎಂದು ಮೇಯರ್ ತಿಳಿಸಿದರು.

‘20 ವರ್ಷ ಮೀರಿದ ವಾಹನಗಳ ಸಂಚಾರ ನಿಷೇಧಿಸಲು ಸಾರಿಗೆ ಇಲಾಖೆಗೆ ಪತ್ರ ಬರೆಯಬೇಕು. ಹೊರ ವರ್ತುಲ ರಸ್ತೆಗಳಲ್ಲಿ ಬಹುಮಹಡಿ ವಾಹನ ನಿಲ್ದಾಣಗಳನ್ನು ನಿರ್ಮಿಸಬೇಕು’ ಎಂದು ಮಹಮ್ಮದ್ ರಿಜ್ವಾನ್ ನವಾಬ್ ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ವೇಲು ನಾಯ್ಕರ್, ‘ಕಂಠೀರವ ಸ್ಟುಡಿಯೊ ಬಳಿಯ ದೇವರಾಜ ಅರಸು ಟ್ರಕ್ ಟರ್ಮಿನಲ್‍ನಲ್ಲಿ ನಿಲ್ಲಿಸಿರುವ ಹಳೆಯ ವಾಹನಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಈ ವಾಹನಗಳಲ್ಲಿ ಎರಡು ಶವಗಳು ಸಿಕ್ಕಿವೆ. ಹಳೆಯ ವಾಹನ ತೆರವುಗೊಳಿಸಲು ಪ್ರತ್ಯೇಕ ತಂಡ ರಚಿಸಬೇಕು’ ಎಂದು ಒತ್ತಾಯಿಸಿದರು.

ಹಡ್ಸನ್‌ ವೃತ್ತದಲ್ಲಿ ನಾಲ್ಕೈದು ದಿಕ್ಕಿಗೆ ಮರದ ಸ್ಕೈವಾಕ್‌ ಅಳವಡಿಸುವುದರಿಂದ ಪಾಲಿಕೆಯ ಪಾರಂಪರಿಕ ಕಟ್ಟಡದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು. ಪಾಲಿಕೆ ಕಚೇರಿ ಎದುರು ಉಕ್ಕಿನ ಸೇತುವೆ ನಿರ್ಮಾಣಕ್ಕೂ ಆಸ್ಪದ ನೀಡಬಾರದೆಂದು ಬಿಜೆಪಿಯ ಕಟ್ಟೆ ಸತ್ಯನಾರಾಯಣ, ಡಾ.ರಾಜು ಒತ್ತಾಯಿಸಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಮೇಯರ್‌, ’ಬಿಬಿಎಂಪಿ ಗಡಿ ಭಾಗದಲ್ಲಿ ನಗರಕ್ಕೆ ಸ್ವಾಗತ ಕೋರುವ ಕಮಾನು ನಿರ್ಮಿಸಲಾಗುವುದು. ಕೆಂಪೇಗೌಡ ಗಡಿ ಗೋಪುರ ನಿರ್ಮಾಣಕ್ಕೂ ಚಾಲನೆ ಕೊಡಲಾಗುವುದು’ ಎಂದರು.

ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿ ಕೆಎಂಸಿ ಕಾಯ್ದೆ ಪ್ರಕಾರ ವಾರಕ್ಕೆ ಒಂದು ಸಭೆ ನಡೆಸಬೇಕು. ಆದರೆ, ಐದು ತಿಂಗಳಿಂದ ಲೆಕ್ಕಪತ್ರ ಸ್ಥಾಯಿ ಸಮಿತಿ ಒಂದೇ ಒಂದು ಸಭೆ ನಡೆಸಿಲ್ಲ. ಸಮಿತಿ ಅಧ್ಯಕ್ಷರಿಂದ ರಾಜೀನಾಮೆ ಪಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಬಿಜೆಪಿಯ ಪದ್ಮನಾಭರೆಡ್ಡಿ ಒತ್ತಾಯಿಸಿದರು.

'ಒಂಟಿ ಮನೆಗಳ ನಿರ್ಮಾಣಕ್ಕೆ ನೀಡುವ ₹5 ಲಕ್ಷ ಅನುದಾನವನ್ನು ₹2.50 ಲಕ್ಷದಂತೆ ಎರಡು ಕಂತುಗಳಲ್ಲಿ ನೀಡಬೇಕು’ ಎಂದು ಬಿಜೆಪಿಯ ನರಸಿಂಹನಾಯಕ ಒತ್ತಾಯಿಸಿದರು.

ಸದಸ್ಯೆ ಜಿ.ಪದ್ಮಾವತಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತ ಎನ್.ಮಂಜುನಾಥ ಪ್ರಸಾದ್, ‘ನಗರದ ರುದ್ರಭೂಮಿಗಳ ಸಿಬ್ಬಂದಿಗೆ ಕನಿಷ್ಠ ವೇತನ ನೀಡಲು ಅಗತ್ಯ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿಡಲಾಗಿದೆ. ಕನಿಷ್ಠ ವೇತನ ನೀಡಲು ಕೌನ್ಸಿಲ್ ಅನುಮೋದನೆ ನೀಡಿದೆ. 226 ಕಾರ್ಮಿಕರಿಗೆ ಏಪ್ರಿಲ್‍ನಿಂದ ತಲಾ ₹17,000 ವೇತನ ನೀಡಲಾಗುವುದು’ ಎಂದರು.

ಕಸದಿಂದ ವಿದ್ಯುತ್: ಫ್ರಾನ್ಸ್‌ ಜತೆಗೆ ಒಪ್ಪಂದ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕವನ್ನು ಸ್ಥಾಪಿಸುವ ಯೋಜನೆಗೆ ಫ್ರಾನ್ಸ್ ಮತ್ತು ಭಾರತ ಮಾರ್ಚ್‌ 10ರಂದು ದೆಹಲಿಯಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿವೆ.

ಮೂರು ದಿನಗಳ ಅವಧಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್  ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಇದಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವರು ಮತ್ತು ಮೇಯರ್‌ ಅವರನ್ನು ಆಹ್ವಾನಿಸಿದ್ದಾರೆ ಎಂದು ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.

ಪ್ರತಿ ವಾರ್ಡ್‍ನಲ್ಲಿ ಆಧಾರ್ ಕೇಂದ್ರ
ಆಧಾರ್ ನೋಂದಣಿ, ಹೆಸರು, ವಿಳಾಸ ಬದಲಾವಣೆಗಾಗಿ ಪ್ರತಿ ವಾರ್ಡ್‍ನಲ್ಲಿ ಇ ಆಡಳಿತ ಇಲಾಖೆಯೊಂದಿಗೆ ಆಧಾರ್ ಕೇಂದ್ರ ಆರಂಭಿಸಲು ಪಾಲಿಕೆಯಲ್ಲಿ ಅನುಮೋದನೆ ನೀಡಲಾಯಿತು.

ಆಧಾರ್ ತಿದ್ದುಪಡಿಗೆ ಪಾಲಿಕೆ ಸದಸ್ಯರ ದೃಢೀಕರಣ ಪತ್ರ ಪರಿಗಣಿಸದಿರುವುದನ್ನು ಸದಸ್ಯ ಕೃಷ್ಣಮೂರ್ತಿ ಸಭೆಯ ಗಮನ ಸೆಳೆದರು. ಪಾಲಿಕೆ ಸದಸ್ಯರ ಶಿಫಾರಸು ಮತ್ತು ದೃಢೀಕರಣ ಪತ್ರಗಳನ್ನು ಪರಿಗಣಿಸಲು ಕೋರಿ ಇ-ಆಡಳಿತ ಇಲಾಖೆಗೆ ಆಯುಕ್ತರು ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಅರಣ್ಯ ಭವನದ ರಸ್ತೆಗೆ ಮಣಿಕಂದನ್ ಹೆಸರು
ಆನೆ ದಾಳಿಗೆ ತುತ್ತಾಗಿ ಮೃತಪಟ್ಟ ಭಾರತೀಯ ಅರಣ್ಯ ಸೇವೆ ಅಧಿಕಾರಿ ಎಸ್.ಮಣಿಕಂದನ್ ಹೆಸರನ್ನು ಮಲ್ಲೇಶ್ವರದ ಅರಣ್ಯ ಭವನ ಮುಂಭಾಗದ ರಸ್ತೆಗೆ ನಾಮಕರಣ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಇತ್ತೀಚೆಗೆ ನಿಧನಹೊಂದಿದ ಸದಸ್ಯೆ ಮಹದೇವಮ್ಮ ಹೆಸರನ್ನು ಕೆ.ಪಿ.ಅಗ್ರಹಾರ ಬಳಿಯ ಜೂನಿಯರ್ ಕಾಲೇಜು ಹಿಂಭಾಗದ ಉದ್ಯಾನಕ್ಕೆ ನಾಮಕರಣ ಮಾಡಲು ನಿರ್ಣಯಿಸಲಾಯಿತು.

ಕೆಂಪೇಗೌಡ ಸಮಾಧಿಯನ್ನು ಮತ್ತು ಹುತಾತ್ಮ ಯೋಧರಾದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌, ಗಿರೀಶ್‌, ನಿರಂಜನ್‌ ಅವರ ಸ್ಮಾರಕವನ್ನು ರಾಜ್‌ಘಾಟ್‌ ರೀತಿ ಅಭಿವೃದ್ಧಿಪಡಿಸಲಾಗುವುದು ಎಂದು ಮೇಯರ್‌ ತಿಳಿಸಿದರು.

*
ನಗರದ ಎಲ್ಲ ವಾರ್ಡ್‌ಗಳಲ್ಲೂ ಹೆರಿಗೆ ಆಸ್ಪತ್ರೆ ಸ್ಥಾಪಿಸಬೇಕು. 3 ಲಕ್ಷ ಮಹಿಳಾ ಕಾರ್ಮಿಕರಿರುವ ದಾಸರಹಳ್ಳಿ ವಲಯದಲ್ಲಿ ತಕ್ಷಣ ಆಸ್ಪತ್ರೆ ಸ್ಥಾಪನೆಯಾಗಬೇಕು.
– ಲಲಿತಾ ತಿಮ್ಮನಂಜಯ್ಯ, ಪಾಲಿಕೆ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT